ಹೀಗಿರಲಿ ಮಕ್ಕಳ ಆರೈಕೆ
Team Udayavani, Jul 2, 2019, 9:00 AM IST
ಪಾಲಕರು ಮಕ್ಕಳ ಆರೈಕೆಗೆ ಅತಿ ಹೆಚ್ಚಿನ ಗಮನ ನೀಡಬೇಕು. ಸಮಸ್ಯೆ ಕಂಡು ಬಂದಲ್ಲಿ ಉದಾಸೀನ ಮಾಡದೆ ವೈದ್ಯರಲ್ಲಿ ಕರೆದೊಯ್ಯಬೇಕು. ಭಾವೀ ಪ್ರಜೆಗಳನ್ನು ಆರೋಗ್ಯವಂತರನ್ನಾಗಿ ಬೆಳೆಸುವುದು ಕುಟುಂಬಕ್ಕೆ ಅಷ್ಟೇ ಅಲ್ಲ ಸಮಾಜ, ದೇಶದ ಹಿತದೃಷ್ಟಿಯಿಂದಲೂ ಒಳಿತು.
ಮಗುವಿನ ಆಗಮನ ತಂದೆ-ತಾಯಿ, ಹಾಗೂ ಇಡೀ ಕುಟುಂಬದಲ್ಲಿ ಸಂಭ್ರಮವನ್ನೇ ಹೊತ್ತು ತರುತ್ತದೆ. ಮಗು ಹುಟ್ಟಿದ ಐದು ವರ್ಷಗಳ ಕಾಲ ಬಹಳ ಜೋಪಾನದಿಂದ ಆರೈಕೆ ಮಾಡುವುದು ಅತೀ ಮುಖ್ಯ. ಆ ಅವಧಿಯಲ್ಲಿ ಮಗುವಿನ ಆರೈಕೆಯತ್ತ ಹೆಚ್ಚಿನ ಕಾಳಜಿ ವಹಿಸಬೇಕು. ಮಗುವಿನ ಲಾಲನೆ, ಪಾಲನೆಯಲ್ಲಿ ಕೆಲವೊಂದಿಷ್ಟು ಅಂಶಗಳನ್ನು ತಪ್ಪದೇ ಪಾಲಿಸಬೇಕು. ಅಲ್ಲದೆ ವೈದ್ಯರ ಸೂಕ್ತ ಸಲಹೆ ಪಡೆಯುವುದು ಅಗತ್ಯ.
ಗರ್ಭಿಣಿಯರ ಸರಿಯಾದ ಆರೈಕೆ, ವೈದ್ಯಕೀಯ ತಪಾಸಣೆ, ಪೌಷ್ಟಿಕ ಆಹಾರ ಮತ್ತು ಪೌಷ್ಟಿಕಾಂಶಗಳ ಪೂರೈಕೆ, ಪರಿಣಿತ ಸಿಬ್ಬಂದಿಯಿಂದ ಸುರಕ್ಷಿತ ಹೆರಿಗೆ, ನಂತರ ತಾಯಿ ಮತ್ತು ಮಗುವಿನ ಆರೋಗ್ಯ ತಪಾಸಣೆ, ಮಗುವಿಗೆ 6 ತಿಂಗಳವರೆಗೆ ಪೂರ್ತಿ ತಾಯಿ ಹಾಲು ಕುಡಿಸುವಿಕೆ, ಮಗುವಿಗೆ 6 ತಿಂಗಳ ನಂತರ ಮೇಲಿನ ಆಹಾರ ನೀಡುವುದು. ಮಗುವಿನ ಆರೋಗ್ಯದಲ್ಲಿ ಏರುಪೇರಾದಲ್ಲಿ ತಕ್ಷಣವೇ ವೈದ್ಯರಿಂದ ಸೂಕ್ತ ಚಿಕಿತ್ಸೆ, ಸಲಹೆ ಪಡೆಯೋದು, ಶುದ್ಧ ನೀರು ಮತ್ತು ಶುಚಿಯಾದ ಸಮತೋಲನ ಆಹಾರ ಸೇವನೆ, ಸ್ವತ್ಛತೆ ಕಾಪಾಡಿಕೊಳ್ಳುವುದು… ಮುಂತಾದ ಕ್ರಮಗಳ ಮೂಲಕ ತಾಯಿ ಹಾಗೂ ಶಿಶು ಮರಣ ತಪ್ಪಿಸಬಹುದಾಗಿದೆ.
ನವಜಾತ ಶಿಶು ಆರೈಕೆ
ಸಾಧ್ಯವಾದ ಮಟ್ಟಿಗೆ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಬೇಕು. ಅದಕ್ಕಾಗಿಯೇ ಮೊದಲೇ ಸರಿಯಾದ ಪೂರ್ವ ತಯಾರಿ ಮಾಡಿಕೊಂಡಿರಬೇಕು. ಮಗು ಹುಟ್ಟಿದ ಕೂಡಲೇ ತೂಕ ಮಾಡಿಸಬೇಕು. ಮಗುವಿನ ತೂಕ 2.5 ಕೆ.ಜಿ.ಗೂ ಕಡಿಮೆ ಇದ್ದಲ್ಲಿ ಹೆಚ್ಚುವರಿ ಆರೈಕೆ ಅಗತ್ಯ. ಮಗು ಸದಾ ತಾಯಿಯೊಂದಿಗೆ ಇರಬೇಕು. ಅನೇಕ ಸುರಕ್ಷತಾ ಕ್ರಮಗಳ ಮೂಲಕ ಮಗುವನ್ನು ಕಾಯಿಲೆಗಳಿಂದ ದೂರವಿಡಬೇಕು. ಹೊಕ್ಕಳ ಬಳ್ಳಿ ತೇವಾಂಶ ಇರದಂತೆ ನೋಡಿಕೊಳ್ಳಬೇಕು ಮತ್ತು ಸ್ವತ್ಛವಾಗಿಡಬೇಕು. ಮಗುವನ್ನು ಸದಾ ಬೆಚ್ಚಗಿಡಬೇಕು.
