ಜಿಲ್ಲೆಯ ಜನತೆಗೆ ಆಘಾತ ತಂದ ನಾಗೇಶ್ ನಡೆ!
ಇತ್ತೀಚಿಗಷ್ಟೇ ಸಚಿವರಾಗಿದ್ದ ನಾಗೇಶ್ ರಾಜೀನಾಮೆ ನೀಡಿ ಮುಂಬೈಗೆ ಪ್ರಯಾಣ • ಕ್ಷೇತ್ರದ ಜನರ ಆಕ್ರೋಶ
Team Udayavani, Jul 9, 2019, 1:05 PM IST
ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿರುವ ಎಚ್.ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿದರು.
ಕೋಲಾರ: ಮುಳಬಾಗಿಲು ಶಾಸಕ ಎಚ್.ನಾಗೇಶ್ ಅನಿರೀಕ್ಷಿತ ಬೆಳವಣಿಗೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅತೃಪ್ತ ಶಾಸಕ ಬಣ ಸೇರಿಕೊಳ್ಳಲು ಮುಂಬೈ ತಲುಪಿರುವುದು ಜಿಲ್ಲೆಯ ಜನರಿಗೆ ಆಘಾತ ತಂದಿದೆ.
ಜಿಲ್ಲೆಯ ರಾಜಕಾರಣಕ್ಕೆ ಹೊಸಬರಾಗಿರುವ ಎಚ್.ನಾಗೇಶ್ ಕೇವಲ ಒಂದೇ ತಿಂಗಳಿನಲ್ಲಿ ಶಾಸಕರಾಗಿ ಆಯ್ಕೆಯಾಗಿಬಿಟ್ಟಿದ್ದರು. ಆದರೆ, ಶಾಸಕರಾಗಿ ಆಯ್ಕೆಯಾದಾಗಿನಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಎಚ್.ನಾಗೇಶ್ ತುಳಿದಿರುವ ದಾರಿ ರಾಜಕೀಯವಾಗಿ ವಿವಾದಕ್ಕೆ ಕಾರಣವಾಗಿದೆ.
ಅದರಲ್ಲೂ ಆರ್.ವೆಂಕಟರಾಮಯ್ಯ, ಎಂ.ವಿ.ಕೃಷ್ಣಪ್ಪ, ಎಂ.ವಿ.ವೆಂಕಟಪ್ಪ ಮತ್ತು ಆಲಂಗೂರ್ ಶ್ರೀನಿವಾಸ್‌ರನ್ನು ಕೊಟ್ಟಂತಹ ಮುಳಬಾಗಿಲು ಕ್ಷೇತ್ರದಲ್ಲಿ ಆಯ್ಕೆಯಾಗಿರುವ ಎಚ್.ನಾಗೇಶ್, ಕ್ಷಣಕ್ಕೊಂದು ದಿನಕ್ಕೊಂದು ರಾಜಕೀಯ ನಿಲುವುಗಳನ್ನು ತೆಗೆದುಕೊಂಡು ತಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ ದ್ರೋಹ ಬಗೆಯುತ್ತಿದ್ದಾರೆಯೇ ಎಂಬ ಅನುಮಾನವೂ ಕಾಡುವಂತಾಗಿದೆ.
ಅನಿರೀಕ್ಷಿತವಾಗಿ ಆಯ್ಕೆ: ರಾಜ್ಯದ ಮೂಡಣ ದಿಕ್ಕಿನ ಮೊದಲ ಕ್ಷೇತ್ರ ಮುಳಬಾಗಿಲಿನಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೊತ್ತೂರು ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು. ಆದರೆ, ಜಾತಿ ಪ್ರಮಾಣ ಪತ್ರ ವಿವಾದದಲ್ಲಿ ತಿರಸ್ಕೃತಗೊಂಡಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ನಾಮಪತ್ರವೇ ಇಲ್ಲದಂತಾಯಿತು. ಕಣದಲ್ಲಿ ಉಳಿದಿದ್ದವರ ಪೈಕಿ ನಾಮಪತ್ರ ಸಲ್ಲಿಸಿದ್ದ ಎಚ್.ನಾಗೇಶ್, ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್‌ಗೆ ಆಪ್ತರೆಂಬ ಕಾರಣಕ್ಕೆ ಕಾಂಗ್ರೆಸ್ ಬೆಂಬಲಿತ ಪಕ್ಷೇತರರೆಂದು ಆಯ್ಕೆ ಮಾಡಿಕೊಳ್ಳಲಾಯಿತು. ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ರ ಬೆಂಬಲವೂ ಸಿಕ್ಕಿತ್ತು. ಇದರಿಂದ ಕೇವಲ ಒಂದೇ ತಿಂಗಳಲ್ಲಿ ಎಚ್.ನಾಗೇಶ್ ಶಾಸಕರಾಗಿ ಆಯ್ಕೆಬಿಟ್ಟಿದ್ದರು.
ಎಣಿಕೆ ಕೇಂದ್ರದಿಂದಲೇ ಡಿಕೆಶಿ ಸುಪರ್ದಿಗೆ: ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಾರದಿರುವುದರಿಂದ ಪಕ್ಷೇತರರಾಗಿ ಆಯ್ಕೆಯಾದವರಿಗೆ ಕಿಮ್ಮತ್ತು ಹೆಚ್ಚಾಗಿತ್ತು. ಇದನ್ನು ಗ್ರಹಿಸಿದ್ದ ಡಿ.ಕೆ.ಶಿವಕುಮಾರ್ ಮತ ಎಣಿಕೆ ನಡೆಯುತ್ತಿದ್ದ ಕೋಲಾರದ ಬಾಲಕರ ಕಾಲೇಜಿಗೆ ಖುದ್ದು ಆಗಮಿಸಿ ಎಚ್.ನಾಗೇಶ್‌ರನ್ನು ತಮ್ಮೊಂದಿಗೆ ಕರೆದೊಯ್ದಿದ್ದರು. ಮೈತ್ರಿ ಸರಕಾರಕ್ಕೆ ಬೆಂಬಲ ಕೊಡಿಸುವಲ್ಲಿಯೂ ಯಶಸ್ವಿಯಾಗಿದ್ದರು. ಆದರೆ, ಭರವಸೆ ನೀಡಿದಂತೆ ಎಚ್.ನಾಗೇಶ್‌ರಿಗೆ ಮಂತ್ರಿ ಸ್ಥಾನ ಕೊಡಿಸುವಲ್ಲಿ ವಿಫಲವಾಗಿದ್ದರು. ಇದು ಸಹಜವಾಗಿಯೇ ಎಚ್.ನಾಗೇಶ್‌ರ ಅಸಮಾಧಾನಕ್ಕೆ ಕಾರಣವಾಗಿತ್ತು.
ಬಿಜೆಪಿ ಪಾಳೆಯಕ್ಕೆ: ಮಂತ್ರಿ ಸ್ಥಾನ ಸಿಗಲಿಲ್ಲವೆಂದು ಅಸಮಾಧಾನಗೊಂಡಿದ್ದ ಎಚ್.ನಾಗೇಶ್, ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದುಕೊಂಡು ಮುಂಬೈ ಹಾರಿಬಿಟ್ಟಿದ್ದರು. ಆದರೆ, ಆಪರೇಷನ್ ವಿಫಲವಾಗಿದ್ದರಿಂದ ಎಚ್.ನಾಗೇಶ್ ಮತ್ತೆ ವಾಪಸ್ಸಾಗಿದ್ದರು. ಪುನಃ ಹಳೆ ಗಂಡನ ಪಾದವೇ ಗತಿ ಎಂಬಂತೆ ಮೈತ್ರಿ ಸರ್ಕಾರಕ್ಕೆ ಬೆಂಬಲ ವ್ಕಕ್ತಪಡಿಸಿದ್ದರು. ಹಲವು ತಿಂಗಳುಗಳು ಕಾದರೂ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಆದರೆ, ತೀರಾ ಇತ್ತೀಚಿಗೆ ಎಚ್.ನಾಗೇಶ್ ಜೆಡಿಎಸ್ ಕೋಟಾದಲ್ಲಿ ಮಂತ್ರಿಯಾದರು. ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಬಹಿರಂಗವಾಗಿಯೇ ವಿರೋಧಿಸಿದ್ದರು. ಜಿಲ್ಲೆಯ ಇತರೇ ರಾಜಕಾರಣಿಗಳು ಮತ್ತು ಜನತೆಯಿಂದ ಎಚ್.ನಾಗೇಶ್‌ಗೆ ಅಭೂತ ಪೂರ್ವ ಸ್ವಾಗತವೇನು ಸಿಗಲಿಲ್ಲ. ಮಂತ್ರಿಯಾಗಿ 15 ದಿನ ಕಾದ ನಂತರ ವಾರದ ಹಿಂದಷ್ಟೇ ಸಣ್ಣ ಕೈಗಾರಿಕೆ ಸಚಿವರಾಗಿ ಅಧಿಕಾರ ಸ್ಪೀಕರಿಸಿದ್ದರು. ನಾಲ್ಕೈದು ದಿನಗಳ ಹಿಂದಷ್ಟೇ ಸ್ವ ಕ್ಷೇತ್ರದಲ್ಲಿ ಸನ್ಮಾನವನ್ನು ಏರ್ಪಡಿಸಿಕೊಂಡಿದ್ದರು.
