ಯಕ್ಷ ನಂದನದ ಆಂಗ್ಲಭಾಷಾ ಪಂಚವಟಿ
ಇಂಗ್ಲಿಷ್ ಭಾಷಾ ಬಳಗ ಪ್ರಸ್ತುತಿ
Team Udayavani, Jul 5, 2019, 5:00 AM IST
ಗಮಕದಾರ್ಭಟೆಯೊಂದಿಗೆ ಪ್ರವೇಶಿಸಿದಳು ಶೂರ್ಪನಖೆ. ಹೆಣ್ಣು ಬಣ್ಣದ ತೆರೆಪೊರಪ್ಪಾಟಿನೊಂದಿಗೆ ಶರಶ್ಚಂದ್ರರು ಈ ಪಾತ್ರ ವನ್ನು ಮೆರೆಸಿದರು. ದೊಡ್ಡ ಹುತ್ತರಿಯೊಂದಿಗೆ ಘನವಾದ ದೇಹವನ್ನು ಕುಣಿಸಿ, ಮರೆಮಾಡಿಮಾಯಾ ಶೂರ್ಪನಖೆಯಾದರು. ಖ್ಯಾತ ಸ್ತ್ರೀ ಪಾತ್ರಧಾರಿ ವರ್ಕಾಡಿ ರವಿ ಅಲೆವೂರಾಯರು ನಿಜಾರ್ಥದಲ್ಲಿ ಮಾಯೆಯಾಗಿ ಜನರನ್ನು ತಮ್ಮ ಸೌಂದರ್ಯದ ಸೆರಗಿನಲ್ಲಿ ಕಟ್ಟಿ ಒಯ್ದರು.
ಮಾಜಿ ಶಾಸಕ, ಆಂಗ್ಲಭಾಷಾ ಯಕ್ಷಗಾನದ ಉತ್ತುಂಗಕ್ಕಾಗಿ ಶ್ರಮಿಸಿದ
ದಿ|ಪಿ.ವಿ.ಐತಾಳರ 22ನೇ ಸಂಸ್ಮರಣೆ, ಇಂಗ್ಲಿಷ್ ಭಾಷಾ ಬಳಗದ 38ನೇ ವಾರ್ಷಿಕೋತ್ಸವ, ಪಂಚವಟಿ ಆಂಗ್ಲ ಯಕ್ಷಗಾನ ಬಯಲಾಟ ಮಂಗಳೂರಿನ ಪುರಭವನದಲ್ಲಿ ನಡೆಯಿತು.
ನ್ಯಾಯವಾದಿ ಭಾಗವತ ಹರಿ ಪ್ರಸಾದ್ ಕಾರಂತರ ಭಾಗವತಿಕೆ ಈ ಬಯಲಾಟಕ್ಕೆ ಮುದ ನೀಡಿತು. ಸ್ಪಷ್ಟವಾದ, ವಿರಳವಾದ ಸಾಹಿತ್ಯ, ರಾಗಸಂಚಾರ ಎಲ್ಲವೂ ಒಟ್ಟಂದದ ಕಾರ್ಯಕ್ರಮಕ್ಕೆ ಕೊಡುಗೆಯಾಗಿ ಬಂತು. ಸುಬ್ರಹ್ಮಣ್ಯ ಚಿತ್ರಾಪುರರವರು ಮದ್ದಲೆಯಲ್ಲಿ ಪಾರ್ತಿಸುಬ್ಬನ ಹಾಡುಗಳಿಗೆ ಕಾರಂತರು ಜೀವ ತುಂಬುವಾಗ ನುಡಿತ ಝೇಂಕಾರಗಳಿಂದ ವಾದನದಲ್ಲಿ ಬೆಳಗಿದರು. ಅನುಭವಿ ಮದ್ದಲೆಗಾರರಾದ ಶಂಕರ ಭಟ್ ದಿವಾಣ, ಕೃಷ್ಣಯ್ಯ ಆಚಾರ್ಯ, ಸೂರ್ಯನಾರಾಯಣ ಮತ್ತು ವಿಕ್ರಂ ಮೈರ್ಪಾಡಿಯವರು ಹಿಮ್ಮೇಳದಲ್ಲಿ ಸಹಕಾರವನ್ನಿತ್ತರು.
