ಯೂ ಟ್ಯೂಬ್ ನೋಡಿ ಬೋರ್‌ವೆಲ್ ರೀಚಾರ್ಜ್ ಮಾಡಿದ ಪುತ್ತೂರಿನ ಕೃಷಿಕ
Team Udayavani, Jul 12, 2019, 5:53 AM IST
ಮಂಗಳೂರು : ‘ಉದಯವಾಣಿ’ಯ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದ ಲೇಖನಗಳನ್ನು ಓದಿ ಪ್ರೇರೇಪಣೆಗೊಂಡು, ಆ ಬಳಿಕ ಯೂ ಟ್ಯೂಬ್‌ನಲ್ಲಿ ಜಲಮರುಪೂರಣ ಅಳವಡಿಸುವ ವಿಧಾನಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ಇದೀಗ ತಮ್ಮ ಬೋರ್‌ವೆಲ್ಗೆ ಜಲ ಮರುಪೂರಣ ಮಾಡುವಲ್ಲಿ ಕೃಷಿಕರೊಬ್ಬರು ಯಶಸ್ವಿಯಾಗಿದ್ದಾರೆ. ಇದರಿಂದ ವಾರ್ಷಿಕ 10 ಕೋಟಿ ಲೀಟರ್‌ನಷ್ಟು ಮಳೆ ನೀರನ್ನು ಸಂರಕ್ಷಿಸಿ ಅದನ್ನು ನೀರಿಂಗುವ ವಿಶ್ವಾಸವನ್ನು ಹೊಂದಿದ್ದಾರೆ.
ನಗರದ ಕದ್ರಿಯಲ್ಲಿ ನೆಲೆಸಿರುವ ಪುತ್ತೂರು ತಾಲೂಕಿನ ಕಾವು ಬಿಂತೋಡಿ ಮನೆಯ ಎನ್. ಬಾಲಕೃಷ್ಣ ರೈ ಅವರೇ ಕೊಳವೆಬಾವಿಗೆ ನೀರಿಂಗಿಸಲು ಜಲಮರುಪೂರಣ ವ್ಯವಸ್ಥೆ ಮಾಡುವ ಮೂಲಕ ಜಿಲ್ಲೆಯ ಇತರೆ ರೈತರಿಗೂ ಮಾದರಿ ಎನಿಸಿಕೊಂಡಿದ್ದಾರೆ.
ಬಾಲಕೃಷ್ಣ ರೈ ಅವರಿಗೆ ಬಿಂತೋಡಿಯಲ್ಲಿ ಕೃಷಿ ತೋಟವಿದೆ. ಅದಕ್ಕೆ ನೀರು ಹಾಯಿಸಲೆಂದು 2013ರಲ್ಲಿ ಕೊಳವೆಬಾವಿ ಕೊರೆದಿದ್ದರು. ಆರಂಭದಲ್ಲಿ 300 ಅಡಿಯಲ್ಲೇ ನೀರು ಸಿಕ್ಕಿ 8 ಸ್ಪಿಂಕ್ಲರ್‌ಗಳು ರಭಸದಲ್ಲಿ ತಿರುಗುತ್ತಿತ್ತು. ಆದರೆ ಅನಂತರದ ವರ್ಷಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಪ್ರಸ್ತುತ 4 ಜೆಟ್‌ಗಳು ಹಾರುವಷ್ಟು ನೀರು ಸಿಗುತ್ತಿದೆ. ನೀರು ಕಡಿಮೆಯಾಗುವುದನ್ನು ಕಂಡ ಅವರು, ಭವಿಷ್ಯದಲ್ಲಿ ನೀರಿನ ಅಭಾವ ಉಂಟಾಗದಂತೆ ತಡೆಯಲು ಸುಮಾರು 15 ದಿನಗಳ ಹಿಂದೆಯಷ್ಟೇ ಕೊಳವೆ ಬಾವಿಗೆ ಜಲಮರುಪೂರಣ ವ್ಯವಸ್ಥೆ ಮಾಡಿದ್ದಾರೆ. ವಿಶೇಷವೆಂದರೆ, ಯೂ ಟ್ಯೂಬ್‌ನಲ್ಲಿ ಜಲಮರುಪೂರಣ ಮಾಡುವ ವಿಧಾನದ ವೀಡಿಯೋ ನೋಡಿಯೇ ತಮ್ಮ ಮನೆಯಲ್ಲಿ ಇದನ್ನು ಅಳವಡಿಸಿಕೊಂಡಿದ್ದಾರೆ. ಆ ಮೂಲಕ, ಉದಯವಾಣಿಯ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನಕ್ಕೆ ಮತ್ತಷ್ಟು ಉತ್ತೇಜನ ನೀಡಿದ್ದಾರೆ.
ಕರಾವಳಿ ಭಾಗದಲ್ಲಿ ನೀರಿಲ್ಲದೆ ಸೊರಗಿರುವ ಬೋರ್‌ವೆಲ್ಗೆ ಜಲ ಪೂರಣ ಮಾಡುವ ಬಗ್ಗೆ ತಾಂತ್ರಿಕ ಮಾಹಿತಿ ಒದಗಿಸುವುದಕ್ಕೆ ಸೂಕ್ತ ತಜ್ಞರ ಕೊರತೆಯಿದೆ. ಈ ಕಾರಣದಿಂದಲೇ ಅವರು ತಜ್ಞರಿಗಾಗಿ ಹುಡುಕಾಟ ನಡೆಸುವ ಬದಲು ಯೂಟ್ಯೂಬ್‌ನಲ್ಲಿಯೇ ಸೂಕ್ತ ಮಾಹಿತಿ ಪಡೆದುಕೊಂಡು ತಮ್ಮ ಬೋರ್‌ವೆಲ್ಗೆ ಜಲ ಮರುಪೂರಣ ಮಾಡಿರುವುದು ವಿಶೇಷ.
