ಸಸ್ಯದಂತೆ ಮನುಜರ ಬದುಕು. ಬೆಳೆದು ಹಣ್ಣಾಗಿ ಉದುರುವುದು; ಮತ್ತೆ ಚಿಗುರುವುದು !
ಉಪನಿಷತ್ತುಗಳ ಹತ್ತಿರದಿಂದ
Team Udayavani, Jul 14, 2019, 5:00 AM IST
ನಚಿಕೇತನಾಡಿದ ಮಾತುಗಳು- “”ಯಮನ ಬಳಿಗೆ ಮೊದಲಿಗನಂತೆ ಹುಮ್ಮಸದಿಂದ ಹೋಗುವೆ; ಆದರೆ ಈ ಮೊದಲೂ ಇಂತಹದು ನಡೆದಿರಬಹುದಾಗಿ “ಮಧ್ಯಮ’ನಂತೆ ಹೋಗುವೆ; ಅಲ್ಲಿ ಯಮನಿಗೆ ನಾನು ಸಲ್ಲಿಸಬೇಕಾದ ಸೇವೆ ಯಾವುದಿರಬಹುದೆನ್ನುವುದು ತಿಳಿಯುವುದು ಮಾತ್ರ ಮುಂದಿನ ಮಾತು”- ಎಂದು ಆಡಿದ ಮಾತುಗಳು ಶೋಕ ವ್ಯಾಕುಲಿತನಾದ ತನ್ನ ತಂದೆಯೊಡನೆ ಆಡಿದ ಮಾತುಗಳೆಂದು ಎಲ್ಲ ವ್ಯಾಖ್ಯಾನಗಳೂ ಹೇಳುವವು. ಹೌದು. ತಂದೆ ವಾಜಶ್ರವಸ ಈಗ ವ್ಯಾಕುಲಗೊಂಡಿದ್ದ. ಮಗನನ್ನು ಮೃತ್ಯುವಿಗೆ ಕೊಟ್ಟಿದ್ದೇನೆ ಎಂದು ಸಿಟ್ಟಿನ ಭರದಲ್ಲಿ ತಂದೆ ಹೇಳಿದ್ದಾಗಿತ್ತು. ಆ ಮಾತನ್ನಾಡಿದ ಮೇಲಿನ ನೀರವ ಮೌನದಲ್ಲಿ ಸಾವಿನ ನೆರಳು ಕುಣಿಯುತ್ತಿತ್ತು! ಆದರೆ ಯಜ್ಞದಲ್ಲಿ ಪೂರ್ಣಾಹುತಿಯಾಗುವುದಕ್ಕೆ ಒಂದು ಹೆಜ್ಜೆ ಮಾತ್ರ ಬಾಕಿ ಎಂಬಂತಿತ್ತು. ಅದೆಂದರೆ- ತಂದೆಯ ಮನಸ್ಸು ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯುವುದು. ಹಾಗೆಯೇ ನಡೆಯಿತು. ವಾಜಶ್ರವಸನಿಗೆ ಮಗನ ಮೇಲಣ ಸಹಜ ಪ್ರೀತಿ ಉಕ್ಕಿ ತಾನು ಮಾಡಿದ ಘೋರವಾದ ತಪ್ಪು ತನಗೇ ದುರ್ಭರವಾಗಿ, ಪಶ್ಚಾತ್ತಾಪದಲ್ಲಿ ನಲುಗುತ್ತ ತಂದೆ ಕಂಗೆಟ್ಟು ನಿಂತಿದ್ದಾಗ- ನಚಿಕೇತನಾಡಿದ ಸಂತೈಕೆಯ ಮಾತುಗಳಿವು. ಇಂಥ ತಂದೆಯನ್ನು ಸಂತೈಸುತ್ತಿದ್ದಾನೆ ಮಗ. ಹಣ್ಣಾಗುತ್ತಿರುವ ಎಲೆಯನ್ನು ಅದರದೇ ಚಿಗುರು ಸಂತೈಸುತ್ತಿದೆ. ಹಣ್ಣಾಗುವುದು ಎಂದರೇನೆಂದು ಮುಗ್ಧವಾಗಿ ತೋರಿಸುತ್ತಿದೆ. ಇದು ಸಾವಿನ ಮಹಿಮೆಯೇ ಇರಬೇಕು.
