ಜಾರಿದ ವಿಮಾನ: ತಪ್ಪಿದ ಭಾರೀ ದುರಂತ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಘಟನೆ
Team Udayavani, Jul 1, 2019, 6:00 AM IST
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿವಾರ ಸಂಜೆ ದುಬಾೖಯಿಂದ ಬಂದಿಳಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ರನ್‌ವೇಯಿಂದ ಜಾರಿ ಮಣ್ಣಿನ ನೆಲದಲ್ಲಿ ಟಯರ್ ಸಿಲುಕಿಕೊಂಡಿತು. ಅದೃಷ್ಟವವಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ವಿಮಾನದಲ್ಲಿ 181 ಪ್ರಯಾಣಿಕರು, ಇಬ್ಬರು ಮಕ್ಕಳು ಹಾಗೂ 6 ಮಂದಿ ಸಿಬಂದಿ ಸಹಿತ ಒಟ್ಟು 189 ಮಂದಿ ಇದ್ದರು.
ವಿಮಾನವು ದುಬಾೖಯಿಂದ ಮಧ್ಯಾಹ್ನ 12.39ಕ್ಕೆ ಹೊರಟಿದ್ದು, ಸಂಜೆ 5.42ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿತ್ತು. ಬಳಿಕ ರನ್‌ವೇಯಲ್ಲಿ ಟರ್ಮಿನಲ್ ಬಿಲ್ಡಿಂಗ್ ಕಡೆಗೆ ಸಾಗುತ್ತಿದ್ದಾಗ ಅವಘಡ ಸಂಭವಿಸಿದೆ.
ಪೈಲಟ್ ರನ್‌ವೇಯಲ್ಲಿ ವಿಮಾನವನ್ನು ವೇಗವಾಗಿ ಚಲಾಯಿಸಿದ್ದು, ಬಲಗಡೆಗೆ ತಿರುಗಿಸಬೇಕಾಗಿತ್ತು. ಆದರೆ ನಿಯಂತ್ರಣ ತಪ್ಪಿ ನೇರವಾಗಿ ಮುಂದಕ್ಕೆ ಹೋಗಿ ಮಣ್ಣಿನ ಮೇಲೆ ಚಲಿಸಿತು. ಈ ಸಂದರ್ಭದಲ್ಲಿ ಮುಂಬದಿಯ ಚಕ್ರ ಹೂತು ಹೋಯಿತು. ತತ್‌ಕ್ಷಣ ಪೈಲಟ್ ಬ್ರೇಕ್ ಹಾಕಿ ವಿಮಾನ ಮುಂದಕ್ಕೆ ಹೋಗುವುದನ್ನು ತಡೆದು ನಿಲ್ಲಿಸಿದರು ಎನ್ನಲಾಗಿದೆ.
ವಿಮಾನ ನಿಂತ ಕೂಡಲೇ ಪ್ರಯಾಣಿಕರನ್ನು ನಿಲ್ದಾಣದ ಒಳಗಿರುವ ಬಸ್‌ಗಳಲ್ಲಿ ಟರ್ಮಿನಲ್ ಬಿಲ್ಡಿಂಗ್‌ಗೆ ಕರೆದೊಯ್ದು ನಿರ್ಗಮನ ದ್ವಾರದ ಮೂಲಕ ಹೊರಗೆ ಕಳುಹಿಸಿ ಕೊಡಲಾಯಿತು.
ವಿಮಾನದಲ್ಲಿ ಪೈಲಟ್‌ಗಳಾಗಿ ಪ್ರವೀಣ್ ಚಂದ್ರಹಾಸ್ ಮತ್ತು ಗುಪ್ತಾ ಕಾರ್ಯ ನಿರ್ವಹಿಸುತ್ತಿದ್ದರು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
2010ರ ದುರಂತದ ನೆನಪು!
2010ರ ಮೇ 22ರಂದು ಮುಂಜಾನೆ ದುಬಾೖಯಿಂದ ಬಜಪೆಗೆ ಬಂದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ನಿಯಂತ್ರಣ ಕಳೆದುಕೊಂಡು ಕೆಂಜಾರಿನಲ್ಲಿ ಪತನಗೊಂಡ ದುರಂತದಲ್ಲಿ 158 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು. ಕೇವಲ 8 ಮಂದಿ ಮಾತ್ರ ಬದುಕಿ ಉಳಿದಿದ್ದರು.
