ಮಕ್ಕಳ ಹಕ್ಕು ಯಾಕೆ ಸಿಗುತ್ತಿಲ್ಲ?
•20 ದಿನದೊಳಗೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ
Team Udayavani, Jul 5, 2019, 10:56 AM IST
ಕಲಬುರಗಿ: ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಸಂಬಂಧ ಗುರುವಾರ ಹಮ್ಮಿಕೊಂಡಿದ್ದ ಸಂವಾದವನ್ನು ಅಂತೋಣಿ ಸೆಬಾಸ್ಟಿಯನ್ ಮತ್ತು ಮಕ್ಕಳು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ಕಲಬುರಗಿ: ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕಲಬುರಗಿ ವಿಭಾಗ ಮಟ್ಟದ ಮಕ್ಕಳ ರಕ್ಷಣೆ ಸಂಬಂಧ ಗುರುವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಕ್ಕಳು ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು. ತಾವು ಅನುಭವಿಸುತ್ತಿರುವ ಸಂಕಷ್ಟ ಹೇಳಿಕೊಂಡ ಮಕ್ಕಳು ತಮಗೆ ಸಿಗಬೇಕಾದ ಹಕ್ಕುಗಳು ಯಾಕೆ ಸಿಗುತ್ತಿಲ್ಲ ಎಂದು ಪ್ರಶ್ನಿಸಿದರು.
ಆರು ಜಿಲ್ಲೆಗಳ ಶಾಲೆಗಳಲ್ಲಿ ಕುಡಿಯುವ ನೀರು, ಗುಣಮಟ್ಟದ ಶಿಕ್ಷಣ, ವಿದ್ಯುತ್ ಸಮಸ್ಯೆ, ಶಿಷ್ಯವೇತನ, ಶಾಲಾ ಮೈದಾನ, ಸ್ವಚ್ಛತೆ ಕೊರತೆ ಹಾಗೂ ಅಧಿಕಾರಿಗಳಿಂದ ಆಗುತ್ತಿರುವ ಲೋಪಗಳ ಬಗ್ಗೆ ಮಕ್ಕಳು ಎಳೆ-ಎಳೆಯಾಗಿ ಆಯೋಗದ ಅಧ್ಯಕ್ಷ ಅಂತೋಣಿ ಸೆಬಾಸ್ಟಿಯನ್ ಮುಂದಿಟ್ಟರು. ಮಕ್ಕಳು ಕೇಳುತ್ತಿದ್ದ ಪ್ರಶ್ನೆಗಳನ್ನು ಸಮಚಿತ್ತದಿಂದ ಆಲಿಸಿದ ಅಧ್ಯಕ್ಷರು, ಸಂಬಂಧಪಟ್ಟ ಅಧಿಕಾರಿಗಳನ್ನು ಮಕ್ಕಳ ಮುಂದೆಯೇ ನಿಲ್ಲಿಸಿ ವಿವರಣೆ ಪಡೆದರು.
ಯಾದಗಿರಿ ಜಿಲ್ಲೆಯ ವಿದ್ಯಾರ್ಥಿಗಳು ರಾಜೇಶ್ವರಿ, ಆಂಜನೇಯ, ಚೆನ್ನಪ್ಪ ಮತ್ತು ಶ್ರಾವಣ ಆಯೋಗಕ್ಕೆ 602 ಸಮಸ್ಯೆಗಳ ಪಟ್ಟಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಡಿಡಿಪಿಐ ಶ್ರೀಶೈಲ ಬಿರಾದಾರ ಜಿಲ್ಲೆಯಲ್ಲಿನ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ಆಗ ಅಂತೋಣಿ ಸೆಬಾಸ್ಟಿಯನ್ ಅವರು ಡಿಸಿ, ಜಿಪಂ ಸಿಇಒ, ಎಸ್‌ಪಿ., ಸಿಡಬ್ಲ್ಯುಸಿ, ಡಿಸಿಪಿಒ ಹಾಗೂ ಮಕ್ಕಳೊಂದಿಗೆ ಚರ್ಚಿಸಿ ಮಕ್ಕಳ ಸ್ನೇಹಿ ಕ್ರಿಯಾ ಯೋಜನೆ ರೂಪಿಸಿ ಈ ಕುರಿತಂತೆ 20 ದಿನದೊಳಗೆ ಆಯೋಗಕ್ಕೆ ವರದಿ ಸಲ್ಲಿಸಿ ಎಂದು ಡಿಡಿಪಿಐಗೆ ಸೂಚಿಸಿದರು.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಶಾಲೆಯಲ್ಲಿ ಕಡಿಮೆ ಹಾಜರಾತಿ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಇದರಿಂದ ವಿದ್ಯಾರ್ಥಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಪ್ರಕರಣದ ಕ್ರಮ ಕೈಗೊಳ್ಳಿ ಎಂದು ವಿದ್ಯಾರ್ಥಿನಿಯೊಬ್ಬಳು ಆಗ್ರಹಿಸಿದಳು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು ಪ್ರಕರಣ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ರಾಯಚೂರು ಡಿಸಿಪಿಒ ಮತ್ತು ಸಿಡಬ್ಲ್ಯುಸಿ ಸಮಿತಿಗೆ ನಿರ್ದೇಶನ ನೀಡಿದರು.
