ಸಾಂದರ್ಭಿಕ ಶಿಶುವಿನ ಅಲ್ಪಾಯಸ್ಸಿಗೆ ಅಸಮನ್ವಯತೆ, ಜಿದ್ದಿನ ರಾಜ”ಕಾರಣ’
Team Udayavani, Jul 11, 2019, 3:04 AM IST
ಬೆಂಗಳೂರು: ಕೇವಲ ಬಿಜೆಪಿ “ಆಪರೇಷನ್’ ಮಾಡಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಹುಟ್ಟಿಕೊಂಡ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಎಂಬ ಸಾಂದರ್ಭಿಕ ಶಿಶು ತನ್ನ ಅಲ್ಪಾಯಸ್ಸಿನಲ್ಲೇ ಕೊನೆ ಉಸಿರೆಳೆಯಲು ಸಜ್ಜಾಗಿರುವುದಕ್ಕೆ ಉಭಯ ಪಕ್ಷಗಳ ಅಸಮನ್ವಯತೆಯೇ ಕಾರಣವಾಗಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡದೇ ಇದ್ದರೂ ಬಿಜೆಪಿ 104 ಶಾಸಕರನ್ನು ಹೊಂದಿದ ಪಕ್ಷವಾಗಿ ಹೊರಹೊಮ್ಮಿತು. 79 ಮತ್ತು 37 ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಗೆದ್ದವು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತ ವಿರೋಧಿ ಅಲೆ ಮತ್ತು ಸ್ವಯಂಕೃತಾಪರಾಧಕ್ಕೆ ತುತ್ತಾಗಿ ಅಧಿಕಾರ ಕಳೆದುಕೊಂಡಿತು.
ಸಹಜವಾಗಿ ಅತಿ ಹೆಚ್ಚು ಸ್ಥಾನ ಗೆದ್ದ ಬಿಜೆಪಿ ಅಧಿಕಾರ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್‌ಗಾಗಿ “ಆಪರೇಷನ್’ ನಡೆಸಲು ಸಜ್ಜಾದಾಗ, ಕೇವಲ ಬಿಜೆಪಿಯನ್ನು ಶಕ್ತಿ ಕೇಂದ್ರದಿಂದ ದೂರವಿರಿಸುವ ಸಲುವಾಗಿ ಅತ್ಯಂತ ಹೀನಾಯವಾಗಿ ಪರಸ್ಪರ ಬೈದಾಡಿಕೊಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅನಿವಾರ್ಯದ ಮೈತ್ರಿ ಮಾಡಿಕೊಂಡವು. ಅತಿ ಕಡಿಮೆ ಸಂಖ್ಯೆಯ ಶಾಸಕರನ್ನು ಹೊಂದಿದ್ದ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನವನ್ನು ಸಿದ್ದರಾಮಯ್ಯ ಸ್ವತ: ಒಪ್ಪಿಸಿದರು.
ಆದರೆ, ಈಗ?: ಅತಿ ಹೆಚ್ಚು ಸ್ಥಾನಗಳನ್ನು ಪಡೆದ ಒಂದು ಪಕ್ಷವಾಗಿ ಅಧಿಕಾರ ವಂಚಿತವಾದ ಬಿಜೆಪಿ ಸಹಜವಾಗಿ ಅತಿ ಕಡಿಮೆ ಸ್ಥಾನಗಳನ್ನು ಹೊಂದಿದ ಜೆಡಿಎಸ್ ಪಕ್ಷ ಆಡಳಿತ ನಡೆಸುವ ಪರಿಸ್ಥಿತಿಯ ವ್ಯಂಗ್ಯವನ್ನು ಸವಾಲಾಗಿ ಸ್ವೀಕರಿಸಿತು. ಆದರೆ, ಆಗಾಗ ನಡೆದ ಆಪರೇಷನ್‌ಗಳು ವಿಫಲವಾಗಲು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಪ್ರತಿ ಬಾರಿ ಕಾರಣವಾಗುತ್ತಲೇ ಹೋದರು.
