ಜಪಾನಿನ ಕತೆ ನಾಯಿ ತಂದ ಭಾಗ್ಯ
Team Udayavani, Jul 7, 2019, 5:00 AM IST
ಹಳ್ಳಿಯೊಂದರಲ್ಲಿ ಶಿರೋ ಎಂಬ ಬಡವ ಪತ್ನಿಯೊಂದಿಗೆ ವಾಸವಾಗಿದ್ದ. ಈ ದಂಪತಿಗೆ ಮಕ್ಕಳಿರಲಿಲ್ಲ. ಒಂದು ನಾಯಿಯನ್ನು ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಸಾಕಿಕೊಂಡಿದ್ದರು. ತಮ್ಮ ಜೊತೆಗೇ ಅದಕ್ಕೆ ಊಟ, ಸ್ನಾನ ಎಲ್ಲವನ್ನೂ ಮಾಡಿಸುತ್ತಿದ್ದರು. ನಾಯಿ ಅವರ ಪಕ್ಕದಲ್ಲೇ ಮಲಗಿಕೊಳ್ಳುತ್ತಿತ್ತು. ಹೀಗಿರುವಾಗ ಬಡವನಿಗೆ ಎಲ್ಲಿಯೂ ಕೆಲಸ ಸಿಗಲಿಲ್ಲ. ಮನೆಯಲ್ಲಿದ್ದ ಆಹಾರ ಪದಾರ್ಥಗಳು ಖಾಲಿಯಾಗಿದ್ದವು. ಹೆಂಡತಿ, “”ಊಟವಿಲ್ಲದೆ ಉಪವಾಸ ಬೀಳುವ ಸ್ಥಿತಿ ಬಂದಿದೆ. ಕಾಡಿಗೆ ಹೋಗಿ ಸ್ವಲ್ಪ ಗೆಡ್ಡೆಗೆಣಸುಗಳನ್ನಾದರೂ ಅಗೆದು ತಂದರೆ ಅದನ್ನು ಬೇಯಿಸಿ ತಿಂದು ಹೊಟ್ಟೆ ತುಂಬಿಸಿಕೊಳ್ಳಬಹುದಲ್ಲವೆ?” ಎಂದು ಹೇಳಿದಳು. ಶಿರೋ ಗುದ್ದಲಿ ತೆಗೆದುಕೊಂಡು ಕಾಡಿಗೆ ಹೊರಟ. ನಾಯಿಯು ಅವನನ್ನು ಹಿಂಬಾಲಿಸಿಕೊಂಡು ಹೋಯಿತು.
ಕಾಡಿನಲ್ಲಿ ಶಿರೋ ಗೆಣಸಿನ ಬಳ್ಳಿ ಹುಡುಕುವಾಗ ನಾಯಿ ಒಂದೆಡೆ ಮೂಸಿ ಮೂಸಿ ನೋಡುತ್ತ ಶಿರೋನ ಬಳಿಗೆ ಬಂದಿತು. ಆ ಜಾಗಕ್ಕೆ ಬರುವಂತೆ ಅವನ ಬಟ್ಟೆಯನ್ನು ಕಚ್ಚಿ ಎಳೆಯಿತು. ಅದು ಕೈಯ ಉಗುರಿನಿಂದ ನೆಲವನ್ನು ಗೀಚಿ ತೋರಿಸಿದ ಜಾಗದಲ್ಲಿ ಶಿರೋ ಗುದ್ದಲಿಯಿಂದ ಅಗೆದ. ಆಗ ಅವನ ಕಣ್ಣುಗಳನ್ನೇ ನಂಬಲಾಗದಂತಹ ಅಚ್ಚರಿಯೊಂದು ಕಾಣಿಸಿತು. ನಾಯಿ ತೋರಿಸಿದ ಜಾಗದಲ್ಲಿ ಹೇರಳ ಬಂಗಾರದ ನಾಣ್ಯಗಳು ರಾಶಿ ಬಿದ್ದಿದ್ದವು. ಶಿರೋ ಅದೆಲ್ಲವನ್ನೂ ಬಟ್ಟೆಯಲ್ಲಿ ಗಂಟು ಕಟ್ಟಿಕೊಂಡು ಮನೆಗೆ ಬಂದ. ಅದನ್ನು ಉಪಯೋಗಿಸಿ ಹೊಸ ಮನೆ ಕಟ್ಟಿಸಿದ. ಆಸ್ತಿಪಾಸ್ತಿಗಳನ್ನು ತೆಗೆದುಕೊಂಡ.
