ಪುಟ್ಟ ಪುಟ್ಟ ಕತೆ
Team Udayavani, Jun 30, 2019, 5:00 AM IST
ಹಿರಿಯ ಮಂಗ ಮತ್ತು ಕಿರಿಯ ಮಂಗ
ಸರ್ವಋತುಗಳಲ್ಲಿಯೂ ಸಿಹಿಯಾದ ಫಲಗಳಿಂದ ತೂಗುತ್ತಿದ್ದ ದೊಡ್ಡ ಮರವೊಂದರಲ್ಲಿ ಹತ್ತಾರು ಮಂಗಗಳು ಸ್ವತ್ಛಂದವಾಗಿ ವಾಸಿಸುತ್ತಿದ್ದವು. ಆ ಮರವಿದ್ದ ಕಾಡಿನ ಆಚೆಗೆ ಪ್ರಪಂಚದಲ್ಲಿಯೇ ಅತ್ಯಂತ ಸಿಹಿಯಾದ ಹಣ್ಣುಗಳನ್ನು ನೀಡುವ ಮರವೊಂದು ಇದೆ ಎನ್ನುವ ಗಾಳಿಮಾತು ಆಗಾಗ ಕಪಿಗಳ ಮಧ್ಯೆ ಹರಿದಾಡುತ್ತಿತ್ತು. ಇದನ್ನು ಕೇಳಿದ ಎಳೆಯ ಮಂಗವೊಂದು ಬಾಯಲ್ಲಿ ನೀರೂರಿಸುತ್ತ ಆ ಮರವನ್ನು ಹುಡುಕುತ್ತ ಹುಡುಕುತ್ತ ಹೊರಟಿತು.
ತಿಂಗಳುಗಳ ಕಾಲ ಬೆಟ್ಟ, ಗುಡ್ಡ, ಬಯಲುಗಳನ್ನು ದಾಟುತ್ತ ಸಾಗಿದ ಮಂಗಕ್ಕೆ ಎಂದೆಂದೂ ಮುಗಿಯದ ಬೃಹತ್ ಮರುಭೂಮಿಯೊಂದು ಎದುರಾಯಿತು. ನೀರು, ಆಹಾರವಿಲ್ಲದೆ ಮರುಭೂಮಿಯಲ್ಲಿ ಬಸವಳಿಯುತ್ತ ನಡೆಯುತ್ತಿದ್ದ ಕಪಿಗೆ ದೂರದಲ್ಲಿ ತನ್ನದೇ ಜಾತಿಯ ಮುದಿಮಂಗವೊಂದು ಕಾಣಿಸಿತು. ಅದರ ಬಳಿಹೋದ ಎಳೆಯ ಕೋತಿ ಆಸೆಯಿಂದ ಕೇಳಿತು, “”ಪ್ರಪಂಚದಲ್ಲೇ ಅತ್ಯಂತ ಸಿಹಿಯಾದ ಹಣ್ಣಿನ ಮರವನ್ನು ತಲುಪುವ ದಾರಿ ತಿಳಿಸುವೆಯಾ?”””ನೀನೀಗ ಹೊರಟಿದ್ದು ಅಲ್ಲಿಂದಲೇ” ಎಂದಿತು ಹಿರಿಯ ಕಪಿ !
ಧರ್ಮ ಪ್ರಸಾರ
ಹಲವು ವರ್ಷಗಳ ತಪಸ್ಸು, ಅಧ್ಯಯನದ ಫಲವಾಗಿ ಆ ಪ್ರಸಿದ್ಧ ಸಂನ್ಯಾಸಿ ಹೊಸ ಧರ್ಮವನ್ನು ಸ್ಥಾಪಿಸಿದ್ದಾನೆ ಎನ್ನುವ ಸುದ್ದಿ ಹುಟ್ಟಿತು.
ಕುತೂಹಲದಿಂದ ಆತನ ಆಶ್ರಮದ ಸುತ್ತ ನೆರೆದ ಪತ್ರಕರ್ತರು ಪ್ರಶ್ನಿಸಿದರು, “”ನಿಮ್ಮ ಹೊಸ ಧರ್ಮಕ್ಕೆ ಏನೆಂದು ಹೆಸರು ನೀಡಿದ್ದೀರಿ?”