ಮಗು ಸರಿಯಾಗಿ ಹಾಲು ಕುಡಿಯದಿದ್ದಲ್ಲಿ, ಅತಿಯಾದ ಜ್ವರ ಅಥವಾ ಶರೀರ ತಣ್ಣಗಾದಲ್ಲಿ, ಜೋರಾದ ಉಸಿರಾಟ ಹಾಗೂ ಅಳುವುದಕ್ಕೆ ತೊಂದರೆ ಯಾದಲ್ಲಿ, ತುಟಿ ಮತ್ತು ಕೈ-ಕಾಲುಗಳಲ್ಲಿ ನೀಲಿ ಬಣ್ಣ ಕಂಡು ಬಂದಲ್ಲಿ, ಹೊಕ್ಕಳ ಬಳ್ಳಿಯ ಸುತ್ತ ಕೆಂಪಾಗಿ ಕೀವು ಬರುವುದು, ಕೈ ಮತ್ತು ಪಾದ ಹಳದಿ ಯಾಗುವುದು, ಮಲದಲ್ಲಿ ರಕ್ತ ಬರುವುದು, ಪಿಟ್ಸ್ ಅಥವಾ ಎಚ್ಚರ ತಪ್ಪೋದು ಇವುದರಲ್ಲಿ ಯಾವುದೇ ಒಂದು ಕಂಡು ಬಂದರೂ ಉದಾಸೀನ ಮಾಡದೆ ತಕ್ಷಣಕ್ಕೆ ಮಕ್ಕಳ ತಜ್ಞರಲ್ಲಿ ಚಿಕಿತ್ಸೆ ಕೊಡಿಸಬೇಕು.
ಮಗು ಹುಟ್ಟಿದ 6 ತಿಂಗಳು ಆಗುವವರೆಗೆ ತಾಯಿ ಹಾಲು ಹೊರತುಪಡಿಸಿ ಬೇರೆ ಪದಾರ್ಥಗಳನ್ನು ಕೊಡಬಾರದು. ನೀರನ್ನೂ ಸಹ ಕೊಡಬಾರದು.
ಮಗು ಹುಟ್ಟಿದ ತಕ್ಷಣ ಅರ್ಧ ಗಂಟೆಯ ಒಳಗೆ ಎದೆ ಹಾಲು ಉಣಿಸುವುದನ್ನು ಪ್ರಾರಂಭಿಸಬೇಕು. ಸಿಜೇರಿಯನ್ ನಂತರದ ಎರಡು ಗಂಟೆಗಳ ಒಳಗೆ ಎದೆ ಹಾಲುಣಿಸಬೇಕು ಅಥವಾ ಸಿಜೇರಿಯನ್ ಆದ ನಂತರ ಪ್ರಜ್ಞೆ ಬಂದ ತಕ್ಷಣ ಎದೆ ಹಾಲುಣಿಸಬೇಕು.
ಪ್ರಸವದ ತಕ್ಷಣ ಮಗುವಿಗೆ ಬಲವಾಗಿ ಎದೆ ಹಾಲನ್ನು ಹೀರುವ ಸಾಮರ್ಥ್ಯ ಇರುತ್ತದೆ. ಮಗು ಎದೆ ಹಾಲನ್ನು ಸುಲಭವಾಗಿ ಕುಡಿಯುತ್ತದೆ. ಈ ಸಾಮರ್ಥ್ಯವು ಸಮಯ ಕಳೆದಂತೆ ಕಡಿಮೆ ಆಗುತ್ತದೆ. ಇದರಿಂದ ಮಗುವಿಗೆ ಆನಂತರದಲ್ಲಿ ಎದೆಹಾಲು ಕುಡಿಯಲು ಕಷ್ಟವಾಗುತ್ತದೆ.
ಹೆರಿಗೆಯಾದ ತಕ್ಷಣ ಬರುವ ಗಟ್ಟಿಯಾದ ಹಳದಿ ಹಾಲಿನಲ್ಲಿ ಹೆಚ್ಚಿನ ಪೌಷ್ಠಿಕಾಂಶವಿರಲಿದೆ. ರೋಗ ನಿರೋಧಕ ಶಕ್ತಿ ಹೊಂದಿರುತ್ತದೆ. 3-5 ದಿನಗಳ ನಂತರ ಹಳದಿ ಹಾಲು, ಬಿಳಿ ಬಣ್ಣಕ್ಕೆ ತಿರುಗುತ್ತದೆ.
ಹಳದಿ ಹಾಲು ಭೇದಿ, ಶ್ವಾಸಕೋಶದ ತೊಂದರೆ (ನೆಗಡಿ, ಕೆಮ್ಮು), ಜಾಂಡೀಸ್, ಅಸ್ತಮಾ, ಅಲರ್ಜಿ, ಬೊಜ್ಜು ಮುಂತಾದ ಸಮಸ್ಯೆಗಳಿಗೆ ರಾಮಬಾಣ.