ನೆರೆಮನೆಯಲ್ಲಿ ಯನೋಕಿ ಎಂಬ ಕೆಟ್ಟ ಮನುಷ್ಯನಿದ್ದ. ಅವನ ದುಷ್ಟತನ ನೋಡಲಾಗದೆ ಹೆಂಡತಿ, ಮಕ್ಕಳು ಮನೆ ಬಿಟ್ಟು ಹೋಗಿದ್ದರು. ಬೇರೆಯವರಿಗೆ ಏನಾದರೂ ಲಾಭವಾದರೆ ಒಂದಿಷ್ಟು ಕೂಡ ಸಹಿಸುವ ಶಕ್ತಿ ಅವನಿಗೆ ಇರಲಿಲ್ಲ. ಪಕ್ಕದ ಮನೆಯಲ್ಲಿರುವ ಶಿರೋ ಊಟಕ್ಕೂ ಇಲ್ಲದೆ ಕಷ್ಟಪಡುವವನು ಇದ್ದಕ್ಕಿದ್ದಂತೆ ಧನಿಕನಾದುದನ್ನು ಕಣ್ಣಾರೆ ಕಂಡಾಗ ಅವನಿಗೆ ಆದ ಅಸೂಯೆ ಸಣ್ಣದಲ್ಲ. ನೇರವಾಗಿ ಶಿರೋ ಮನೆಗೆ ಬಂದ. “”ಏನಿದು, ಹೊಸ ಮನೆ, ಹೊಸ ಹೊಲ? ದುಡಿಮೆಯ ಹಣದಿಂದ ಇಷ್ಟೆಲ್ಲ ಖರೀದಿ ಮಾಡಲು ಸಾಧ್ಯವಿಲ್ಲ. ಎಲ್ಲಿಂದ ಬಂತು ಇಂತಹ ಸಿರಿತನ? ಸತ್ಯ ಹೇಳಿದರೆ ಸಂತೋಷಪಟ್ಟು ಹೋಗುತ್ತೇನೆ. ಸುಳ್ಳು ಹೇಳಿದರೆ ಯಾರದೋ ಹಣಕ್ಕೆ ಕೈ ಕೊಟ್ಟಿರುವುದನ್ನು ಆಳುವ ದೊರೆಯ ಗಮನಕ್ಕೆ ತರುತ್ತೇನೆ” ಎಂದು ಪಟ್ಟು ಹಿಡಿದು ನಿಂತ.
“”ಅಯ್ಯೊ, ಸುಳ್ಳು ಹೇಳಿ ನನಗೇನಾಗಬೇಕಾಗಿದೆ? ಎಲ್ಲವೂ ನನ್ನ ನಾಯಿ ತೋರಿಸಿಕೊಟ್ಟದ್ದು” ಎಂದು ಶಿರೋ ಏನನ್ನೂ ಮುಚ್ಚಿಡದೆ ನಡೆದಿದ್ದ ಎಲ್ಲ ವಿಚಾರ ಹೇಳಿದ. ಯನೋಕಿ, “”ಹಾಗೋ ವಿಷಯ! ನೀನು ಶ್ರೀಮಂತನಾದರೆ ಸಾಕೆ? ನನಗೂ ಅಂತಹ ಆಸೆಯಿದೆ. ನಿನ್ನ ನಾಯಿಯನ್ನು ಒಂದು ಸಲ ನನಗೆ ಕೊಡು. ನಾನು ಅದರ ಜಾಣತನದಿಂದ ನಾಣ್ಯಗಳನ್ನು ಸಂಪಾದಿಸಿ, ಮರಳಿ ನಿನ್ನ ಬಳಿಗೆ ತಂದೊಪ್ಪಿಸುತ್ತೇನೆ” ಎಂದು ಕೇಳಿದ. ಒಳ್ಳೆಯವನಾದ ಶಿರೋ ಮರುಮಾತಾಡದೆ ನಾಯಿಯನ್ನು ಅವನ ಜೊತೆಗೆ ಕಳುಹಿಸಿಕೊಟ್ಟ.