ಅಂದು ಮುಂಜಾನೆ 6.20ರ ವೇಳೆಗೆ ಈ ವಿಮಾನವು ಎಲ್ಲ ಸುರಕ್ಷಾ ಸಂಕೇತಗಳ ವಿನಿಮಯದೊಂದಿಗೆ ಬಜಪೆ ನಿಲ್ದಾಣದಲ್ಲಿ ವಸ್ತುಶಃ ಇಳಿದಿತ್ತು. ಆದರೆ ರನ್‌ವೇಯಲ್ಲಿ ನಿಲ್ಲದೆ ಮುಂದಕ್ಕೆ ಚಲಿಸುತ್ತಲೇ ಅಲ್ಲಿನ ಸೂಚನಾ ಗೋಪುರದ ಎರಡು ಕಂಬ
ಗಳಿಗೆ ಢಿಕ್ಕಿಯಾಗಿ ಕಂಬ ಮುರಿದು ವಿಮಾನ ಅಲ್ಲಿಂದ ಸುಮಾರು 150 ಮೀಟರ್ ಆಳಕ್ಕೆ ಉರುಳಿಬಿದ್ದಿತ್ತು. ವಿದ್ಯುತ್ ಸಂಪರ್ಕದ ತಂತಿಗಳನ್ನು ತುಂಡರಿಸುತ್ತ ವಿಮಾನ ಪತನ
ವಾಗಿತ್ತು. ಭಾರೀ ಸ್ಫೋಟದೊಂದಿಗೆ ಬೆಂಕಿಗೆ ಆಹುತಿಯಾಗಿತ್ತು.
ಕೂದಲೆಳೆ ಅಂತರದಲ್ಲಿ ಪಾರು
1981ರ ಆ. 19ರಂದು ಬಜಪೆ ವಿಮಾನ ನಿಲ್ದಾಣದಲ್ಲಿ ಇಂಡಿಯನ್ ಏರ್‌ಲೈನ್‌ನ ಆವ್ರೋ ವಿಮಾನ ದುರಂತವು ಕೂದಲೆಳೆ ಅಂತರದಲ್ಲಿ ತಪ್ಪಿತ್ತು. ಅಂದು ವಿಮಾನವು ನಿಲ್ದಾಣ ವನ್ನು ತಲುಪುತ್ತಿದ್ದಂತೆ ಪ್ರತೀಕೂಲ ಹವಾಮಾನ ಕಾರಣದಿಂದಾಗಿ ವಿಮಾನ ಇಳಿಸಲು ಪೈಲಟ್‌ಗೆ ಏರ್ ಟ್ರಾಫಿಕ್ ನಿಯಂತ್ರಕರಿಂದ ಸಂಕೇತಗಳು ದೊರೆಯಲಿಲ್ಲ. ಅಸ್ಪಷ್ಟ ಗೋಚರದ ಕಾರಣ ಪೈಲಟ್ ವಿಮಾನವನ್ನು ಹಲವು ಸುತ್ತು ಹಾರಿಸಿದರು. ಅಲ್ಲಿಂದ ರನ್‌ವೇಯುಶೇ. 25ರಷ್ಟು ಮಾತ್ರ ಉಳಿದಿರುವಂತೆ ದಿಢೀರನೆ ವಿಮಾನವನ್ನು ಇಳಿಸುವ ನಿರ್ಧಾರವನ್ನು ಪೈಲಟ್ ಕೈಗೊಂಡರು. ಕ್ಷಣಾರ್ಧದಲ್ಲಿ ವಿಮಾನ ನೆಲಕ್ಕೆ ಅಪ್ಪಳಿಸಿತು. ಎದುರಿನ ಚಕ್ರಗಳು ಕಳಚಿ ಹೊರಬಂದಿದ್ದವು. ರೆಕ್ಕೆಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಮೂರು ಕೆಂಪುಕಲ್ಲುಗಳ ಮೇಲೆ ಸಿಲುಕಿಕೊಂಡ ವಿಮಾನ ನಿಧಾನಕ್ಕೆ ಜಾರುತ್ತಿತ್ತು. ಕೊನೆಗೆ ಪ್ರಯಾಣಿಕರು ಇಳಿದು ಬಚಾವಾಗಿದ್ದರು. ಎಂ. ವೀರಪ್ಪ ಮೊಲಿ ಆ ವಿಮಾನದಲ್ಲಿದ್ದರು.