ದಿನಕ್ಕೆ 8 ರಿಂದ 12 ಬಾರಿ ಅಥವಾ ಮಗುವಿಗೆ ಹಸಿವಾದಾಗೊಮ್ಮೆ, ರಾತ್ರಿಯೂ ಸಹ 2-3 ಗಂಟೆಗಳಿಗೊಮ್ಮೆ ಮಗುವನ್ನು ಎಬ್ಬಿಸಿ, ಹಾಲುಣಿಸಬೇಕು. ದಿನ ತುಂಬಿ ಹುಟ್ಟಿದ 2.5 ಕಿಲೋಗ್ರಾಂಗಿಂತಲೂ ಹೆಚ್ಚಿನ ತೂಕದ ಮಗು ಎದೆಯ ಹಾಲಿನಿಂದ ತುಂಬಾ ಚೆನ್ನಾಗಿ ಬೆಳೆಯುತ್ತಿದ್ದಲ್ಲಿ ಮಲ್ಟಿ ವಿಟಮಿನ್ ಡ್ರಾಪ್ಸ್ ಅವಶ್ಯಕತೆ ಇರುವುದಿಲ್ಲ. ಪೂರ್ತಿ ಎದೆಯ ಹಾಲನ್ನೇ ಕುಡಿಯುವ ಮಕ್ಕಳಿಗೆ ಕಾಯಿಸಿ, ಆರಿಸಿದ ನೀರು ಅಥವಾ ಹಣ್ಣಿನ ರಸದ ಅವಶ್ಯಕತೆ ಇರುವುದಿಲ್ಲ.
ಮಗು ಹಾಲು ಕುಡಿಯಲಿಕ್ಕೆ ಯಾವುದೇ ನಿರ್ದಿಷ್ಟ ಸಮಯ ಇಲ್ಲ. 15 ರಿಂದ 20 ನಿಮಿಷಗಳವರೆಗೆ ಹಾಲುಣಿಸಬಹುದು. ಒಂದು ಸ್ತನದ (ಮೊಲೆ) ಹಾಲು ಸಂಪೂರ್ಣವಾಗಿ ಖಾಲಿಯಾದ ನಂತರ ಮತ್ತೂಂದು ಸ್ತನದ ಹಾಲನ್ನು ಕೊಡಬೇಕು. ಯಾವುದೇ ಕಾಯಿಲೆ ಕಾಣಿಸಿಕೊಂಡಿದ್ದರೂ ಎದೆ ಹಾಲು ಉಣಿಸುವುದನ್ನು ಮುಂದುವರಿಸಬೇಕು. ತಾಯಿಗೆ ಜ್ವರ ಅಥವಾ ಸಣ್ಣ ಪುಟ್ಟ ಕಾಯಿಲೆಗಳಿದ್ದರೂ ಸಹ ಹಾಲು ಕುಡಿಸುವುದನ್ನು ನಿಲ್ಲಿಸಬಾರದು.
ಹಾಲುಣಿಸಿದ ನಂತರ ಮಗುವನ್ನು ಹೆಗಲ ಮೇಲೆ ಮಲಗಿಸಿ ನಿಧಾನವಾಗಿ ಬೆನ್ನು ಸವರಿ ತೇಗು ಬರಿಸಬೇಕು. ಮಗುವಿನ ಬಾಯಿ ಮತ್ತು ದವಡೆಯನ್ನು ಶುಭ್ರವಾದ ಬಟ್ಟೆಯಿಂದ ಸ್ವತ್ಛವಾಗಿಡಬೇಕು. ಮಗುವನ್ನು ಬಲಭಾಗಕ್ಕೆ ಹೊರಳಿಸಿ ಮಲಗಿಸಬೇಕು.
ಮಗು ಸಂಪೂರ್ಣವಾಗಿ ಹಾಲು ಕುಡಿದಲ್ಲಿ ಆಗಾಗ ಮೂತ್ರ ಮಾಡುತ್ತದೆ. ಮೂತ್ರವು ತುಂಬಾ ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿ ಇರುವುದಿಲ್ಲ. ಚೆನ್ನಾಗಿ ನಿದ್ರಿಸುತ್ತದೆ. ಹಾಲು ಕುಡಿದ ನಂತರ ಸಂತೋಷದಿಂದ ಇರುತ್ತದೆ. ಮಗು ಹಾಲು ಕುಡಿದ ನಂತರ ಸ್ತನಗಳು ಹಗುರ ಅಥವಾ ಮೆದುವಾಗಿರುತ್ತದೆ. ಹಾಲುಣ್ಣುವುದರಿಂದ ಮಗುವಿನ ತೂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ.
