ಬಿಇಒ ಕಡ್ಡಾಯ ರಜೆಗೆ ನಿರ್ಣಯ
•ಜಿಲ್ಲಾ ಪಂಚಾಯತ್ ಸರ್ವ ಸದಸ್ಯರ ಸಭೆಯಲ್ಲಿ ನಿರ್ಧಾರ•ಸದಸ್ಯರ ನಡುವೆ ವಾಗ್ವಾದ
Team Udayavani, Jun 29, 2019, 12:25 PM IST
ಚಿಕ್ಕಮಗಳೂರು: ಜಿಪಂ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರು ಪರಸ್ಪರ ವಾಗ್ವಾದ ನಡೆಸಿದರು
ಚಿಕ್ಕಮಗಳೂರು: ಕ್ಷೇತ್ರ ಶಿಕ್ಷಣಾಧಿಕಾರಿ ಶರಶ್ಚಂದ್ರ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲು ಜಿಲ್ಲಾ ಪಂಚಾಯತ್ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಚಿಕ್ಕಮಗಳೂರು ತಾಪಂ ಅಧ್ಯಕ್ಷ ನೆಟ್ಟೇಕೆರೆ ಜಯಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಶರಶ್ಚಂದ್ರ ಅವರು, 2018-19ನೇ ಸಾಲಿಗೆ ಸರ್ಕಾರದಿಂದ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಿಗೆ ಬಿಡುಗಡೆ ಮಾಡಿದ್ದ ಲಕ್ಷಾಂತರ ರೂ. ಸಾದಿಲ್ವಾರು ವೆಚ್ಚದ ಅನುದಾನವನ್ನು ತಾಪಂ ಅನುಮೋದನೆ ಪಡೆದುಕೊಳ್ಳದೇ ನಿಯಮಬಾಹಿರವಾಗಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.
ಅದೇ ರೀತಿಯ ಮತ್ತೂಂದು ಅನುದಾನವನ್ನು ಬಳಸಿಕೊಳ್ಳದ ಕಾರಣ ಅನುದಾನ ಸರ್ಕಾರಕ್ಕೆ ವಾಪಸ್ ಹೋಗಿದೆ. ಈ ಬಗ್ಗೆ ತಾವು ನೀಡಿದ್ದ ದೂರನ್ನು ಪರಿಶೀಲಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಬಿಇಒ ಲೋಪವೆಸಗಿದ್ದಾರೆ ಎಂದು ವರದಿ ಸಲ್ಲಿಸಿದ್ದಾರೆ. ಹಾಗಾಗಿ, ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಪಂ ಸದಸ್ಯ ಬೆಳವಾಡಿ ರವೀಂದ್ರ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ಕೊಡುತ್ತಿಲ್ಲ. ಇತ್ತೀಚೆಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಕುರಿತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು ಕರೆದಿದ್ದ ಸಭೆಗೆ ಅವರು ಗೈರುಹಾಜರಾಗಿದ್ದರು. ಮಾತ್ರವಲ್ಲದೇ, ಸಭೆಗೆ ಹಾಜರಾಗಿದ್ದ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಪಾಲ್ಗೊಂಡಿದ್ದ ಖಾಸಗಿ ಕಾರ್ಯಕ್ರಮಕ್ಕೆ 400 ಶಿಕ್ಷಕರನ್ನು ಕಳುಹಿಸಿಕೊಟ್ಟಿದ್ದಾರೆ. ಬಿಇಒಗೆ ರಾಜಕೀಯ ಮಾಡುವ ಇಚ್ಛೆ ಇದ್ದರೆ ಹುದ್ದೆಗೆ ರಾಜೀನಾಮೆ ಸಲ್ಲಿಸಲಿ ಎಂದು ಹೇಳಿದರು.
ತಾಪಂ ಅಧ್ಯಕ್ಷ ಜಯಣ್ಣ ಮಾತನಾಡಿ, ಕ್ಷೇತ್ರಶಿಕ್ಷಣಾಧಿಕಾರಿಗಳು ತಮ್ಮ ಕಚೇರಿಯನ್ನು ಮೋಜು,ಮಸ್ತಿ ಮಾಡಲು ಬಳಸಿಕೊಂಡಿದ್ದಾರೆ. ಹುಟ್ಟುಹಬ್ಬದ ಹೆಸರಿನಲ್ಲಿ ಕಚೇರಿಯಲ್ಲಿಯೇ ಮೋಜು, ಮಸ್ತಿ ಮಾಡಿದ್ದಾರೆ ಎಂದು ಆರೋಪಿಸಿ, ಭಾವಚಿತ್ರಗಳನ್ನು ಪ್ರದರ್ಶಿಸಿದರು. ಕೂಡಲೇ. ಬಿಇಒ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದ ಕ್ರಮ ಕೈಗೊಳ್ಳು ವವರೆಗೂ ಅವರನ್ನು ರಜೆ ಮೇಲೆ ಕಳುಹಿಸಬೇಕೆಂದು ಒತ್ತಾಯಿಸಿದರು. ಆಗ, ಬಹುತೇಕ ಸದಸ್ಯರು ಇದಕ್ಕೆ ಬೆಂಬಲ ಸೂಚಿಸಿದರು.
