ಭಾರತದ ಚಂದ್ರಯಾನದ ರೋಚಕ ಕಥನ
Team Udayavani, Jul 13, 2019, 5:00 AM IST
ಚಂದ್ರಯಾನ-1 ರ ಮೂಲಕ ತನ್ನ ಮೊದಲ ಪ್ರಯತ್ನದಲ್ಲೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗಾಧ ಸಾಧನೆಯನ್ನು ಮಾಡಿ ತೋರಿಸಿದ್ದ ಇಸ್ರೊ, ಇದೀಗ ಮತ್ತೂಂದು ಜೈತ್ರಯಾತ್ರೆಗೆ ಸಜ್ಜಾಗಿದೆ. ಚಂದ್ರಯಾನ-2ರ ಮೂಲಕ ಭಾರತ ಮತ್ತೂಮ್ಮೆ ಚಂದ್ರನ ಮೇಲೆ ತನ್ನ ಛಾಪು ಮೂಡಿಸಲು ಸಜ್ಜಾಗುತ್ತಿರುವ ಹೊತ್ತಲ್ಲಿ ಚಂದ್ರಯಾನ ಯೋಜನೆಯ ಹಿಂದಿನ ರೋಚಕ ಕಥೆಗಳ ಹಿನ್ನೋಟ ಇಲ್ಲಿದೆ..
“ಚಂದ್ರನ ಮೇಲೆ ಅಮೆರಿಕ ಹೋಗಿದಾರೆ, ರಷ್ಯಾ ಹೋಗಿದಾರೆ, ಆದ್ರೆ ನಾವು ಹೋದ ಫಸ್ಟ್ ಟೈಮ್ಲೆ, ಚಂದ್ರನ ನೆಲವುಳ್ಳ ನೀರಿದೆ ಅವಡಿನೊ ಫಸ್ಟ್ ನಾಂಬೆ ಹೇಳಿದ್ದು”. ಹೀಗೆ ತಮಿಳು ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಿದ್ದದ್ದು, ಡಾ. ಮಯಿಲ್‌ಸಾಮಿ ಅಣ್ಣಾದುರೈ.
ಟಿ.ವಿ. ವಾಹಿನಿಯೊಂದರ ಕಾರ್ಯಕ್ರಮದಲ್ಲಿ ನನ್ನ ಹೆಗಲ ಮೇಲೆ ಕೈ ಹಾಕಿ ಅವರು ಕಾರ್ಯಕ್ರಮದ ನಿರೂಪಕರಾಗಿದ್ದ ಖ್ಯಾತ ನಟ ಶಿವರಾಜಕುಮಾರ ಅವರಿಗೆ ಚಂದ್ರಯಾನ-1ರ ಯಶಸ್ಸಿನ ಕುರಿತಾದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾಗ, ಪಕ್ಕದಲ್ಲಿಯೇ ಇದ್ದ ನನಗೆ ಚಂದ್ರನ ಮೇಲೆಯೇ ನಡೆದಾಡಿ ಬಂದ ಅನುಭವವಾಗಿತ್ತು! ಅಷ್ಟೊಂದು ಉತ್ಸಾಹದಿಂದ ಚಂದ್ರಯಾನದ ರೋಚಕ ಅನುಭವಗಳನ್ನು ಹೇಳುತ್ತಿದ್ದ ಡಾ. ಮಯಿಲ್‌ಸಾಮಿ ಅಣ್ಣಾದುರೈ ಬೇರಾರೂ ಅಲ್ಲ, ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-1 ಯೋಜನೆಯ ನಿರ್ದೇಶಕರಾಗಿದ್ದವರು.
ಹೌದು, ಅವರು ಹೇಳುವ ಹಾಗೆ ನಾವು ಚಂದ್ರನ ಮೇಲೆ ಹೋಗುವ ಹಲವು ವರ್ಷಗಳ ಮುನ್ನವೇ ವಿವಿಧ ರಾಷ್ಟ್ರಗಳು ಚಂದ್ರನ ಮೇಲೆ ತಮ್ಮ ಉಪಗ್ರಹಗಳನ್ನು ಹಾರಿಬಿಟ್ಟಿದ್ದವು. ದೊಡ್ಡಣ್ಣ ಅಮೆ ರಿಕವಂತೂ ಆ ಗಲೇ ಮಾನವನನ್ನು ಚಂದ್ರನ ಮೇಲೆ ಕಳುಹಿಸಿಯೇ ಬಿಟ್ಟಿತ್ತು. ಹೀಗೆ ರಷ್ಯಾ, ಅಮೆ ರಿಕ, ಐರೋಪ್ಯ ರಾಷ್ಟ್ರಗಳು ಚಂದ್ರನ ಮೇಲೆ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಾ ನಾ ಮುಂದು ತಾ ಮುಂದು ಎನ್ನುತ್ತಿದ್ದ ಸಂದರ್ಭದಲ್ಲಿ, ಆಗ ತಾನೇ ಭಾರತ ಚಂದ್ರನ ಮೇಲೆ ಹೋಗುವ ಕನಸು ಕಾಣಲು ಶುರು ಮಾಡಿತ್ತು.
