ಅತಿಥಿ ಶಿಕ್ಷಕರನ್ನು ಶೀಘ್ರ ನೇಮಿಸಿಕೊಳ್ಳಿ
ಅಕ್ಷರ ದಾಸೋಹ, ನಿರ್ಮಿತಿ ಕೇಂದ್ರದ ಅಧಿಕಾರಿ ವಿರುದ್ಧ ಕ್ರಮಕ್ಕೆ ಸದಸ್ಯರ ಒತ್ತಾಯ
Team Udayavani, Jun 29, 2019, 11:44 AM IST
ಯಾದಗಿರಿ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು.
ಯಾದಗಿರಿ: ಪ್ರತಿ ವರ್ಷ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಲ್ಲಿ ವಿಳಂಬ ಆಗುತ್ತಿರುವುದರಿಂದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ಹಾಗಾಗಿ, ಪ್ರಸಕ್ತ ಸಾಲಿನಲ್ಲಿ ಅತಿಥಿ ಶಿಕ್ಷಕರನ್ನು ಶೀಘ್ರ ನೇಮಕ ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಪ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಎಸ್‌ಎಸ್‌ಎಲ್ಸಿ ಫಲಿತಾಂಶ ಕಳೆದ ಸಾಲಿನಲ್ಲಿ ಶೇ. 34.50ರಷ್ಟು ಬಂದಿತ್ತು. ಆದರೆ, ಈ ಬಾರಿಯ ಫಲಿತಾಂಶ ಶೇ. 54.88ರಷ್ಟು ಹೆಚ್ಚಳವಾದರೂ ರಾಜ್ಯದಲ್ಲಿ ಜಿಲ್ಲೆಗೆ ಕೊನೆಯ ಸ್ಥಾನ ತಪ್ಪಿಲ್ಲ. ಹಾಗಾಗಿ, ವಿಷಯವಾರು ಶಿಕ್ಷಕರು ಮತ್ತು ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಿ, ಮಕ್ಕಳಿಗೆ ವಿಶೇಷ ತರಬೇತಿ ನೀಡಬೇಕು ಎಂದರು.
ಸದಸ್ಯ ಬಸನಗೌಡ ಪಾಟೀಲ ಯಡಿಯಾಪೂರ ಸಲಹೆಯಂತೆ ಬೆಳಗಿನ ಅವಧಿಯಲ್ಲಿ ಮಕ್ಕಳ ಮನಸ್ಸು ಕಲಿಕೆಗೆ ಆಸಕ್ತಿದಾಯಕ ಆಗಿರುತ್ತದೆ. ಕಾರಣ, ಕಠಿಣ ವಿಷಯಗಳಾದ ವಿಜ್ಞಾನ, ಗಣಿತ, ಇಂಗ್ಲಿಷ್ ವಿಷಯಗಳನ್ನು ಬೆಳಗಿನ ಅವಧಿಯಲ್ಲಿ ಮತ್ತು ಹಿಂದಿ, ಕನ್ನಡ, ಸಮಾಜ ವಿಜ್ಞಾನ ವಿಷಯಗಳನ್ನು ಮಧ್ಯಾಹ್ನದ ಅವಧಿಗೆ ಹಂಚಿಕೆ ಮಾಡಿ ಆದೇಶಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ಕಟ್ಟಡಗಳನ್ನು ಮಾತ್ರ ನೆಲಸಮಗೊಳಿಸಿ, ನಿರ್ಮಾಣ ಮಾಡಲು ವರದಿ ಕೊಡಬೇಕು. ಶಾಲೆಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ಆವರಣ ಗೋಡೆ ನಿರ್ಮಾಣ ಕಾಮಾಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಮಾತನಾಡಿ, ಅತಿಥಿ ಶಿಕ್ಷಕರ ನೇಮಕಾತಿಗೆ ಸಂಬಂಧಪಟ್ಟಂತೆ ಇಲಾಖೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಇನ್ನೆರಡು ದಿನಗಳಲ್ಲಿ ಆದೇಶ ಬರಬಹುದು. ಪದವೀಧರ ಕಾಯಂ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಹೈದ್ರಾಬಾದ್ ಕರ್ನಾಟಕ ವೃಂದದ 535 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಕೇವಲ 338 ಅರ್ಜಿಗಳು ಬಂದಿದ್ದವು. ಸಲ್ಲಿಕೆಯಾದ ಅರ್ಜಿಗಳಲ್ಲೂ ನೇಮಕ ಆಗುವುದು ಕಡಿಮೆ. ಹಾಗಾಗಿ, ಕಾಯಂ ಶಿಕ್ಷಕರ ನೇಮಕಾತಿಗಾಗಿ ಯಾದಗಿರಿಗೆ ಜಿಲ್ಲೆಗೆ ವಿಶೇಷ ಅಧಿಸೂಚನೆ ಹೊರಡಿಸಲು ಮನವಿ ಪತ್ರ ಸಲ್ಲಿಸಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಜಿಲ್ಲಾ ಪಂಚಾಯಿತಿಯ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ. ಜನಪ್ರತಿನಿಧಿಗಳು ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಸಿದರೆ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲು ಹೆಚ್ಚಿನ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ವಿನೋದ ಪಾಟೀಲ್ ಹಾಗೂ ಇನ್ನಿತರ ಸದಸ್ಯರು ಮಾತನಾಡಿ, ಶಹಾಪುರ ತಾಲೂಕಿನ ಬೆಂಡೆಬೆಂಬಳಿ ಶಾಲೆಯ ಗೋಡೆಗೆ ಹೊಂದಿಕೊಂಡಂತೆ ಮದ್ಯದಂಗಡಿ ತೆರೆಯಲಾಗಿದೆ. ಇದನ್ನು ತೆರವುಗೊಳಿಸಲು ಮನವಿ ಸಲ್ಲಿಸಿ, ವರ್ಷ ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲೆ, ಧಾರ್ಮಿಕ ಕೇಂದ್ರಗಳು, ಆಸ್ಪತ್ರೆಗಳ ಸುತ್ತಮುತ್ತ ಮದ್ಯದಂಗಡಿ ತೆರೆಯಲು ನಿಷೇಧವಿದ್ದರೂ ಪರವಾನಗಿ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ತಕ್ಷಣ ಈ ಮದ್ಯದಂಗಡಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವ ಜೊತೆಗೆ ನಿಷೇಧಿತ ಅಂತರದಲ್ಲಿ ಮದ್ಯದಂಗಡಿಗಳಿದ್ದರೆ ಪಟ್ಟಿ ನೀಡಲು ಸೂಚಿಸಿದರು.
ಸಾಮಾನ್ಯ ಸಭೆಗೆ ಅನುಪಾಲನಾ ವರದಿ ಸಲ್ಲಿಸದ ಕೃಷಿ ಇಲಾಖೆ, ವಯಸ್ಕರ ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಆರೋಗ್ಯ ಮತ್ತು ಕುಟುಂಬ ಇಲಾಖೆ, ಪಂಚಾಯತ್ ರಾಜ್ ವಿಭಾಗ, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಅಧಿಕಾರಿಗಳಿಗೆ ನೋಟಿಸ್ ನೀಡಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ತಿಳಿಸಿದರು.
ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೆ ತರದೇ ಫಲಾನುಭವಿಗಳ ಆಯ್ಕೆ, ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ ಎಂಬುದಾಗಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕಿಶನ್ ರಾಠೊಡ, ಮಾಜಿ ಅಧ್ಯಕ್ಷರಾದ ಬಸರೆಡ್ಡಿಗೌಡ ಮಾಲಿಪಾಟೀಲ ಅನಪೂರ, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸರಸ್ವತಿ ಶುಭಾಶ್ಚಂದ್ರ ಹೊನಗೇರಾ, ಸದಸ್ಯರಾದ ಶಿವಲಿಂಗಪ್ಪ ಪುಟಗಿ, ಬಸನಗೌಡ ಪಾಟೀಲ ಯಡಿಯಾಪುರ ಸೇರಿದಂತೆ ಎಲ್ಲ ಸದಸ್ಯರು ಆರೋಪಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಅಕ್ಷರ ದಾಸೋಹ ಅಧಿಕಾರಿ, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದು, ರೈತರು ಬಿತ್ತನೆ ಆರಂಭಿಸಿದ್ದಾರೆ. ಜಿಲ್ಲೆಯಾದ್ಯಂತ ಶೇ. 10ರಷ್ಟು ಮಳೆ ಕೊರತೆ ಇದೆ. 3.53 ಲಕ್ಷ ಹೆಕ್ಟೇರ್ ಒಟ್ಟು ಬಿತ್ತನೆ ಕ್ಷೇತ್ರದ ಗುರಿ ಇದ್ದು, ಮಳೆ ಕೊರತೆಯಿಂದಾಗಿ 8,862 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ (ಕೆಎಸ್‌ಎಸ್‌ಸಿ), ರಾಷ್ಟ್ರೀಯ ಬೀಜ ನಿಗಮ (ಎನ್‌ಎಸ್‌ಸಿ) ಹಾಗೂ ಖಾಸಗಿ ಸಂಸ್ಥೆಗಳಿಂದ ದಾಸ್ತಾನು ಮಾಡಲಾಗಿದೆ. ರಸಗೊಬ್ಬರ 79,285 ಮೆಟ್ರಿಕ್ ಟನ್ ಬೇಡಿಕೆ ಇದ್ದು, 95,567 ಮೆಟ್ರಿಕ್ ಟನ್ ಜಿಲ್ಲೆಗೆ ಹಂಚಿಕೆ ಮಾಡಲಾಗಿದೆ. ಹಾಗಾಗಿ, ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಇಲ್ಲ ಎಂಬುದಾಗಿ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ಸಭೆಗೆ ವರದಿ ನೀಡಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗುರುನಾಥ ಗೌಡಪ್ಪನವರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.