ಮುಂಗಾರು ಪ್ರವಾಸಕ್ಕೆ ಮತ್ತೂಂದು ವಿಳಾಸ ಹೊಸಗುಂದ
Team Udayavani, Jul 7, 2019, 5:00 AM IST
ಮಳೆ ಅಂದ್ರೆ ಇಷ್ಟ. ಆದರೆ, ಬೆಂಗಳೂರಿನ ಮಳೆ ಅಂದ್ರೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಕಿರಿಕಿರಿ. ರಸ್ತೆ ಮೇಲೆ ನದಿಗಳ ಹಾಗೆ ಪ್ರವಹಿಸುವ ನೀರು, ಡ್ರೈನೇಜಿನ ದುರ್ವಾಸನೆ, ಅಯ್ಯೋ ಬೇಡಪ್ಪಾ ಮಳೆ ಅನ್ನಿಸುತ್ತದೆಯೇ? ಬಾಲ್ಯದಲ್ಲಿ ಅನುಭವಿಸಿದ ಹಾಗೆ ಮಳೆಯನ್ನು ಸಂಭ್ರಮಿಸಿ, ಮಳೆ ನೀರಲ್ಲಿ ತೊಯ್ದು ತೊಪ್ಪೆ ಆಗಬೇಕೆ? ಹಾಗಿದ್ದರೆ ತಡವೇಕೆ?
ಮಲೆನಾಡಿನಲ್ಲಿ ಮುಂಗಾರು ಮಳೆ ಅನುಭವಿಸಲು ಇದು ಸಕಾಲ. ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ- ಹಳ್ಳಕೊಳ್ಳಗಳು ತುಂಬಿ ಹರಿಯಲಾರಂಭಿಸಿವೆ. ಎಲ್ಲೆಡೆ ಹಚ್ಚಹಸಿರಿನ ತೋರಣ ಸಿದ್ಧಗೊಂಡಿದೆ. ಮುಂಗಾರು ಮಳೆಯ ಜತೆಗೆ ಒಂದಿಷ್ಟು ಪುಷ್ಕರಿಣಿಗಳು, ಸಾವಿರಾರು ವರ್ಷಗಳ ಹಿಂದಿನ ದೇಗುಲ ಸಮುತ್ಛಯ, 600 ಎಕರೆಗೂ ಹೆಚ್ಚು ವಿಸ್ತೀರ್ಣದ ದೇವರಕಾಡು, ಸುತ್ತ ನೂರಾರು ಕಾಡು ಪ್ರಾಣಿಗಳು- ಇದ್ದರೆ ! ಹೌದು, ಈ ಮುಂಗಾರು ಪ್ರವಾಸೋದ್ಯಮಕ್ಕೆ ಈ ಬಾರಿ ವಿಳಾಸವೊಂದರ ಸೇರ್ಪಡೆಯಾಗಿದೆ. ಅದೇ ಸಾಗರ ತಾಲೂಕಿನ ಜೋಗದಿಂದ ಅನತಿ ದೂರದಲ್ಲಿರುವ ಹೊಸಗುಂದ. ಮಂಜು ಮುಸುಕಿದ ಆಗುಂಬೆಯ ಮಳೆಯಲ್ಲಿ ನೆನೆದು, ಜೋಗದ ಧಾರೆಯನ್ನು ಕಣ್ತುಂಬಿ, ಹಾಗೇ ಮುಂದೆ ಸಾಗರದಿಂದ 17 ಕಿ.ಮೀ. ಅಂತರದಲ್ಲಿರುವ ಹೊಸಗುಂದವನ್ನೂ ನೋಡಿ ಬರಬಹುದು. ಸಸ್ಯಶ್ಯಾಮಲೆಯ ಮಡಿಲಲ್ಲಿರುವ ಹೊಸಗುಂದದ ಇತಿಹಾಸ ಪ್ರಸಿದ್ಧ ಉಮಾಮಹೇಶ್ವರ ದೇವಾಲಯ, ಅಲ್ಲಿನ ಸಾವಿರಾರು ವರ್ಷ ಹಳೆಯ ದೇವರ ಕಾಡು, ತುಂಬಿ ಹರಿಯುತ್ತಿರುವ ಪುಷ್ಕರಣಿ ನೋಡಿ ಮನದುಂಬಿಕೊಳ್ಳಬಹುದು.
ರಾಜಮನೆತನಗಳಿದ್ದವಂತೆ !