ತಡವಾಗಿ ಈ ಬಾಹ್ಯಾಕಾಶ ಪೈಪೋಟಿಯ ಮೈದಾನಕ್ಕೆ ನುಗ್ಗಿದ್ದ ಭಾರತ, ಕಣದಲ್ಲಿದ್ದ ಆ ಎಲ್ಲ ರಾಷ್ಟ್ರಗಳನ್ನು ಒಂದು ಕ್ಷಣ ತಬ್ಬಿಬ್ಬುಗೊಳ್ಳುವಂತೆ ಮಾಡಿತ್ತು. ತನ್ನ ಚೊಚ್ಚಲ ಪ್ರಯತ್ನದ ಲ್ಲಿಯೇ ಭಾರತ ಚಂದ್ರನ ಮೇಲೆ ಉಪಗ್ರಹವನ್ನು ಯಶಸ್ವಿಯಾಗಿ ಹಾರಿ ಬಿಟ್ಟಿತ್ತಲ್ಲದೆ, ಇದುವರೆಗೆ ಯಕ್ಷ ಪ್ರಶ್ನೆಯಾಗಿಯೇ ಉಳಿದಿದ್ದ ಚಂದ್ರನ ಮೇಲ್ಮೆ çಯಲ್ಲಿ ನೀರಿನ ಅಂಶವಿರುವುದನ್ನು ಮೊಟ್ಟ ಮೊದಲ ಬಾರಿಗೆ ಕಂಡು ಹಿಡಿದು, ಮನುಕುಲದ ಕುತೂಹಲವನ್ನು ಮತ್ತಷ್ಟು ತಣಿಯುವಂತೆ ಮಾಡಿತ್ತು.
● ಚಂದ್ರನ ಹಿಡಿಯುವ ಆಟದಲ್ಲಿ ಗೆದ್ದವರು
ಚಿಕ್ಕವರಿದ್ದಾಗ “”ಚಂದೀರನೇತಕೆ ಓಡುವನಮ್ಮ” ಹಾಡನ್ನು ಕೇಳಿದಾಗೆೆಲ್ಲ, ಆ ಓಡುವ ಚಂದ್ರನನ್ನೊಮ್ಮೆ ಹಿಡಿಯಲೇಬೇಕು ಅಂತ ಅವ ನನ್ನು ಬೆನ್ನಟ್ಟಿ ಓಣಿ ಹಿಡಿದು ಓಡುತ್ತಿದ್ದದ್ದು ನೆನಪಾಯಿತು. ಈ ಗೀಳು ದೈತ್ಯ ರಾಷ್ಟ್ರಗಳಿಗೂ ಅದಾಗಲೇ ಅಂಟಿ ಕೊಂಡಾಗಿತ್ತು! ಲೂನಾ-2 ಯೋಜನೆಯ ಮೂಲಕ ರಷ್ಯಾ ತನ್ನ 2ನೇ ಪ್ರಯತ್ನದಲ್ಲಿ 1959ರ ಸೆ.14ರಂದು ಮೊದಲ ಬಾರಿಗೆ ಮಾನವ ನಿರ್ಮಿತ ವಸ್ತುವೊಂದನ್ನು ಚಂದ್ರನ ಮೇಲೆ ಕಳುಹಿಸಿದ ಹೆಗ್ಗಳಿಕೆ ಪಡೆ ದು, ಚಂದ್ರನ ಹಿಡಿಯುವ ರೇಸ್‌ಗೆ ಚಾಲನೆ ನೀಡಿತ್ತು. ಮತ್ತೂಮ್ಮೆ 1968ರಲ್ಲಿ ಅದೇ ದೇಶದ ಲೂನಾ-9 ಚಂದ್ರನ ಮೇಲೆ ಸಾಫ್ಟ್ಲ್ಯಾಂಡ್ ಮಾಡಿದ್ದಷ್ಟೆ ತಡ ಅಮೆ ರಿಕ ಇನ್ನೂ ಸುಮ್ಮನೆ ಕೂಡಬಾರದೆಂದು ನಿರ್ಧರಿಸಿತು. 1969ರ ಜುಲೈ 20ರಂದು ಅಪೊಲೊ-11ರ ಮೂಲಕ ನೀಲ್ ಆರ್ಮ್ಸ್ಟ್ರಾಂಗ್‌ರನ್ನು ಕಳುಹಿಸಿ ಚಂದ್ರನ ಮೇಲೆ ಕಾಲಿಟ್ಟ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರ ವಾ ಯಿ ತು ಅಮೆರಿಕ. ಹೀಗೆ ನಿಧಾನವಾಗಿ ಈ ಪೈಪೋಟಿಗೆ ಜಪಾನ್, ಚೀನಾ, ಯುರೋಪ್ ರಾಷ್ಟ್ರ ಗಳು ಒಂದೊಂದಾಗಿ ಧುಮುಕತೊಡಗಿ ದವು. ಮತ್ತೂಂದೆಡೆ ಭಾರತ ಸುಮ್ಮನೇ ಕೂಡಲಿಲ್ಲ. ಬದಲಾಗಿ ವಿಭಿನ್ನ ರೀತಿಯಲ್ಲಿ ತನ್ನ ಚಂದ್ರಾನ್ವೇಷಣೆಯ ರೂಪುರೇಷೆಗಳನ್ನು ಹೆಣೆಯಲು ಪ್ರಾರಂಭಿಸಿತು.