ರಾಯಚೂರು ಜಿಲ್ಲೆಯ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರ ಜೊತೆಗೆ ಅಪೌಷ್ಟಿಕ ನಿವಾರಣೆಗೆ ವಿಶೇಷ ಯೋಜನೆ ಹಾಕಿಕೊಳ್ಳಬೇಕು. ಅತಿಥಿ ಶಿಕ್ಷಕರ ಬದಲಾಗಿ ಆಂಗ್ಲ, ಗಣಿತ ಮತ್ತು ವಿಜ್ಞಾನ ಶಿಕ್ಷಕರನ್ನು ಕಾಯಂ ಆಗಿ ನೇಮಿಸಬೇಕು ಎಂದು ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದರು.
ಕಲಬುರಗಿ, ಬೀದರ್, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹೇಳಿಕೊಂಡು ಪರಿಹರಿಸಲು ಆಯೋಗದ ಅಧ್ಯಕ್ಷರಿಗೆ ಮನವಿ ಮಾಡಿದರು. ಎಲ್ಲ ಜಿಲ್ಲೆಗಳಿಂದ ಸುಮಾರು 800ಕ್ಕೂ ಹೆಚ್ಚಿನ ಸಮಸ್ಯೆಗಳು ಆಯೋಗದ ಮುಂದೆ ಬಂದವು. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರವನ್ನು ರವಾನಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ 15 ದಿನದೊಳಗೆ ಆಯೋಗಕ್ಕೆ ವರದಿ ಸಲ್ಲಿಸುವಂತೆ ಅಂತೋಣಿ ಸೆಬಾಸ್ಟಿಯನ್ ಸೂಚಿಸಿದರು.
ಅಧಿಕಾರಿಗಳ ತರಾಟೆ: ಎಚ್ಐವಿ ಪೀಡಿತ ಮಕ್ಕಳಿಗೆ ಸಹಾಯಧನ ನೀಡದ ಸಂಬಂಧ ಕಲಬುರಗಿ ಜಿಲ್ಲೆಯ ಅಧಿಕಾರಿಗಳಿಗೆ ಆಯೋಗದ ಅಧ್ಯಕ್ಷ ಅಂತೋಣಿ ಸೆಬಾಸ್ಟಿಯನ್ ತರಾಟೆ ತೆಗೆದುಕೊಂಡರು.
ಜಿಲ್ಲೆಯಲ್ಲಿ 2016ರಿಂದ ಎಚ್ಐವಿ ಪೀಡಿತ 213 ಮಕ್ಕಳಿಗೆ ಆರೋಗ್ಯ ಚಿಕಿತ್ಸೆಗೆ ನೀಡುವ ತಲಾ 1,000 ರೂ. ಬಿಡುಗಡೆಯಾಗಿಲ್ಲ ಎಂದು ದಿವ್ಯ ಜೀವನ ನೆಟ್ವರ್ಕ್ ಸಂಸ್ಥೆಯ ಪ್ರತಿನಿಧಿಗಳು ದೂರಿದ್ದರು. ಆಗ ಅಧ್ಯಕ್ಷರು, ಎಚ್ಐವಿ ಪೀಡಿತ ಮಕ್ಕಳ ವಿಷಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಸಲ್ಲದು. ಕೂಡಲೇ ಮಕ್ಕಳಿಗೆ ಸಿಗಬೇಕಾದ ಹಣ ಪಾವತಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭೀಮರಾಯ ಅವರಿಗೆ ಸೂಚಿಸಿದರು.
ಸಂವಾದದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಎಸ್‌ಟಿಇ ಮಕ್ಕಳ ಆರೋಗ್ಯಾಧಿಕಾರಿ ಶೈಸ್ತಾ ಕೆ.ಶಾ., ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕನ್ಸ್‌ಲೆrಂಟ್ ರಾಘವೇಂದ್ರ ಭಟ್, ಧಾರವಾಡ ಸಿಡಬ್ಲ್ಯುಸಿ ಅಧ್ಯಕ್ಷ ಅಶೋಕ ಯರಗಟ್ಟಿ, ಅಪರ ಜಿಲ್ಲಾಧಿಕಾರಿ ಬಿ.ಶರಣಪ್ಪ, ಕಲಬುರಗಿ ವಿಭಾಗದ ಆರು ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರೀನಾ ಡಿಸೋಜಾ, ವಿಜಯಲಕ್ಷ್ಮೀ ಎಸ್.ಎಂ., ನಿಲೋಫರ್ ರಾಂಪೂರಿ, ಮಂಗಳಾ ಹೆಗಡೆ, ಕವಿತಾ ಹುಷಾರೆ, ಹನುಮಂತ ಕರೆಡ್ಡಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಮಕ್ಕಳ ಹಕ್ಕುಗಳ ಕ್ಲಬ್ ಸದಸ್ಯರು ಮತ್ತು ಮಕ್ಕಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.