ಸಾಮೂಹಿಕ ಅತ್ಯಾಚಾರ ಪ್ರಕರಣ: ವೀಡಿಯೋ ವೈರಲ್: 8 ಮಂದಿ ಬಂಧನ
ಪ್ರಮುಖ ಆರೋಪಿಗಳಿಗೆ ನ್ಯಾಯಾಂಗ ಬಂಧನ
Team Udayavani, Jul 5, 2019, 9:20 AM IST
ಪುತ್ತೂರು: ಕಾಲೇಜು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಮಾಡಿದ ಒಟ್ಟು 8 ಮಂದಿಯನ್ನು ಬಂಧಿಸಿದ್ದಾರೆ.
ಅತ್ಯಾಚಾರಕ್ಕೆ ಸಂಬಂಧಿಸಿದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದವರ ವಿರುದ್ಧ ಸೊ ಮೋಟೊ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ.
ಸ್ಟೇಟಸ್‌ನಿಂದ ಡೌನ್‌ಲೋಡ್
ತಾನು ತನ್ನ ಸ್ನೇಹಿತರೊಂದಿಗೆ ಸೇರಿ ನಡೆಸಿರುವ ಸಾಮೂಹಿಕ ಅತ್ಯಾಚಾರದ ವೀಡಿಯೋವನ್ನು ತನ್ನ ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದು, ಇದನ್ನು ಅದೇ ಕಾಲೇಜಿನ ಮೋಹಿತ್ ಎಂಬಾತ ತನ್ನ ಮೊಬೈಲ್‌ನಲ್ಲಿ ಡೌನ್ ಲೋಡ್ ಮಾಡಿಕೊಂಡಿದ್ದ. ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ ಸಂದರ್ಭ ವಿದ್ಯಾರ್ಥಿಗಳ ನಡುವೆ ಭಿನ್ನಮತ ಮೂಡಿತ್ತು. ಈ ಹಿನ್ನೆಲೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ತೇಜೋವಧೆ ಮಾಡುವ ಉದ್ದೇಶದಿಂದ ಶ್ರೇಯಾನ್ಸ್ ಎಸ್. ಎಂಬಾತ ತನಗೆ ಬೇರೆಯವರ ಮೂಲಕ ದೊರೆತ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾನೆ ಎಂದು ತನಿಖೆ ಸಂದರ್ಭದಲ್ಲಿ ಓರ್ವ ಆರೋಪಿಯಾಗಿರುವ ಪ್ರಖ್ಯಾತ್ ಪೊಲೀಸರಿಗೆ ತಿಳಿಸಿದ್ದಾನೆ.
ಬಂಧಿತರು
ವೀಡಿಯೋವನ್ನು ಸಾರ್ವಜನಿಕವಾಗಿ ಪ್ರಸಾರ ಮಾಡಿದ ಆರೋಪದಲ್ಲಿ ಕಬಕ ಗ್ರಾಮದ ನೆಹರೂನಗರ ನಿವಾಸಿ ಚಂದ್ರಶೇಖರ ಮಯ್ಯ, ಪುತ್ತೂರು ಕಸ್ಬಾ ಗ್ರಾಮ ನಿವಾಸಿ ಮುರಳೀಧರ, ಕಡಬ ನಿವಾಸಿ ಶ್ರೇಯಾನ್ಸ್ ಎಸ್., ಆರ್ಯಾಪು ನಿವಾಸಿ ಪೂವಪ್ಪ ಕೆ., ಆರ್ಯಾಪು ಗ್ರಾಮದ ಪವನ್ ಕುಮಾರ್ ಡಿ., ಪುತ್ತೂರು ಕಸಬಾ ನಿವಾಸಿ ಮೋಹಿತ್ ಪಿ.ಜಿ., ಕೊಳ್ತಿಗೆ ನಿವಾಸಿ ಧ್ಯಾನ್ ಎ.ಎನ್., ಪುತ್ತೂರು ಕಸಬಾ ನಿವಾಸಿ ಅದ್ವಿತ್ ಕುಮಾರ್ ನಾಯ್ಕ ಎನ್. ಅವರನ್ನು ಐಟಿ ಕಾಯಿದೆಯಡಿ ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಐದು ಮಂದಿಯನ್ನು ಗುರುವಾರ ಸಂಜೆ ಪುತ್ತೂರು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರಿಗೆ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇತರ ಮೂವರು ಆರೋಪಿಗಳನ್ನು ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ತಿಳಿಸಿದ್ದಾರೆ.
