ಅಸಾಮಾನ್ಯ ದೃಶ್ಯ ಸೆರೆಹಿಡಿದ ಸತ್ಯನ್ ಮಹಾನ್ ಛಾಯಾಗ್ರಾಹಕ
Team Udayavani, Jul 4, 2019, 3:00 AM IST
ಎಚ್.ಡಿ.ಕೋಟೆ: ಛಾಯಾಗ್ರಾಹಕ ಟಿ.ಎಸ್.ಸತ್ಯನ್ ಸಾಮಾನ್ಯ ಜನರ ಬದುಕು ಹಾಗೂ ಅಸಾಮಾನ್ಯ ವ್ಯಕ್ತಿಗಳ ಚಿತ್ರಗಳನ್ನು ಸೊಗಸಾಗಿ ಚಿತ್ರಿಸುವ ಮೂಲಕ ಚಾರಿತ್ರಿಕ ಘಟನಾವಳಿಗಳನ್ನು ಸಾಕ್ಷಿಕರಿಸಿದ ದೇಶ ಕಂಡ ಮಹಾನ್ ಛಾಯಾಗ್ರಾಹಕ ಎಂದು ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಎಸ್.ತಿಪ್ಪೇಸ್ವಾಮಿ ಬಣ್ಣಿಸಿದರು.
ತಾಲೂಕಿನ ಹ್ಯಾಂಡ್‌ಪೋಸ್ಟ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಛಾಯಾಗ್ರಾಹಕರ ಸಂಘ ಸಹಯೋಗದಲ್ಲಿ ಏರ್ಪಡಿಸಿದ್ದ “ಟಿ.ಎಸ್.ಸತ್ಯನ್ ಒಂದು ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸತ್ಯನ್ ಸೇವೆ: ಸತ್ಯನ್ ಛಾಯಾಚಿತ್ರಗಳು ಮತ್ತು ಲೇಖನಗಳು ದೇಶ ವಿದೇಶಗಳ ಪತ್ರಿಕೆಗಳಲ್ಲಿ ಪ್ರಕಟಗೊಂಡು ಪ್ರಶಂಸೆ ಪಡೆದಿವೆ. ಜೊತೆಗೆ ಇವರು ಯುನಿಸೆಫ್ ಸೇರಿದಂತೆ ರಾಷ್ಟ್ರ, ಅಂತಾರಾಷ್ಟ್ರೀಯ ಸಂಸ್ಥೆಗಳ ಸಲಹೆಗಾರಾಗಿ ಕಾರ್ಯನಿರ್ವಹಿಸಿದ್ದಾರೆ.
1979ರಲ್ಲಿ ವಿಶ್ವಸಂಸ್ಥೆ ಕೇಂದ್ರ ಕಚೇರಿ ನ್ಯೂಯಾರ್ಕಿನಲ್ಲಿ ಮಗುವಿನ ಅಂತಾರಾಷ್ಟ್ರೀಯ ವರ್ಷಾಚರಣೆ ಸಂದರ್ಭದಲ್ಲಿ ಇವರ ಚಿತ್ರಗಳು ಪ್ರದರ್ಶನ ಕಂಡಿರುವುದು ಹೆಮ್ಮೆಯ ಸಂಗತಿ. ಪದ್ಮಶ್ರೀ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಸತ್ಯನ್ ನಮ್ಮ ಮೈಸೂರಿಗರು ಎಂಬುದೇ ನಮ್ಮೆಲ್ಲರಿಗೂ ಹೆಮ್ಮೆ ಎಂದರು.
ನೈಪುಣ್ಯತೆ: ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಟಿ.ಎಸ್.ಸತ್ಯನ್ ಛಾಯಾ ಚಿತ್ರಕಲೆ ಮತ್ತು ಪತ್ರಿಕೋದ್ಯಮದಲ್ಲಿ ಆಸಕ್ತಿ ಬೆಳೆಸಿಕೊಂಡು ಈ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಯುವ ಛಾಯಾಗ್ರಾಹಕರಿಗೆ ಸತ್ಯನ್ ಜೀವನ, ಸಾಧನೆ ಮತ್ತು ಹೆಜ್ಜೆ ಗುರುತುಗಳನ್ನು ತಿಳಿಸಬೇಕಾಗಿದೆ.
ಛಾಯಾಗ್ರಾಹಣ ಸವಾಲಿನ ಕೆಲಸವಾದರೂ ಆಧುನಿಕತೆ ಬೆಳೆದಂತೆ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ತಮ್ಮ ಬದುಕಿಗಾಗಿ ಛಾಯಾ ವೃತ್ತಿಯನ್ನು ಸಿಮಿತಗೊಳಿಸಿಕೊಳ್ಳದೇ, ಹಳ್ಳಿಗಾಡಿನ ಜನಜೀವನ, ವಿಶಿಷ್ಟವಾದ ಹಬ್ಬ, ಉತ್ಸವ ಮತ್ತು ಗಿರಿಜನರ ಬದಕಿನ ಕುರಿತು ಬೆಳಕು ಚೆಲ್ಲುವ ಛಾಯಾ ಚಿತ್ರಗಳನ್ನು ಸೆರೆ ಹಿಡಿಯುವ ನೈಪುಣ್ಯತೆ ಮೈಗೂಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಸತ್ಯನ್ ಬರೆದಿರುವ ಕಾಲಕ್ಕೆ ಕನ್ನಡಿ ಎಂಬ ಕೃತಿಯಲ್ಲಿ ಪ್ರಸಿದ್ಧ ವ್ಯಕ್ತಿಗಳ ಚಿತ್ರಲೇಖನ ಹಾಗೂ ತಾಲೂಕಿನ ಕಾಕನಕೋಟೆ ಖೆಡ್ಡಾ ಕಾರ್ಯಾಚರಣೆ ಬಗ್ಗೆ ಮನಮುಟ್ಟುವ ರೀತಿಯಲ್ಲಿ ಘಟನೆಯನ್ನು ದಾಖಲಿಸಿರುವುದನ್ನು ಪ್ರಶಂಸಿದರು.
ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜಿ.ಕೆಂಡಗಣ್ಣ ಆರಾಧ್ಯ, ಪ್ರಧಾನಕಾರ್ಯದರ್ಶಿ ವಾದಿರಾಜ್, ಸಂಘದ ಸದಸ್ಯರಾದ ಸತೀಶ್ ಆರಾಧ್ಯ, ಮನೋಜ್, ನಾಗೇಶ್, ಸ್ವಾಮಿ, ಹೊನ್ನೆಗೌಡ, ಶಂಕರ್, ಹೆಚ್.ಕೆ.ಸುರೇಶ್, ನಂದಕುಮಾರ್ ಶೆ„ಲಿ, ನಾಗೇಂದ್ರ, ಪಾರಿಶ್ವನಾಥ್, ಸೂರ್ಯಕುಮಾರ್, ಕಾಳಾಚಾರಿ, ಕಾಶಿಮಹೇಶ್, ವೆಂಕಟೇಶ್, ಸಂತೋಷ್ ಆರಾಧ್ಯ, ಮೋಹನ್, ಬಾಲು, ರಾಜೇಶ್, ಶಿವಣ್ಣ, ಕಸಾಪ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.