ರಾಮ ಲಕ್ಷ್ಮಣ ಸೀತೆಯರ ಪೀಠಿಕೆ,ಹಿತಮಿತವಾದ ನಾಟ್ಯ ಮಾತುಗಳಿಂದ ಈ ದೃಶ್ಯದಲ್ಲಿ ಪಾತ್ರಗಳಿಗೆ ಜೀವ ತುಂಬಿದರು. ಅನುಭವಿ ಕಲಾವಿದ ಈಶ್ವರ ಭಟ್ ಸರ್ಪಂಗಳರವರು ರಾಮನ ಪಾತ್ರವನ್ನು ಬೆಳಗಿಸಿದರು. ತೂಕದ ಇಂಗ್ಲಿಷ್ ಮಾತುಗಳಿಂದ ಮರ್ಯಾದಾ ಪುರುಷೋತ್ತಮನನ್ನು ಚಿತ್ರಿಸಿದರು. ಕು| ವೃಂದಾ ಕೊನ್ನಾರ್‌ರವರು ಸೀತೆಯ ಭಯ, ಆತಂಕ, ಲಕ್ಷ್ಮಣನ ಬಗೆಗಿನ ಮೈದುನ ವಾತ್ಸಲ್ಯ ಎಲ್ಲವನ್ನೂ ಭಾವಪೂರ್ಣವಾಗಿ ಅಭಿನಯಿಸಿ ಸೀತೆಯ ಗೌರವವನ್ನು ಕಾಪಾಡಿಕೊಂಡರು. ಲಯವರಿತ ಹೆಜ್ಜೆಗಾರಿಕೆ ಆ ಪಾತ್ರವನ್ನು ಗಾಂಭೀರ್ಯದಲ್ಲಿಯೇ ನಿಲ್ಲುವಂತೆ ಮಾಡಿತು. ಲವಲವಿಕೆಯಿಂದ ಲಕ್ಷ್ಮಣನ ಪಾತ್ರವನ್ನು ನಾಟ್ಯ, ಧೀಂಗಿಣ, ಮಾತುಗಳಿಂದ ತುಂಬಿಸಿದವರು ಭರವಸೆಯ ಕಲಾವಿದ ಕಾನೂನು ವಿದ್ಯಾರ್ಥಿ ಪ್ರಶಾಂತ್ ಐತಾಳ್ ಕೃಷ್ಣಾಪುರ.
ಇನ್ನು ಈ ಬಾರಿ ಸಂಚಾಲಕರು-ಸಂಘಟಕರುಗಳೆಲ್ಲ ರಾಮನಲ್ಲಿ ಪಂಚವಟಿ ಪ್ರದೇಶದ ಕಷ್ಟವನ್ನು ಹೇಳಿಕೊಳ್ಳುತ್ತಾ ವಾಸ್ತವವನ್ನು ಬಿಚ್ಚಿಟ್ಟು, ತಮ್ಮನ್ನು ನೀವೇ ಕಾಪಾಡಬೇಕೆಂದು ಬೇಡಿಕೊಂಡರು. ಡಾ| ಸತ್ಯಮೂರ್ತಿ ಐತಾಳ್, ಅಡ್ವೊಕೆಟ್ ಸಂತೋಷ್ ಐತಾಳ್, ಡಾ|ಜೆ.ಎನ್.ಭಟ್ ಹಾಗೂ ಅಡ್ವೊಕೆಟ್ ಸದಾಶಿವ ಐತಾಳ್‌ರವರು ಮುನಿಗಳಾದರೆ, ಕು| ಸಂಜನಾ ಜೆ.ರಾವ್ ಮತ್ತು ಕು| ಅಭಿನವಿ ಹೊಳ್ಳರು ಋಷಿ ವಧುಗಳಾದರು. ಇವರೆಲ್ಲರ ಪಾತ್ರ ತನ್ಮಯತೆ ಪ್ರಾಯಶಃ ಕವಿ ಆಶಯವನ್ನು ಪೂರೈಸಿದಂತೆಯೇ ಕಾಣುತ್ತಿದೆ. ಧರ್ಮಾತ್ಮರನ್ನು ರಕ್ಷಣೆ ಮಾಡಲು ಕಟಿಬದ್ದ ಎಂದು ರಾಮ ಧೈರ್ಯ ತುಂಬಿ ಅವರನ್ನು ಕಳುಹಿಸುತ್ತಾನೆ.
