ಬೇಕು ಆದಿ ದ್ರಾವಿಡರಿಗೊಂದು ಕಾಯಕಲ್ಪ
Team Udayavani, Jul 13, 2019, 5:00 AM IST
ಆದಿ ದ್ರಾವಿಡ ಅಥವಾ ಕೊರಗ ಎಂದು ಉಲ್ಲೇಖೀತವಾಗಿರುವ ದ್ರಾವಿಡ ಪ್ರದೇಶದ ಬುಡಕಟ್ಟು ಜನಾಂಗವು ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಒಂದು ವರ್ಗವಾಗಿದೆ. ಹೆಚ್ಚಾಗಿ ಊರಿನಿಂದ ಹೊರಕೆ ತಮಗೇ ಮೀಸಲಿರಿಸಿದಂತಹ ದರ್ಕಾಸ್ತು ಭೂಮಿಯಲ್ಲಿ ವಾಸಿಸುವ ಈ ಜನಾಂಗವು 1972ರವರೆಗೂ ಜನಾಂಗೀಯ ಭೇದಗಳಿಗೆ ಒಡ್ಡಿಕೊಂಡು ದಯನೀಯ ಬದುಕನ್ನು ಸಾಗಿಸುತ್ತಿದ್ದುದು ಒಂದು ದುರಂತ ಇತಿಹಾಸ. ತಲೆಯ ಮೇಲೆ ಮಲ ಹೊರುವ ಅಮಾನವೀಯ ಬಾಳನ್ನು ನಿರ್ವಹಿಸಿದ್ದ ಈ ಕಡು ಬಡತನದ ಜನಾಂಗವು 1972ರ ಅವಧಿಯಲ್ಲಿನ ಸರಕಾರದ ಕೆಲವು ಕ್ರಾಂತಿಕಾರಿ ಅನುಶಾಸನದ ಮೂಲಕ ತಮ್ಮ ದುಸ್ತರ ಬದುಕಲ್ಲಿ ಕೊಂಚ ಪರಿವರ್ತನೆಯನ್ನು ಕಾಣುವಂತಾಯಿತು.
ಸಫಾಯಿ ಕರ್ಮಚಾರಿಗಳು, ಪೌರ ಕಾರ್ಮಿಕರೆಂಬ ನೆಲೆಯಲ್ಲಿ ದುಡಿಯುತ್ತಿರುವ ಆದಿದ್ರಾವಿಡ ಪಂಗಡವು ನೈರ್ಮಲ್ಯ ವೃತ್ತಿಯಲ್ಲಿ ನೇಮಕಾತಿ ಪಡೆಯುವುದೇ ಅಧಿಕ. ಅರಣ್ಯದ ಬೇರು ಬಿಳಲುಗಳ ಮೂಲಕ ಬುಟ್ಟಿ ಹೆಣೆಯುವುದು, ಚರ್ಮದಿಂದ ಶಬ್ದವಾದ್ಯಗಳನ್ನು ನಿರ್ಮಿಸುವುದು, ಮೊದಲಾದ ಕುಲಕಸುಬಲ್ಲಿ ತೊಡಗಿಸಿಕೊಂಡು ಜೀವನ ನಿರ್ವಹಿಸುವ ಹಲವಾರು ಕುಟುಂಬಗಳನ್ನು ಅಲ್ಲಲ್ಲಿ ಕಾಣಬಹುದು.
ಇತ್ತೀಚಿನ ವರ್ಷಗಳಲ್ಲಿ ಮೀಸಲಾತಿ ನೆಲೆಯಲ್ಲಿ ಸಣ್ಣ ಪುಟ್ಟ ಸರಕಾರಿ ಹುದ್ದೆಗಳನ್ನು ಪಡೆದ ಬೆರಳೆಣಿಕೆಯ ಕೆಲವೇ ಕೆಲವರು ಗೋಚರಿಸಿದರೂ ಸಾಮಾಜಿಕ ಹಾಗೂ ಆರ್ಥಿಕವಾಗಿ ಇವರ ಜೀವನ ಮಟ್ಟ ಇನ್ನಷ್ಟು ಸುಧಾರಿಸಬೇಕಾಗಿದೆ.
