ಭೀಕರ ಅಪಘಾತ; 11 ಮಂದಿ ದುರ್ಮರಣ
Team Udayavani, Jul 4, 2019, 3:00 AM IST
ಚಿಕ್ಕಬಳ್ಳಾಪುರ: ಖಾಸಗಿ ಬಸ್ ಹಾಗೂ ಟಾಟಾ ಏಸ್ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಿಂದ ಟಾಟಾ ಏಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೇರಳ, ತಮಿಳುನಾಡು ಮೂಲದ ಮೂವರು ಪ್ರವಾಸಿಗರು ಸೇರಿದಂತೆ ಒಟ್ಟು 11 ಮಂದಿ ಪ್ರಯಾಣಿಕರು ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ಜಿಲ್ಲೆಯ ಚಿಂತಾಮಣಿ ಸಮೀಪದ ಬಾರ‌್ಲಹಳ್ಳಿ ಕ್ರಾಸ್ ಬಳಿ ಬುಧವಾರ ಮಧ್ಯಾಹ್ನ 11.30ರ ಸುಮಾರಿನಲ್ಲಿ ನಡೆದಿದೆ.
ಘಟನೆಯಲ್ಲಿ ಬಸ್‌ನಲ್ಲಿದ್ದ ಸುಮಾರು 15 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಗಳನ್ನು ಚಿಂತಾಮಣಿ ತಾಲೂಕಿನ ಮುರಗಮಲ್ಲ ನಿವಾಸಿಗಳಾದ ಟಾಟಾಕ ಶೌಬಾಜ್ ಬಿನ್ ತಾಜ್‌ದ್ ಖಾನ್ (19), ಸುರೇಶ್ ಬಿನ್ ಲಕ್ಷ್ಮೀನಾರಾಯಣಪ್ಪ (35), ಮರುಗಮಲ್ಲ ಸಮೀಪದ ಚಲುಮಕೋಟೆ ನಿವಾಸಿ ಕೃಷ್ಣಪ್ಪ ಬಿನ್ ಅವುಲು ಸುಬ್ಬನ್ನ (45), ಬೈನಹಳ್ಳಿ ನಿವಾಸಿ ವೆಂಕಟರವಣಪ್ಪ ಬಿನ್ ಲೇಟ್ ಮುನಿಸ್ವಾಮಿ (50), ದಂಡುಪಾಳ್ಯದ ನಾರಾಯಣಸ್ವಾಮಿ ಬಿನ್ ಕದಿರಪ್ಪ (55), ಚಿಂತಾಮಣಿ ಸಮೀಪದ ಕೋನಪಲ್ಲಿ ನಿವಾಸಿ ತಿಮ್ಮಯ್ಯ ಬಿನ್ ಗಂಗಪ್ಪ (68), ಕೋಲಾರದ ಗೌರಮ್ಮ(45) ಎಂದು ಗುರುತಿಸಲಾಗಿದೆ.
ಮೂವರು ಪ್ರವಾಸಿಗರ ಸಾವು: ಅಪಘಾತದಲ್ಲಿ ಮುರಗಮಲ್ಲದ ಅಮ್ಮಜಾನ್ ಬಾಬಾಜಾನ್ ದರ್ಗಾಗೆ ತೆರಳುತ್ತಿದ್ದ ತಮಿಳುನಾಡಿನ ಹೊಸೂರು ತಾಲೂಕಿನ ಗುರ್ರಂವಾರಪಲ್ಲಿ ಸಮೀಪದ ಮುಖಂಡಪಲ್ಲಿ ನಿವಾಸಿ ಕುಮಾರ್ ಬಿನ್ ನರಸಿಂಹಪ್ಪ (25) ಹಾಗೂ ಕೇರಳದ ಏರ್ನಾಕುಲಂ ಜಿಲ್ಲೆಯ ಪೆರುಮಾಂಬಾವುರ್‌ನ ನಿವಾಸಿಗಳಾದ ರಜೀನಾ ಸಿದ್ದಿಕಿ (48), ಆಕೆ ಪತಿ ಮುಕ್ಕಡ್ ಅಬ್ದುಲ್ ರೆಹಮಾನ್ (55) ಎಂದು ಗುರುತಿಸಲಾಗಿದೆ. ಇನ್ನೂ ಮೃತಪಟ್ಟವರ ಪೈಕಿ ಒಬ್ಬ ಮಹಿಳೆ ಗುರುತು ಹಾಗೂ ವಿಳಾಸ ಪತ್ತೆಯಾಗಿಲ್ಲ ಎಂದು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು “ಉದಯವಾಣಿ’ಗೆ ತಿಳಿಸಿದ್ದಾರೆ.