ವಿಚಿತ್ರ ಎಂದರೆ ಸರ್ಕಾರ ರಚನೆಯ ನಂತರದ “ಬಿಜೆಪಿ ಆಪರೇಷನ್’ಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ನೆರಳು ಕಂಡು ಬರುತ್ತಿತ್ತು. ಅವರ ಆಪ್ತರೆಂದೇ ಗುರುತಿಸಿಕೊಂಡ ರಮೇಶ್ ಜಾರಕಿಹೊಳಿ ಮತ್ತಿತರರ ತಂಡ “ಆಪರೇಷನ್ ಕಮಲ’ದಲ್ಲಿ ಗುರುತಿಸಿಕೊಂಡಿತು. ಇದು ಪ್ರತಿ ಬಾರಿ ಮರುಕಳಿಸಿದ್ದೇ ಅಲ್ಲದೆ, ಸಿದ್ದರಾಮಯ್ಯ ಅವರೂ ಪ್ರತಿ ಬಾರಿ ಸರ್ಕಾರದ “ರಕ್ಷಣೆ’ಯಾಗುವಂತೆ ನೋಡಿಕೊಂಡರು.
ಕೊನೆಯ ಅಂಕದಲ್ಲಿ ಸಿದ್ದರಾಮಯ್ಯ ಆಪ್ತರಲ್ಲಿ ಅನೇಕರು ಸಾಲು ಸಾಲಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾ ಹೋದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸ ಮುಗಿಸುತ್ತಲೇ ಸರ್ಕಾರದ ಪತನಕ್ಕೆ ನಾಂದಿ ಹಾಡಿದರು. ಹೀಗಾಗಿ, ಈ ಎಲ್ಲಾ ಬೆಳವಣಿಗೆಗಳಲ್ಲಿ ಮತ್ತು ಅಸಹಜವಾಗಿ ಹುಟ್ಟಿಕೊಂಡ ಸಮ್ಮಿಶ್ರ ಸರ್ಕಾರದ ಸಮಸ್ಯೆಗಳಿಗೆ ಬಿಜೆಪಿಯಂತೂ ಖಂಡಿತಾ ಕಾರಣ ಅಲ್ಲ.
ಆದರೆ, ಪ್ರಮುಖವಾಗಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಸರ್ಕಾರದ ಸೂತ್ರ ವಹಿಸಿಕೊಂಡಿದ್ದ ಕೆಲವೇ ಶಾಸಕರನ್ನು ಹೊಂದಿದ್ದ ಪಕ್ಷದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಕಾರಣ ಎಂಬುದು ಘಟನಾವಳಿಗಳನ್ನು ಅವಲೋಕಿಸಿದರೆ ತಿಳಿದು ಬರುತ್ತದೆ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಶಾಸಕರನ್ನು, ಅದೂ ಸಿದ್ದರಾಮಯ್ಯ ಅವರ ಬೆಂಬಲಿಗ ಶಾಸಕರನ್ನು ಕಡೆಗಣಿಸಿರುವುದು “ಆಪರೇಷನ್ ಕಮಲ’ಗಳಿಗೆ ಪೂರಕವಾಗುತ್ತಲೇ ಬಂತು.
ಕುಮಾರಸ್ವಾಮಿ, ಅವರ ಸೋದರ ಎಚ್.ಡಿ.ರೇವಣ್ಣ ಮತ್ತು ಅವರ ಕುಟುಂಬ ರಾಜಕಾರಣ/ರಾಜಕಾರಣಿಗಳು ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಅಸಮನ್ವಯತೆಗೆ ಕಾರಣರಾದರು. ಆ ಬಗ್ಗೆ ಶಾಸಕರಾದ ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್ ಮತ್ತಿತರರು ಆಗಾಗ ಅಳಲು ತೋಡುತ್ತಲೇ ಇದ್ದರು. ಆದರೆ, ಸರ್ಕಾರ ಹಲವು ಬಾರಿ ಆಪರೇಷನ್‌ಗಳಿಗೆ ಒಳಗಾಗುವ ಪರಿಸ್ಥಿತಿ ಉಂಟಾದಾಗಲೂ ಕುಮಾರಸ್ವಾಮಿ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.
