ಆಟೋದಲ್ಲಿ ಶಾಲೆ ಮಕ್ಕಳ ಕರೆದೊಯ್ದರೆ ಭಾರಿ ದಂಡ
Team Udayavani, Jun 29, 2019, 3:00 AM IST
ಹುಣಸೂರು: ಪ್ರಯಾಣಿಕರನ್ನು ಸಾಗಿಸುವ ಆಟೋಗಳಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವಂತಿಲ್ಲ, ಗೂಡ್ಸ್ ಆಟೋಗಳಲ್ಲೂ ಇನ್ಮುಂದೆ ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ, ಸಿಕ್ಕಿ ಬಿದ್ದಲ್ಲಿ ಭಾರೀ ಮೊತ್ತದ ದಂಡ ತೆರಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಎಚ್ಚರಿಕೆ ನೀಡಿದರು.
ಹುಣಸೂರು ಡಿವೈಎಸ್ಪಿ ಕಚೇರಿ ಆವರಣದಲ್ಲಿ ಹುಣಸೂರು ವೃತ್ತ ವ್ಯಾಪ್ತಿಯ ವಾಹನ ಚಾಲಕರಿಗೆ ಆಯೋಜಿಸಿದ್ದ ಸಭೆಯಲ್ಲಿ ಆಟೋ ಚಾಲಕರ ಸಮಸ್ಯೆಗಳನ್ನು ಆಲಿಸಿದ ನಂತರ ಮಾತನಾಡಿದ ಅವರು, ತಮಗೂ ಆಟೋ ಚಾಲಕರು ಮತ್ತು ಮಾಲೀಕರ ಸಮಸ್ಯೆ ಬಗ್ಗೆ ಅರಿವು ಇದೆ.
ಆದರೆ, ಮಕ್ಕಳ ಪ್ರಾಣ ಸಹ ಅಷ್ಟೇ ಮುಖ್ಯವಾಗಿದ್ದು, ಪರವಾನಗಿ ಹಾಗೂ ವಿಮೆ ಇಲ್ಲದ ಆಟೋಗಳಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ಬಗ್ಗೆ ದೂರುಗಳು ಇರುವುದರಿಂದ ಹಾಗೂ ನಿಗದಿತ ವಾಹನಗಳಲ್ಲೇ ಮಕ್ಕಳನ್ನು ಕರೆದೊಯ್ಯಬೇಕೆಂಬ ನಿರ್ದೇಶನವಿರುವುದರಿಂದ ಇಲಾಖೆ ಅನಿವಾರ್ಯವಾಗಿ ಹಿರಿಯ ಅಧಿಕಾರಿಗಳ ಆದೇಶವನ್ನು ಪಾಲಿಸಬೇಕಾಗಿದೆ ಎಂದು ತಿಳಿಸಿದರು.
ನಾಳೆಯಿಂದ ಜಾರಿ: ಜುಲೈ 1 ರಿಂದಲೇ ಜಿಲ್ಲಾದ್ಯಂತ ಆಟೋಗಳಲ್ಲಿ ಮಕ್ಕಳನ್ನು ಹಾಗೂ ಗೂಡ್ಸ್ ಆಟೋಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದನ್ನು ನಿಷೇಧಿಸಿದ್ದು, ಇಲಾಖೆಯೊಂದಿಗೆ ವಾಹನ ಚಾಲಕರು ಸಹಕರಿಸಬೇಕೆಂದು ಕೋರಿದರು.
ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ಈ ಹಿಂದೆಯೇ ಸುಪ್ರೀಂಕೋರ್ಟ್ ಆಟೋಗಳಲ್ಲಿ ಮಕ್ಕಳನ್ನು ಹಾಗೂ ಗೂಡ್ಸ್ ಆಟೋದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವ ಆಟೋಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ಪಾಲನೆಯಾಗುತ್ತಿಲ್ಲ. ಇದರಿಂದ ಅಲ್ಲಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ಜಿಲ್ಲಾದ್ಯಂತ ಎಲ್ಲಾ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ನಿಯಮ ಉಲ್ಲಂಘಿಸಿ ಚಲಿಸುವ ವಾಹನಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು.
ಸಿಸಿ ಕ್ಯಾಮರಾ ದುರಸ್ತಿ: ವಕೀಲ ಪುಟ್ಟರಾಜು ಮಾತನಾಡಿ, ನಗರಪ್ರದೇಶ ವಿಸ್ತಾರಗೊಂಡಿದೆ. ವಾಹನಗಳ ಸಂಖ್ಯೆ ಹೆಚ್ಚಿದೆ, ಜೊತೆಗೆ ಅಲ್ಲಲ್ಲಿ ಅಪರಾಧವೂ ಹೆಚ್ಚುತ್ತಿದ್ದು, ಈ ಹಿಂದೆ ನಗರದ ಪ್ರಮುಖ ವೃತ್ತದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಕೆಟ್ಟುಹೋಗಿದ್ದು, ದುರಸ್ತಿಗೊಳಿಸಬೇಕು, ಟ್ರಾಫಿಕ್ ಠಾಣೆ ಮೂಜೂರು ಮಾಡಿಸಬೇಕೆಂದರು. ಟ್ರಾಫಿಕ್ ಠಾಣೆ ಸರ್ಕಾರದ ಚಿಂತನೆಯಲ್ಲಿದೆ. ಸಿಸಿ ಕ್ಯಾಮರಾ ಕೆಟ್ಟಿರುವ ಬಗ್ಗೆ ಮಾಹಿತಿ ಪಡೆದು ಕ್ರಮವಹಿಸುವುದಾಗಿ ಎಸ್ಪಿ ಭರವಸೆ ನೀಡಿದರು.
ವಾಹನಗಳ ಜಪ್ತಿ: ವೃತ್ತ ನಿರೀಕ್ಷಕ ಪೂವಯ್ಯ ಮಾತನಾಡಿ, ಕುಡಿದು ಹಾಗೂ ಪರವಾನಗಿ ಇಲ್ಲದೆ ವಾಹನ ಚಲಾಯಿಸಿದರೆ ಮೊದಲ ಬಾರಿಗೆ ಒಂದು ಸಾವಿರ, ಎರಡನೇ ಬಾರಿಗೆ 2 ಸಾವಿರ, ಮೂರನೇ ಬಾರಿಯೂ ತಪ್ಪೆಸಗಿದಲ್ಲಿ ವಾಹನದ ಪರವಾನಗಿ ರದ್ದುಪಡಿಸಿ ವಾಹನಗಳ ಮುಟ್ಟುಗೋಲು ಜೊತೆಗೆ ನ್ಯಾಯಾಲಯದಲ್ಲೂ ಪ್ರಕರಣ ದಾಖಲಿಸಲಾಗುವುದು. ಚಾಲಕರು ಈ ಬಗ್ಗೆಯೂ ಎಚ್ಚರವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಡಿವೈಎಸ್ಪಿ ಭಾಸ್ಕರ ರೈ, ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ, ಎಸ್‌ಐಗಳಾದ ಮಹೇಶ್, ಮಧ್ಯನಾಯ್ಕ, ಶಿವಪ್ರಕಾಶ್.ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಸೇರಿದಂತೆ ವಿವಿಧ ಠಾಣೆಗಳ ಎಸ್‌ಐಗಳು, 300ಕ್ಕೂ ಹೆಚ್ಚು ಆಟೋ ಚಾಲಕರು ಉಪಸ್ಥಿತರಿದ್ದರು.
ಶಾಲಾ ಬಸ್‌ಗಳಿಗೆ ಕಣ್ಗಾವಲು ಕಡ್ಡಾಯ: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಲ್ಲಾ ಶಾಲಾ ವಾಹನಗಳಿಗೂ ಇನ್ನು ಮುಂದೆ ಸಿಸಿ ಕ್ಯಾಮರಾ ಹಾಗೂ ಜಿಪಿಎಸ್ ಅಳವಡಿಸುವುದು ಕಡ್ಡಾಯಗೊಳಿಸಲಾಗಿದೆ, ಇಲ್ಲದಿದ್ದಲ್ಲಿ ವಾಹನಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್‌ಎಚ್ಚರಿಕೆ ನೀಡಿದರು.
ಚಾಲಕರ ಕಾಲಾವಕಾಶ ಮನವಿ ತಿರಸ್ಕಾರ: ಆಟೋವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಕಠಿಣ ಕ್ರಮ ಜರುಗಿಸಲು ಮುಂದಾದಲ್ಲಿ ನೂರಾರು ಕುಟುಂಬಗಳು ಬೀದಿಗೆ ಬರಲಿವೆ. ಅಲ್ಲದೇ ಪೋಷಕರಿಗೂ ಹೆಚ್ಚಿನ ಹೊರೆ ಬೀಳಲಿದೆ. ಕನಿಷ್ಠ 8-10 ಮಕ್ಕಳನ್ನು ಕರೆದೊಯ್ಯಲು ಅನುಮತಿ ಕೊಡಿ, ವಾಹನಗಳ ದಾಖಲಾತಿಯನ್ನು ಸರಿಪಡಿಸಿಕೊಳ್ಳಲು ಹಣ ಮತ್ತು ಕಾಲಾವಕಾಶ ಬೇಕಿದ್ದು,
ಕನಿಷ್ಠ ಒಂದು ತಿಂಗಳ ಅವಕಾಶ ನೀಡಿ ಎಂದು ಕೆಲ ಆಟೋ ಚಾಲಕರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಯಾವುದೇ ಕಾರಣಕ್ಕೂ ಕಾಲಾವಕಾಶ ನೀಡಲು ಸಾಧ್ಯವಿಲ್ಲ, ಶೀಘ್ರವೇ ದಾಖಲಾತಿಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.