ಸುಮಾರು 11 ಮತ್ತು 13 ನೇ ಶತಮಾನದಲ್ಲಿ ಇಲ್ಲಿ ಹೊಸಗುಂದ ರಾಜರು ಆಳ್ವಿಕೆ ನಡೆಸಿದ್ದರು ಎಂದು ಇತಿಹಾಸದ ಪುಟಗಳು ವಿವರಣೆ ನೀಡುತ್ತವೆ. ಕಾಲಕ್ರಮೇಣ ಹೊಸಗುಂದ ರಾಜ ಮನೆತನ ಅವಸಾನದಂಚಿಗೆ ತಲುಪಿತು ಮತ್ತು ಅಲ್ಲಿನ ಪ್ರಜೆಗಳು ವಿವಿಧ ಭಾಗಗಳಿಗೆ ವಲಸೆ ಹೋದರು. ಇಲ್ಲಿನ ರಾಜಮನೆತನದ ಪ್ರಸಿದ್ಧ ದೇವಾಲಯ, ಚರಿತ್ರೆಯಲ್ಲಿ ಮೆರೆದ ರಾಜವಂಶದ ಕುರುಹುಗಳು ಅನಾಥವಾದವು. ವಿಶಿಷ್ಟ ವಾಸ್ತು ಶಿಲ್ಪ ಮತ್ತು ನೈಜತೆಯಿಂದ ಕೂಡಿದ್ದ ದೇಗುಲ ಮೂಲೆಗುಂಪಾಗಿತ್ತು. ಕಾಡಿನಲ್ಲಿದ್ದ ದೇಗುಲ ಸೂಕ್ತ ಪೂಜೆ-ಪುನಸ್ಕಾರಗಳಿಲ್ಲದೆ ಬೀಡಾಡಿ ದನಗಳ ಬೀಡಾಗಿತ್ತು. ನಂತರ 1991ರಲ್ಲಿ ಸಿಎಮ…ಎನ್ ಶಾಸ್ತ್ರಿ ಮತ್ತು ಶೋಭಾ ಶಾಸ್ತ್ರಿ ದಂಪತಿಗಳ ಕಣ್ಣಿಗೆ ಬಿದ್ದ ಈ ದೇಗುಲ ಮರುಹುಟ್ಟು ಪಡೆಯಿತು. ಈಗ ಇದು ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಆಧ್ಯಾತ್ಮಿಕ ಪ್ರವಾಸಿ ತಾಣವಾಗಿ ರೂಪುಗೊಂಡಿದೆ.
ಹೊಸಗುಂದ ಗ್ರಾಮದ ವಿಶೇಷತೆ ಎಂದರೆ, ಇಲ್ಲಿ ಪ್ರವಾಸೋದ್ಯಮದ ಜತೆಗೆ ಸುಸ್ಥಿರ ಅಭಿವೃದ್ಧಿಯ ಪಾಠಗಳನ್ನು ಕೂಡಾ ಪ್ರವಾಸಿಗರು ಕಲಿಯಬಹುದು. 2009ರಲ್ಲಿ ಸುಮಾರು 600 ಎಕರೆ ಪ್ರದೇಶ ಗ್ರಾಮ ಅರಣ್ಯ ಸಮಿತಿ ಮತ್ತು ಊರಿನವರ ಸತತ ಪ್ರತಿಶ್ರಮದ ಫಲವಾಗಿ ದೇವರಕಾಡು ಎಂದು ಘೋಷಿಸಲ್ಪಟ್ಟಿತು. ಕುವೆಂಪು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಇಲ್ಲಿ 360 ಸಸ್ಯ ಪ್ರಭೇದಗಳನ್ನು ಗುರುತಿಸಿದ್ದಾರೆ.
ಆದರೆ, ಊರಿನವರ ಉತ್ಸಾಹ ಇಲ್ಲಿಗೇ ನಿಲ್ಲುವುದಿಲ್ಲ. ಕಾಡನ್ನು ಇನ್ನಷ್ಟು ಬೆಳೆಸುವ ಉತ್ಸಾಹದಿಂದ ಅವರು ಸಸ್ಯ ಅಭಿವೃದ್ಧಿಗಾಗಿ ಪಂಚವಾರ್ಷಿಕ ಯೋಜನೆಗಳನ್ನು ಹಮ್ಮಿಕೊಳ್ಳುತ್ತಾರೆ. ದೇಶದಾದ್ಯಂತ ಸಂಚರಿಸಿ ಕೃಷಿ ವಿಜ್ಞಾನಿಗಳನ್ನು ಭೇಟಿ ಮಾಡಿ ಅಳಿವಿನ ಭೀತಿಯನ್ನು ಎದುರಿಸುತ್ತಿರುವ ಸಸ್ಯಪ್ರಭೇಧಗಳನ್ನು ಗುರುತಿಸುತ್ತಾರೆ. ಈ ಪ್ರಭೇದಗಳನ್ನು ತಂದು ನರ್ಸರಿಯಲ್ಲಿ ಪೋಷಿಸಿ, ಬೆಳೆಸಿ ನಂತರ ಪ್ರತೀ ಪ್ರಭೇಧದ 108 ಸಸ್ಯಗಳನ್ನು ದೇವರಕಾಡಿನಲ್ಲಿ ಪಾತಿ ಮಾಡುತ್ತಾರೆ. ಮಳೆನೀರು ಕೊಯಿಲಿನಿಂದ ಇಲ್ಲಿನ ಅಂತರ್ಜಲದ ಪ್ರಮಾಣ ಹೆಚ್ಚಾಗಿದ್ದು, ರೈತರು ಎರಡು ಬೆಳೆ ಬೆಳೆಯುವಷ್ಟು ಸಮರ್ಥರಾಗಿದ್ದಾರೆ.
ಪ್ರಕೃತಿಯ ಮಡಿಲಲ್ಲಿ ಒಂದಷ್ಟು ಸ್ವಂತಿಗಳನ್ನು ಕ್ಲಿಕ್ಕಿಸಿ, ಫೋಟೋಗಳನ್ನು ಸಾಮಾಜಿಕ ಜಾಲತಾಣ ದಲ್ಲಿ ಹರಿಯಬಿಟ್ಟರೆ ಲೈಕುಗಳಿಗೆ ಖಂಡಿತ ಭರವಿಲ್ಲ.
ಶ್ರೀನಿಧಿ ಅಡಿಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.