ಜಿಪಂ ಅಧ್ಯಕ್ಷೆ ಸುಜಾತಾ ಮಾತನಾಡಿ, ಬಿಇಒ. ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಸರ್ಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳುವವರೆಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗುವುದು. ಕಚೇರಿಯಲ್ಲಿ ಮೋಜು, ಮಸ್ತಿ ಮಾಡಿರುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕುದುರೆಮುಖದಲ್ಲಿ ತಾಲೂಕು ಕಚೇರಿ ಬೇಡ: ಜಿಪಂ ಸದಸ್ಯ ಪ್ರಭಾಕರ್ ಮಾತನಾಡಿ, ಕಳಸವನ್ನು ತಾಲೂಕು ಕೇಂದ್ರ ಮಾಡಬೇಕೆಂಬುದು ಹಲವು ದಶಕಗಳ ಬೇಡಿಕೆಯಾಗಿತ್ತು. ಕಳಸವನ್ನು ತಾಲೂಕು ಕೇಂದ್ರವಾಗಿಸಿ ಆದೇಶಿಸಿರುವುದಕ್ಕೆ ರಾಜ್ಯಸರ್ಕಾರವನ್ನು ಅಭಿನಂದಿಸಲಾಗುವುದು. ಆದರೆ, ಮೊನ್ನೆ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕುದುರೆಮುಖದಲ್ಲಿ ತಾಲೂಕುಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿ ಗಳನ್ನು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕುದುರೆಮುಖದಲ್ಲಿ ತಾಲೂಕು ಕಚೇರಿ ತೆರೆದರೆ ಹಲವು ಗ್ರಾಮಗಳಿಗೆ ಬಹಳ ದೂರವಾಗುತ್ತದೆ. ಆದ ಕಾರಣ ಕಳಸದಲ್ಲಿಯೇ ಕಚೇರಿ ತೆರೆಯಬೇಕೆಂದು ಒತ್ತಾಯಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಬಣಕಲ್ ಶಾಮಣ್ಣ, ಯಾವುದೇ ಕಾರಣಕ್ಕೂ ಕುದುರೆಮುಖದಲ್ಲಿ ಕಚೇರಿ ತೆರೆಯಬಾರದು. ಆ ರೀತಿ ಮಾಡಿದರೆ ಕಳಸವನ್ನು ತಾಲೂಕು ಕೇಂದ್ರ ಮಾಡಿದ ಉದ್ದೇಶವೇ ಈಡೇರುವುದಿಲ್ಲ ಎಂದರು.
ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಾತನಾಡಿ, ಕುದುರೆಮುಖದಲ್ಲಿ ತಾಲೂಕು ಕಚೇರಿ ತೆರೆಯದಂತೆ ನಿರ್ಣಯ ಮಾಡಲಾಗಿದ್ದು, ನಿರ್ಣಯದ ಪ್ರತಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
10 ನಿಮಿಷ ಮುಂದಕ್ಕೆ: ಸಭೆ ಆರಂಭವಾದ ನಂತರ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಲು ಹಲವು ಬಾರಿ ಯತ್ನಿಸಿದರೂ ಅವಕಾಶ ದೊರೆತಿರಲಿಲ್ಲ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಭೆಯಲ್ಲಿ ಕೇವಲ ತಾಪಂ ಅಧ್ಯಕ್ಷರಿಗೆ ಮಾತನಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಅವರೇ ಮಾತನಾಡುವುದಾದರೆ ನಾವೇಕೆ ಇಲ್ಲಿಗೆ ಬರಬೇಕೆಂದು ಪ್ರಶ್ನಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೂಡಿಗೆರೆ ತಾಪಂ ಅಧ್ಯಕ್ಷ ರತನ್ ಕುಮಾರ್, ತಾಪಂ ಸದಸ್ಯರೂ ಜಿಪಂ ಸದಸ್ಯರೇ ಆಗಿದ್ದಾರೆಂದು ಹೇಳಿದರು. ಇದಕ್ಕೆ ಎಲ್ಲ ತಾಪಂ ಸದಸ್ಯರೂ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಎಲ್ಲರೂ ಮಾತನಾಡಲು ಆರಂಭಿಸಿದಾಗ ಸಭೆಯಲ್ಲಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯದಂತಾಗಿತ್ತು. ಹಾಗಾಗಿ, ಅಧ್ಯಕ್ಷೆ ಸುಜಾತಾ ಸಭೆಯನ್ನು 10 ನಿಮಿಷಗಳ ಕಾಲ ಮುಂದೂಡಿದರು.
ತಾಲೂಕು ಪಂಚಾಯತ್ ಅಧ್ಯಕ್ಷರು ನೀಡಿದ್ದ ದೂರಿನನ್ವಯ ತನಿಖೆ ನಡೆಸಲಾಗಿದೆ. ಬಿಇಒ ತಪ್ಪು ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ತಾಲೂಕು ಮಟ್ಟದ ಅಧಿಕಾರಿ ಆಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿಗೆ ಅವಕಾಶವಿಲ್ಲ. ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
•ಎಸ್.ಅಶ್ವತಿ,
ಜಿಪಂ ಸಿಇಒ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.