ಉನ್ನತ ತನಿಖೆಗೆ ಸಚಿವ ಯು. ಟಿ. ಖಾದರ್ ಮನವಿ
ದುಬಾೖಯಿಂದ ಬಂದ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ರನ್ ವೇಯಿಂದ ಜಾರಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ನಗರಾಭಿವೃದ್ಧಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಆಗ್ರಹಿಸಿದ್ದಾರೆ.
ಈ ಸಂಬಂಧ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರೊಂದಿಗೆ (ಡಿಜಿಸಿಎ) ಹಾಗೂ ಸಚಿವಾಲಯದೊಂದಿಗೆ ಮಾತುಕತೆ ನಡೆಸಿದ್ದೇನೆ. ಈ ಘಟನೆಯಲ್ಲಿ ಪೈಲಟ್ ಅಥವಾ ವಿಮಾನದ ದೋಷ ಇಲ್ಲವೇ, ವಿಮಾನ ನಿಲ್ದಾಣ ವ್ಯವಸ್ಥೆಯಲ್ಲಿ ಏನಾದರೂ ಕೊರತೆಯುಂಟಾಗಿದೆಯೇ ಎಂಬ ಬಗ್ಗೆ ಕೂಡಲೇ ಸಮಗ್ರ ವಿಚಾರಣೆ ನಡೆಸಬೇಕು. ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕೆ ಉತ್ಕೃಷ್ಟ ಕಾಳಜಿ ವಹಿಸಬೇಕು ಸಚಿವ ಖಾದರ್ ಆಗ್ರಹಿಸಿದ್ದಾರೆ.
20 ಅಡಿ ಮುಂದೆ ಇತ್ತು ಭಾರೀ ಕಂದಕ !
ವಿಮಾನ ಇನ್ನು 20 ಅಡಿ ಮುಂದೆ ಹೋಗಿದ್ದರೆ ಈ ಹಿಂದೆ ದುರಂತ ಸಂಭವಿಸಿದ ಕಂದಕಕ್ಕೆ ಉರುಳಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತೆನ್ನಲಾಗಿದೆ. ಆದರೆ ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಟ್ಯಾಕ್ಸಿ ವೇ ಮತ್ತು ರನ್ ವೇ ಪಕ್ಕ ಕೆಸರು ನೀರು ನಿಂತಿದ್ದು ವಿಮಾನ ಸಾಗಿದ ರಭಸಕ್ಕೆ ಕೆಸರು ನೀರು ವಿಮಾನಕ್ಕಿಂತಲೂ ಮೇಲೆ ಚಿಮ್ಮಿದೆ. ವಿಮಾನದ ಹಿಂಭಾಗವೆಲ್ಲಾ ಕೆಸರುಮಯವಾಗಿತ್ತು. ಟ್ಯಾಕ್ಸಿ ವೇ ಬಿಟ್ಟು ಸಾಗಿದ ವಿಮಾನ ಲ್ಯಾಂಡ್ ಆದ ಜಾಗವೂ ಕೆಸರಿನಿಂದ ತುಂಬಿದ್ದು, ವಿಮಾನದ ಗಾಲಿಗಳು ಕೆಸರಿನಲ್ಲಿ ಹೂತು ಹೋಗಿವೆ. ವಿಮಾನ ರನ್ ವೇಯಲ್ಲಿ ಇಳಿಯುವ ವೇಗ ಕಂಡು ಅದರೊಳಗಿದ್ದ ಪ್ರಯಾಣಿಕರು ಬೆಚ್ಚಿದ್ದರು ಎನ್ನಲಾಗಿದೆ.