ಮರೀಚಿಕೆಯಾಗಿರುವ ಸಾಮಾಜಿಕ ಪ್ರಾಧಾನ್ಯತೆ
ಆದಿದ್ರಾವಿಡ ಅಥವಾ ಕೊರಗ ಜನಾಂಗವು ಇತ್ತೀಚೆಗೆ ಸಾಮಾಜಿಕ ರಾಜಕೀಯ ಶಿಕ್ಷಣ ಹಾಗೂ ಆರ್ಥಿಕಸ್ತರಗಳಲ್ಲಿ ಕೊಂಚ ಸುಧಾರಣೆ ಕಂಡು ಕೊಂಡಿರುವುದೇನೋ ಸತ್ಯ. ಆದರೆ ಅವರಲ್ಲಿ ಕೆಲವು ಜೀವನ ಕ್ರಮವನ್ನು ಅವಲೋಕಿಸಿದಾಗ ಈ ವರ್ಗವು ನೂರಾರು ವರ್ಷಗಳಷ್ಟು ಪುರಾತನ ಪದ್ಧತಿಗಳಿಗೆ ಇನ್ನೂ ಅವಚಿಕೊಂಡಿರುವಂತೆ ಅನಿಸುತ್ತದೆ.
1. ಊರಿನ ಜಾತ್ರೆ, ಬಲಿ, ನೇಮ, ಉತ್ಸವಗಳು ನಡೆವಾಗ ಸಾಕಷ್ಟು ಅಂತರವನ್ನು ಕಾಯ್ದುಕೊಂಡು ತಮ್ಮದೇ ನಿರ್ದಿಷ್ಟ ಶಬ್ದವಾದ್ಯಗಳನ್ನು ನುಡಿಸುತ್ತಾ ಪ್ರಧಾನ ವಾಹಿನಿಯಿಂದ ಹೊರಗೇ ಇರಲು ಯತ್ನಿಸುವುದು.
2. ಅಂತಹ ಸಂದರ್ಭದಲ್ಲಿ ನೆರವೇರುವ ದಾಸೋಹದ ವೇಳೆ ಅತ್ಯಂತ ಕೊನೆಯ ವ್ಯಕ್ತಿಗಳಾಗಿ ಅನತಿ ಅಂತರದಲ್ಲಿದ್ದುಕೊಂಡೇ ಸ್ವೀಕರಿಸುವುದು.
3. ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ದೀಪಾವಳಿ ಇತ್ಯಾದಿ ಪರ್ವಕಾಲದಲ್ಲಿ ಹಬ್ಬದ ಮರುದಿನ ಮನೆಮನೆ ತಿರುಗಿ ಹಿಂದಿನ ದಿನದ ಉಳಿಕೆಗಳನ್ನು ಸಂಗ್ರಹಿಸುವ ರೂಢಿಗಳು ಈ ವರ್ಗದ ಮಂದಿ ವಾಸಿಸುವ ಕೆಲವೆಡೆ ಆಚರಣೆಯಲ್ಲಿರುವುದು ಕಂಡು ಬಂದಿದೆ. ಇಂತಹ ಪ್ರಸಂಗಗಳು ಗೋಚರಿಸಿದಾಗ ಅದರ ಕೆಡುಕಿನ ಕುರಿತು ನಾವೇ ಮಾರ್ಗದರ್ಶನ ಮಾಡಿದುದೂ ಇದೆ.
ನಮ್ಮ ದೇವಾಲಯದಲ್ಲಿ ವರ್ಷಂಪ್ರತಿ ಹಮ್ಮಿಕೊಳ್ಳುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಂದರ್ಭದಲ್ಲಿ ಆದಿದ್ರಾವಿಡ ಜನಾಂಗಕ್ಕೇ ವಿಶೇಷ ಆದ್ಯತೆ ನೀಡಬೇಕೆಂದೆನಿಸಿರುವುದು ಒಂದು ಪ್ರೇರಣೆ ಏನೋ? ಈ ನಿಟ್ಟಿನಲ್ಲಿ ಅವರು ವಾಸಿಸುವ ಕಾಲನಿಗಳಿಗೆ ಭೇಟಿ ನೀಡಿದಾಗ ವೈವಾಹಿಕ ಪದ್ಧತಿಯ ಯಾವುದೇ ಕಟ್ಟುಪಾಡಿಗೂ ಒಳಗಾಗದೆ ಒಟ್ಟಾಗಿ ವಾಸಿಸುವ (Living together) ಜೋಡಿಗಳನ್ನು ಕೆಲವೆಡೆ ಕಂಡು ಅಚ್ಚರಿಯಾಯಿತು. ಈ ಕುರಿತು ಕೂಲಂಕಷವಾಗಿ ವಿಚಾರಿಸಿದಾಗ ಮದುವೆ ಕಾರ್ಯಕ್ರಮಕ್ಕೆ ತುಂಬಾ ಖರ್ಚಾಗುತ್ತದೆ. ಅಷ್ಟು ಹಣ ನಮ್ಮಲ್ಲಿಲ್ಲ. ಅದಕ್ಕಾಗಿ ಹೀಗೇ ಇದ್ದೇವೆ ಎಂಬ ಉತ್ತರ ದೊರೆಯಿತು.