ಕತ್ತಲಾದರೂ ನಾಯಿ ಮನೆಗೆ ಮರಳಲಿಲ್ಲ. ಶಿರೋ ಅದನ್ನು ಹುಡುಕಿಕೊಂಡು ಯನೋಕಿ ಮನೆಗೆ ಹೋದ. “”ಅಣ್ಣ, ನನ್ನ ನಾಯಿ ಇನ್ನೂ ಮನೆಗೆ ಬಂದಿಲ್ಲ, ಕಳುಹಿಸಿ ಕೊಡುತ್ತೀಯಾ?” ಎಂದು ಕೇಳಿದ. ಯನೋಕಿ, “”ಇನ್ನೆಲ್ಲಿ ಬರುತ್ತದೆ? ಒಂದೇ ಏಟಿಗೆ ಮೇಲಿನ ಲೋಕಕ್ಕೆ ಕಳುಹಿಸಿಬಿಟ್ಟೆ. ಕೆಟ್ಟ ನಾಯಿ! ನನಗೂ ಬಂಗಾರದ ನಾಣ್ಯಗಳನ್ನು ತೋರಿಸು ಎಂದು ಹೇಳಿದರೆ ಅದು ಮೂಸಿ, ಕಾಲಿನಿಂದ ಕೆರೆದು ತೋರಿಸಿದ ಜಾಗ ಅಗೆದಾಗ ಸಿಕ್ಕಿದ್ದು ಬರೇ ಎಲುಬುಗಳು! ಹಾಗಾಗಿ ಕೊಂದುಹಾಕಿದೆ. ಅದೋ ಅಲ್ಲಿ ಅದರ ಹೆಣ ಇದೆ” ಎಂದು ಕೋಪದಿಂದ ಹೇಳಿದ.
ನಾಯಿಗಾಗಿ ರೋದಿಸುತ್ತ ಶಿರೋ ಹೋಗಿ ನೋಡಿದಾಗ ನಾಯಿಯ ಶವ ಕಾಣಿಸಿತು. ಅದನ್ನು ಹೊತ್ತು ತಂದು ಮನೆಯ ಅಂಗಳದಲ್ಲಿ ಗುಂಡಿ ತೆಗೆದು ಹೂಳಿದ. ಮರುದಿನ ನೋಡಿದಾಗ ಆ ಗುಂಡಿಯಲ್ಲಿ ಒಂದು ಗಿಡ ಹುಟ್ಟಿಕೊಂಡಿರುವುದು ಗೋಚರಿಸಿತು. ಕೆಲವು ದಿನಗಳಲ್ಲಿ ಗಿಡ ಮರವಾಗಿ ಬೆಳೆಯಿತು. ಒಂದು ದಿನ ಬಲವಾಗಿ ಗಾಳಿ ಬೀಸಿತು. ಮರದ ಒಂದು ದೊಡ್ಡ ಕೊಂಬೆ ಮುರಿದು ಕೆಳಗೆ ಬಿದ್ದಿತು. ಶಿರೋ ಬಡಗಿಗೆ ಹೇಳಿ ಆ ಕೊಂಬೆಯಿಂದ ಒಂದು ಪಾತ್ರೆ ಮಾಡಿಸಿ ಮನೆಗೆ ತಂದ. ಆಗ ಅವನಿಗೆ ಪಾತ್ರೆಗೆ ಒಂದು ವಿಶೇಷ ಶಕ್ತಿ ಇದೆಯೆಂಬುದು ಗೊತ್ತಾಯಿತು. ಪಾತ್ರೆಯೊಳಗೆ ಧಾನ್ಯವನ್ನಾಗಲಿ, ಹಣವನ್ನಾಗಲಿ ಹಾಕಿದರೆ ಸಂಜೆಯಾಗುವ ವರೆಗೂ ರಾಶಿ ರಾಶಿಯಾಗಿ ಕೆಳಗೆ ಬೀಳುತ್ತಿತ್ತು. ಇದರಿಂದ ಶಿರೋ ಸಂತೋಷಪಟ್ಟು ಅಕ್ಕಪಕ್ಕದ ಜನರಿಗೆಲ್ಲ ಹಂಚತೊಡಗಿದ.