ಆಗಿದ್ದೇನು?: ಚಿಂತಾಮಣಿ ನಗರದಿಂದ ಪ್ರಯಾಣಿಕರನ್ನು ಹೊತ್ತು ಮುರಗಮಲ್ಲ ಗ್ರಾಮಕ್ಕೆ ಹೊರಟಿದ್ದ ಕೆ.ಎ.40.ಎ.2844 ಟಾಟಾಏಸ್‌ಗೆ ಮರುಗಮಲ್ಲ ಕಡೆಯಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಕೆ.ಎ.40:9728 ಸಂಖ್ಯೆ ಖಾಸಗಿ ಬಸ್ (ಎಸ್‌ಕೆಎಸ್) ಮಾರ್ಗ ಮಧ್ಯೆ ಬಾರ‌್ಲಹಳ್ಳಿ ಕ್ರಾಸ್ ಸಮೀಪ ಮುಖಾಮುಖಿ ಡಿಕ್ಕಿಯಾಗಿದೆ.
ಬಸ್ ಡಿಕ್ಕಿಯ ರಭಸಕ್ಕೆ ಟಾಟಾ ಏಸ್ ವಾಹನದಲ್ಲಿದ್ದ 3 ಮಹಿಳೆಯರು ಹಾಗೂ 8 ಮಂದಿ ಪುರುಷರು ಸೇರಿ 11 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದರು. ಅಪಘಾತಕ್ಕೆ ಖಾಸಗಿ ಬಸ್ ಚಾಲಕನ ಅಜಾಗರೂಕತೆ ಹಾಗೂ ಅತಿವೇಗವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಮೃತಪಟ್ಟವರನ್ನು ವಾಹನದಿಂದ ಹೊರ ತೆಗೆದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ಆ್ಯಂಬುಲೆನ್ಸ್ ಮೂಲಕ ಸಾಗಿಸಲಾಯಿತು.
ಬಸ್‌ನಲ್ಲಿದ್ದ 15 ಮಂದಿಗೆ ಗಾಯ: ಅಪಘಾತದಲ್ಲಿ ಮರುಗಮಲ್ಲದಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್‌ನಲ್ಲಿದ್ದ ಸುಮಾರು 15 ಮಂದಿಗೆ ಸಣ್ಣ ಪುಟ್ಟಗಾಯಗಳಾಗಿವೆ. ಬಸ್ ಚಾಲಕ ಸೇರಿ ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಳುಗಳನ್ನು ತಕ್ಷಣ ಕೋಲಾರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆ, ಆರ್.ಎಲ್.ಜಾಲಪ್ಪ ಆಸ್ಪತ್ರೆ, ಬೆಂಗಳೂರಿನ ನಿಮ್ಹಾನ್ಸ್, ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಗಾಯಗೊಂಡವರಿಗೆ ಯಾವುದೇ ಪ್ರಾಣಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಂದ್ರ ವಲಯದ ಐಜಿ ಶರತ್‌ಚಂದ್ರ ಭೇಟಿ: ಕೇಂದ್ರ ವಲಯದ ಐಜಿಪಿ ಕೆ.ವಿ.ಶರತ್‌ಚಂದ್ರ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅಲ್ಲಿಂದ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದವರ ಯೋಗಕ್ಷೇಮ ವಿಚಾರಿಸಿದರು.
