ಗುಳುಂ ಗುಳಂಬ
Team Udayavani, Jun 30, 2019, 5:00 AM IST
ಗುಳಂಬ ಎಂದೊಡನೆ ಇದು ಕುಂಬಳಕಾಯಿ ತಮ್ಮನೋ ಅಣ್ಣನೋ… ಇರಬೇಕೆಂದುಕೊಳ್ಳಬೇಡಿ. ಗುಳಂಬ ಎಂದರೆ ಶುಂಭ-ನಿಶುಂಭರ ಸಂಬಂಧಿ ದೈತ್ಯನೆ ಎಂದು ಕೇಳಲೂಬೇಡಿ. ಹಾಗಾದರೆ, ಇದು ದೇವಸ್ಥಾನದೊಳಗಿರುವ ಕಂಬವೇ? ಅದೂ ಅಲ್ಲ. ಇದು ಹದಗಾರರ ಹಿಕಮತ್ತಿಗೊಲಿದ ನಾಕ. ಕಣ್ಣು ಮುಚ್ಚಿ ನಾಲಿಗೆಗೆ ಕೆಲಸ ಕೊಡುವ ಪಾಕರಸ. ‘ಗಂ’ ಎನ್ನುವ ಬೆಲ್ಲದ ಪಾಕದಿಂದಲೇ ಮನೆತುಂಬ ಅರಳುವ ಘಮ ಘಮ. ಯುಗಾದಿಯ ಬೆನ್ನೇರಿ ಬರುವಂತೆ ಕೈಗೂಡುವ ಈ ಗುಳಂಬಕ್ಕೆ ಸಾಥಿಯಾಗಿ ಕೊಬ್ಬರಿಯಂಥ ತಾಜಾ ಮಾವಿನ ಹೋಳು ಬೇಕೇ ಬೇಕು.
ಇದಕ್ಕೆ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ನಾಮಧೇಯಗಳಿರಬಹುದು. ವಿಜಯಪುರ ಜಿಲ್ಲೆಯ ಸಿಂದಗಿಯೆಂಬೋ ನನ್ನೂರಿನಲ್ಲಿ ಮಾತ್ರ ಇದಕ್ಕೆ ಗುಳಂಬ ಎನ್ನುವ ಹೆಸರು.
ನಮ್ಮ ಅಪ್ಪ ಊಟದ ವಿಷಯದಲ್ಲಿ ತುಂಬಾ ಹದಗಾರ. ಏನೋ ಒಂದನ್ನು ತಿಂದು ಎದ್ದು ಬಿಡುವವನಲ್ಲ. ಮನೆಯಲ್ಲಿ ಒಮ್ಮೊಮ್ಮೆ ಬರೀ ಖಾರದ ಚಟ್ನಿ ಇದ್ದರೂ ಅದರೊಂದಿಗೆ ಕಚ್ಚಿಕೊಳ್ಳಲು ಮೂಲಂಗಿಯಾದರೂ ಅವನಿಗೆ ಬೇಕು. ಶೇಂಗಾ ಚಟ್ನಿ ಇದ್ದರೆ ಅದಕ್ಕೆ ಕೆನೆಮೊಸರೇ ಆಗಬೇಕು. ಚಪಾತಿಗೆ ಬೆಕ್ಕಿನ ಮೂತಿಯ ಬದನೆಯೇ ಜೊತೆಯಾಗಬೇಕು. ಜವೆ ಗೋಧಿಯ ಸಜ್ಜಕವಾದರೆ, ನವಣಿ ನುಚ್ಚಿನಂಥ ಕಣಕಣ ತುಪ್ಪವೇ ಆಗಬೇಕು. ಸ್ವಾದ ಕೆಡಿಸಿಕೊಂಡು ಅಪ್ಪ ಊಟ ಮಾಡಿದ್ದು ತೀರಾ ಕಡಿಮೆ. ಅಪ್ಪನ ಈ ಬಗೆಯ ಹದಗಾರಿಕೆಯೇ ಅವ್ವ ಇನ್ನಷ್ಟು ಸ್ವಾದಿಷ್ಟವಾಗಿ ಅಡುಗೆ ಮಾಡಲು ಕಾರಣವಾಗಿತ್ತು. ಅಪ್ಪ ಖುಷಿಯಿಂದ ಉಂಡು ‘ಅ… ಬ್…’ ಎಂದು ಡೇಕರಿಕೆ ಬಿಟ್ಟರೆ ಅವ್ವನ ಅಡುಗೆಗೆ ‘ಎ’ ಗ್ರೇಡ್ ಸರ್ಟಿಫಿಕೇಟ್ ಸಿಕ್ಕಂತೆ. ವರ್ಷಕ್ಕೊಮ್ಮೆ ಮಾಡಲಾಗುವ ಈ ಗುಳಂಬದ ಹಿಂದೆ ಅಪ್ಪನ ಕಟಬಿಟಿ ಮತ್ತು ಅವ್ವಳ ಹಿಕಮತ್ತು ಅಡಕವಾಗಿರುತ್ತಿತ್ತು. ಊರಲ್ಲಿ ಪರಿಚಯವಿರುವ ಯಾರದಾದರೂ ಗದ್ದೆಗಳಲ್ಲಿ ಕಬ್ಬಿನ ಗಾಣ ನಡೆಯುವುದು ಮಾಮೂಲು. ಅಪ್ಪ ಅಲ್ಲಿಂದ ಎರಡು-ಮೂರು ಲೀಟರ್‌ನಷ್ಟು ಬೆಲ್ಲದ ಪಾಕವನ್ನು ಕಿಟ್ಲಿಯೊಂದರಲ್ಲಿ ತುಂಬಿ ತರುತ್ತಿದ್ದ. ಕಬ್ಬಿನ ಹಾಲು ಕಡಾಯಿಗೆ ಬಿದ್ದು ಕೊತಕೊತನೆ ಕುದ್ದು ಸರಿಯಾದ ಪಾಕವಾಗಿ, ಮೂಗಿಗೆ ಅಡ್ರಾಸಿ ವಾಸನೆ ಅಡರಿದಾಗ ಪಾಕವನ್ನು ಕಿಟ್ಲಿಗೆ ತುಂಬಲಾಗುತ್ತಿತ್ತು. ಇಲ್ಲಿಂದ ಗುಳಂಬದ ತಯಾರಿಗೆ ಪೀಠಿಕೆ ಶುರುವಾಗುತ್ತಿತ್ತು.
ಬೆಲ್ಲದ ಪಾಕಿನ ಕಿಟ್ಲಿ ಅವ್ವಳ ಕೈ ಸೇರಿದ್ದೇ ಅಪ್ಪನ ಅರ್ಧ ಕೆಲಸ ಮುಗಿದಂತೆ. ಇನ್ನೇನಿದ್ದರೂ ಗುಳಂಬದ ತಯಾರಿಗಾಗಿ ಬೇಕಾದ ಸಾಮಗ್ರಿಗಳನ್ನು ತಂದು ಕೊಡುವುದಷ್ಟೆ. ಹಾಗೆಂದು, ಈ ಗುಳಂಬ ಮಾಡಲು ಸಿಕ್ಕಾಪಟ್ಟೆ ದುಬಾರಿಯ ಸಾಮಾನು ಬೇಕಿಲ್ಲ. ಅತಿಮುಖ್ಯವಾಗಿ ಬೇಕಾದದ್ದು ಒಂದೋ ಇಲ್ಲವೇ ಎರಡು ಒಳ್ಳೆಯ ಹರೆಯದ ಮಾವಿನಕಾಯಿ, ಒಂದಷ್ಟು ಒಳ್ಳೆಯ ಟೊಮೆಟೊ ಬಿಟ್ಟರೆ ರೆಡಿಯಾದ ಮೇಲೆ ಉದುರಿಸಲು ಒಂದಷ್ಟು ಅಳತೆಗೆ ತಕ್ಕಂತೆ ಗಸಗಸೆ. ಇವಿಷ್ಟೇ ಗುಳಂಬದ ಸಾಮಗ್ರಿಗಳು. ಅವ್ವ ಗುಳಂಬ ಮಾಡುವ ಗಳಿಗೆಯಲ್ಲಿ ನಮಗ್ಯಾರಿಗೂ ಮಕ್ಕಳಿಗೆ ಅಡುಗೆ ಮನೆಗೆ ಪ್ರವೇಶ ಕೊಡುತ್ತಿರಲಿಲ್ಲ. ಹಾಗೆ ಒಂದೊಮ್ಮೆ ಬಿಟ್ಟರೆ ನಮ್ಮ ಕೊಳಕು ಕೈಗಳ ಕಮಾಲ್ ತೋರದೇ ಬಿಡುತ್ತಿರಲಿಲ್ಲ. ಇದನ್ನರಿತೇ ಅವ್ವ ಮುಗಿಯುವವರೆಗೂ ಯಾರೂ ಒಳಗೆ ಬರಬೇಡಿ ಎಂದು ಕರಾರು ಮಾಡುತ್ತಿದ್ದಳು.