ಗುರುವಾರ ಸಹಾಯಕ ಸರಕಾರಿ ಅಭಿಯೋಜಕರು ಇಲ್ಲದ ಕಾರಣ ಮತ್ತು ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಗೆ ಅಭಿಯೋಜಕರ ಆಕ್ಷೇಪಣೆ ಅಥವಾ ವಾದ ಮಂಡನೆ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೊಪ್ಪಿಸಿ, ಶುಕ್ರವಾರ ತನ್ನೆದುರು ಹಾಜರುಪಡಿಸವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ವೀಡಿಯೋ ವೈರಲ್ ಮಾಡಿದ್ದ ಆರೋಪದಲ್ಲಿ ಸುಳ್ಯ ಮತ್ತು ಬೆಳ್ಳಾರೆ ಪರಿಸರದ ಐವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದ.ಕ. ಜಿಲ್ಲಾ ಎಸ್ ಪಿ ಲಕ್ಷಿಪ್ರಸಾದ್ ಮಾರ್ಗದರ್ಶನದಲ್ಲಿ ತನಿಖೆ ಮುಂದುವರೆಯುತ್ತಿದೆ.
ಡ್ರಗ್ಸ್ ನೀಡಿಲ್ಲ : ಎಸ್ ಪಿ
ಎ. 3ರಂದು ಪುತ್ತೂರು ನಗರದ ಹೊರ ವಲಯದಲ್ಲಿ ಘಟನೆ ನಡೆದಿದೆ. ತನಗೆ ಡ್ರಗ್ಸ್ ನೀಡಿಲ್ಲ ಎಂದು ಯುವತಿ ಹೇಳಿದ್ದಾಳೆ. ಪ್ರಾಥಮಿಕ ತನಿಖೆ ವೇಳೆ ಆರೋಪಿ ವಿದ್ಯಾರ್ಥಿಗಳೂ ಮಾದಕ ದ್ರವ್ಯ ಸೇವಿಸಿರುವುದು ತಿಳಿದು ಬಂದಿಲ್ಲ ಎಂದು ಎಸ್‌ಪಿ ಹೇಳಿದರು.
ವೀಡಿಯೋ ವೈರಲ್: ಜಾಗೃತಿ ಅಗತ್ಯ
ದುಷ್ಕೃತ್ಯಗಳ ವೀಡಿಯೋ ಚಿತ್ರೀಕರಿಸಿ ವೈರಲ್ ಮಾಡುವು ದರ ವಿರುದ್ಧ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಅಲ್ಲದೆ ವಿದ್ಯಾರ್ಥಿಗಳ ಮನೆಯವರೂ ಈ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಬಿಗಿಗೊಳಿಸಲಾಗುವುದು ಎಂದು ಎಸ್‌ಪಿ ಹೇಳಿದರು. ಈಗಾಗಲೇ ಬಂಟ್ವಾಳ ಹೊರವಲಯದ ಕಾಡು ಪ್ರದೇಶದಲ್ಲಿ ಜೋಡಿ ನಡುವಿನ ಅನೈತಿಕ ಚಟುವಟಿಕೆಯನ್ನು ಅಡಗಿ ನಿಂತು ಚಿತ್ರೀಕರಿಸಿದ ವೀಡಿಯೋವನ್ನು ಜಾಲತಾಣಗಳಲ್ಲಿ ಹರಿಯಬಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿದ್ದಾರೆ. ಮೀನು ವ್ಯಾಪಾರಿ ಜತೆಗೆ ವಿದ್ಯಾರ್ಥಿನಿಯೊಬ್ಬಳ ರಾಸಲೀಲೆ ವೀಡಿಯೋ ವೈರಲ್‌ಗೆ ಸಂಬಂಧಿಸಿ ಇಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅವರಿಂದ ನೈಜ ಸಂಗತಿಯನ್ನು ತಿಳಿದುಕೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸ್ಥಳ ಮಹಜರು
ಅತ್ಯಾಚಾರದ ಪ್ರಮುಖ ಆರೋಪಿಗಳಾದ ಗುರುನಂದನ್, ಪ್ರಜ್ವಲ್, ಕಿಶನ್, ಸುನಿಲ್ ಹಾಗೂ ಪ್ರಖ್ಯಾತ್ ಅವರನ್ನು ಘಟನೆ ನಡೆದ ದಾರಂದಕುಕ್ಕು ಕಠಾರ ನದಿ ತಟದ ನಿರ್ಜನ ಪ್ರದೇಶಕ್ಕೆ ಗುರುವಾರ ಕರೆ ತಂದ ಪೊಲೀ ಸರು ಸ್ಥಳ ಮಹಜರು ನಡೆಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಮೊಬೈಲ್ ಫೋನ್‌ಗಳನ್ನು ಆರೋಪಿಗಳಿಂದ ವಶಕ್ಕೆ ಪಡೆ ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮುಖ ಆರೋಪಿಗಳಿಗೆ ನ್ಯಾಯಾಂಗ ಬಂಧನ
ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಐವರನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಮನೆಯಲ್ಲಿ ಗುರುವಾರ ಸಂಜೆ ಹಾಜರುಪಡಿಸಲಾಯಿತು. ಅವರಿಗೆ ನ್ಯಾಯಾಧೀಶರಾದ ರುಡಾಲ್ಫ್ ಪಿರೇರ ಅವರು ಜು. 18ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದರು. ವೀಡಿಯೋ ತುಣುಕು ವೈರಲ್ ಮಾಡಿದ ಬಗ್ಗೆ ಬುಧವಾರ ಬೆಳಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಪೊಲೀಸರು, ಮಧ್ಯಾಹ್ನ ಬಳಿಕ ಯುವತಿ ದೂರಿನ ಹಿನ್ನೆಲೆಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಇತರ ಪ್ರಕರಣಗಳ ಕುರಿತು ಪ್ರಕರಣ ದಾಖಲಿಸಿದ್ದಾರೆ ಎಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಸ್‌ಪಿ ಲಕ್ಷಿ ಪ್ರಸಾದ್ ಅವರು ಹೇಳಿದರು.