ಡೀಸಿ ಭೇಟಿ ರಕ್ಷಣಾ ಕಾರ್ಯಕ್ಕೆ ನೆರವು: ಅಪಘಾತ ವಿಷಯ ತಿಳಿದ ಕೂಡಲೇ ಜಿಲ್ಲಾ ಕೇಂದ್ರದಲ್ಲಿದ್ದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ ಪ್ರತ್ಯಕ್ಷದರ್ಶಿಗಳಿಂದಲೂ ಅಪಘಾತದ ಬಗ್ಗೆ ಮಾಹಿತಿ ಪಡೆದು ರಕ್ಷಣಾ ಕಾರ್ಯಕ್ಕೆ ನೆರವಾದರು. ಬಳಿಕ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಳುಗಳ ಯೋಗಕ್ಷೇಮ ವಿಚಾರಿಸಿದರು.
ಶಾಸಕ ಕೃಷ್ಣಾರೆಡ್ಡಿ ಭೇಟಿ, ಪರಿಹಾರ ವಿತರಣೆ: ಭೀಕರ ರಸ್ತೆ ಅಪಘಾತ ನಡೆದು 11 ಮಂದಿ ಅಮಾಯಕ ಪ್ರಯಾಣಿಕರು ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ವಿಧಾನಸಭಾ ಉಪಸಭಾಧ್ಯಕ್ಷರಾದ ಕ್ಷೇತ್ರದ ಶಾಸಕ ಎಂ.ಕೃಷ್ಣಾರೆಡ್ಡಿ ಚಿಂತಾಮಣಿಗೆ ದಿಢೀರ್ ಆಗಮಿಸಿದರು. ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಅಲ್ಲದೇ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಿಗೆ ಚಿಕಿತ್ಸೆ ವೆಚ್ಚಕ್ಕಾಗಿ ಪರಿಹಾರ ವಿತರಿಸಿದರು.
ಟಾಟಾಏಸ್‌ನಲ್ಲಿ 12 ಮಂದಿಯಲ್ಲಿ ಓರ್ವ ಪಾರು: ಟಾಟಾಏಸ್‌ನಲ್ಲಿ ಒಟ್ಟು 12 ಮಂದಿ ಪ್ರಯಾಣಿಸುತ್ತಿದ್ದು ಒಬ್ಬರು ಮಾತ್ರ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಟಾಟಾಏಸ್ ಮುಂಬದಿ ಸಂಪೂರ್ಣ ಜಖಂಗೊಂಡಿದ್ದರಿಂದ ಮೃತ ದೇಹಗಳು ವಾಹನದೊಳಗೆ ಸಿಲುಕಿ ಹೊರ ತೆಗೆಯಲಾರದ ಸ್ಥಿತಿಯಲ್ಲಿದ್ದವು. ಕೆಲವೊಂದು ಸ್ಥಳದಲ್ಲಿಯೇ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯಗಳು ಮನಕಲಕುವಂತಿದ್ದವು. ಸ್ಥಳೀಯರು ಧಾವಿಸಿ ಮೃತ ದೇಹಗಳನ್ನು ಹೊರ ತೆಗೆಯಲು ಪೊಲೀಸರಿಗೆ ನೆರವಾದರು.
ಜಿಲ್ಲೆಯ ಚಿಂತಾಮಣಿ ಸಮೀಪ ಖಾಸಗಿ ಬಸ್ ಹಾಗೂ ಟಾಟಾಏಸ್ ವಾಹನದ ನಡುವೆ ಡಿಕ್ಕಿ ಸಂಭವಿಸಿ 11 ಮಂದಿ ಮೃತ ಪಟ್ಟಿದ್ದಾರೆ. ಘಟನೆಗೆ ಚಾಲಕನ ಅಜಾಗರೂಕತೆ ಹಾಗೂ ಅತಿವೇಗ ಕಾರಣ. ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಶೀಘ್ರ ಬಂಧಿಸುತ್ತೇವೆ. ಬಸ್ ಮಾಲಿಕನ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತೇವೆ.
-ಕೆ.ಸಂತೋಷಬಾಬು, ಜಿಲ್ಲಾ ಎಸ್ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.