ಇವುಗಳಿಗಿಂತ ಹೆಚ್ಚಾಗಿ ಸಿದ್ದರಾಮಯ್ಯ ಅವರಿಗೆ ಈ ಸರ್ಕಾರ ಪತನವಾಗುವುದು ಬಹುಶ: ಇಷ್ಟವಾಗಿರಬಹುದು. ಸರದಿಯಲ್ಲಿ ರಾಜೀನಾಮೆ ಕೊಟ್ಟ ಎಸ್.ಟಿ. ಸೋಮಶೇಖರ್, ರಮೇಶ್ ಜಾರಕಿಹೊಳಿ, ಬೈರತಿ ಬಸವರಾಜ್, ಡಾ. ಸುಧಾಕರ್ ಆದಿಯಾಗಿ ಎಲ್ಲರೂ “ಸಿದ್ದರಾಮಯ್ಯ ನಮ್ಮ ನಾಯಕರು’ ಎಂದು ಹೇಳುತ್ತಲೇ ತಮ್ಮ ರಾಜೀನಾಮೆಗೆ ಸಮ್ಮಿಶ್ರ ಸರ್ಕಾರದ ಧೋರಣೆಗಳು ಕಾರಣ ಎಂಬ ಹೇಳಿಕೆಗಳನ್ನು ನೀಡುತ್ತಿರುವುದು ಪತನ ಕಾರಣಕ್ಕೆ ಸಿದ್ದರಾಮಯ್ಯ ನೆರಳಿದೆಯೇ ಎಂಬ ಶಂಕೆಯನ್ನಂತೂ ಉಂಟು ಮಾಡುತ್ತದೆ.
ಇವೆಲ್ಲದರ ನಡುವೆ ತಮ್ಮನ್ನು ರಾಜಕೀಯವಾಗಿ ಹಣಿಯಬೇಕೆಂದೇ ಒಂದು ಕಾಲದಲ್ಲಿ ನಿರ್ಧರಿಸಿದ್ದ ಎಚ್.ಡಿ.ದೇವೇಗೌಡ ಕುಟುಂಬದ ರಾಜಕಾರಣಕ್ಕೆ ಪಾಠ ಕಲಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂಬ ಆರೋಪವೂ ಇದೆ. ಜೆಡಿಎಸ್‌ನಲ್ಲಿದ್ದಾಗ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ತಮ್ಮನ್ನು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿಸಿದ್ದು, ಅಹಿಂದ ಚಳುವಳಿಗೆ ಮುಂದಾದಾಗ ತಮ್ಮನ್ನು ಪಕ್ಷದಿಂದ ಕಿತ್ತು ಹಾಕಿರುವ ಬಗ್ಗೆ ಸಿದ್ದರಾಮಯ್ಯ ಅವರಿಗೆ ಸಿಟ್ಟಿರಬಹುದು.
ದೇವೇಗೌಡರ ಜತೆಯಲ್ಲೇ ಹೋರಾಡಿ ಅಧಿಕಾರದ ಮುಂಚೂಣಿಗೆ ತಂದಿದ್ದ ಪಕ್ಷದಿಂದ ಹೊರ ಬಂದ ಸಿದ್ದರಾಮಯ್ಯ, ಮುಂದಿನ ದಿನಗಳಲ್ಲಿ ತಮ್ಮದೇ ರೀತಿಯಲ್ಲಿ ರಾಜಕೀಯ ಹೋರಾಟ ನಡೆಸಿ ಮುಖ್ಯಮಂತ್ರಿಯೂ ಆದರು. ಆದರೆ, ದೇವೇಗೌಡರ ರಾಜಕೀಯ ಪಟ್ಟು ಚುನಾವಣೆಯಲ್ಲಿ ಸ್ವತ: ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವಂತೆ ಮಾಡಿತು. ಅದೃಷ್ಟವಶಾತ್ ಬಾದಾಮಿಯಲ್ಲಿ ಅಲ್ಪಮತಗಳಿಂದ ಪಡೆದ ಗೆಲುವು ಸಿದ್ದರಾಮಯ್ಯ ಸದ್ದಿಲ್ಲದೆ ರಾಜಕಾರಣದಿಂದ ಮರೆಯಾಗುವುದನ್ನು ತಪ್ಪಿಸಿತು ಎನ್ನಬಹುದು.