ಎದೆಹಾಲಿನ ಮಹತ್ವಗಳು
ಎದೆಹಾಲು ಸರಿಯಾದ ತಾಪಮಾನ ಹೊಂದಿರುತ್ತದೆ. ಬಿಸಿ ಮಾಡುವ ಅಥವಾ ತಯಾರಿಸುವ ಅಗತ್ಯ ಇಲ್ಲ. ತಾಯಿ ಮತ್ತು ಮಗುವಿನ ಬಾಂಧವ್ಯವನ್ನು ವೃದ್ಧಿಸುತ್ತದೆ. ಮಗು ಖುಷಿಯಾಗಿರುವುದರೊಂದಿಗೆ ಸಮಾಧಾನದಿಂದ ಇರುತ್ತದೆ. ತಾಯಿಯ ಹಾಲಿನಿಂದ ಮಗುವಿಗೆ ಆಗುವ ಲಾಭಗಳು ಬಹಳ. ಎದೆಹಾಲು ಪರಿಶುದ್ಧವಾಗಿರುತ್ತದೆ. ಸುಲಭವಾಗಿ ಜೀರ್ಣವಾಗುತ್ತದೆ. ಮಗು ಬಯಸಿದಾಗೆಲ್ಲ ಸಿಗುತ್ತದೆ. ರೋಗದ ವಿರುದ್ಧ ಹೋರಾಡುತ್ತದೆ. ವಿಶೇಷವಾಗಿ ಅತೀಸಾರ ಭೇದಿಯಿಂದ ರಕ್ಷಿಸುತ್ತದೆ ಹಾಗೂ ತಡೆಗಟ್ಟುತ್ತದೆ. ಮಗುವಿನ ಬುದ್ಧಿಯನ್ನು ಚುರುಕುಗೊಳಿಸುತ್ತದೆ. ಮಗು ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತದೆ. ಮಗುವಿಗೆ ಬೇಕಾದ ಎಲ್ಲಾ ಪೋಷಕಾಂಶಗಳು ತಾಯಿಯ ಎದೆಹಾಲಿನಲ್ಲಿರುತ್ತವೆ.ಮಗುವಿಗೆ ನ್ಯುಮೋನಿಯಾ, ರಕ್ತಹೀನತೆ, ಹಲ್ಲಿಗೆ ಹುಳ ಹತ್ತುವುದು ಮುಂತಾದ ರೋಗಗಳು ಬರದಂತೆ ಎದೆ ಹಾಲು ತಡೆಗಟ್ಟುತ್ತದೆ. ಮುಂದೆ ಬೆಳೆದು ದೊಡ್ಡವರಾದಾಗ ಅಲರ್ಜಿ ಮತ್ತು ಬೊಜ್ಜು ಬರದಂತೆ ತಡೆಗಟ್ಟುತ್ತದೆ. ಮಗುವಿಗೆ ಎದೆ ಹಾಲು ನೀಡುವುದರಿಂದ ತಾಯಿಗೆ ಸಾಕಷ್ಟು ಲಾಭಗಳಿವೆ. ಮಗುವಿಗೆ 2 ವರ್ಷ ಆಗುವ ತನಕ ಎದೆ ಹಾಲು ನೀಡಬಹುದು ಹಾಗಾಗಿ ಎದೆಹಾಲಿಗೆ ಹೆಚ್ಚಿನ ಮಹತ್ವ ನೀಡಬೇಕು. ಕೆಲಸಕ್ಕೆ ಹೋಗುವಂತಹ ತಾಯಂದಿರು ಕೆಲಸಕ್ಕೆ ಹೋಗುವ ಮುನ್ನ ಬಂದ ನಂತರ ಮತ್ತು ರಾತ್ರಿಯೇ ಹೆಚ್ಚಿನ ಎದೆ ಹಾಲು ನೀಡಬೇಕು. ಅಗತ್ಯಕ್ಕೆ ತಕ್ಕಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು.
ಮಗುವಿಗೆ ಎದೆ ಹಾಲು ಹೊರತುಪಡಿಸಿ ಮೇಲಿನ ಹಾಲನ್ನು ನೀಡುವುದರಿಂದ ಕೆಲವು ಸಮಸ್ಯೆ ಕಂಡು ಬರುತ್ತವೆ. ಆಕಳ ಹಾಲಿನಿಂದ ಅಲರ್ಜಿ, ಕೆಲವರಲ್ಲಿ ರಕ್ತದೊತ್ತಡ ಒಳಗೊಂಡಂತೆ ಹಲವಾರು ಸಮಸ್ಯೆ ಕಾಣಿಸಿಕೊಳ್ಳುವುದುಂಟು. ಹಾಗಾಗಿ ಕೊಂಚ ಎಚ್ಚರವಹಿಸುವುದು ಅಗತ್ಯ.
ಮಗುವಿಗೆ 6 ತಿಂಗಳು ತುಂಬಿದ ನಂತರ ಎದೆಹಾಲು ಮುಂದುವರಿಸಬೇಕು. ಮಧ್ಯದಲ್ಲಿ ಮೆತ್ತನೆಯ ಆಹಾರ ನೀಡಬೇಕು. ಅಕ್ಕಿ, ರಾಗಿ ಗಂಜಿಯನ್ನು ಮೊದಲು ದಿನಕ್ಕೆ ಮೂರು ಬಾರಿ ನೀಡಬೇಕು. ತುಪ್ಪ, ಮೊಸರು ಕೊಡಬೇಕು. ಹಾಲಿಗೆ ನೀರು ಬೆರೆಸದೆ ಕೊಡಬೇಕು. ಕ್ರಮೇಣ ಆಹಾರದ ಪ್ರಮಾಣ ಹೆಚ್ಚಿಸಬೇಕು. ಒಂದು ವರ್ಷದವರೆಗೆ ಮೇಲಿನ ಹಾಲನ್ನು ಮಗುವಿಗೆ ನೀಡಬಾರದು.