“”ನನ್ನ ಧರ್ಮಕ್ಕೆ ಹೆಸರಿಲ್ಲ”
“”ಹೆಸರನ್ನೇ ನೀಡದಿದ್ದರೆ ನಿಮ್ಮ ಧರ್ಮ ಪ್ರಸಾರವಾಗುವುದಾದರೂ ಹೇಗೆ?”
“”ಆ ಭಯದಿಂದಲೇ ಹೆಸರನ್ನು ನೀಡಲಾಗಿಲ್ಲ!”
ಶ್ರಮಕ್ಕೆ ತಕ್ಕ ಪ್ರತಿಫಲ
ಒಂದು ದಿನ ಪ್ರಖ್ಯಾತ ಬೌದ್ಧ ಬಿಕ್ಕುವನ್ನು ತರುಣಿಯೊಬ್ಬಳು ಪ್ರಶ್ನಿಸಿದಳು, “”ನಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎನ್ನುವುದು ನಿಜವೇ?”
ಬಿಕ್ಕು ಆಕೆಗೆ ಎರಡು ಮಾವಿನ ಹಣ್ಣುಗಳನ್ನು ತಿನ್ನಲು ಕೊಟ್ಟು ಹೇಳಿದ, “” ಹಣ್ಣುಗಳನ್ನು ತಿಂದ ನಂತರ, ಒಂದು ಗೊರಟೆಯನ್ನು ಫಲವತ್ತಾದ ಮಣ್ಣಿನಲ್ಲಿ ಮುಚ್ಚಿ ಬಿಡು, ಮತ್ತೂಂದನ್ನು ಮರಳು ಭೂಮಿಯಲ್ಲಿ ಬಿತ್ತಿ ಬಿಡು!”
ವರ್ಷಗಳು ಕಳೆದವು. ಹುಡುಗಿ ಭಿಕ್ಕುವಿನ ಬಳಿ ಬಂದು ಹೇಳಿದಳು, “”ನಿಮ್ಮ ಪ್ರಯೋಗದಿಂದ ಒಂದು ಅರ್ಥವಾಯಿತು, ನಮ್ಮ ಶ್ರಮಕ್ಕೆ ಪ್ರತಿ ಬಾರಿಯೂ ಪ್ರತಿಫಲ ಸಿಗುವುದಿಲ್ಲ. ಫಲವತ್ತಾದ ಮಣ್ಣಿನಲ್ಲಿ ಮುಚ್ಚಿದ್ದ ಬೀಜ ಮರವಾಗಿ ಫಲದಿಂದ ತೂಗುತ್ತಿದೆ, ಮರಳಿನಲ್ಲಿ ಬಿತ್ತಿದ್ದ ಬೀಜ, ಮೊಳಕೆಯೊಡೆಯಲೇ ಇಲ್ಲ!”
“”ಇಲ್ಲ ಮಗೂ, ಎರಡೂ ಬೀಜಗಳು ನಿನಗೆ ಫಲ ಕೊಟ್ಟಿವೆ”
“”ಅದು ಹೇಗೆ?”
“”ಮೊದಲ ಬೀಜ ಹಣ್ಣುಗಳನ್ನು ಕೊಟ್ಟಿದೆ; ಎರಡನೆಯ ಬೀಜ, ಮರಳಿನಲ್ಲಿ ಮಾವು ಬೆಳೆಯಲಾಗದು ಎನ್ನುವ ಅರಿವನ್ನು ಕೊಟ್ಟಿದೆ!”
ನಿಜವಾದ ಅದೃಷ್ಟವಂತ
ಒಂದು ಕಾಲದಲ್ಲಿ ಪ್ರಸಿದ್ಧ ಬಿಲ್ಗಾರನಾಗಿ ಮೆರೆದು ಈಗ ವೃದ್ಧನಾಗಿದ್ದ ಆತ ತನ್ನ ಮೊಮ್ಮಕ್ಕಳನ್ನು ಕೂರಿಸಿಕೊಂಡು ಹೇಳಿದ, “”ಅದೃಷ್ಟ ನನ್ನ ಕೈ ಹಿಡಿದಿದ್ದರಿಂದ ನಾನು ಬಹು ದೊಡ್ಡ ಬಿಲ್ಗಾರನಾದೆ ಮಕ್ಕಳೇ”
“”ಅದು ಹೇಗೆ ಅಜ್ಜ?”