ಈ ವಿಷಯ ಯನೋಕಿಯ ಗಮನಕ್ಕೆ ಬಂದ ಕೂಡಲೇ ಶಿರೋ ಮನೆಗೆ ಬಂದೇಬಿಟ್ಟ. ಒಂದು ದಿನದ ಮಟ್ಟಿಗೆ ಪಾತ್ರೆಯನ್ನು ಎರವಲು ಕೊಡಬೇಕೆಂದು ಕೇಳಿದ. “”ಆಗಲಿ ಅಣ್ಣ. ಆದರೆ ನೀನು ಉಪಯೋಗಿಸಿದ ಬಳಿಕ ಪಾತ್ರೆಯನ್ನು ಜೋಪಾನವಾಗಿ ತಂದು ನನಗೆ ಕೊಟ್ಟುಬಿಡು. ಅದರಿಂದಾಗಿ ತುಂಬ ಜನರಿಗೆ ಅನುಕೂಲವಾಗಬೇಕಾಗಿದೆ” ಎಂದು ನೆನಪು ಮಾಡಿ ಶಿರೋ ಪಾತ್ರೆಯನ್ನು ಅವನ ಕೈಗೆ ತಂದುಕೊಟ್ಟ. ಆದರೆ ಯನೋಕಿ ಪಾತ್ರೆಯನ್ನು ಮರಳಿ ತರಲಿಲ್ಲ. ತಾನೇ ತಂದರಾಯಿತು ಎಂದು ಶಿರೋ ಅವನ ಮನೆಗೆ ಹೋದ. ಯನೋಕಿ ಒಂದು ಬೆಂಕಿಯ ರಾಶಿಯಲ್ಲಿ ಮುರಿದು ತುಂಡಾದ ಪಾತ್ರೆಯನ್ನು ಸುಡುತ್ತ ಇದ್ದ. ಶಿರೋನನ್ನು ಕಂಡ ಕೂಡಲೇ ಕೋಪದಿಂದ, “”ನಿನ್ನ ಪಾತ್ರೆಯಲ್ಲಿ ನೀನು ಹಾಕಿದರೆ ಹಣ, ಧಾನ್ಯ ರಾಶಿ ಬೀಳುವುದಂತೆ, ನಾನು ಏನಾದರೂ ಹಾಕಿದರೆ ಕಪ್ಪೆಗಳು, ಚೇಳುಗಳು ರಾಶಿ ಬೀಳಬೇಕೆ? ಅನಿಷ್ಟದ ಪಾತ್ರೆ ಇರಲೇಬಾರದೆಂದು ತುಂಡು ಮಾಡಿ ಸುಟ್ಟುಬಿಟ್ಟೆ ನೋಡು” ಎಂದು ಹಲ್ಲು ಕಡಿದ ಯನೋಕಿ.
ಜೀವನಕ್ಕೆ ಆಧಾರವಾಗಿದ್ದ ಪಾತ್ರೆಯೂ ನಾಶವಾದುದು ನೋಡಿ ಶಿರೋ ತುಂಬ ದುಃಖೀಸಿದ. ಆದರೆ ಏನೂ ಹೇಳದೆ ಪಾತ್ರೆಯನ್ನು ಸುಟ್ಟಿದ್ದ ಬೂದಿಯನ್ನು ಬಟ್ಟೆಯಲ್ಲಿ ಕಟ್ಟಿಕೊಂಡು ಮನೆಗೆ ಬಂದ. ಪ್ರೀತಿಯ ನಾಯಿಯ ನೆನಪಿಗಾಗಿ ಎಂದು ಬೂದಿಯನ್ನು ಅಂಗಳಲ್ಲಿರುವ ಎಲ್ಲ ಗಿಡಗಳ ಬುಡಕ್ಕೂ ಸ್ವಲ್ಪ ಸ್ವಲ್ಪ ಹಾಕಿದ. ಮರುದಿನ ಬೆಳಗಾದಾಗ ಅವನಿಗೆ ಒಂದು ಅಚ್ಚರಿಯ ಸಂಗತಿ ಕಾದಿತ್ತು. ಬೂದಿಯನ್ನು ಹಾಕಿದ್ದ ಎಲ್ಲ ಗಿಡಗಳೂ ಅಕಾಲದಲ್ಲಿ ಚಿಗುರೊಡೆದು ಹೂ, ಕಾಯಿ ಹಣ್ಣು ತುಂಬಿ ನೆಲದ ತನಕ ಬಾಗಿದ್ದವು. ಶಿರೋ ಹೆಂಡತಿಯನ್ನು ಕರೆದು ಈ ವಿಷಯವನ್ನು ಅವಳಿಗೂ ಹೇಳಿದ. “”ನೋಡಿದೆಯಾ, ನಮ್ಮ ನಾಯಿ ಸತ್ತುಹೋದರೂ ನಮಗೆ ಒಳ್ಳೆಯದನ್ನೇ ಮಾಡುತ್ತಿದೆ. ಅದರ ಬೂದಿ ತಗುಲಿದರೆ ಸಾಕು, ಒಣಮರ, ಗಿಡಗಳೂ ಚಿಗುರಿ ಹೂ, ಹಣ್ಣು ಬಿಡುತ್ತವೆ ಎಂದರೆ ಅದಕ್ಕಿಂತ ಅದ್ಭುತ ಸಂಗತಿ ಇನ್ನೇನಿದೆ?” ಎಂದು ಸಂತೋಷವನ್ನು ಹಂಚಿಕೊಂಡ.