ಹೇಗೆ ವ್ಯವಸ್ಥೆ ಮಾಡಿದರು?
ಬೋರ್‌ವೆಲ್ನ ಹತ್ತಿರ 15 ಅಡಿ ದೂರದಲ್ಲಿ ಒಂದು ಕೆರೆ ಇದೆ. ಮಳೆಗಾಲದಲ್ಲಿ ಅದರ ನೀರು ಹರಿದು ಹೋಗುತ್ತದೆ. ಬೋರ್‌ನ ಸುತ್ತ 5್ಡ8 ಹೊಂಡ ಮಾಡಿಸಿದ್ದಾರೆ. ಹೊಂಡಕ್ಕೆ ಕೆಳಭಾಗದಲ್ಲಿ ದೊಡ್ಡ ಕಲ್ಲು, ಮೇಲೆ ಜಲ್ಲಿ, ಅದರ ಮೇಲೆ 80 ಕೆಜಿ ಮಸಿ, ಅದರ ಮೇಲೆ ಸಣ್ಣ ಜಲ್ಲಿ, ಬಳಿಕ ಹೊಗೆ ಹಾಕಿದ್ದಾರೆ. ಬದಿಯಲ್ಲಿರುವ ಕೆರೆಯ ಒಸರು ನೀರು ಈ ಹೊಗೆ ಮೇಲೆ ಹರಿದು ಹೆಚ್ಚಿನ ನೀರು ತೋಡಿಗೆ ಹೋಗುತ್ತದೆ. ಉಳಿದ ನೀರು ಇಂಗುತ್ತದೆ.
ಸರಳವಾಗಿ ಈ ವಿಧಾನ
ಕೊಳವೆಬಾವಿಯ ಪಕ್ಕದಲ್ಲಿ (15 ಅಡಿ ಅಂತರ) 6್ಡ10 (6 ಅಡಿ ಅಗಲ, 10 ಅಡಿ ಆಳ) ಗುಂಡಿ ತೋಡಿಕೊಳ್ಳಿ. ಆ ಗುಂಡಿಯ ತಳಭಾಗಕ್ಕೆ ಎರಡು ಅಡಿಯಷ್ಟು ದೊಡ್ಡ ಕಲ್ಲು, ಅದರ ಮೇಲ್ಭಾಗ ಎರಡು ಅಡಿಯಷ್ಟು 3 ಇಂಚಿನ ಜಲ್ಲಿ, ಬಳಿಕದ ಎರಡು ಅಡಿಗೆ 80 ಕೆಜಿ ಮಸಿ, ಬಳಿಕ ಎರಡು ಅಡಿಯಷ್ಟು ಸಣ್ಣ ಜಲ್ಲಿಗಳನ್ನು ಹಾಕಿ, ಮೇಲ್ಭಾಗದ ಎರಡು ಅಡಿಯಷ್ಟು ಜಾಗಕ್ಕೆ ಮರಳು ಹಾಕಿ. ಮಹಡಿಯ ನೀರನ್ನು ಫಿಲ್ಟರ್ ಮಾಡಿ ಪೈಪ್ ಮುಖಾಂತರ ತಂದು ಈ ಮರಳಿನ ಮೇಲೆ ಬಿಟ್ಟರೆ ಜಲಮರುಪೂರಣ ವಿಧಾನವನ್ನು ಅಳವಡಿಸಿಕೊಂಡಂತಾಗುತ್ತದೆ.
ಈ ಹೊಂಡದಿಂದ ಮಳೆಗಾಲದ 5 ತಿಂಗಳಲ್ಲಿ ಅಂದಾಜು 10 ಕೋಟಿ ಲೀಟರ್‌ನಷ್ಟು ನೀರು ಭೂಮಿಗೆ ಇಂಗಬಹುದು ಎಂದು ಜಲಮರುಪೂರಣ ವ್ಯವಸ್ಥೆ ತಿಳಿದಿರುವ ಪ್ರವೀಣ್ ರೈ ಹೇಳಿದ್ದಾರೆ. ಆದರೆ ಅವರ ತೋಟಕ್ಕೆ ವರ್ಷಕ್ಕೆ ಬೇಕಾಗುವುದು ಸುಮಾರು 6 ಕೋಟಿ ಲೀಟರ್ ನೀರು. ಅಷ್ಟು ನೀರನ್ನು ತೋಟಕ್ಕೆ ಪಡೆದುಕೊಂಡು ಉಳಿದ ನೀರು ಭೂಮಿಯಲ್ಲಿ ಇಂಗಿ ಮತ್ತಷ್ಟು ಅಂತರ್ಜಲ ವೃದ್ಧಿಗೆ ಕಾರಣವಾಗಬಹುದು ಎಂದು ಸಂತಸ ಹಂಚಿಕೊಳ್ಳುತ್ತಾರೆ ಬಾಲಕೃಷ್ಣ ರೈ.ಸುಳ್ಯ, ಪುತ್ತೂರು, ಬೆಳ್ಳಾರೆ ಮುಂತಾದೆಡೆ ಹಲವಾರು ಕುಟುಂಬಗಳ ಅಡಿಕೆ ತೋಟಕ್ಕೆ ನೀರಿಲ್ಲದೆ, ಕೃಷಿ ಬೆಳೆಗಳೆಲ್ಲ ಸತ್ತು ಹೋಗಿವೆ. ಅಂತಹವರು ಕೊಳವೆಬಾವಿಗಳಿಗೆ ಜಲಮರುಪೂರಣ ವ್ಯವಸ್ಥೆ ಮಾಡಿಕೊಂಡರೆ ಒಳಿತು ಎಂಬುದು ಅವರ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.