ನಾನು ಮನೆಯಲ್ಲಿ ಕಡೆಯ ಮಗ. ಹೀಗಾಗಿ, ‘ಸುಮ್ಮನೇ ಕೂತ್ಗೋತೀನಿ. ಏನನ್ನೂ ಮುಟ್ಟೊದಿಲ್ಲ’ ಅಂದಾಗ ನನಗೆ ಮಾತ್ರ ರಿಯಾಯ್ತಿಯಿರುತ್ತಿತ್ತು. ಹೀಗಾಗಿ, ಅವ್ವ ಮಾಡುತ್ತಿದ್ದ ಗುಳಂಬದ ತಯಾರಿ ನನಗೆ ಈಗಲೂ ಕಣ್ಣ ಮುಂದೆ ಕಟ್ಟಿದಂತಿದೆ. ಹಾಲು ಕರೆಯುವಾಗ ಕಣ್ಣು ಬಿಟ್ಟು ಕೂಡುವ ಕಾಮಿಯಂತೆ, ಅವ್ವಳ ಕೈಯಾಡುವ ಕಡೆಗೆಯೇ ನೋಡುತ್ತಿದ್ದೆ. ನನ್ನ ನೋಟ ಮಾವಿನಕಾಯಿಯ ಮೇಲಿದೆ ಎನ್ನುವದನ್ನು ಅರಿತ ಅವ್ವ ಒಂದು ಸಣ್ಣದಾದ ಹೋಳನ್ನು ನನ್ನತ್ತ ಚಾಚುತ್ತಿದ್ದಳು. ಕಿಟ್ಲಿಯಲ್ಲಿಯ ಪಾಕವನ್ನು ಸ್ಟೀಲ್ ಡಬರಿಯೊಂದರಲ್ಲಿ ಹಾಕಿ, ಇನ್ನೊಂದು ಡಬರಿಯಲ್ಲಿ ಕತ್ತರಿಸಿದ ಟೊಮೆಟೊ ಕುದಿಯಲಿಟ್ಟು, ಮಾವಿನ ಹೋಳನ್ನು ಕೊಬ್ಬರಿಯಂತೆ ಮಣೆಯ ಮೇಲೆ ಹೆರೆಯುತ್ತಿದ್ದಳು. ಹಾಗೆ ಹೆರೆದುಳಿದ ಮಾವಿನ ಕಾಯಿಯ ಅಂಚು ಮಾತ್ರ ನನಗೆ, ನಮ್ಮಣ್ಣನಿಗೆ ಸಿಗುತ್ತಿತ್ತು. ಅವ್ವ ಅಂತಿಂಥ ಟೊಮೆಟೊ ಮತ್ತು ಮಾವಿನಕಾಯಿಯನ್ನು ಈ ಗುಳಂಬ ಮಾಡುವಾಗ ಬಳಸುತ್ತಿರಲಿಲ್ಲ. ಅಪ್ಪ ಹುಡುಕಿ ತಂದ ಟೊಮೆಟೊ ಮತ್ತು ಮಾವಿನಕಾಯಿ ಸರಿಯಿಲ್ಲ, ಮಾವಿನಕಾಯಿಗೆ ಜಿಗಿ ಬಿದ್ದಂತಾಗಿದೆ. ಅದನ್ನೇ ಹಾಕಿದರೆ ಗುಳಂಬ ತಾಳುವದಿಲ್ಲ ಎನ್ನುತ್ತಿದ್ದಳು. ಅಂತೂ ಇಂತೂ ಅವ್ವಳ ಕೈಗುಣದಲ್ಲಿ ಗುಳಂಬ ರೆಡಿಯಾಗುತ್ತಿತ್ತು. ಅವ್ವ ಗುಳಂಬ ಮಾಡುವುದು ಮುಗಿಯಿತು ಎನ್ನುವುದೇ ತಡ ಎಲ್ಲರೂ ಅದರ ಸ್ವಾದ ನೋಡಲು ರೆಡಿಯಾಗಿರುತ್ತಿದ್ದರು. ಅಪ್ಪ ಅದನ್ನು ಬಳಸುವ ಮೊದಲು ಅಕ್ಕನೂರಿಗೆ ಒಂದಷ್ಟು ಮುಟ್ಟಬೇಕು ಎಂದು ಒಂದು ಡಬ್ಬಿಯಲ್ಲಿ ತೆಗೆದಿಡಿ ಎನ್ನುತ್ತಿದ್ದ. ಅಕ್ಕ ಕೆಲ ಬಾರಿ ತಾನೇ ಖುದ್ದಾಗಿ ಈ ಗುಳಂಬ ಮಾಡಲು ಯತ್ನಿಸಿ ಅದರ ಸ್ವಾದ ಖರಾಬ್ ಆಗಿ, ತನಗೆ ಗುಳಂಬ ಮಾಡಲು ಬರುವದಿಲ್ಲ ಎಂದು ಖಾತ್ರಿಪಡಿಸಿಕೊಂಡು, ಅವ್ವಳ ಬಳಿಗೆ ಬಂದು ಅಡ್ವಾನ್ಸ್ ಬುಕಿಂಗ್ ಮಾಡುವದಿತ್ತು. ಗುಳಂಬ ಮತ್ತು ಚಪಾತಿ ಒಳ್ಳೆ ಕಾಂಬಿನೇಶನ್ನು. ಅಪರೂಪಕ್ಕೆ ಅದನ್ನು ದೋಸೆ ಜೊತೆಗೂ ಬಳಸುವದಿತ್ತು. ಗುಳಂಬ ರೆಡಿ ಮಾಡುವಾಗ ಮನೆ ತುಂಬ ಅದರದ್ದೇ ಘಮಲು. ಎಲ್ಲರ ಬಾಯಿಯಲ್ಲೂ ನೀರೇ ನೀರು. ಅದು ಬಿಸಿಯಿರುವಾಗ ಇನ್ನೂ ಸ್ವಾದ. ಅವ್ವ ಹಾಗೆ ತಯಾರಿಸಿದ ಗುಳಂಬ ವನ್ನು ಒಂದು ಸ್ಟೀಲ್ ಡಬ್ಬಿಯನ್ನು ಚೆನ್ನಾಗಿ ತೊಳೆದು, ಬಿಸಿಲಲ್ಲಿ ಒಣಗಿಸಿ ಅದಕ್ಕೆ ತುಂಬಿಡುತ್ತಿದ್ದಳು. ನಮ್ಮಂಥ ಸಣ್ಣ ಮಕ್ಕಳಿಗೆ ಆ ಗುಳಂಬದಲ್ಲಿ ಕೊಬ್ಬರಿಯಂತೆ ಹೆರೆದು ಹಾಕಿ ಹದವಾಗಿ ಕುದಿಸಿದ ಮಾವಿನಕಾಯಿಯ ಚಿಗುರಿನದೇ ಒಂದು ಮಜಾ.