ಯಮನಿಗೆ ಸಲ್ಲಿಸಬೇಕಾದ ಕರ್ತವ್ಯ ಯಾವುದಿರಬಹುದು ಎಂದು ಚಿಂತಿಸುತ್ತಿದ್ದಾನೆ ಮಗ. ಇದು ವಾಜಶ್ರವಸನಿಗೆ ಕರುಳನ್ನೇ ಕೊಯ್ಯುತ್ತಿರುವಂಥ ಮಾತುಗಳು. ಏಕೆಂದರೆ- ಯಮನನ್ನು ಕೂಡ ಇನ್ನೊಬ್ಬ ತಂದೆಯಂತೆಯೇ ಈ ಹುಡುಗ ಭಾವಿಸಿದ್ದಾನೆ. ಆದುದರಿಂದಲೇ ಸೇವೆಯ-ಕರ್ತವ್ಯದ ಮಾತಾಡುತ್ತಿದ್ದಾನೆ. ದೇವರೇ- ಯಮನಿಗಾದರೂ ಹುಡುಗನ ಮೇಲೆ ಕರುಣೆ ಉಂಟಾಗಲಿ ಎಂದು ವಾಜಶ್ರವಸ ಮೊರೆ ಇಡುತ್ತಿರಬಹುದು. ಸಾವಿಗೆ ಕರುಣೆ ಇಲ್ಲ- ಅದು ಕಠೊರ ಎಂದು ಭಾವಿಸಿ ಮಗನನ್ನು ಯಮನಿಗೆ ನೀಡಿದ ವಾಜಶ್ರವಸ; ಈಗ ತಂದೆಗಿಂತಲೂ ಯಮನು ಕರುಣಾಳುವಾಗಿರಲಿ ಎಂದು ಬಯಸುತ್ತಿದ್ದಾನೆ. ಅಹಂಕಾರಕ್ಕೆ ತನ್ನೊಳಗಿನ ಅರಿವಿನ ತೇವ ಅನುಭವವಾಗಬೇಕಾದರೆ ಅದು ಇಂಥ ವಿಲಕ್ಷಣ ತಿರುವಿನ ಗಾಣಗಳಲ್ಲಿ ಹೊಕ್ಕು ನುಗ್ಗು ನುರಿಯಾಗಬೇಕೆಂದು ತೋರುತ್ತದೆ. ತಂದೆಗೆ ಸೇವೆ ಸಲ್ಲಿಸಬೇಕು ಎಂದಷ್ಟೇ ಗೊತ್ತಿದ್ದ ನಚಿಕೇತ- ತನ್ನ ತಂದೆಯೇ ತೋರಿಸುತ್ತಿರುವ ಯಮನನ್ನು ಇನ್ನೊಬ್ಬ ತಂದೆಯಂತೆಯೇ ಮುಗ್ಧವಾಗಿ ಭಾವಿಸಿದ್ದು ಮಾತ್ರ ನಿಜ. ಹಾಗೆ ಭಾವಿಸಿ ತನಗೆ ತಿಳಿಯದೇ ಹೊಸ ಹುಟ್ಟಿಗೆ ಸಜ್ಜಾಗುತ್ತಿರುವುದೂ ನಿಜ. ಉಪನಿಷತ್ತು ನಮ್ಮ ಪ್ರಜ್ಞೆಯನ್ನು ಆಳಕ್ಕೆ ಒಯ್ಯಲು ಹೇಗೆ ಸಜ್ಜುಗೊಳ್ಳುತ್ತಿದೆ ನೋಡಿ. ಇದೂ ಸಾವಿನ ಮಹಿಮೆಯೇ ಇರಬೇಕು.
ಇನ್ನೊಂದು ಸೊಲ್ಲು ನಚಿಕೇತನಾಡಿದ್ದು ಅದು ಹೀಗೆ:
ಅನುಪಶ್ಯ ಯಥಾ ಪೂರ್ವೇ ಪ್ರತಿಪಶ್ಯ ತಥಾ—ಪರೇ
ಸಸ್ಯಮಿವ ಮರ್ತ್ಯಃ ಪಚ್ಯತೇ ಸಸ್ಯಮಿವಾಜಾಯತೇ ಪುನಃ ||
“”ನೋಡು- ಅನುಸರಿಸಿ ನೋಡು- ನಮ್ಮ ಪೂರ್ವಿಕರು ಏನು ನೋಡಿದರೆಂಬುದನ್ನು. ಎಂಥ ಗುರಿಯನ್ನು ತಮ್ಮ ಕಣ್ಣಮುಂದೆ ಇಟ್ಟುಕೊಂಡಿದ್ದರೆಂಬುದನ್ನು. ಇನ್ನೊಮ್ಮೆ ನೋಡು ಈಗಣವರನ್ನು ಕೂಡ. ಉಳಿದಂತೆ- ಸಸ್ಯದಂತೆ ಮನುಜರ ಬದುಕು. ಬೆಳೆದು ಹಣ್ಣಾಗಿ ಉದುರುವುದು; ಮತ್ತೆ ಚಿಗುರುವುದು”
ಆಹಾ! ಆಮೇಲೆ ಉಪನಿಷತ್ತಿನ ಒಳಗೆ ಪ್ರಕಟಗೊಳ್ಳುವ ಉಪದೇಶವೇ ನಚಿಕೇತನ ಈ ಮಾತಿನಲ್ಲಿ ಕೆನೆಗಟ್ಟಿದಂತಿದೆ. ಉಪನಿಷತ್ತಿಗೆ ಎರಡು ಸಾಲುಗಳ ಮುನ್ನುಡಿಯಂತಿದೆ. ಪ್ರಾಪ್ಯವರಾನ್ ನಿಬೋಧತ ಎಂದು ಉಪನಿಷತ್ತಿನ ಉಪದೇಶ. ಅಂದರೆ ದೊಡ್ಡವರ ಹತ್ತಿರವಿದ್ದು, ಅವರನ್ನು ಸೇವಿಸಿ ಅವರು ಪಡೆದ ಒಳ ಎಚ್ಚರವನ್ನು ನೀನೂ ