ವಿಶೇಷ ಪ್ಯಾಕೇಜ್ ಘೋಷಣೆ ನಿರೀಕ್ಷೆ ಹುಸಿ
ಉಜಳಂಬಕ್ಕೆ 32.10 ಕೋಟಿ ಬಿಟ್ಟರೆ ಬೇರೇನೂ ಇಲ್ಲ •ಅನುಭವ ಮಂಟಪಕ್ಕೂ ಇಲ್ಲ ಅನುದಾನ
Team Udayavani, Jun 29, 2019, 10:30 AM IST
ದುರ್ಯೋಧನ ಹೂಗಾರ
ಬೀದರ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯಕ್ಕೆ ಶುಕ್ರವಾರ ತೆರೆ ಬಿದ್ದಿದ್ದು, ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮಕ್ಕೆ 32.10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು ಬಿಟ್ಟರೆ ಹೇಳಿಕೊಳ್ಳುವ ಯೋಜನೆಗಳನ್ನು ಪ್ರಕಟಿಸದಿರುವುದು ಜಿಲ್ಲೆಯ ಜನರಿಗೆ ಭಾರೀ ನಿರಾಸೆ ಮೂಡಿಸಿದೆ.
ಗ್ರಾಮ ವಾಸ್ತವ್ಯಕ್ಕೆ ಬೀದರ್ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬರಗಾಲಕ್ಕೆ ಪದೆಪದೆ ತತ್ತರಿಸುತ್ತಿರುವ ಜಿಲ್ಲೆಯ ರೈತರ, ಜನ ಸಾಮಾನ್ಯರ ಸ್ಥಿತಿಗತಿ ಬದಲಿಸುವ ನಿಟ್ಟಿನಲ್ಲಿ ವಿಶೇಷ ಪ್ಯಾಕೆಜ್ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆಯನ್ನು ಜನರು ಇಟ್ಟುಕೊಂಡಿದ್ದರು.
ಗಡಿ ಜಿಲ್ಲೆಗೆ ಬಂದು ಗ್ರಾಮ ವಾಸ್ತವ್ಯ ಮಾಡಿದ ಮುಖ್ಯಮಂತ್ರಿಗಳು ಉಜಳಂಬ ಗ್ರಾಮಕ್ಕೆ 32.10 ಕೋಟಿ ಅನುದಾನ ನೀಡುವ ಮೂಲಕ ಉಜಳಂಬ ಉಜ್ವಲಿಸುವಂತೆ ಮಾಡಿದ್ದು, ಜಿಲ್ಲೆಗೆ ಹೊಸ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಮೈತ್ರಿ ಸರ್ಕಾರ ರಚನೆಗೊಂಡ ನಂತರ ಮಂಡಿಸಿದ ಈ ಹಿಂದಿನ ಎರಡು ಬಜೆಟ್‌ನಲ್ಲಿ ಜಿಲ್ಲೆಗೆ ಘೋಷಿಸಲಾದ ವಿವಿಧ ಯೋಜನೆಗಳನ್ನೇ ಮತ್ತೆ ಹೇಳುವ ಮೂಲಕ ಹಳೆಯದನ್ನೇ ಹೊಸದಾಗಿ ಬಿಂಬಿಸುವ ಕಾರ್ಯವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದು ಜಿಲ್ಲೆಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಕಾರಂಜಾ ಸಂತ್ರಸ್ತರಿಲ್ಲ ಪರಿಹಾರ: ಕಾರಂಜಾ ಸಂತ್ರಸ್ಥರಿಗೆ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳು ದಿಟ್ಟ ನಿರ್ಧಾರ ತೆಗೆದುಕೊಂಡು ಪರಿಹಾರ ಘೋಷಣೆ ಮಾಡುತ್ತಾರೆ ಎಂದು ಕಾರಂಜಾ ಸಂತ್ರಸ್ತರು ನಂಬಿದ್ದರು. ಅಲ್ಲದೆ, ಉಜಳಂಬ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕೂಡ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಆದರೆ, ಮುಖ್ಯಮಂತ್ರಿಗಳು ಸಂತ್ರಸರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮತ್ತೆ ಸಮಿತಿ ರಚಿಸಿ ವರದಿ ಪಡೆದುಕೊಂಡ ನಂತರ ಮುಂದಿನ ಕ್ರಮ ವಹಿಸುವುದಾಗಿ ತಿಳಿಸಿದ್ದು, ಸಂತ್ರಸ್ತರಿಗೆ ಬೇಸರ ಮೂಡಿಸಿದೆ.
ಅನುಭವ ಮಂಟಪ ಅನುದಾವಿಲ್ಲ: ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ 600 ಕೋಟಿ ರೂ. ಯೋಜನೆಗೆ ಅನುದಾನ ನೀಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ, ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ತಮ್ಮ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಹಣ ಮಂಜೂರು ಮಾಡಿಯೇ ಹೋಗಬೇಕು ಎಂದು ಸಿಎಂಗೆ ಒತ್ತಾಯಿಸಿದರು. ಆದರೆ, ಭಾಷಣದಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳು ಚಕಾರ ಎತ್ತದೇ ಮುಂದಿನ ದಿನಗಳಲ್ಲಿ ಅನುಭವ ಮಂಟಪಕ್ಕೆ ಅನುದಾನ ನೀಡುವುದಾಗಿ ಹೇಳಿ ಜಾರಿಕೊಂಡಿದ್ದು, ಬಸವ ಭಕ್ತರಿಗೆ ಮುಖ್ಯಮಂತ್ರಿಗಳು ಬೇಸರ ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ನೀರಾವರಿಗೆ ಅನುದಾನ: ಜಿಲ್ಲೆಯ ನೀರಾವರಿ ಯೋಜನೆಗಳಿಗಾಗಿ 800 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಭಾಷಣದಲ್ಲಿ ಹೇಳಿದರು. ಕಾರಂಜಾ ಹಾಗೂ ಸಣ್ಣ ನೀರಾವರಿ ಯೋಜನೆಗಳಿಗಾಗಿ ಹಣ ಬಿಡುಗಡೆಗೊಳಿಸಿರುವುದಾಗಿ ಕೂಡ ಹೇಳಿದ್ದು, ಈ ಯೋಜನೆಗಳು ಹೊಸ ಯೋಜನೆಗಳೇನಲ್ಲ ಎನ್ನುತ್ತಿದ್ದಾರೆ ಜಿಲ್ಲೆಯ ರೈತರು. ಈ ಹಿಂದೆ ಬಜೆಟ್‌ನಲ್ಲಿ ಘೋಷಣೆ ಮಾಡಿರುವುರನ್ನೇ ಮುಖ್ಯಮಂತ್ರಿಗಳು ಮತ್ತೆ ಹೇಳಿದ್ದಾರೆ ಎನ್ನಲಾಗುತ್ತಿದೆ.
ಬ್ರಿಮ್ಸ್ ಆಸ್ಪತ್ರೆಗೆ ಮತ್ತೆ 200 ಕೋಟಿ!: ಬೀದರ್ ನಗರದ ಬ್ರಿಮ್ಸ್ ಆಸ್ಪತ್ರೆ ಕಟ್ಟಡ ಕಾಮಗಾರಿ ಕಳಪೆಯಾಗಿದೆ ಎಂದು ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದು, ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡದೇ ಕಳಪೆ ಕಾಮಗಾರಿ ದುರಸ್ತಿಗೆ ಮತ್ತೆ 200 ಕೋಟಿ ರೂ. ನೀಡಲಾಗುವುದು ಎಂದು ಹೇಳಿರುವುದು ಜನರಿಗೆ ವಿಚಿತ್ರವೆನಿಸುತ್ತಿದೆ.
ಬಿಎಸ್‌ಎಸ್‌ಕೆಗೆ ಏನೂ ಇಲ್ಲ: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಆಧುನೀಕರಣಕ್ಕೆ ಮುಖ್ಯಮಂತ್ರಿಗಳು ಅನುದಾನ ನೀಡಬಹುದು ಎಂದು ಕಾರ್ಖಾನೆಯ ಸಿಬ್ಬಂದಿ ಭಾರೀ ನಿರೀಕ್ಷೆ ಹೊಂದಿದ್ದರು. ಆದರೆ ಮುಖ್ಯಮಂತ್ರಿಗಳ ಭಾಷಣದಲ್ಲಿ ಬಿಎಸ್‌ಎಸ್‌ಕೆ ಕಾರ್ಖಾನೆಯ ಹೆಸರೇ ತೆಗೆಯದಿರುವುದು ಕಬ್ಬು ಬೆಳೆವ ರೈತರಿಗೆ, ಕಾರ್ಖಾನೆ ಸಿಬ್ಬಂದಿಗಳಿಗೆ ಬೇಸರ ಮೂಡಿಸಿದೆ.
ಬೀದರ್ ಜಿಲ್ಲೆಗೆ ಭಾರೀ ಯೋಜನೆಗಳನ್ನು ನಿರೀಕ್ಷಿಸಿದ ಜನರಿಗೆ ಭಾರೀ ಬೇಸರ ಮೂಡಿಸಿದ್ದು, ಮುಖ್ಯಮಂತ್ರಿಗಳ ಭರವಸೆ ಉಜಳಂಬ ಗ್ರಾಮಕ್ಕೆ ಮಾತ್ರ ಸೀಮಿತವಾಯ್ತಾ? ಎಂಬ ಮಾತುಗಳು ಕೇಳಿಬರುತ್ತಿವೆ.
ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮೀಸಿ ರೈತರ, ಸಾರ್ವಜನಿಕರ ಸಮಸ್ಯೆಗಳು ಆಲಿಸಿದ್ದಾರೆ. ರೈತರ ಬೇಡಿಕೆಗಳು ಮುಖ್ಯಮಂತ್ರಿಗೆ ತಿಳಿಸಿದ್ದು, ಅವುಗಳು ಈಡೇರಿದ್ದಾಗ ಮಾತ್ರ ಮುಖ್ಯಮಂತ್ರಿ ಇಲ್ಲಿಗೆ ಬಂದು ಗ್ರಾಮ ವಾಸ್ತವ್ಯಮಾಡಿದಕ್ಕೆ ಅರ್ಥ ಬರುತ್ತೆ. ರೈತರ ಸಾಲಮನ್ನಾ ಯೋಜನೆಗೆ ಪಡಿತರ ಚೀಟಿ ಸಮಸ್ಯೆ ಉಂಟು ಮಾಡುತ್ತಿದೆ. ಒಂದೇ ಪಡಿತರ ಚೀಟಿಹೊಂದಿದ ರೈತರ ಕುಟುಂಬ ಇಂದು ಬೇರೆಬೇರೆಯಾಗಿದ್ದಾರೆ. ತಂದೆ ಒಂದು ಕಡೆ ಆದರೆ, ತಾಯಿ ಇನ್ನೊಂದು ಕಡೆಯಾಗಿದ್ದಾರೆ. ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರ ಮಾದರಿಯಲ್ಲಿ ಎಲ್ಲಾ ರೈತರಿಗೆ ಸಾಲಮನ್ನಾ ಮಾಡುವ ಮೂಲಕ ಮಾದರಿ ಮುಖ್ಯಮಂತ್ರಿಯಾಗಬೇಕು ಎಂದು ತಿಳಿಸಲಾಗಿದೆ.
ಮಲ್ಲಿಕಾರ್ಜುನ ಸ್ವಾಮಿ,
ರೈತ ಸಂಘದ ಜಿಲ್ಲಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.