“”ನಾವು ಅಣ್ಣ ತಮ್ಮಂದಿರು ಬಿಲ್ವಿದ್ಯೆ ಕಲಿಯಲು ಗುರುವಿನ ಬಳಿ ಹೋದೆವು. ಆತ ಒಬ್ಬೊಬ್ಬರಿಗೂ ನೂರು ಬಾಣಗಳನ್ನು ಕೊಟ್ಟು ಹಣ್ಣಿಗೆ ಗುರಿಯಿಡಲು ಹೇಳಿದ. ಒಬ್ಬ ಬಿಟ್ಟ ಮೊದಲ ಬಾಣವೇ ಗುರಿಗೆ ನಾಟಿತು. ಮತ್ತೂಬ್ಬ ಬಿಟ್ಟ ತೊಂಬತ್ತೂಂಬತ್ತು ಬಾಣಗಳು ಗುರಿ ತಪ್ಪಿ, ನೂರನೆಯ ಬಾಣ ಹಣ್ಣನ್ನು ಉರುಳಿಸಿತು”
“”ನಿನ್ನ ಅದೃಷ್ಟಕ್ಕೆ ಮೊದಲ ಬಾಣವೇ ಗುರಿ ಸೇರಿತಲ್ಲವೇ ಅಜ್ಜ?”
“”ಇಲ್ಲ ಮಕ್ಕಳೇ, ತೊಂಬತ್ತೂಂಬತ್ತು ಬಾಣಗಳನ್ನು ಗುರಿ ಸೇರಿಸಲಾಗದ ಅದೃಷ್ಟವಂತ ನಾನೇ!
ಧ್ವನಿ ಪರೀಕ್ಷೆ
ಹಾಡುವುದನ್ನು ಕಲಿಯುವ ಉದ್ದೇಶದಿಂದ ಪ್ರಸಿದ್ಧ ಸಂಗೀತ ವಿದ್ವಾಂಸನ ಬಳಿಗೆ ಆತ ಹೋದನು. “”ಗುರುಗಳೇ, ನನಗೆ ಸಂಗೀತ ಕಲಿಸುವಿರಾ?” ಅತ್ಯಂತ ವಿನೀತನಾಗಿ ಮೆಲುದನಿಯಲ್ಲಿ ಕೇಳಿದ.
ಗುರು ಕೇಳಿಯೂ ಕೇಳದಂತೆ ನಿರ್ಲಕ್ಷಿಸಿದರು.
ಈಗ ಸ್ವಲ್ಪ ದನಿ ಎತ್ತರಿಸಿ ಕೇಳಿದ, ಮತ್ತದೇ ನಿರ್ಲಕ್ಷÂ!
ತಾಳ್ಮೆ ಕಳೆದುಕೊಂಡು ಉದ್ವೇಗದಿಂದ ಅರಚಿದ.
ಈಗ ನುಡಿದರು ಗುರು, “”ಆಗಲಿ, ನೀನು ಇಂದಿನಿಂದಲೇ ಬರಬಹುದು”
ಶಿಷ್ಯ ಸಂಕೋಚದಿಂದ ನುಡಿದ, “”ದನಿ ಎತ್ತರಿಸಿ ಮಾತನಾಡಿ ದ್ದಕ್ಕಾಗಿ ಕ್ಷಮಿಸಿ, ಯಾಕಿಷ್ಟು ತಡವಾಗಿ ಪ್ರತಿಕ್ರಿಯಿಸಿದಿರಿ ಎಂದು ತಿಳಿಯಬಹುದೆ?”
“”ನಾನು ಬೇರೆ ಬೇರೆ ಭಾವಗಳನ್ನು ನಿನ್ನ ಧ್ವನಿ ಹೇಗೆ ಅಭಿವ್ಯಕ್ತಿಸುತ್ತದೆ ಎಂದು ಪರೀಕ್ಷಿಸುತ್ತಿದ್ದೆ” ನಸುನಕ್ಕನು ಗುರು!
