ಹೊಸ ತಾಲೂಕಿಗೆ ಸಿಗುತ್ತಿಲ್ಲ ಅನುದಾನ
Team Udayavani, Jul 4, 2019, 3:04 AM IST
ಕಲಬುರಗಿ: ಹೊಸ ತಾಲೂಕುಗಳ ಕಚೇರಿ ಹಾಗೂ ಇತರ ಮೂಲ ಸೌಕರ್ಯಗಳಿಗೆ ಅನುದಾನ ಸಿಗುತ್ತಿಲ್ಲ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸ ತಾಲೂಕುಗಳಲ್ಲಿ ಕಂದಾಯ ಕಚೇರಿಯೊಂದನ್ನು ಬಿಟ್ಟರೆ ಬೇರೆ ಯಾವ ಕಚೇರಿಯೂ ಆರಂಭವಾಗಿಲ್ಲ. 14 ತಾಲೂಕು ಕಚೇರಿಗಳು ಆರಂಭವಾಗಬೇಕು. ಹಣಕಾಸು ಇಲಾಖೆಗೆ ಮೂರು ಸಲ ಪ್ರಸ್ತಾವನೆ ಕಳಿಸಲಾಗಿದೆ.
ಆದರೂ ಅನುದಾನ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಚರ್ಚಿಸಲು ಜು.4ರಂದು ಬೆಂಗಳೂರಿನಲ್ಲಿ ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಸಭೆ ಕರೆಯಲಾಗಿದೆ ಎಂದರು.
ಬರಗಾಲ ನಿರ್ವಹಣೆಗೆ ಹಣದ ಕೊರತೆಯಿಲ್ಲ. ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳ ಬಳಿ ಒಟ್ಟಾರೆ 600 ಕೋಟಿ ರೂ.ಇದೆ. ಬರ ವೀಕ್ಷಿಸಲು ನಾನೇ ಖುದ್ದಾಗಿ ಇಲ್ಲಿಯವರೆಗೆ 16 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ.
ಟ್ಯಾಂಕರ್ ಮೂಲಕ ನೀರು ಪೂರೈಕೆಯನ್ನು ಮೂರು ತಿಂಗಳಿಗಿಂತ ಹೆಚ್ಚು ವಿಸ್ತರಿಸಬಾರದು ಎನ್ನುವ ನಿಯಮವಿದೆ. ಬುಧವಾರ ದತ್ತಾತ್ರೇಯ ದೇವರ ದರ್ಶನ ಪಡೆಯುತ್ತಿರುವಾಗ ರಾಜ್ಯದಲ್ಲಿ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿದ್ದೇವೆ ಎಂದರು.
ಸಿಎಂ ಅವರೇ ನನ್ನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಿಲ್ಲವೇ?: ರಾಜ್ಯ ಸರ್ಕಾರದ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದೀರಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ವಿಧವಾ ವೇತನ, ಅಂಗವಿಕಲ, ಇತರ ಮಾಸಾಶನಗಳು, ಸಕಾಲಕ್ಕೆ ಅರ್ಜಿ ವಿಲೇವಾರಿ ಆಗದಿರುವ ಬಗ್ಗೆ ಸಿಎಂ ಅವರ ಜನತಾದರ್ಶದಲ್ಲಿ ಸಾಕಷ್ಟು ದೂರುಗಳು ಇದ್ದವು ಎಂದು ತಿಳಿದು ಬಂದಿದೆ.
ಅದರಲ್ಲಿ ನನ್ನ ಹಾಗೂ ನನ್ನ ಇಲಾಖೆ ಬಗ್ಗೆ ದೂರು ಇರಲಿಲ್ಲವೇ? ಸಿಎಂ ನನ್ನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಿಲ್ಲವೇ ಎಂದು ಸುದ್ದಿಗಾರರನ್ನೇ ದೇಶಪಾಂಡೆ ಪ್ರಶ್ನಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.