1 ರಿಂದ 2 ವರ್ಷದವರೆಗೆ ಎದೆ ಹಾಲು ನೀಡುವುದನ್ನು ಮುಂದುವರೆಸಿ ಅದರೊಂದಿಗೆ ಮನೆಯಲ್ಲಿನ ಆಹಾರವನ್ನೇ ನೀಡಬೇಕು. 2 ವರ್ಷದ ನಂತರ ಮನೆಯಲ್ಲಿನ ಊಟ ನೀಡಬಹುದು. ದಿನಕ್ಕೆ ಮೂರು ಬಾರಿ ತಿನ್ನಿಸಬೇಕು. ದಿನಕ್ಕೆ ಒಂದು ಬಾರಿಯಾದರೂ ಮಕ್ಕಳಿಗೆ ಊಟ ಕೊಡಬೇಕು. ಊಟಕ್ಕೂ ಮುನ್ನ ಮಗುವಿನ ಕೈ-ಕಾಲು ಸ್ವತ್ಛ ಗೊಳಿಸುವುದು ಅತೀ ಮುಖ್ಯ.
ಮಗು ಹುಟ್ಟಿದ 6 ತಿಂಗಳಲ್ಲಿ ಕೆಲವಾರು ಸಾಮಾನ್ಯ ಸಮಸ್ಯೆಗಳು ಕಂಡು ಬರುತ್ತವೆ. ಮಗುವಿನ ಮೊಲೆಗಳು ಉಬ್ಬಿಕೊಂಡಾಗ ಹಿಂಡಿ ಹಾಲು ತೆಗೆಯಬಾರದು. ಮಗುವಿನ ಯೋನಿಯಿಂದ ರಕ್ತಸ್ರಾವವಾದರೂ 3-4 ದಿನಗಳಲ್ಲಿ ತಾನಾಗಿಯೇ ನಿಲ್ಲುತ್ತದೆ. 3-5 ದಿನಗಳಿಗೊಮ್ಮೆ ಮಲ ವಿಸರ್ಜನೆ ಸಾಮಾನ್ಯ.
ಹುಟ್ಟಿದ ಮಗು 3 ಕೆಜಿ (2.5 ರಿಂದ 4 ಕೆಜಿ), ಎತ್ತರ 50 ಸೆಂಟಿ ಮೀಟರ್ (5.4 ರಿಂದ 55 ಸೆಂಮಿ), ತಲೆ ಸುತ್ತಳತೆ 35 ಸೆಂಟಿ ಮೀಟರ್ (33 ರಿಂದ 37) ಬೆಳವಣಿಗೆಗೆ ಅನುಗುಣವಾಗಿ ಎತ್ತರ, ದೇಹ ತೂಕದಲ್ಲಿ ಬದಲಾವಣೆ ಕಂಡು ಬರುತ್ತದೆ. ಅದೇ ತಾನೇ ಹುಟ್ಟಿದ ಮಗು ಹೆಚ್ಚಿನ ಅವಧಿಯನ್ನು ನಿದ್ರೆಯಲ್ಲೇ ಕಳೆಯುತ್ತದೆ. 18 ಗಂಟೆಗೂ ಹೆಚ್ಚು ಕಾಲ ನಿದ್ರೆ ಮಾಡುತ್ತದೆ. ನಿದ್ರೆಯಲ್ಲಿ ಮಗುವಿನ ಮೆದುಳು ಹಾಗೂ ದೇಹದ ಬೆಳವಣಿಗೆ ಹೆಚ್ಚು ವೃದ್ಧಿಯಾಗುತ್ತದೆ.
ಲಘು ಮಸಾಜ್ ಮಾಡಿ
ಮಗುವಿಗೆ ಹಲವಾರು ಬಾರಿ ಲಘು ಮಸಾಜ್ ಮಾಡುವುದು ಉತ್ತಮ. ಹಾಗೆ ಮಾಡುವುದರಿಂದ ತೂಕ ಹೆಚ್ಚಾಗುತ್ತದೆ. ಎಲುಬು ಸದೃಢಗೊಳ್ಳುತ್ತದೆ. ಮಕ್ಕಳು ಚುರುಕಾಗುತ್ತಾರೆ. ರಕ್ತ ಚಲನವಲನ ಹೆಚ್ಚಾಗುತ್ತದೆ. ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಮಕ್ಕಳಿಗೆ ಕೊಬ್ಬರಿ ಎಣ್ಣೆ, ಸೂರ್ಯಪಾನ ಎಣ್ಣೆ, ಸಾಸಿವೆ, ಒಲಿವ್ ಎಣ್ಣೆಯಿಂದ ಮಸಾಜ್ ಮಾಡಬೇಕು. ಬೇಸಿಗೆಯಲ್ಲಿ ಸ್ನಾನಕ್ಕೂ ಮೊದಲು, ಚಳಿಗಾಲದಲ್ಲಿ ಸ್ನಾನದ ನಂತರ ಮಸಾಜ್ ಮಾಡಬೇಕು. ಆರೋಗ್ಯವಂತ ಮಗುವಿಗೆ ಹುಟ್ಟಿದ 10 ದಿನಗಳ ನಂತರ ಹಾಲು ಕುಡಿದ 1-2 ಗಂಟೆಗಳ ನಂತರ, ಮಗು ಎಚ್ಚರವಿದ್ದಾಗ ಮಸಾಜ್ ಮಾಡಬೇಕು. 10-15 ನಿಮಿಷಕ್ಕೆ ಸೀಮಿತವಾಗಿ ನಿಯಮಿತವಾದ ಮಸಾಜ್ ಮಾಡಬೇಕು. ಹಲ್ಲು ಬರುವಾಗ ಜ್ವರ ಬರುತ್ತದೆ ಎಂಬ ನಂಬಿಕೆ ಇದೆ. ಹಲ್ಲು ಬರುವಾಗ ಜ್ವರ ಬರುವುದಿಲ್ಲ. ಹಲ್ಲು ಬರುವಾಗ ವಾಂತಿ, ಭೇದಿ ಆಗುತ್ತದೆ ಎನ್ನುವುದು ಸಹ ತಪ್ಪು ಕಲ್ಪನೆ.