● ಚಂದ್ರಯಾನದ ಕನಸು
ಭಾರತದ ಚಂದ್ರಯಾನದ ಕನಸು 1999ರ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ ಸಭೆಯಲ್ಲಿ ಚಿಗುರೊಡೆಯುತ್ತದೆ. ಅದಕ್ಕೆ ಮತ್ತೆ ನೀರೆರೆದದ್ದು ಅಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ಸಮಾವೇಶ. ಅಲ್ಲಿಂದ ಹಲವು ವಿಜ್ಞಾನಿಗಳ ಒತ್ತಾಸೆ ಯಂತೆ ಇಸ್ರೊ ಚಂದ್ರಾನ್ವೇಷಣೆಗಾಗಿ ವಿಶೇಷ ದಳವೊಂದನ್ನು ರಚನೆ ಮಾಡುತ್ತದೆ. ಅದೇ “ನ್ಯಾಷನಲ್ ಲೂನಾರ್ ಮಿಷನ್ ಟಾಸ್ಕ್ ಫೊರ್ಸ್.
● ಸೋಮಯಾನದಿಂದ…
ಚಂದ್ರಾನ್ವೇಷಣೆಗೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದ್ದ ನ್ಯಾಷನಲ್ ಲೂನಾರ್ ಮಿಷನ್ ಟಾಸ್ಕ್ಫೊರ್ಸ್, ಚಂದ್ರನ ಮೇಲೆ ನಾವೇಕೆ ಹೋಗಬೇಕು, ಅದರಿಂದ ನಮಗಾಗುವ ಲಾಭವೇನು, ದೇಶದ ಭವಿಷ್ಯಕ್ಕೆ ಇದು ಅವಶ್ಯಕವೇ? ಎಂಬೆಲ್ಲಾ ಪ್ರಶ್ನೆಗಳನ್ನು ಹಾಕಿಕೊಂಡು ಅವುಗಳಿ ಗೆಲ್ಲಾ ಉತ್ತರ ಕಂಡು ಹಿಡಿದು ಕೊಳ್ಳುತ್ತಾ “ಸೋಮಯಾನ’ ಎಂಬ ಹೆಸರಿನ ಯೋಜನೆಯೊಂದಕ್ಕೆ ಅಂತಿಮವಾದ ರೂಪವನ್ನು ಕೊಟ್ಟಿತ್ತು. ಆ ಯೋಜನೆಯನ್ನು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೆದುರು ಇಟ್ಟಾಗ ಅವರು ನಸುನಗುತ್ತಾ ಅದಕ್ಕೆ “ಚಂದ್ರಯಾನ’ ಎಂದು ಮರುನಾಮ ಕರಣ ಮಾಡಿ ಇಸ್ರೋದ ತೊಟ್ಟಿಲಿಗೆ ಹಾಕಿದ್ದರಂತೆ.