ಪ್ರಿಯ ಶಿಷ್ಯ
ಮಹಾಗುರು ತನ್ನ ನಾಲ್ವರು ಶಿಷ್ಯರಿಗೆ ಯಾವುದೋ ಗಹನವಾದ ವಿಷಯದ ಕುರಿತು ಉಪದೇಶ ನೀಡುತ್ತಿದ್ದ.
ಇದ್ದಕ್ಕಿದ್ದಂತೆ ಆ ದಾರಿಯಲ್ಲಿ ಸುಂದರವಾದ ತರುಣಿಯೊಬ್ಬಳು ಹಾದು ಹೋದಳು, ನಾಲ್ವರು ಶಿಷ್ಯರೂ ಗುರುವಿನಿಂದ ಮುಖ ಹೊರಳಿಸಿ ಆಕೆಯನ್ನೇ ದಿಟ್ಟಿಸತೊಡಗಿದರು.
ಗುರು ಗಂಭೀರವಾದ ದನಿಯಿಂದ ಕೇಳಿದ, “”ಏನನ್ನು ನೋಡುತ್ತಿದ್ದೀರಿ?”
ಮೊದಲ ಶಿಷ್ಯ, “”ಹೂ ಹಣ್ಣುಗಳಿಂದ ಮೈದುಂಬಿದ ಆ ಮರವನ್ನು ದಿಟ್ಟಿಸುತ್ತಿರುವೆ”
ಎರಡನೆಯ ಶಿಷ್ಯ, “”ಬಾಗುತ್ತಾ ಬಳುಕುತ್ತಾ ನಡೆಯುತ್ತಿದ್ದ ಆ ಕೊಳದಲ್ಲಿನ ಹಂಸವನ್ನೇ ಗಮನಿಸುತ್ತಿರುವೆ”
ಮೂರನೆಯ ಶಿಷ್ಯ, “”ಸಂಜೆ ಬಾನಿನಲ್ಲಿ ಈಗಷ್ಟೇ ಮೂಡುತ್ತಿರುವ ಅರೆಬಿರಿದ ಚಂದ್ರನನ್ನು ನೋಡುತ್ತಿರುವೆ”
ನಾಲ್ಕನೆಯ ಶಿಷ್ಯ, “” ಆ ಹುಡುಗಿಯ ಸೌಂದರ್ಯವನ್ನೇ ಕಣ್ತುಂಬಿಕೊಳ್ಳುತ್ತಾ ಮೈಮರೆತಿದ್ದೇನೆ!”
“”ನೀನು ನನ್ನ ಶಿಷ್ಯ, ಉಳಿದವರು ತಮ್ಮ ಮನೆಗಳಿಗೆ ತೆರಳಿರಿ” ಹಿಗ್ಗಿನಿಂದ ನುಡಿದ ಗುರು !
ಗೋಲಗುಂಬಜ್
ತನ್ನ ಸ್ನೇಹಿತರನ್ನು ಗೋಲ್ ಗುಂಬಜ್ ಒಳಗೆ ಕರೆದೊಯ್ದ ಬುದ್ಧಿವಂತನೊಬ್ಬ ಕೇಳಿದ, “”ಇಲ್ಲಿ ಸೂಜಿ ಬಿದ್ದರೂ ಅನೇಕ ಬಾರಿ ಪ್ರತಿಧ್ವನಿಸುತ್ತದೆ, ನಿಮ್ಮಲ್ಲಿ ಯಾರಿಗಾದರೂ ಇದರ ಹಿಂದಿರುವ ಕಾರಣ ತಿಳಿದಿದೆಯೇ?”
“”ಅದನ್ನು ತಿಳಿದುಕೊಂಡು ನಮಗೇನಾಗಬೇಕಿದೆ?” ಉಡಾಫೆಯಿಂದ ಉತ್ತರಿಸಿದರು ಸ್ನೇಹಿತರು.