ಮತ್ತೆ ವಿದಾಯ: ಇದೀಗ ಅನಿರೀಕ್ಷಿತ ಬೆಳವಣಿಗೆಯಲ್ಲಿ ಎಚ್.ನಾಗೇಶ್ ಸಚಿವ ಸ್ಥಾನಕ್ಕೆ ರಾಜ್ಯಪಾಲರ ಮೂಲಕ ರಾಜೀನಾಮೆ ನೀಡಿ, ವಿಶೇಷ ವಿಮಾನದಲ್ಲಿ ಮುಂಬೈ ತೆರಳಿ ಅತೃಪ್ತರ ಬಣವನ್ನು ಸೇರ್ಪಡೆಯಾಗಿದ್ದಾರೆ. ಎಚ್.ನಾಗೇಶ್‌ರ ಈ ದಿಢೀರ್ ನಿರ್ಧಾರಗಳು ಕೋಲಾರ ರಾಜಕಾರಣದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಮುಳಬಾಗಿಲು ಕ್ಷೇತ್ರ ಸೇರಿದಂತೆ ಜಿಲ್ಲೆಯ ಜನತೆ ಎಚ್.ನಾಗೇಶ್‌ರ ರಾಜಕೀಯ ನಿಲುವುಗಳಿಗೆ ಬೇಸತ್ತಿದ್ದಾರೆ. ಇಂತವರ ಆಯ್ಕೆಗೆ ಕಾರಣಕರ್ತರಾದವರ ಮೇಲೂ ಕಿಡಿಕಾರುತ್ತಿರುವುದು ಕಂಡು ಬರುತ್ತಿದೆ. ರಿಯಲ್ ಎಸ್ಟೇಟ್ ಹಿನ್ನೆಲೆ, ಹಣದ ಥೈಲಿ ತಂದವರನ್ನು ರಾಜಕೀಯ ಪಕ್ಷಗಳು ಹಾಗೂ ಸ್ಥಳೀಯ ಮುಖಂಡರು ಒಪ್ಪಿಕೊಂಡು ಆಯ್ಕೆ ಮಾಡಿಕೊಂಡರೆ ಇಂತದ್ದೇ ಪರಿಸ್ಥಿತಿ ನಿರ್ಮಾಣವಾಗುತ್ತದೆಯೆಂದು ಟೀಕಿಸುತ್ತಿದ್ದಾರೆ.
ಎಚ್.ನಾಗೇಶ್‌ರ ರಾಜಕೀಯ ಮೇಲಾಟವು ಅವರನ್ನು ಆಯ್ಕೆ ಮಾಡಿದ ಮತದಾರರಿಗೂ, ಪ್ರಜಾಪ್ರಭುತ್ವಕ್ಕೂ ಕಳಂಕ ತರುವಂತಾಗಿದೆಯೆಂಬ ಟೀಕೆ ಜಿಲ್ಲಾದ್ಯಂತ ಸಾರ್ವತ್ರಿಕವಾಗಿ ವ್ಯಕ್ತವಾಗುತ್ತಿದೆ.
● ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.