● ಚಂದ್ರನ ಮೇಲೆ ತ್ರಿವರ್ಣ ಧ್ವಜ
2003ರಲ್ಲಿ ಕೇಂದ್ರದ ಅನುಮೋದನೆ ದೊರೆಯುತ್ತಿದ್ದಂತೆ, ಭಾರತೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಇದಕ್ಕೆ ಕಾರಣ, ಈ ಯೋಜನೆಯ ಮೂಲಕ ಮತ್ತೂಮ್ಮೆ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿನ ತನ್ನ ಸಾಮರ್ಥ್ಯವನ್ನು ಸಾರಿ ಹೇಳಲು ಅವಕಾಶ ಸಿಕ್ಕಿದ್ದು. ಮತ್ತೂಂದೆಡೆ, ಈ ಯೋಜನೆಗಾಗಿ ಅಮೆ ರಿಕ , ರಷ್ಯಾದಂಥ ರಾಷ್ಟ್ರಗಳು ತಮ್ಮ ತಮ್ಮ ಅಹಂ ಅನ್ನು ಬದಿಗಿರಿಸಿ ಭಾರತದ ಚಂದ್ರಯಾನ ಯೋಜನೆಯೊಂದಿಗೆ ಕೈ ಜೋಡಿಸಲು ಮುಂದಾಗಿದ್ದು! ಹೀಗೆ ಮೊದಲ ಪ್ರಯತ್ನದಲ್ಲಿ ಚಂದ್ರಯಾನ-1ರ ಮೂಲಕ ಸ್ವದೇಶಿ ನಿರ್ಮಿತ 5 ಉಪಗ್ರಹಗಳು ಹಾಗೂ ವಿವಿಧ ರಾಷ್ಟ್ರಗಳ 6 ಉಪಗ್ರಹಗಳು ಸೇರಿದಂತೆ ಒಟ್ಟು 11 ಉಪಗ್ರಹಗಳನ್ನು ಚಂದ್ರನ 100 ಕಿ.ಮೀ. ಸಮೀಪದಲ್ಲಿರುವ ಕಕ್ಷೆಗೆ ಬಿಟ್ಟು ಬರುವ ಜವಾಬ್ದಾರಿಯನ್ನು ಇಸ್ರೊ ಹೊತ್ತಿತ್ತು ಮತ್ತು ಯೋಜನೆಯನ್ನು ಅಂತಿಮಗೊಳಿಸಿತ್ತು. ಈ ಎಲ್ಲ ವಿಷಯವನ್ನು ಡಾ. ಮಯಿಲ್‌ಸಾಮಿ ಅಣ್ಣಾದುರೈ ಅವರು ಅಂದಿನ ರಾಷ್ಟ್ರಪತಿಗಳಾಗಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ವಿವರಿಸಿದರಂತೆ, ಆಗ ಎಲ್ಲವನ್ನು ಶಾಂತ ಚಿತ್ತದಿಂದ ಕೆಳಿಸಿಕೊಂಡ ಕಲಾಂ, ಮಾತಿನ ಕೊನೆಯಲ್ಲಿ “”ಚಂದ್ರಯಾನ-1 ಚಂದ್ರನಿಂದ 100 ಕಿ.ಮೀ. ದೂರ ಏಕೆ ನಿಲ್ಲಬೇಕು? ನಾವೂ ಚಂದ್ರನ ಮೇಲ್ಮೆ ಅನ್ನು ಸ್ಪರ್ಶಿಸಿ ಬರೋಣ” ಎಂದರಂತೆ. ಅಲ್ಲಿಗೆ ಭಾರತೀಯ ಉಪಗ್ರಹವೊಂದು(ಮೂನ್ ಇಂಪ್ಯಾಕ್ಟ್ ಪ್ರೋಬ್) ತನ್ನ ಮೈಮೇಲೆ ತ್ರಿವರ್ಣಧ್ವಜ ಹೊದ್ದು ಚಂದ್ರನ ಮೇಲೆ ಇಳಿಯುವ ಯೋಜನೆೆಯಾಗಿ ಬದಲಾಯಿತಂತೆ. ಹಾಗಾಗಿ ಭಾರತದ ಧ್ವಜ ಚಂದ್ರನ ಮೇಲೆ ಹಾರುವಂತಾಯಿತು ಎಂದು ಮಯಿಲ್‌ಸಾಮಿ ಅಣ್ಣಾದುರೈ ವಿವರಿಸುವಾಗ, ನಮ್ಮೊಂದಿಗೆ ಸೆಟ್‌ನಲ್ಲಿದ್ದ ಅನೇಕರು ವಾವ್ ಎಂದು ಉದ್ಗರಿಸಿದ್ದೆವು. ಎದೆಯುಬ್ಬಿಸಿ ನಮಗರಿವಿಲ್ಲದೆ ಕಲಾಂರಿಗೆ ಸಲಾಂ ಹೊಡೆದಿದ್ದೆವು.