ಶಿರೋ ಅಕಾಲದಲ್ಲಿ ಮರಗಿಡಗಳ ತುಂಬ ಹೂ, ಹಣ್ಣುಗಳಾಗುವಂತೆ ಮಾಡುತ್ತಾನೆ ಎಂಬ ವಿಷಯ ಇಡೀ ಊರಿನಲ್ಲಿ ಸುದ್ದಿಯಾಯಿತು. ಗಿಡಗಳನ್ನು ನೆಟ್ಟರೂ ಫಲ ಸಿಗದೆ ಗೋಳಾಡುತ್ತಿದ್ದವರು ಅವನ ಬಳಿಗೆ ಬಂದರು. “”ಅಣ್ಣ, ನಮ್ಮ ಮರಗಳಲ್ಲಿಯೂ ಹಣ್ಣುಗಳಾಗುವಂತೆ ಮಾಡು. ಇದಕ್ಕಾಗಿ ನಿನಗೆ ಪ್ರತಿಫಲವನ್ನೂ ಕೊಡುತ್ತೇವೆ” ಎಂದು ಕೇಳಿಕೊಂಡರು. ಅವನು ಅವರ ಜಮೀನಿಗೂ ಹೋಗಿ ಬೂದಿ ಎರಚಿ ಹಣ್ಣುಗಳಾಗುವಂತೆ ಮಾಡಿದ.
ಈ ವಿಷಯ ತಿಳಿದಾಗ ಯನೋಕಿ ಅಸೂಯೆಯಿಂದ ಬೆಂದುಹೋದ. ತನ್ನ ಅಂಗಳದಿಂದ ಪಾತ್ರೆ ಸುಟ್ಟ ಬೂದಿ ತೆಗೆದುಕೊಂಡು ಹೋಗಿ ಶಿರೋ ಧನಿಕನಾಗುತ್ತಿರುವ ವಿಷಯ ಅವನಿಗೆ ಸಹಿಸಲು ಸಾಧ್ಯವಾಗಲಿಲ್ಲ. ಅದೇ ಸಮಯ ಊರನ್ನಾಳುವ ದೊರೆ ಒಂದು ದೊಡ್ಡ ಉದ್ಯಾನವನದ ತುಂಬ ಬೇರೆ ಬೇರೆ ದೇಶಗಳಿಂದ ಗಿಡ, ಬಳ್ಳಿ, ಮರಗಳನ್ನು ತಂದು ನೆಡಿಸಿದ್ದ. ಆದರೆ ಅದೆಲ್ಲವೂ ಹಸಿರು ತುಂಬಿ ಸೊಂಪಾಗಿ ಬೆಳೆದರೂ ಹೂ ಬಿಡಲಿಲ್ಲ, ಕಾಯಿಗಳಾಗಲಿಲ್ಲ. ಯಾವ ಉಪಚಾರದಿಂದಲೂ ಫಲ ಸಿಗದೆ ಹೋದುದರಿಂದ ದೊರೆಗೆ ಬೇಸರವಾಯಿತು. “”ಇಲ್ಲಿರುವ ಮರಗಿಡಗಳಲ್ಲಿ ಹೂ, ಕಾಯಿಗಳು ತುಂಬುವಂತೆ ಮಾಡಿದವರಿಗೆ ಅರ್ಧ ರಾಜ್ಯವನ್ನು ಕೊಡುತ್ತೇನೆ” ಎಂದು ಡಂಗುರ ಸಾರಿಸಿದ.