ಅವ್ವ ಮಾಡಿದ ಗುಳಂಬದ ಸುದ್ದಿ ತಾನೇ ತಾನಾಗಿ ಓಣಿಯಲ್ಲಿ ಬಯಲಾಗುತ್ತಿತ್ತು. ಡಬ್ಬಿಯಲ್ಲಿ ಬೆಲ್ಲದ ಪಾಕವನ್ನು ಮುಚ್ಚಿಡಬಹುದು ಅದರ ವಾಸನೆಯನ್ನು ಮುಚ್ಚಿಡಲಾದೀತೆ? ಓಣಿಯ ಹೆಂಗಸರು ಕಿಟಕಿಯಲ್ಲಿ ನಿಂತು, ‘ಶಾಂತಕ್ಕ, ಹ್ಯಾಗಿದ್ದೀರಿ’ ಎಂದು ಮಾತನಾಡಿಸಲು ಯತ್ನಿಸುತ್ತಿದ್ದರು. ಅವರು ಗುಳಂಬದ ಘಮ್ ಆಘ್ರಾಣಿಸಿಯೇ ತನ್ನನ್ನು ಮಾತನಾಡಿಸುತ್ತಿದ್ದಾರೆ ಅಂತನ ಗೊತ್ತಾಗಿ, ಅವ್ವ ನಿರ್ವಾಹವಿಲ್ಲದೆ, ”ನಿಮ್ಮ ಕಾಕಾನ ಕಿರಕಿರಿ ಏನು ಕೇಳತಿ, ವಿಜಯಪುರದ ಮಗಳು ಗುಳಂಬ ಮಾಡಿಕೊಂಡು ಬಾ ಅಂದಿದ್ಲಂತ” ಅಂತ ಸುಳ್ಳು ಹೇಳಿ ದಾಟಿಸುವದರೊಳಗೆ ಮತ್ತೂಬ್ಬರು ಸಣ್ಣದೊಂದು ಡಬ್ಬಿ ಹಿಡಕೊಂಡು, ”ಕಾಕಾ ಹೇಳ್ಯಾನ ಸ್ವಲ್ಪ ಗುಳಂಬ…” ಅಂತ ಬರತಿದ್ದರು.
ಅವ್ವಗೆ ಅವರನ್ನೆಲ್ಲ ಸಂಭಾಳಿಸುವುದೇ ದೊಡ್ಡ ಸಾಹಸವಾಗುತ್ತಿತ್ತು. ಆಗ ಅವ್ವ ಅಪ್ಪನ ಎದುರು, ”ಇನ್ನೊಂದು ಸಾರಿ ನೀವು ಗುಳಂಬ ಮಾಡು ಅನಬ್ಯಾಡ್ರಿ” ಅಂತಿದ್ದಳು. ಅಪ್ಪನಿಗೋ ಒಳಗೊಳಗೆ ತಾವು ಮನೆಯಲ್ಲಿ ಗುಳಂಬ ಮಾಡೀವಿ ಎಂದು ತೋರಿಸಿಕೊಳ್ಳೋ ದೊಡ್ಡಸ್ತಿಕೆ. ಅವ್ವಳಿಗೆ ಅದು ಕಮ್ಮೀ ಕಮ್ಮಿ ಎರಡು-ಮೂರು ತಿಂಗಳಾದರೂ ಈಡಾಗಬೇಕು ಅನ್ನೋ ಆಸೆ. ಅಪ್ಪ ಒಳ್ಳೆಯ ಥಳಿಯ ಗೋಧಿ ತಂದು ಚಪಾತಿ ಮಾಡಿಸಿ ಅದರೊಂದಿಗೆ ಗುಳಂಬ ಬೆರೆಸಿ ಹದವಾಗಿ ಮೆಲ್ಲುವನು. ಹೀಗೆ ತಯಾರಿಸಲಾದ ಗುಳಂಬವನ್ನು ಆರು ತಿಂಗಳವರೆಗೂ ಬಳಸಬಹುದಿತ್ತು. ಕೇವಲ ನಮ್ಮ ಮನೆಯಲ್ಲಿ ಮಾತ್ರವಲ್ಲ, ಊರಲ್ಲಿ ಅನೇಕರು ಹೀಗೆ ಗುಳಂಬ ಮಾಡುವ ಪರಿಪಾಠವಿತ್ತು. ಮಾವಿನ ಹಣ್ಣಿನ ಸೀಕರಣೆ ಕೈಗೂಡುವವರೆಗೂ ಈ ಗುಳಂಬದ್ದೇ ಡಿಮ್ಯಾಂಡು.
