ಸಿಎಂ ರಾಜೀನಾಮೆಗೆ ಆಗ್ರಹಿಸಿ ಇಂದು ಪ್ರತಿಭಟನೆ
Team Udayavani, Jul 10, 2019, 3:07 AM IST
ಬೆಂಗಳೂರು: ಮೈತ್ರಿ ಸರ್ಕಾರದ ಸಂಖ್ಯಾಬಲ ಕುಸಿತವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದ ಆವರಣದಲ್ಲಿನ ಗಾಂಧಿ ಪ್ರತಿಮೆ ಎದುರು ಬುಧವಾರ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ರಾಜ್ಯಪಾಲರ ಮಧ್ಯಪ್ರವೇಶ ಕೋರಿ ರಾಜಭವನದ ಕದ ತಟ್ಟಲು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಿದೆ. ಈ ಮಧ್ಯೆ, ಕುಮಾರಸ್ವಾಮಿಯವರ ರಾಜೀನಾಮೆಗೆ ಆಗ್ರಹಿಸಿ ಮಂಗಳವಾರ ರಾಜ್ಯದ ಇತರೆಡೆ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿದ ನಾಯಕರು, ಒಂದೆಡೆ ರಾಜೀನಾಮೆಗೆ ಆಗ್ರಹಿಸಿ ಧರಣಿ ನಡೆಸುವುದರ ಜತೆಗೆ, ಇನ್ನೊಂದೆಡೆ ರಾಜ್ಯಪಾಲರ ಮಧ್ಯಪ್ರವೇಶ ಹಾಗೂ ಶಾಸಕರ ರಾಜೀನಾಮೆಯನ್ನು ತ್ವರಿತವಾಗಿ ಅಂಗೀಕರಿಸುವಂತೆ ಸ್ಪೀಕರ್‌ಗೆ ಮನವಿ ಮಾಡಲು ತೀರ್ಮಾನ ಕೈಗೊಂಡರು.
ಶಾಸಕಾಂಗ ಪಕ್ಷದ ಸಭೆಯ ನಂತರ ಮಾಹಿತಿ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಮಂಗಳವಾರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಲಾಯಿತು. ಬುಧವಾರ ವಿಧಾನಸೌಧ ಆವರಣದಲ್ಲಿನ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲಾಗುವುದು ಎಂದು ಹೇಳಿದರು.
ಮಧ್ಯಾಹ್ನ 1 ಗಂಟೆಗೆ ಪಕ್ಷದ ಉನ್ನತ ಮಟ್ಟದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯದಲ್ಲಿನ ಸದ್ಯದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಲಿದೆ. ಮಧ್ಯಾಹ್ನ 3 ಗಂಟೆಗೆ ಪಕ್ಷದ ಉನ್ನತ ಮಟ್ಟದ ನಿಯೋಗ ಸ್ಪೀಕರ್ ಅವರನ್ನು ಭೇಟಿಯಾಗಿ ಈಗಾಗಲೇ ರಾಜೀನಾಮೆ ನೀಡಿರುವ ಆಡಳಿತ ಪಕ್ಷಗಳ ಶಾಸಕರ ರಾಜೀನಾಮೆ ಪತ್ರವನ್ನು ಪರಿಶೀಲಿಸಿ ತಕ್ಷಣವೇ ಅಂಗೀಕರಿಸುವಂತೆ ಒತ್ತಾಯಿಸಲಿದೆ ಎಂದು ತಿಳಿಸಿದರು.
ಶಾಸಕರ ರಾಜೀನಾಮೆ ರಾಜ್ಯದ ಹಿತದೃಷ್ಟಿಯಿಂದ ಮಹತ್ವದ ವಿಷಯ. ರಾಜೀನಾಮೆಯಿಂದಾಗಿಯೇ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಹಾಗಾಗಿ, ಶಾಸಕರ ರಾಜೀನಾಮೆ ವಿಷಯವನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಸ್ಪೀಕರ್ ಅವರನ್ನು ಕೋರಲಾಗುವುದು. ಮಂಗವಾರ ಸ್ಪೀಕರ್ ಭೇಟಿಗೆ ತೆರಳಿದರೂ ಸಾಧ್ಯವಾಗಿರಲಿಲ್ಲ. ಬುಧವಾರ ಮಧ್ಯಾಹ್ನ 3 ಗಂಟೆಗೆ ಕಚೇರಿಯಲ್ಲಿ ಲಭ್ಯವಿರುವುದಾಗಿ ಸ್ಪೀಕರ್ ತಿಳಿಸಿದ್ದಾರೆ ಎಂದು ಹೇಳಿದರು.