ಯನೋಕಿ ಡಂಗುರವನ್ನು ಕೇಳಿ ಸಂಭ್ರಮದಿಂದ ಕುಣಿದಾಡಿದ. ಪಾತ್ರೆಯನ್ನು ಸುಟ್ಟ ಬೂದಿ ಇನ್ನೂ ಅವನ ಅಂಗಳದಲ್ಲಿತ್ತು. ಇದರಿಂದ ದೊರೆಯ ಉದ್ಯಾನದಲ್ಲಿ ಹೂ, ಹಣ್ಣುಗಳಾಗುವಂತೆ ಮಾಡಿ ಬಹುಮಾನ ಗಿಟ್ಟಿಸಬೇಕೆಂದು ನಿರ್ಧರಿಸಿದ. ಬೂದಿಯನ್ನು ತೆಗೆದುಕೊಂಡು ದೊರೆಯ ಬಳಿಗೆ ಹೋದ. “”ಶಿರೋ ಎಂಬವನು ಬೂದಿ ಎರಚಿ ಗಿಡಗಳಲ್ಲಿ ಫಲಗಳಾಗುವಂತೆ ಮಾಡುತ್ತಿದ್ದಾನೆಂಬ ಸುದ್ದಿ ಕೇಳಿದೆ. ನೀನು ಅವನೇ ತಾನೆ?” ಎಂದು ದೊರೆ ಪ್ರಶ್ನಿಸಿದ. ಯನೋಕಿ, “”ಅವನೆಲ್ಲಿ ನಾನೆಲ್ಲಿ! ನನ್ನಿಂದ ಬೂದಿ ತೆಗೆದುಕೊಂಡು ಹೋಗಿ ಅವನು ಎಲ್ಲೋ ಒಂದೆರಡು ಕಡೆ ಒಂದಿಷ್ಟು ಹೂ ಬರುವಂತೆ ಮಾಡಿದ. ಆದರೆ ನಾನು ಹಾಗಲ್ಲ, ನಿಮ್ಮ ಇಡೀ ಉದ್ಯಾನವನದಲ್ಲಿ ಅದ್ಭುತ ಬದಲಾವಣೆ ಮಾಡುತ್ತೇನೆ” ಎಂದು ಹೇಳಿ ತಂದ ಬೂದಿಯನ್ನು ಎಲ್ಲ ಮರ, ಗಿಡಗಳ ಮೇಲೂ ಎರಚಿದ.
ಮರುಕ್ಷಣವೇ ಬೆಂಕಿ ಹಚ್ಚಿದಂತೆ ಎಲ್ಲ ಸಸ್ಯಗಳೂ ಬಾಡಿ ನೆಲಕ್ಕುರುಳಿದವು. ದೊರೆಗೆ ಸಹಿಸಲಾಗದ ಕೋಪ ಬಂತು. “”ಈ ಧೂರ್ತ ನನ್ನ ಉದ್ಯಾನವನವನ್ನು ನಿರ್ನಾಮ ಮಾಡಿಬಿಟ್ಟ. ಮುಂದೆ ಇವನು ಅಸೂಯೆಯಿಂದ ಯಾರಿಗೂ ಇಂತಹ ತೊಂದರೆ ಕೊಡಬಾರದು. ಇದಕ್ಕಾಗಿ ಇವನನ್ನು ಹಾಗೆಯೇ ಬಿಡಬಾರದು. ಈ ಪಾಪಿಯ ಎರಡು ಕಣ್ಣುಗಳನ್ನೂ ಕಿತ್ತು ಕಳುಹಿಸಿಬಿಡಿ” ಎಂದು ಆಜ್ಞಾಪಿಸಿದ. ಯನೋಕಿ ತನ್ನ ಕೆಟ್ಟತನದಿಂದಾಗಿ ಕುರುಡನಾಗಿ ಮನೆ ಸೇರಿದ.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.