ನಂತರ ಅವರಿಗೆ ಸರಕಾರದ ನೋಂದಾಯಿತ ವಿವಾಹದ ಕುರಿತು ಮಾಹಿತಿ ನೀಡುವುದರೊಂದಿಗೆ ಸಾಂಪ್ರದಾಯಿಕ ವಿವಾಹಗಳನ್ನು ನಡೆಸಲಾಯಿತು. ಇಂತಹ ವಿವಾಹ ರಹಿತ ಸಹಬಾಳ್ವೆ ಬೇರೆಡೆಯೂ ಇರಬಹುದೇನೋ? ಆದರೆ ನಾವು ಸ್ವತಃ ಪಡೆದುಕೊಂಡ ಅನುಭವವು ಈ ಸಮುದಾಯದ ಮುಗ್ಧತೆ, ತಿಳಿವಳಿಕೆ ಕೊರತೆಗಳನ್ನು ಮೇಲ್ಕಾಣಿಸಿತು. ಇಂತಹ ಪರಿಸ್ಥಿತಿ ಇರುವಲ್ಲಿ ಈ ವರ್ಗದಲ್ಲಿರುವ ವಿದ್ಯಾವಂತರು ಏಕೆ ಬೆಳಕು ಚೆಲ್ಲಬಾರದು? ಸಂಘ ಸಂಸ್ಥೆಗಳು, ಸ್ಥಳೀಯಾಡಳಿತಗಳು, ಆಶಾಕಾರ್ಯಕರ್ತೆಯರೇ ಮೊದಲಾದವರು ಮಾರ್ಗದರ್ಶಕರಾಗಬಾರದೇಕೆ?
ಮೌಡ್ಯ, ಕಂದಾಚಾರ, ಸಂಪ್ರದಾಯದ ಹೆಸರಲ್ಲಿ ಇನ್ನೂ ಜೀವಂತವಾಗಿರುವ ಕೆಲವು ಪದ್ಧತಿ(?)ಗಳ ಕುರಿತು ಜಾಗೃತಿ ಮೂಡಿಸಬೇಕಾದ ಕಿಂಚಿತ್ ಜವಾಬ್ದಾರಿಯನ್ನು ಸಮಾಜದ ಮುಂಚೂಣಿಯ ಕೆಲವರಾದರೂ ವಹಿಸಿಕೊಂಡರೆ ಆದಿದ್ರಾವಿಡ ಜನಾಂಗವೂ ಸಮಾಜದ ಪ್ರಧಾನ ವಾಹಿನಿಯೊಂದಿಗೆ ಹಿಂಜರಿಕೆಯಿಲ್ಲದೆ ಬೆರೆಯಲು ಅನುಕೂಲ ಆಗುತ್ತಿತ್ತೇನೋ.
ಸರಕಾರದ ಹಲವು ಹತ್ತು ಸೌಲಭ್ಯಗಳು, ಯೋಜನೆಗಳು ಪರಿಶಿಷ್ಟರಿಗಾಗಿ ಅಸ್ತಿತ್ವದಲ್ಲಿ ಇರುವುದೇನೋ ನಿಜ. ಆದರೆ ಮಾಹಿತಿಯ ಕೊರತೆ ಇಂದಾಗಿ ಆದಿದ್ರಾವಿಡ ಜನಾಂಗವು ಅದರ ಪ್ರಯೋಜನ ಪಡೆಯಲು ವಿಫಲವಾಗುತ್ತಿರುವುದು ಕಂಡು ಬರುತ್ತಿದೆ. ರಾಜಕೀಯವಾಗಿ ಸಮರ್ಥ ಪ್ರಾತಿನಿಧ್ಯವಿಲ್ಲದಿರುವುದು; ಮುಂಚೂಣಿ ನಾಯಕತ್ವದ ಕೊರತೆಗಳಿಂದಾಗಿ ಬಹುಶಃ ಈ ವರ್ಗವು ಇನ್ನೂ ಮೌಲ್ಯಯುತ ಜೀವನವನ್ನು ಗಳಿಸಲು ಅಸಾಧ್ಯವಾಗಿರಬಹುದೇನೋ?
ಈ ಕುರಿತು ತಳಮಟ್ಟದ ಚಿಂತನಶೀಲತೆ ಹಾಗೂ ನೈಜ ಕಳಕಳಿ ತೀರಾ ಅಗತ್ಯವಿದೆ ಎಂದನಿಸುತ್ತದೆ. ಅದರ ಹೊರತಾಗಿ ಆದಿದ್ರಾವಿಡ ಜನಾಂಗವು ಪ್ರಧಾನ ವಾಹಿನಿಯೊಂದಿಗೆ ಒಗ್ಗೂಡಲು ಕೆಲವು ದಶಮಾನಗಳೇ ಬೇಕಾದೀತೇನೋ?
• ಮೋಹನದಾಸ ಸುರತ್ಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.