ಇದ್ದೂ ಇಲ್ಲದಂತಾದ ಜನೌಷಧ ಕೇಂದ್ರ
ಔಷಧ-ಮಾತ್ರೆ ಇಲ್ಲದೆ ಪ್ರದರ್ಶನಕ್ಕೆ ಸೀಮಿತ•ಶಾಸಕರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ
Team Udayavani, Jul 12, 2019, 10:27 AM IST
ಬಸವಕಲ್ಯಾಣ: ತಾಲೂಕು ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರ.
ವೀರಾರೆಡ್ಡಿ ಆರ್.ಎಸ್.
ಬಸವಕಲ್ಯಾಣ: ಸಾರ್ವಜನಿಕರಿಗೆ ಮತ್ತು ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧಧ ಹಾಗೂ ಮಾತ್ರೆಗಳು ಸಿಗಬೇಕೆಂಬ ನಿಟ್ಟಿನಲ್ಲಿ ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆರಂಭಿಸಲಾದ ಪ್ರಧಾನ ಮಂತ್ರಿ ಭಾರತೀಯ ಜನೌಷಧಧ ಕೇಂದ್ರವು ಬಡವರ ಪಾಲಿಗೆ ಇದ್ದೂ ಇಲ್ಲದಂತಾಗಿದೆ.
ಭಾರತೀಯ ಜನೌಷಧ ಕೇಂದ್ರದ ಟ್ರೇ ದಲ್ಲಿ ಕೇವಲ ಬೆರಳೆಣಿಕೆಯಷ್ಟು ಔಷಧಯ ಬಾಟಲ್ ಹಾಗೂ ಮಾತ್ರೆಗಳಿದ್ದು, ಇದು ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿ ಉಪಯೋಗಕ್ಕೆ ಬಾರದಂತಾಗಿದೆ. ಇದರಿಂದ ಕಡಿಮೆ ದರದಲ್ಲಿ ಔಷಧಗಳು ಸೀಗುತ್ತವೆ ಎಂಬ ಆಶೆಯಿಂದ ಇಲ್ಲಿಗೆ ಬರುವ ರೋಗಿಗಳಿಗೆ ನಿರಾಶೆಯಾಗುತ್ತಿದೆ.
ಔಷಧ ಕೇಂದ್ರಕ್ಕೆ ರೋಗಿಗಳು ಬಂದರೆ, ಈ ಮಾತ್ರೆಗಳು ಖಾಲಿಯಾಗಿವೆ. ಈ ಔಷಧ ಬಾಟಲ್ ನಮ್ಮ ಹತ್ತಿರ ಇನ್ನೂ ಬಂದಿಲ್ಲ. ನಾಳೆ ಬರುತ್ತವೆ ಅಥವಾ ನಾಡಿದ್ದು ಬರುತ್ತವೆ ಎಂಬ ಆಶ್ವಾಸನೆಗಳು ಸೀಗುತ್ತವೆ ವಿನಃ ಔಷಧಗಳು ಸಿಗುವುದು ಬಹಳ ಅಪರೂಪದ ಸಂಗತಿ.
ಆರಂಭದಲ್ಲಿ ಮಾತ್ರೆಗಳು ಹಾಗೂ ಔಷಧಗಳು ಬಂದ ನಂತರ ಪುನಃ ಯಾವ ಔಷಧಗಳೂ ಬಂದಿಲ್ಲ. ಹೀಗಾಗಿ ಕೇವಲ ಬಿಪಿ ಮತ್ತು ಶುಗರ್ ಕಾಯಿಲೆಗೆ ಬೇಕಾದ ಮಾತ್ರೆಗಳು ಮಾತ್ರ ನಮ್ಮಲ್ಲಿ ಉಳಿದುಕೊಂಡಿವೆ ಎಂದು ಕೇಂದ್ರದ ಸಿಬ್ಬಂದಿ ಸದಾನಂದ ಮಾಹಿತಿ ನೀಡಿದರು.