“”ಇಷ್ಟು ಸರಳ ವಿಷಯವೂ ಗೊತ್ತಿಲ್ಲದ ನೀವೆಲ್ಲರೂ ಶುದ್ದ ಮೂರ್ಖರು” ಗಹಗಹಿಸಿ ನಕ್ಕನು ಬುದ್ಧಿವಂತ.
“”ನೀವೆಲ್ಲರೂ ಶುದ್ಧ ಮೂರ್ಖರು” ಎಂಬ ಮಾತು ಗುಂಬಜ್ ತುಂಬೆಲ್ಲಾ ಪ್ರತಿಧ್ವನಿಸಿತು!
ಪುಟ್ಟ ತುಕಡಿ
ಚಕ್ರವರ್ತಿಯ ಮಹಾಸೈನ್ಯದ ಎದುರಿನಲ್ಲಿ ತುಂಡರಸನ ಪುಟ್ಟ ತುಕಡಿ ಯುದ್ಧಕ್ಕೆ ಬಂದು ನಿಂತಿತು.
ಆ ಸಣ್ಣ ಗಾತ್ರದ ಸೈನ್ಯವನ್ನು ಕಾಣುತ್ತಿದ್ದಂತೆಯೇ ಚಕ್ರವರ್ತಿಯ ಮೊಗದಲ್ಲಿ ಬೆವರೊಡೆದಿದ್ದನ್ನು ಗಮನಿಸಿದ ಸೇನಾಧಿಕಾರಿ ಕೇಳಿದ, “”ಇಷ್ಟು ಸಣ್ಣ ಸೈನ್ಯವನ್ನು ಕಂಡು ಆತಂಕವೇಕೆ ಪ್ರಭೂ?”
ಚಕ್ರವರ್ತಿ ಹೇಳಿದ, “”ಆತಂಕ ಹುಟ್ಟಿಸಿದ್ದು ಸೈನ್ಯವಲ್ಲ, ಆ ಸೈನಿಕರ ಮೊಗದಲ್ಲಿನ ನಿರಾತಂಕ!”
ವಿಶೇಷ ರೊಟ್ಟಿ
ಒಂದು ವಿದ್ಯಾರ್ಥಿ ನಿಲಯ, ಅಲ್ಲಿ ನೂರಾರು ಪುಟ್ಟ ಮಕ್ಕಳು. ಒಂದು ಮಧ್ಯಾಹ್ನ ಅಡುಗೆಯವನು ಮೊದಲೇ ಅಟ್ಟಿದ್ದ ರೊಟ್ಟಿಗಳನ್ನು ಇನ್ನೊಮ್ಮೆ ಬಿಸಿ ಮಾಡಿ ಬಡಿಸೋಣ ಎಂದುಕೊಳ್ಳುವಷ್ಟರಲ್ಲಿ ಒಲೆಯ ಉರುವಲು ಮುಗಿಯಿತು!
ಹೊರಗೆ ಸಾಲಿನಲ್ಲಿ ಊಟಕ್ಕೆ ಕೂತ ಮಕ್ಕಳನ್ನು ಉದ್ದೇಶಿಸಿ ಅಡುಗೆಯವ ಹೇಳಿದ, “” ಈ ರೊಟ್ಟಿಯ ರಾಶಿಯಲ್ಲಿ, ಒಂದೇ ಒಂದು ವಿಶೇಷವಾದ ಪದಾರ್ಥಗಳನ್ನು ಬಳಸಿ ತಯಾರಿಸಿದ ಅತ್ಯಂತ ರುಚಿಕರವಾದ ರೊಟ್ಟಿಯಿದೆ. ಅದು ಯಾರ ತಟ್ಟೆಗೆ ಬೀಳುತ್ತದೆಯೋ ಆತನೇ ಅದೃಷ್ಟವಂತ, ಆದರೆ ಆ ರೊಟ್ಟಿ ತಣ್ಣಗಿದೆ!”
ಉಂಡು ಎದ್ದ ಎಲ್ಲಾ ಮಕ್ಕಳ ಮುಖದಲ್ಲೂ ವಿಶೇಷ ರೊಟ್ಟಿಯನ್ನು ತಿಂದ ಸಂತೃಪ್ತಿ ಮಿನುಗುತ್ತಿತ್ತು!
-ಸವಿರಾಜ ಆನಂದೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.