ಜಾನುವಾರು ಸಾಗಾಟ ವಿರುದ್ಧ ಮುಚ್ಚಳಿಕೆ
ಅಕ್ರಮ ಜಾನುವಾರು ಸಾಗಾಟಕ್ಕೆ ಸಂಬಂಧಿಸಿ ಹಿಂದಿನ 8 ವರ್ಷಗಳಲ್ಲಿ ದ.ಕ. ವ್ಯಾಪ್ತಿಯಲ್ಲಿ 260 ಪ್ರಕರಣ ದಾಖಲಾಗಿವೆ. ದನ ಕಳವು ಮತ್ತು ಅಕ್ರಮ ಸಾಗಾಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಳೆ ಆರೋಪಿಗಳನ್ನು ಕರೆಸಿ ತಹಶೀಲ್ದಾರರ ಸಮಕ್ಷಮ ಮುಚ್ಚಳಿಕೆ ಬರೆಸಲಾಗುವುದು ಎಂದರು.
ಎಫ್ಐಆರ್ ದಾಖಲಿಸಲು ಸೂಚನೆ
ಯಾವುದೇ ಅಪರಾಧ ಕೃತ್ಯ ನಡೆದಾಗ ಪೊಲೀಸ್ ಠಾಣೆಗಳಲ್ಲಿ ರಾಜಿ ಮಾತುಕತೆೆ ನಡೆಸುವ ಬದಲು ಮೊದಲು ಎಫ್ಐಆರ್ ದಾಖಲಿಸುವಂತೆ ಎಲ್ಲ ಠಾಣೆಗಳಿಗೆ ಸೂಚನೆ ನೀಡಲಾಗಿದೆ ಎಂದರು. ಪುತ್ತೂರಿನ ಸಂಪ್ಯ ಠಾಣೆಯಲ್ಲಿ ಬಾಲಕಿ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಕಾರಣಕ್ಕೂ ಠಾಣೆಗಳಲ್ಲಿ ರಾಜಿ ಮಾತುಕತೆ ನೆಪದಲ್ಲಿ ಕೇಸು ದಾಖಲಿಸಲು ಹಿಂದೇಟು ಹಾಕದಂತೆ ಸೂಚನೆ ನೀಡಲಾಗಿದೆ. ಈ ಘಟನೆಯಲ್ಲೂ ರಾಜಿ ಸಂಧಾನಕ್ಕೆ ಪೊಲೀಸರು ಮುಂದಾಗಿದ್ದ ಮಾಹಿತಿ ಲಭಿಸಿದೆ. ಮೊದಲು ಎಫ್ಐಆರ್ ದಾಖಲಿಸಬೇಕು. ಅನಂತರ ಕಾನೂನು ಪ್ರಕಾರ ನ್ಯಾಯಾಲಯದಲ್ಲಿ ರಾಜಿ ಮೂಲಕ ಇತ್ಯರ್ಥಪಡಿಸಲು ಅವಕಾಶ ಇರುತ್ತದೆ ಎಂದರು.
ಸಂಪ್ಯ ಠಾಣೆಯ ಮೂವರು ಸಿಬಂದಿಯನ್ನು ಅಮಾನತು ಮಾಡಲಾಗಿದೆ. ಈಗ ಠಾಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡರು ಮನವಿ ಸಲ್ಲಿಸಿದ್ದಾರೆ. ಪುತ್ತೂರು ಡಿವೈಎಸ್ಪಿ ನೇತೃತ್ವದಲ್ಲಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಮೂರು ಆಯಾಮಗಳಲ್ಲಿ ಕೂಲಂಕಷ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.