ಕೆಲವು ತಿಂಗಳ ಹಿಂದೆ ಸಾರ್ವಜನಿಕರು ಮತ್ತು ರೋಗಿಗಳು ಭಾರತೀಯ ಜನ ಔಷಧ ಕೇಂದ್ರದ ಅವ್ಯವಸ್ಥೆ ಬಗ್ಗೆ ಶಾಸಕ ಬಿ.ನಾರಾಯಣರಾವ್ ಅವರಿಗೆ ದೂರು ನೀಡಿದ್ದರು. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಕೇಂದ್ರದ ಸಿಬ್ಬಂದಿಯನ್ನು ಕರೆದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಕೇಂದ್ರದಲ್ಲಿ ಜನರಿಗೆ ಅನುಕೂಲವಾಗುವಂತೆ ಮಾತ್ರೆಗಳನ್ನು ತರಿಸಿಕೊಳ್ಳಬೇಕು. ಇಲ್ಲದಿದ್ದರೆ ಬೇರೆ ಗುತ್ತಿಗೆದಾರರನ್ನು ನೋಡಬೇಕಾಗುತ್ತದೆ ಎಂದು ಸಂಬಂಧ ಪಟ್ಟವರಿಗೆ ದೂರವಾಣಿ ಮೂಲಕ ಮಾತನಾಡಿದ್ದರು. ಆದರೂ ಯಾವುದೇ ಪ್ರಯೋಜವಾಗಿಲ್ಲ ಎಂಬುವುದು ಸಾರ್ವಜನಿಕರ ಆರೋಪವಾಗಿದೆ.
ಇದರಿಂದ ಬಡ ರೋಗಿಗಳು ಬೇರೆಕಡೆ ದುಬಾರಿ ಹಣ ನೀಡಿ ಮಾತ್ರೆ ಮತ್ತು ಔಷಧ ಖರೀದಿ ಮಾಡಬೇಕಾಗಿದೆ. ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧ ಸಿಗಬೇಕು ಎಂಬ ನಿಟ್ಟಿನಲ್ಲಿ ಆರಂಭಿಸಲಾದ ಕೇಂದ್ರ ಗುತ್ತಿಗೆದಾರರ ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ ಉಪಯೋಗಕ್ಕೆ ಬಾರದಂತಾಗಿರುವುದು ರೋಗಿಗಳ ಆಕ್ರೋಷಕ್ಕೆ ಕಾರಣವಾಗಿದೆ.
ಬೀದರ್ ಜಿಲ್ಲೆಯ ಉಪವಿಭಾಗವಾದ ಬಸವಕಲ್ಯಾಣದ ಭಾರತೀಯ ಜನೌಷಧ ಕೇಂದ್ರವೇ ಈ ಹಂತಕ್ಕೆ ತಲುಪಿದೆ ಎಂದರೆ, ಬೇರೆ ತಾಲೂಕಿನಲ್ಲಿರುವ ಈ ಕೇಂದ್ರಗಳ ಸ್ಥಿತಿ ಹೇಗಿರಬಹುದು ಎಂಬಂತಾಗಿದೆ. ಸಂಬಂಧ ಪಟ್ಟವರು ಇನ್ನಾದರೂ ಜನೌಷಧ ಕೇಂದ್ರದ ಕಡೆ ಗಮನ ಹರಿಸಿ ಬಡ ರೋಗಿಗಳಿಗೆ ಅನುಕೂಲವಾಗುವಂತೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಕೇಂದ್ರಕ್ಕೆ ವಿದ್ಯುತ್ ಸಂಪರ್ಕ- ಫ್ರಿಡ್ಜ್ ಇಲ್ಲ
ತಾಲೂಕು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕೆಲವು ವರ್ಷಗಳ ಹಿಂದೆ ಜನೌಷಧ ಕೇಂದ್ರ ಆರಂಭಿಸಿದ್ದರು. ಅಲ್ಲಿ ಇಂದಿಗೂ ಫ್ರಿಡ್ಜ್ ಮತ್ತು ವಿದ್ಯುತ್ ಸಂಪರ್ಕ ನೀಡಿಲ್ಲ. ಇದರಿಂದ ಗೊತ್ತಾಗುತ್ತದೆ ಕಾಟಚಾರಕ್ಕಾಗಿ ಇದನ್ನು ತೆರೆದು ಇಡಲಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.