● ಚಂದ್ರಯಾನ-1ರ ಹೆಜ್ಜೆ ಗುರುತುಗಳು
2003ರಲ್ಲಿ ಚಂದ್ರಯಾನ-1 ಯೋಜನೆಗೆ ಅನುಮೋದನೆ ಸಿಕ್ಕ ದಿನದಿಂದ ಇಸ್ರೋ ವಿಜ್ಞಾನಿಗಳ ಸತತ ಪರಿಶ್ರಮದ ಫಲವಾಗಿ 2008 ಅಕ್ಟೋಬರ್ 22 ರಂದು ಶ್ರೀಹರಿಕೋಟಾದ ಸತೀಶ ಧವನ್ ಉಡ್ಡಯನ ಕೇಂದ್ರದಿಂದ ಚಂದ್ರಯಾನ-1 ಯೋಜನೆಯ ಉಪಗ್ರಹ ಉಡಾವಣೆಯಾಗಿತ್ತು. ಭೂಮಿಯಿಂದ 3,84,000 ಕಿ.ಮೀ ದೂರದ ಚಂದ್ರನಲ್ಲಿಗೆ ಉಪಗ್ರಹವನ್ನು ಹೊತ್ತು ಸಾಗಬೇಕಾದರೆ ಉತ್ಕೃಷ್ಟ ಹಾಗೂ ಬಲಿಷ್ಟ ರಾಕೆಟ್ ಕೂಡ ಬೇಕಲ್ಲವೇ? ಅಂದು ಚಂದ್ರನತ್ತ ಉಪಗ್ರಹಗಳನ್ನು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿ ತಲುಪಿಸಲು ಸಹಾಯಕ್ಕೆ ಬಂದದ್ದು, ಇಸ್ರೋದ ಕಾರ್ಯಸಾಧು ಕುದುರೆ ಎಂತಲೆ ಪ್ರಖ್ಯಾತಿ ಪಡೆದಿರುವ, ಪಿ.ಎಸ್.ಎಲ್.ವಿ. ಸರಣಿಯ ಪಿ.ಎಸ್.ಎಲ್.ವಿ- ಸಿ 11 ಎಂಬ ಉಡ್ಡಯನ ನೌಕೆ. ಇದರ ಮೂಲಕ ಹಂತ ಹಂತವಾಗಿ ಮೇಲಕ್ಕೇರುತ್ತಾ 2008ರ ಅಕ್ಟೋಬರ್ 26ರಂದು ಸುಮಾರು 1.50 ಲಕ್ಷ ಕಿ.ಮೀ. ದೂರದ ಕಕ್ಷೆಯಿಂದ ಭೂಮಿಯ ಸುತ್ತ ಸುತ್ತಲು ಶುರು ಮಾಡಿತ್ತು. ಅಕ್ಟೋಬರ್ 29ರಂದು ಭೂಮಿಯ ಕೆಲ ಭೂಭಾಗಗಳ ಚಿತ್ರಣವನ್ನು ಕ್ಲಿಕ್ಕಿಸುವ ಮೂಲಕ ತನ್ನ ಕಾರ್ಯ ಕ್ಷಮತೆಯನ್ನು ಪರೀಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ನಂತರದಲ್ಲಿ ಭೂಮಿಯಿಂದ 3,80,000 ಕಿ.ಮೀ. ವ್ಯಾಪ್ತಿಯ ಕಕ್ಷೆ (ಅಂತಿಮ ಕಕ್ಷೆಗೆ) ತಲುಪಿತ್ತು ಚಂದ್ರಯಾನ-1. ನಾಲ್ಕು ದಿನಗಳ ನಂತರ ಅಂದರೆ ನವೆಂಬರ್ 8ರ ಹೊತ್ತಿಗೆ ಭೂಮಿಯ ಸೆಳೆತದಿಂದ ತಪ್ಪಿಸಿಕೊಂಡು ಹೋದ ಮೊಟ್ಟ ಮೊದಲ ಭಾರತೀಯ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಹೀಗೆ ದಿನೇ ದಿನೇ ಉಪಗ್ರಹವನ್ನು ಚಂದ್ರನ ಸಮೀಪಕ್ಕೆ ಹೋಗುವಂತೆ ಸಂದೇಶಗಳನ್ನು ರವಾನಿಸುತ್ತಾ ಪೂರ್ವ ನಿರ್ಧರಿತ ಕಕ್ಷೆಗೆ 2008ರ ನವೆಂಬರ್ 12 ರಂದು ಸೇರಿಸಲಾಯಿತು. ಕೊನೆಯದಾಗಿ ಇಡೀ ಭಾರತವೇ ಎದುರು ನೋಡುತ್ತಿದ್ದ ಘಳಿಗೆ ಬಂದದ್ದು ನವೆಂಬರ್ 14ರಂದು.