ಸಾಂವಿಧಾನಿಕ ಬಿಕ್ಕಟ್ಟು: ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆಗೂ, ಬಿಜೆಪಿಗೂ ಸಂಬಂಧವಿಲ್ಲ. ಆದರೆ, ರಾಜೀನಾಮೆಯಿಂದ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿರುವುದರಿಂದ ರಾಜೀನಾಮೆ ತ್ವರಿತವಾಗಿ ಅಂಗೀಕಾರವಾಗಬೇಕು. ಸರ್ಕಾರ ಅಲ್ಪಮತಕ್ಕೆ ಕುಸಿದಿರುವುದರಿಂದ ಸದನ ಹೇಗೆ ನಡೆಯುತ್ತದೆ ಎಂಬ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು, ಸ್ಪೀಕರ್ ಅವರನ್ನು ಭೇಟಿಯಾಗಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ವಿಶ್ವಾಸ ಮತ ಯಾಚನೆ-ಬುಧವಾರ ಚರ್ಚೆ: ಸದನದಲ್ಲಿ ಸರ್ಕಾರದ ಬಹುಮತ ಸಾಬೀತಿಗೆ ಒತ್ತಾಯಿಸಬೇಕೆ?, ಬೇಡವೇ? ಎಂಬ ಬಗ್ಗೆ ಬಿಜೆಪಿ ಸದ್ಯ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಬಗ್ಗೆ ಬುಧವಾರ ಚರ್ಚಿಸಲಾಗುವುದು. ಬುಧವಾರವೂ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.
ರಾಜ್ಯದೆಲ್ಲೆಡೆ ಪ್ರತಿಭಟನೆ: ಈ ಮಧ್ಯೆ, ಮೈತ್ರಿ ಸರ್ಕಾರದ ಸಂಖ್ಯಾಬಲ ಕುಸಿತವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ವತಿಯಿಂದ ಮಂಗಳವಾರ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಲಾಯಿತು. ಮೈಸೂರು, ಶಿವಮೊಗ್ಗ, ತುಮಕೂರು, ಹುಬ್ಬಳ್ಳಿ, ರಾಮನಗರ, ದೊಡ್ಡಬಳ್ಳಾಪುರ, ಕಲಬುರಗಿ, ಮಂಗಳೂರು, ಉಡುಪಿ, ವಿಜಯಪುರ, ರಾಯಚೂರು ಸೇರಿ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಕುಮಾರಸ್ವಾಮಿಯವರ ರಾಜೀನಾಮೆಗೆ ಆಗ್ರಹಿಸಿದರು.
ಮೈತ್ರಿ ಸರ್ಕಾರದ ಸಂಖ್ಯಾಬಲ ಕುಸಿದಿರುವುದರಿಂದ ಎಚ್.ಡಿ.ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ನೈತಿಕತೆ ಇಲ್ಲ. ಹಾಗಾಗಿ, ಅವರ ರಾಜೀನಾಮೆಗೆ ಆಗ್ರಹಿಸಿ ಬುಧವಾರ ವಿಧಾನಸೌಧ ಹಾಗೂ ವಿಕಾಸಸೌಧದ ಮಧ್ಯ ಭಾಗದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಎರಡು ಗಂಟೆ ಕಾಲ ಧರಣಿ ನಡೆಸಲಾಗುವುದು. ಬಳಿಕ, ಪಕ್ಷದ ಪ್ರಮುಖ ನಾಯಕರು ಸ್ಪೀಕರ್ ಅವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ಮಾಜಿ ಸಚಿವರಾದ ಬಿಎಸ್‌ಪಿ ಶಾಸಕ ಎನ್.ಮಹೇಶ್ ಅವರು ಜೆಡಿಎಸ್‌ನೊಂದಿಗೆ ಖುಷಿಯಾಗಿಲ್ಲ. ನಾನು ವೈಯಕ್ತಿಕವಾಗಿ ಮಹೇಶ್ ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತೇನೆ.
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.