ಆದರೆ, ಅವರ ಜಿದ್ದಿನ ರಾಜಕಾರಣ ಈಗಿನ ಬೆಳವಣಿಗೆಗಳಿಗೆ ಕಾರಣವಾದಂತಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಸ್ಥಾನ ಹಂಚಿಕೆ ಮಾಡಿಕೊಂಡು ಅಖಾಡಕ್ಕೆ ಇಳಿದಾಗ ತಮ್ಮ ರಾಜಕೀಯ ಚಾಣಾಕ್ಷತೆ ಬಳಸಿಕೊಂಡು ಸ್ವತ: ದೇವೇಗೌಡರು ಹಾಸನ ಬಿಟ್ಟು ತುಮಕೂರಿನಿಂದ ಸ್ಪರ್ಧಿಸುವಂತೆ ಮಾಡಿದ ಸಿದ್ದರಾಮಯ್ಯ, ಗೌಡರು ಸೋಲುವಂತೆಯೂ ನೋಡಿಕೊಂಡರು ಎನ್ನುವ ಮಾತಿದೆ.
ಅದೇ ರೀತಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಪುತ್ರ ನಿಲ್ಲುವಂತೆ ಮಾಡಿ ಅವರ ಸೋಲಿಗೆ ಚೆಲುವರಾಯ ಸ್ವಾಮಿ ಆದಿಯಾಗಿ ತಮ್ಮ ಆಪ್ತ ವರ್ಗವನ್ನೇ ಬಳಸಿಕೊಂಡರು ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿದೆ. ತಮಗೆ ಹೆಚ್ಚು ಆಪ್ತರಾಗಿದ್ದ ಎಚ್.ಡಿ.ರೇವಣ್ಣ ಪುತ್ರ ರೇವಣ್ಣ ಗೆಲುವಿಗೂ ಸಿದ್ದರಾಮಯ್ಯ ಸಹಕರಿಸಿದರೆಂಬ ಆರೋಪ ಜೆಡಿಎಸ್ ವಲಯದಿಂದಲೇ ಕೇಳಿ ಬಂದಿದೆ.
ಈಗ ಸಿದ್ದರಾಮಯ್ಯ ಕೊನೆಯ ಆಟವಾಗಿ ತಮ್ಮ ಆಪ್ತರು “ಆಪರೇಷನ್’ಗೆ ಒಳಗಾದರು ಎನ್ನುವ ವಾತಾವರಣ ಸೃಷ್ಟಿಸಿ ಸರ್ಕಾರವನ್ನು ಪತನದಂಚಿಗೆ ದೂಡಿದ್ದಾರೆ ಎಂಬ ಅನಿಸಿಕೆಯೂ ರಾಜಕಾರಣದಲ್ಲಿದೆ. ಜತೆಗೆ ತಮ್ಮ ಪಕ್ಷದ ಪ್ರಮುಖ ಒಕ್ಕಲಿಗ ನಾಯಕ ಡಿ.ಕೆ.ಶಿವಕುಮಾರ್ ಅವರು ಒಂದು ಕಾಲದ ಪರಮವೈರಿ ದೇವೇಗೌಡ ಕುಟುಂಬಕ್ಕೆ ಹತ್ತಿರವಾಗಿರುವುದನ್ನು ತಪ್ಪಿಸಲು ಮತ್ತು ಪಕ್ಷವನ್ನು ತಮ್ಮ ಬಿಗಿಮುಷ್ಠಿಯಲ್ಲಿಡಲು ಸಿದ್ದರಾಮಯ್ಯ ಯತ್ನಿಸಿರಬಹುದು. ಸಿದ್ದರಾಮಯ್ಯ ಅವರಿಗೆ ಸದಾ ಪ್ರಶ್ನೆಯಾಗಿ ಉಳಿದಿದ್ದ ಡಾ. ಜಿ. ಪರಮೇಶ್ವರ್ ಅವರನ್ನು ತಹಬದಿಗೆ ಸರಿಸಲೂ ಯತ್ನಿಸಿರಬಹುದು.
* ನವೀನ್ ಅಮ್ಮೆಂಬಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.