ಅಂದು ರಾತ್ರಿಯ ಸುಮಾರಿಗೆ ತ್ರಿವರ್ಣ ದ್ವಜದಿಂದ ಕಂಗೊಳಿುತ್ತಿದ್ದ ಮೂನ್ ಇಂಪ್ಯಾಕ್ಟ್ ಪ್ರೋಬ್ ಅನ್ನು 100 ಕಿ.ಮೀ. ಎತ್ತರದಿಂದ ಚಂದ್ರನ ದಕ್ಷಿಣ ಧ್ರುವದ ಬಳಿ ಬಲವಾಗಿ ಅಪ್ಪಳಿಸುವಂತೆ ಮಾಡಲಾಗಿತ್ತು. ನಂತರದಲ್ಲಿ ಇನ್ನಿತರೆ ಉಪಗ್ರಹಗಳ ಸಹಾಯದಿಂದ ಚಂದ್ರನ ಮೇಲೆ ನೀರಿರುವ ಕುರಿತು ಸಾಕ್ಷ್ಯಗಳನ್ನು ಕಲೆ ಹಾಕಿಕೊಳ್ಳುವಲ್ಲಿ ನಮ್ಮ ಮೊದಲ ಯಾನ ಯಶಸ್ವಿ ಆಯಿತು. ಮಾನವರೇ ಸ್ವತಃ ಚಂದ್ರನ ಮೇಲೆ ಹೋಗಿ ಅಲ್ಲಿನ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ, ಅವಲೋಕಿಸಿದಾಗಲೂ, ಅವರಿಂದಾಗದ ಕಾರ್ಯವನ್ನು ಇಸ್ರೊ ತನ್ನ ಉಪಗ್ರಹದ ಮೂಲಕ ಮಾಡಿ ತೋರಿಸಿತು ಎಂಬುದು ಹೆಮ್ಮೆಯ ವಿಷಯ. ಹೀಗೆ ವರ್ಷಪೂರ್ತಿ ಚಂದ್ರನ ಮೇಲ್ಮೆ ಚಿತ್ರಗಳನ್ನು ಇಸ್ರೋ ವಿಜ್ಞಾನಿಗಳಿಗೆ ರವಾನಿಸುತ್ತಿದ್ದ ಚಂದ್ರಯಾನ ಉಪಗ್ರಹವು ಏಕಾಏಕಿ 2009ರ ಅಗಸ್ಟ್ 29ರಂದು ತಾಂತ್ರಿಕ ದೋಷದಿಂದಾಗಿ ಇಸ್ರೊ ವಿಜ್ಞಾನಿಗಳ ಸಂಪರ್ಕವನ್ನು ಕಡಿದುಕೊಳ್ಳುವಂತಾಗಿತ್ತು. ಅಲ್ಲಿಂದ ಮತ್ತೆಂದೂ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳ ಸಂಪರ್ಕಕ್ಕೆ ಬರದ ಚಂದ್ರ ಯಾನ-1 ತನ್ನ ನಿಸ್ವಾರ್ಥ ಸೇವೆಗೆ ವಿದಾಯ ಹೇಳಿತ್ತು!
● ಚಂದ್ರಯಾನ-2
ಚಂದ್ರಯಾನ-1ರ ಅಭೂತಪೂರ್ವ ಯಶಸ್ಸು, ಇಸ್ರೋಗೆ ಹಲವು ಪ್ರತಿಷ್ಠಿತ ಅಂ ತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಂದುಕೊಟ್ಟಿತು. ಇದರ ಬೆನ್ನಲ್ಲೇ ಅಂದಿನ ಪ್ರಧಾನಿ ಡಾ. ಮನಮೋಹನ ಸಿಂಗ್‌ರ ಅನುಮೋದನೆಯೊಂದಿಗೆ ಚಂದ್ರಯಾನ-2ರ ಸಿದ್ಧತೆಗಳು ಗರಿಗೆದರಿದವು. ಇದೀಗ ಎಲ್ಲವೂ ಅಂದುಕೊಂಡಂತಾದರೆ ಚಂದ್ರಯಾನ-2 ಇದೇ ಜುಲೈ 15ರಂದು ಚಂದ್ರನತ್ತ ತನ್ನ ಪ್ರಯಾಣ ಬೆಳೆಸಲಿದೆ.
● ಚಂದ್ರಯಾನ-2 ರ ವಿಶೇಷತೆಗಳು
ಚಂದ್ರಯಾನ-1 ಹೋದ ದಾರಿಯನ್ನೇ ಚಂದ್ರಯಾನ-2 ಹಿಂಬಾಲಿಸಲಿದೆ. ಆದರೆ ಈ ಬಾರಿ ಉಪಗ್ರಹಗಳ ಭಾರ 3000 ಕೆ.ಜಿ.ಯಷ್ಟಾಗಿರುವುದರಿಂದ ಉತ್ಕೃಷ್ಟ ಹಾಗೂ ಬಲಿಷ್ಟವಾದ ಉಡ್ಡಯನ ನೌಕೆಯಾದ ಜಿ.ಎಸ್.ಎಲ್.ವಿ. ಮಾರ್ಕ್-3 ಚಂದ್ರಯಾನ-2ನ್ನು ಹೊತ್ತೂಯ್ಯಲಿದೆ. ಚಂದ್ರಯಾನ-2, ಮೂರು ಪ್ರಮುಖ ಉಪಕರಣಗಳನ್ನು ಹೊಂದಿರಲಿದೆ. ಇವುಗಳಲ್ಲಿ ಲ್ಯಾಂಡರ್ ಮತ್ತು ರೋವರ್‌ಗಳನ್ನು ಚಂದ್ರನ ಮೇಲ್ಮೆ ಯ, ಮಣ್ಣಿನ ಗುಣಲಕ್ಷಣಗಳನ್ನು ಹಾಗೂ ನೀರಿನ ಅಂಶವಿರುವ ಭಾಗಗಳನ್ನು ಗುರುತಿಸಲೆಂದು ವಿನ್ಯಾಸಗೊಳಿಸಲಾಗಿದೆ. ಚಂದ್ರನಿಂದ 100 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಸುತ್ತುವರೆಯುವ ಮತ್ತೂಂದು ಪ್ರಮುಖ ಉಪಗ್ರಹ ಆರ್ಬಿಟರ್. ಇದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಮಾಡುವ ಸಾಹಸಕ್ಕೆ ಇಳಿಯಲಿರುವ ವಿಕ್ರಮ್ ಹೆಸರಿನ ಲ್ಯಾಂಡರ್ ಹಾಗೂ ಪ್ರಗ್ಯಾನ್ ಹೆಸರಿನ ರೋವರ್(ತೆವಳು ಬಂಡಿ) ನೀಡುವ ಮಾಹಿತಿಗಳನ್ನು ಭೂಮಿಗೆ ರವಾನಿಸುವ ಕಾರ್ಯ ನಿರ್ವಹಿಸುತ್ತದೆ.
ಮೊದಲು ಚಂದ್ರನಿಂದ 100 ಕಿ.ಮೀ. ದೂರದಲ್ಲಿ ಪ್ರದಕ್ಷಿಣೆ ಹಾಕುತ್ತಿರುವ ಆರ್ಬಿಟರ್ ಉಪಗ್ರಹವು, ಸೆಪ್ಟೆಂಬರ್ 6ರಂದು ಲ್ಯಾಂಡರ್ ಅನ್ನು ಚಂದ್ರನ 700 ದಕ್ಷಿಣ ಧ್ರುವದ ಮೇಲೆ ಇಳಿಸಲು ಸಹಾಯ ಮಾಡುತ್ತದೆ. ವಿಕ್ರಮ್ ಚಂದ್ರನ ಮೇಲೆ ಇಳಿದ ಕೂಡಲೇ, ಅದರ ಒಳಗಿಂದ ಆರು ಚಕ್ರಗಳುಳ್ಳ ಸ್ವಯಂಚಾಲಿತ ಪ್ರಗ್ಯಾನ್ ಹೆಸರಿನ ರೋವರ್ ಹೊರಬರುತ್ತದೆ. ಅದು ಮುಂದಿನ 14 ದಿನಗಳವರೆಗೆ ಚಂದ್ರನ ಮೇಲ್ಮೆ ç ಗುಣಲಕ್ಷಣಗಳನ್ನು ತೀಕ್ಷ್ಣವಾಗಿ ಪರೀಕ್ಷಿಸುತ್ತಾ (ಸೆಕೆಂಡಿಗೆ 14 ಸೆಂಟಿ ಮೀಟರನಷ್ಟು ಮಾತ್ರವೇ ಚಲಿಸುತ್ತಾ) ಸಾಗುತ್ತದೆ. ಹೀಗೆ ಚಂದ್ರನ ಒಂದು ದಿನ ಮುಗಿಯುವವರೆಗೆ(ಚಂದ್ರನ ಒಂದು ದಿನ ಎಂದರೆ ಭೂಮಿಯ 14 ದಿನಗಳಿಗೆ ಸಮ) ಸುಮಾರು 500 ಮೀಟರ್‌ಗಳಷ್ಟು ಸತತ ಪ್ರಯಾಣ ಮಾಡಿ, ನೀರಿನ ಮೂಲ ಸೇರಿದಂತೆ ಅಲ್ಲಿನ ವಾತಾವರಣದ ಇಂಚಿಂಚೂ ಮಾಹಿತಿಯನ್ನು ಆರ್ಬಿಟರ್‌ನ ಮೂಲಕ ಇಸ್ರೊ ವಿಜ್ಞಾನಿಗಳಿಗೆ ಮಾಹಿತಿಯನ್ನು ಹಂಚಿಕೊಂಡು, ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದೆ.