ಗಮಕದಾರ್ಭಟೆಯೊಂದಿಗೆ ಪ್ರವೇಶಿಸಿದಳು ಶೂರ್ಪನಖೆ. ಹೆಣ್ಣು ಬಣ್ಣದ ತೆರೆಪೊರಪ್ಪಾಟಿನೊಂದಿಗೆ ಶರಶ್ಚಂದ್ರರು ಈ ಪಾತ್ರ ವನ್ನು ಮೆರೆಸಿದರು. ದೊಡ್ಡ ಹುತ್ತರಿಯೊಂದಿಗೆ ಘನವಾದ ದೇಹವನ್ನು ಕುಣಿಸಿ, ಮರೆಮಾಡಿ ಮಾಯಾಶೂರ್ಪನಖೆಯಾದರು. ಖ್ಯಾತ ಸ್ತ್ರೀ ಪಾತ್ರಧಾರಿ ವರ್ಕಾಡಿ ರವಿ ಅಲೆವೂರಾಯರು ನಿಜಾರ್ಥದಲ್ಲಿ ಮಾಯೆಯಾಗಿ ಜನರನ್ನು ತಮ್ಮ ಸೌಂದರ್ಯದ ಸೆರಗಿನಲ್ಲಿ ಕಟ್ಟಿ ಒಯ್ದರು. ಪರಂಪರೆಯ ನಾಟ್ಯ ಸಂಭಾಷಣೆಯ ಮೂಲಕ ಆ ಪಾತ್ರ ಬೆಳಗುವಲ್ಲಿ ಅಲೆವೂರಾಯರ ಪಾತ್ರದಲ್ಲಿ ಪರಂಪರೆಯ ಸೊಗಡನ್ನು ಕಾಣಬಹುದಾಗಿತ್ತು. ಝಂಪೆ,ಆದಿ,ರೂಪಕ,ಅಷ್ಟ,ಏಕ ಹೀಗೆಲ್ಲಾ ತಾಳಗಳ ಹಾಡುಗಳಿಗೂ ಭಿನ್ನ ನಾಟ್ಯಗಳ ಮೂಲಕ ಮಾಯಾ ಶೂರ್ಪನಖೆ ಬೆಳಗಿದಳು. ರಾಮ-ಶೂರ್ಪನಖೆಯರ ಸಂಭಾಷಣೆ ಹಾಸ್ಯ ಮಿಶ್ರಿತ ವಾಕ್ಚಾತುರ್ಯವೇ ಆಗಿತ್ತು. ಅಂತೂ ರವಿ ಅಲೆವೂರಾಯರು ಕಥಾ ಸೌಂದರ್ಯಕ್ಕೆ ಸೌಂದರ್ಯ ರಾಣಿಯೇ ಆದರು. ಖರ,ದೂಷಣ, ತ್ರಿಶಿರರು ವಿವಿಧ ರೂಪಗಳಲ್ಲಿ ಕಂಡುಬಂದರು. ಖರಾಸುರನಾಗಿ ಶಿವತೇಜ ಐತಾಳರು ಶೂರ್ಪನಖೆಯ ಕಷ್ಟವನ್ನು ಆಲಿಸಿ ಪರಿಹಾರ ನೀಡುವ ಭರವಸೆ ನೀಡಿದರು. ಸಹೋದರರಾದ ದೂಷಣ-ಸ್ಕಂದ ಕೊನ್ನಾರ್, ತ್ರಿಶಿರನಾಗಿ ಶ್ರೀಜಿತ್ ಆರಿಗರನ್ನು ಕರೆಸಿ ಯುದ್ಧಕ್ಕೆ ಹೊರಟರು. ತ್ರಿಶಿರನು (ಮೂರು ತಲೆ) ಇಸ್ಪೀಟ್ ಆಟದಲ್ಲಿರುವ ಕಳಾವಾರ್ ಆಕಾರದ ಕಿರೀಟದಿಂದ ತಾನು ತ್ರಿಶಿರನೆಂದು ಸಾರಿದರು. ರಾಮನು ಏರಿಸಿದ ಬಿಲ್ಲನ್ನು ಇಳಿಸುವುದರೊಂದಿಗೆ ಹದಿನಾಲ್ಕು ಸಾವಿರ ರಾಕ್ಷಸರನ್ನು ಕೊಂದು ಲೋಕಕ್ಕೆ ಮಂಗಲವನ್ನುಂಟು ಮಾಡುತ್ತಾನೆ. ಇಂಗ್ಲಿಷ್ ಭಾಷೆ ಎನ್ನುವುದನ್ನು ಬಿಟ್ಟರೆ ಉಳಿದಂತೆ ಮಾತಿನ ಧಾಟಿ, ವೇಷಭೂಷಣ ಎಲ್ಲವೂ ಸಾಧಾರಣ ಬಯಲಾಟಗಳನ್ನು ನೋಡಿದಂತೆಯೇ ಅನ್ನಿಸಿತು.
ಸುರೇಖಾ ಶೆಟ್ಟಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.