ಇಂಥ ಗುಳಂಬ ತಿನ್ನದೇ ಮೂರ್ನಾಲ್ಕು ದಶಕಗಳೇ ಕಳೆದವು. ಹಾಗೆಂದು ಗುಳಂಬವನ್ನು ಮರೆತಿಲ್ಲ. ಅನೇಕ ಬಾರಿ ಅದು ನೆನಪಾಗಿದೆ. ಧರ್ಮಪತ್ನಿಯ ಮುಂದೆ ಅದರ ಸ್ವಾದವನ್ನು ಹೇಳಿ ಸ್ವಾದಗೇಡಿಯಾಗಿದ್ದೇನೆ. ‘ಬೇಕಾದ್ರೆ ನೀವೇ ಮಾಡಿಕೊಳ್ಳಿ’ ಎಂದ ದಿನದಿಂದ ಅದರ ಪ್ರಸ್ತಾಪವನ್ನೂ ಕೈ ಬಿಟ್ಟಿದ್ದೇನೆ. ತೀರಾ ಅಪರೂಪಕ್ಕೊಮ್ಮೆ ಚಪಾತಿಯೊಂದಿಗೆ ಬೆಲ್ಲ-ತುಪ್ಪ ಬೆರೆಸಿ ತಿಂದು ಬೀಗುತ್ತಿದ್ದ ನಾನು, ಅದೊಂದು ದಿನ ಟಿ.ವಿ.ಯಲ್ಲಿ ಗಂಟೆಗಟ್ಟಲೆ ಈಗ ಬೆಲ್ಲ ತಯಾರಿಸುವಾಗ ಅದರಲ್ಲಿ ಏನೇನು ಬೆರೆಸುತ್ತಾರೆ ಎನ್ನುವುದನ್ನು ಕಣ್ಣಗಲಿಸಿ ನೋಡಿದ ದಿನದಿಂದ ಅದಕ್ಕೂ ಗುಡ್ ಬೈ ಹೇಳಿಯಾಗಿದೆ. ಈ ಗುಳಂಬದ ಸಹವಾಸವೇ ಸಾಕೆಂದು ಮರೆವಿನ ಮೂಲೆಗೆ ಅದನ್ನು ತಳ್ಳಲು ನೋಡಿದರೂ ಸಾಧ್ಯವಾಗುತ್ತಿಲ್ಲ. ನನ್ನ ಮಗ ಶನಿವಾರ ಬೆಳಿಗ್ಗೆ ಅವಸರವಸರದಲ್ಲಿ ಶಾಲೆಗೆ ಹೋಗುವಾಗ ಚಪಾತಿಯೊಂದಿಗೆ ಅದಾವುದೋ ಕಂಪೆನಿಯ ಜಾಮ್‌ನ್ನು ಬಳಿದು ತಿನ್ನುತ್ತಿದ್ದುದನ್ನು ನೋಡಿ ನನಗೆ ಮತ್ತೆ ಈ ಗುಳಂಬ ನೆನಪಾಯಿತು. ಈ ಗುಳಂಬದ ತರಹ ಬಹಳಷ್ಟು ಖಾದ್ಯಗಳು ಸೂಪರ್ ಮಾರ್ಕೆಟ್‌ಗಳಲ್ಲಿ ತರಾವರಿ ಲೇಬಲ್ ಹೊತ್ತು ಬಾಟಲ್ ಮತ್ತು ಸಾಚೆಟ್‌ಗಳಲ್ಲಿ ಸೀಲ್ ಆಗಿ ಕುಳಿತಿವೆಯಾದರೂ ನನ್ನವ್ವ ಮಾಡುತ್ತಿದ್ದ ಗುಳಂಬ ಮಾತ್ರ ಈಗ ಮಂಗಮಾಯವಾಗಿರುವುದಂತೂ ಸತ್ಯ.
-ಎಸ್. ಬಿ. ಜೋಗುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.