ಆರ್ಬಿಟರ್ ಉಪಗ್ರಹವು ಉಡಾವಣೆಯಾದ ದಿನದಿಂದ ಒಂದು ವರ್ಷದವರೆಗೆ, ಚಂದ್ರನ ಸುತ್ತ ಪ್ರದಕ್ಷಿಣೆ ಹಾಕಲಿದೆ. ಒಟ್ಟಾರೆ ಚಂದ್ರಯಾನ-2ರ ವಿಕ್ರಮ್ ಹಾಗೂ ಪ್ರಗ್ಯಾನ್‌ನ ದಾರಿ ಸುಗಮವಾಗಿರಲಿ ಹಾಗೂ ಮತ್ತೂಮ್ಮೆ ಭಾರತದ ಬಾಹ್ಯಾಕಾಶ ಲೋಕದ ನಾಗಾಲೋಟ ಮುಂದುವರೆಯು ವಂತಾಗಲಿ. ನಮ್ಮ ವಿಜ್ಞಾನಿಗಳ ಪರಿಶ್ರಮಕ್ಕೆ ಯಶಸ್ಸು ದೊರೆಯಲಿ ಎಂದು ಈ ಮೂಲಕ ಹಾರೈಸೋಣ. ಆಲ್ ದ ಬೆಸ್ಟ್ ಇಸ್ರೊ!
1. ಈ ಬಾರಿ ಉಪಗ್ರಹಗಳ ಭಾರ 3000 ಕೆ.ಜಿ.ಯಷ್ಟಾಗಿರುವುದರಿಂದ ಉತ್ಕೃಷ್ಟ ಹಾಗೂ ಬಲಿಷ್ಟವಾದ ಉಡ್ಡಯನ ನೌಕೆಯಾದ ಜಿ.ಎಸ್.ಎಲ್.ವಿ. ಮಾರ್ಕ್-3 ಚಂದ್ರಯಾನ-2ನ್ನು ಹೊತ್ತೂಯ್ಯಲಿದೆ.
2. ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಮಾಡಲಿರುವ ವಿಕ್ರಮ್ ಹೆಸರಿನ ಲ್ಯಾಂಡರ್. ವಿಕ್ರಮ್ ಚಂದ್ರನ ಮೇಲೆ ಇಳಿದ ಕೂಡಲೇ, ಅದರ ಒಳಗಿಂದ ಆರು ಚಕ್ರಗಳುಳ್ಳ ಸ್ವಯಂಚಾಲಿತ ಪ್ರಗ್ಯಾನ್ ರೋವರ್ ಹೊರಬರುತ್ತದೆ.
3. ಪ್ರಗ್ಯಾನ್ ಹೆಸರಿನ ರೋವರ್14 ದಿನಗಳವರೆಗೆ ಚಂದ್ರನ ಮೇಲ್ಮೆ ç ಗುಣಲಕ್ಷಣಗಳನ್ನು ತೀಕ್ಷ್ಣವಾಗಿ ಪರೀಕ್ಷಿಸುತ್ತಾ ಅಲ್ಲಿನ ವಾತಾವರಣದ ಇಂಚಿಂಚೂ ಮಾಹಿತಿಯನ್ನು ಆರ್ಬಿಟರ್‌ನ ಮೂಲಕ ಇಸ್ರೊ ವಿಜ್ಞಾನಿಗಳಿಗೆ ಹಂಚಿಕೊಂಡು, ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದೆ.
(“ಯುವ ವಿಜ್ಞಾನಿ’ ಪ್ರಶಸ್ತಿ ಪುರಸ್ಕೃತ ಲೇಖಕರು. ಪ್ರಸ ಕ್ತ ಕರ್ನಾಟಕ ವಿ ಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ)
ಉಮರ್ ಫಾರೂಕ್ ಜೆ. ಮೀರಾನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.