ಸ್ವತ್ಛತೆಯತ್ತ ಇರಲಿ ಗಮನ
ಮಕ್ಕಳನ್ನು ಸ್ವತ್ಛವಾಗಿಡುವುದು ಅತೀ ಮುಖ್ಯ. ಬಾಯಿ ಮತ್ತು ಹಲ್ಲುಗಳನ್ನು ಸ್ವತ್ಛವಾಗಿಡದೇ ಹೋದಲ್ಲಿ ಬಾಯಲ್ಲಿ ದುರ್ಗಂಧ ವಾಸನೆ ಬರುವುದು ಮತ್ತು ಹಲ್ಲುಗಳನ್ನು ಹುಳ ತಿನ್ನುವುದು ಸಾಮಾನ್ಯ. ಹಾಗಾಗಿ ದಿನ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವಾಗ ತಪ್ಪದೇ ಹಲ್ಲು ಉಜ್ಜಬೇಕು. ಆಹಾರದಲ್ಲಿ ಸಿಹಿ ಪದಾರ್ಥ ಕಡಿಮೆ ಮಾಡಬೇಕು.
ಚಾಕ್‌ಲೇಟ್, ಕ್ಯಾಂಡಿ, ಜ್ಯೂಸ್, ಸೋಡಾ ಉಪಯೋಗಿಸುವುದನ್ನು ಕಡಿಮೆ ಮಾಡಬೇಕು. ಪ್ರತಿ ಸಲ ಊಟದ ನಂತರ ಹಾಗೂ ರಾತ್ರಿ ಹಾಲು ಕುಡಿದ ನಂತರ ಬಾಯಿಯನ್ನು ನೀರಿನಿಂದ ಮುಕ್ಕಳಿಸಬೇಕು. ಕ್ಯಾಲ್ಸಿಯಂಯುಕ್ತ ಆಹಾರ ನೀಡಬೇಕು. ಮೊದಲು ಹಲ್ಲು ಬಂದಾಗನಿಂದ ಹಲ್ಲು ಸ್ವತ್ಛತೆ ಪ್ರಾರಂಭಿಸಬೇಕು. ಹಲ್ಲು ಬೆಳೆದಂತೆ ಸಾಫ್ಟ್ ಬ್ರಷ್ ಬಳಕೆ ಮಾಡಬೇಕು. ಟೂತ್ ಪೇಸ್ಟ್ ಉಪಯೋಗಿಸಬಾರದು. 3 ವರ್ಷದ ನಂತರವೇ ಬಳಕೆ ಮಾಡಬೇಕು. ಫ್ಲೋರಿನೇಟೆಡ್ ಟೂತ್‌ಪೇಸ್ಟ್ ಉತ್ತಮ.
ಆಟೋಟದಿಂದ ಬೆಳವಣಿಗೆ
ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ದೈಹಿಕ ಚಟುವಟಿಕೆ ಅತೀ ಮುಖ್ಯ. ಚಿಕ್ಕವರಿದ್ದಾಗಲೇ ಆಟ ಆಡುವುದನ್ನು ಪ್ರಾರಂಭಿಸಬೇಕು. ವಯಸ್ಸಿಗೆ ಅನುಗುಣವಾಗಿ ಆಟೋಟದಲ್ಲಿ ತೊಡಗಿಕೊಳ್ಳುವಂತೆ ನೋಡಿಕೊಳ್ಳಬೇಕು. ಆಟೋಟದಿಂದ ಮಕ್ಕಳ ದೈಹಿಕ ಬೆಳವಣಿಗೆ ಜೊತೆಗೆ ಮಾನಸಿಕ, ಬೌದ್ಧಿಕ ಬೆಳವಣಿಗೆಯೂ ವೃದ್ಧಿಯಾಗುತ್ತದೆ.
ಟಿವಿ- ಮೊಬೈಲ್ ಬೇಡ
ಮಗು ಎರಡು ವರ್ಷ ಆಗುವ ತನಕ ಟಿವಿ ನೋಡುವುದನ್ನು ಮಾಡಬಾರದು. ಈ ಬಗ್ಗೆ ಪೋಷಕರು ಗಮನ ನೀಡಬೇಕು. 5 ವರ್ಷದ ನಂತರ 1 ತಾಸು ಮಾತ್ರ ಟಿವಿ ನೋಡಬೇಕು. ಅತಿಯಾಗಿ ಟಿವಿ ನೋಡುವುದರಿಂದ ಮಕ್ಕಳಲ್ಲಿ ಮಾತನಾಡುವ ಕಲೆಯೇ ಕುಂಠಿತವಾಗುತ್ತದೆ. ವಿಚಾರ ಶಕ್ತಿ ಕುಂಠಿತವಾಗುತ್ತದೆ. ಸಹನಶೀಲತೆ ಕಡಿಮೆ ಆಗುತ್ತದೆ. ನಿದ್ದೆ ಪದ್ಧತಿ ತಪ್ಪುತ್ತದೆ ಇವು ಎಲ್ಲವೂ 18 ತಿಂಗಳ ಒಳಗಿನ ಮಕ್ಕಳು ಟಿವಿ ನೋಡುವುದರಿಂದ ಉಂಟಾಗುವ ಸಮಸ್ಯೆ.