ದೊಡ್ಡ ಶಬ್ದ ಕೇಳಿಸಿತ್ತು…
ವಿಮಾನವು ಮಂಗಳೂರು ನಿಲ್ದಾಣಕ್ಕೆ ತಲುಪಿದಾಗ ತತ್‌ಕ್ಷಣ ಕೆಳಗೆ ಇಳಿಯಲಿಲ್ಲ. ಆಕಾಶದಲ್ಲಿ ಒಂದೆರಡು ಸುತ್ತು ಹಾಕಿ ಬಳಿಕ ಇಳಿಯಿತು. ಇಳಿದು ಮುಂದಕ್ಕೆ ಚಲಿಸಿದಾಗ ದೊಡ್ಡ ಶಬ್ದ ಕೇಳಿಸಿತು ಹಾಗೂ ವಿಮಾನ ಕಂಪಿಸಿತು. ಕೂಡಲೇ ನಿಲುಗಡೆಗೊಂಡಿತ್ತು. ಏನಾಯಿತೆಂದು ಗೊತ್ತಾಗದೆ ನಾವು ಭಯಭೀತರಾಗಿದ್ದೆವು. ಬಳಿಕ ನಮ್ಮನ್ನು ಇಳಿಸಿ ಅಲ್ಲಿದ್ದ ಬಸ್‌ನಲ್ಲಿ ಟರ್ಮಿನಲ್ ಬಿಲ್ಡಿಂಗ್ ಕಡೆಗೆ ಕಳುಹಿಸಲಾಯಿತು ಎಂದು ಈ ವಿಮಾನದಲ್ಲಿ ದುಬಾೖಯಿಂದ ಇಬ್ಬರು ಮಕ್ಕಳ ಜತೆ ಪ್ರಯಾಣಿಸಿದ ಕೇರಳದ ಕಾಸರಗೋಡಿನ ಬಂದಡ್ಕದ ನಿವಾಸಿ ಅಶ್ವಿನಿ ಅವರು ಉದಯವಾಣಿಗೆ ತಿಳಿಸಿದರು.
ಸಾರಿ, ತುಂಬಾ ಬಳಲಿದ್ದೇವೆ…
ಸಾರಿ, ನಾವು ತುಂಬಾ ಬಳಲಿದ್ದೇವೆ. ಈಗ ಏನನ್ನೂ ಮಾತನಾಡಲಾರೆವು ಎಂದು ವಿಮಾನದ ಪೈಲಟ್‌ಗಳು “ಉದಯವಾಣಿ’ಗೆ ತಿಳಿಸಿದರು. ತಮ್ಮ ಹೆಸರನ್ನು ಹೇಳಲು ಕೂಡ ಅವರು ನಿರಾಕರಿಸಿದರು.
ಅತೀ ವೇಗ ಕಾರಣ: ಪ್ರಾಧಿಕಾರ
ಎಎಕ್ಸ್‌ಬಿ 384,ಬಿ737-800 ನೋಂದಣಿ ವಿಟಿಎವೈಎ (ಏರ್ ಇಂಡಿಯಾ ಎಕ್ಸ್‌ಪ್ರೆಸ್) ವಿಮಾನವು ಸಂಜೆ 5.32ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಇಳಿಯಲು ಸಾಧ್ಯವಾಗಲಿಲ್ಲ. ಎರಡನೇ ಪ್ರಯತ್ನದಲ್ಲಿ 5.42ಕ್ಕೆ ವಿಮಾನ ನಿಲ್ದಾಣದಲ್ಲಿ ಇಳಿಯಿತು. ವಿಮಾನ ಟ್ಯಾಕ್ಸಿ ವೇಯಿಂದ ತಿರುಗುತ್ತಿದ್ದ ಸಂದರ್ಭದಲ್ಲಿ ಜಾರಿ ಮಣ್ಣಿನ ಭಾಗಕ್ಕೆ ಹೋಗಿದೆ. ಏರ್‌ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ಗಮನಿಸಿದಂತೆ ಘಟನೆಗೆ ವಿಮಾನದ ಅತೀ ವೇಗ ಕಾರಣವಾಗಿದೆ. ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ. ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಎಂಜಿನಿಯರ್‌ಗಳು ವಿಮಾನವನ್ನು ರನ್‌ವೇಗೆ ತಂದು ಪರಿಶೀಲನೆ ನಡೆಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ರನ್‌ವೇ ಪರಿಶೀಲನೆಯ ಬಳಿಕ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಅನುಮತಿ ನೀಡಿದ ಬಳಿಕ ವಿಮಾನಗಳ ಹಾರಾಟವನ್ನು ಪುನರಾರಂಭಗೊಳಿಸಲಾಗುತ್ತದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಪ್ರಕಟನೆಯಲ್ಲಿ ತಿಳಿಸಿದೆ. ಸೋಮವಾರ ಬೆಳಗ್ಗಿನಿಂದಷ್ಟೇ ವಿಮಾನ ಹಾರಾಟ ನಿರೀಕ್ಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.