5 ವರ್ಷ ಮೇಲ್ಪಟ್ಟ ಮಕ್ಕಳು ಅತಿಯಾಗಿ ಟಿವಿ ನೋಡುವುದರಿಂದ ಸ್ಮರಣ ಶಕ್ತಿ ಕಡಿಮೆ ಆಗುತ್ತದೆ. ಕಲಿಕೆಯಲ್ಲಿ ಹಿಂದುಳಿಯುವುದು ಕಂಡು ಬರುತ್ತದೆ. ಬೊಜ್ಜು, ಸ್ಥೂಲ ಕಾಯದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಆಕ್ರಮಣ ಶೀಲ ನಡವಳಿಕೆ, ಅತೀ ಸಮೀಪ ನೋಡುವುದರಿಂದ ಕಣ್ಣುಗಳಿಗೆ ತೊಂದರೆ, ತಲೆನೋವು ಬರುತ್ತದೆ. ಈಗ ಅತೀ ಸಾಮಾನ್ಯವಾಗಿ ಬಳಕೆಯಾಗುವ ಮೊಬೈಲ್‌ನಿಂದ ಮಕ್ಕಳನ್ನು ಆದಷ್ಟು ದೂರ ಇಡಬೇಕು. ಮೊಬೈಲ್ ಅತಿಯಾದ ಬಳಕೆಯಿಂದ ಮೆದುಳು, ಕಿವಿಯಲ್ಲಿ ಗಡ್ಡೆಗಳಾಗುವ ಸಂಭವ ಉಂಟು. ಮಕ್ಕಳ ಮೆದುಳು ದೊಡ್ಡವರಗಿಂತ ಶೇ.60 ರಷ್ಟು ಹೆಚ್ಚಿಗೆ ರೇಡಿಯಂ ಹೀರಿಕೊಳ್ಳುವುದರಿಂದ ಮೆದುಳಿನ ಕ್ಯಾನ್ಸರ್ ಸಂಭವ ಹೆಚ್ಚು. ಶಾಲಾ ಕಲಿಕೆಯಲ್ಲಿ ಹಿಂದುಳಿಯುತ್ತಾರೆ.
ತಪ್ಪು ಕಲ್ಪನೆಯಿಂದ ಹೊರ ಬನ್ನಿ
ಇಂದಿನ ಆಧುನಿಕ ಕಾಲದಲ್ಲೂ ಮೂಢನಂಬಿಕೆ ಕೊರತೆ ಇಲ್ಲ. ಮಗುವಿಗೆ ಮುಟ್ಟುದೋಷ ಆಗಿದೆ ಎಂದು ಕಿವಿಗೆ ಕಬ್ಬಿಣದ ರಿಂಗ್ ಹಾಕಿಸುತ್ತಾರೆ. ತುಪ್ಪ, ಕೆನೆ ಮೊಸರು ತಿನ್ನುವುದರಿಂದ ಕಫ ಅಥವಾ ಶೀತ ಆಗುತ್ತದೆ ಎಂಬ ನಂಬಿಕೆ ಸತ್ಯ ಅಲ್ಲ. ಚುಚ್ಚುಮದ್ದು ಹಾಕಿದರೆ ಮಗುವಿನ ಕೈ-ಕಾಲು ಶಕ್ತಿ ಕುಂದುತ್ತದೆ ಎಂಬುದು ತಪ್ಪು ಕಲ್ಪನೆ. ಇಂತಹ ತಪ್ಪು ಕಲ್ಪನೆಯಿಂದ ದೂರವಿದ್ದು, ಎಚ್ಚರ ವಹಿಸಬೇಕು.
ಗರ್ಭಿಣಿ ಇದ್ದಾಗ ಕ್ಯಾಲ್ಸಿಯಂ, ಖನಿಜಾಂಶ ಔಷಧಿ ನೀಡಿದಾಗ ಮಗು ಅತಿಯಾಗಿ ಬೆಳೆಯುತ್ತದೆ, ಸಿಜೇರಿಯನ್ ಮಾಡಿಸಬೇಕಾಗುತ್ತದೆ ಎಂಬುದೂ ತಪ್ಪು ಗ್ರಹಿಕೆ. ಮಗು ಹುಟ್ಟಿದ ಕೂಡಲೇ ಜೇನು ತುಪ್ಪ ತಿನ್ನಿಸಬಾರದು. ಕಿವಿ, ಮೂಗು, ಕಣ್ಣಲ್ಲಿ ಕೊಬ್ಬರಿ ಎಣ್ಣೆ ಹಾಕಬಾರದು. ಜ್ವರ ಜಾಸ್ತಿಯಾದಾಗ, ಉಸಿರಾಟ ಜಾಸ್ತಿಯಾದಾಗ ಬರೆ ಹಾಕುವುದು ಸಲ್ಲದು. ಮಗು ಹುಟ್ಟಿದ ನಂತರ ಹೊಕ್ಕಳಕ್ಕೆ ಸಗಣಿ ಮತ್ತಿತರ ವಸ್ತುಗಳನ್ನು ಹಚ್ಚುವುದು, ಬಳ್ಳಿ ಹಾಕಿಸುವುದು, ಹಳೆಯ ಔಷಧಿ ಪದೇ ಪದೇ ಬಳಸುವುದು, ಪಿಟ್ಸ್ ಬಂದಾಗ ಬರೆ ಹಾಕುವುದು ಸರಿಯಲ್ಲ. ಕಣ್ಣುಗಳು ಹಳದಿಯಾದಾಗ ಗಿಡಮೂಲಿಕೆ ರಸವನ್ನು ಕಣ್ಣಲ್ಲಿ ಹಾಕಬಾರದು.
ಲಸಿಕೆ ಹಾಕೋದು ಮರೀಬೇಡಿ
ಮಕ್ಕಳಿಗೆ ಲಸಿಕೆ ಕೊಡಿಸುವುದರಿಂದ ರೋಗ-ರುಜಿನ ಬರದಂತೆ ತಡೆಗಟ್ಟಬಹುದು. ಮಗು ಹುಟ್ಟಿದಾಗಿನಿಂದ ಹಿಡಿದು 15 ವರ್ಷ ಆಗುವವರೆಗೆ ಲಸಿಕೆ ಹಾಕಲಾಗುವುದು. ಮಕ್ಕಳ ವಯಸ್ಸಿಗೆ ಅನುಗುಣವಾಗಿ ಲಸಿಕೆ ಹಾಕಿಸಬೇಕು.
ಮಕ್ಕಳಿಗೆ ಲಸಿಕೆ ಹಾಕಿಸುವುದರಿಂದ ಟಿಬಿ, ಪೋಲಿಯೋ, ಕಾಮಾಲೆ, ಗಂಟಲುಬೇನೆ, ನಾಯಿಕೆಮ್ಮು, ನಂಜು, ಗಣಜಲಿ, ಅತಿಸಾರ, ನ್ಯುಮೋನಿಯಾ, ಮಂಗನಬಾವು, ಇನ್‌ಫ್ಲೂಯೆಂಜಾ, ಕಾಲರಾ, ರೇಬಿಸ್ ತಡೆಗಟ್ಟಬಹುದು.
ಲಸಿಕೆ ಹಾಕಿಸುವುದರಿಂದ ಮಕ್ಕಳ ಕಾಲಿನ ಶಕ್ತಿ ಕಡಿಮೆಯಾಗಿ ಅಂಗವಿಕಲರಾಗುತ್ತಾರೆ ಎಂಬುದು, ಜ್ವರ ಬಂದು ಮಗು ಸಾಯು ತ್ತದೆ ಎನ್ನುವುದು ಸಹ ತಪ್ಪು ಕಲ್ಪನೆ. ಲಸಿಕೆ ಹಾಕಿಸಿದಾಗ ಕೆಲವಾರು ಸಮಸ್ಯೆ ಕಾಣಸಿಕೊಳ್ಳುವುದು ಸಾಮಾನ್ಯ. ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ನೋವು ಕಾಣಿಸಿಕೊಂಡು ಕೆಂಪಾಗಿ ಬಾವು ಬರುವುದು. ಜ್ವರ, ಕಾಲಿಗೆ ನೋವಾಗಿ 1-2 ದಿನ ಅಡ್ಡಾಡಲು ತೊಂದರೆ ಆಗುವುದು. ಅಲರ್ಜಿಯಾಗಿ ತುರಿಕೆ ಉಂಟಾಗೋದು ಈ ಎಲ್ಲಾ ತೊಂದರೆ 1-2 ದಿನಗಳಲ್ಲಿ ಕಡಿಮೆ ಆಗುವುದು. ಹಾಗಾಗಿ ಯಾವುದೇ ಕಾರಣಕ್ಕೂ ಲಸಿಕೆ ಹಾಕಿಸುವುದನ್ನು ನಿಲ್ಲಿಸಬಾರದು.
ಒಟ್ಟಾರೆಯಾಗಿ ಮಕ್ಕಳ ಆರೈಕೆಗೆ ಅತಿ ಹೆಚ್ಚಿನ ಗಮನ ನೀಡಬೇಕು. ಸಮಸ್ಯೆ ಕಂಡು ಬಂದಲ್ಲಿ ಉದಾಸೀನ ಮಾಡದೆ ವೈದ್ಯರಲ್ಲಿ ಕರೆದೊಯ್ಯಬೇಕು. ಭಾವೀ ಪ್ರಜೆಗಳನ್ನು ಆರೋಗ್ಯವಂತರನ್ನಾಗಿ ಬೆಳೆಸುವುದು ಕುಟುಂಬಕ್ಕೆ ಅಷ್ಟೇ ಅಲ್ಲ ಸಮಾಜ, ದೇಶದ ಹಿತದೃಷ್ಟಿಯಿಂದಲೂ ಒಳಿತು.
ಡಾ| ಎನ್.ಕೆ. ಕಾಳಪ್ಪನವರ್
ಮಕ್ಕಳ ತಜ್ಞರು, ವೈದ್ಯಕೀಯ ನಿರ್ದೇಶಕರು,
ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ದಾವಣಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.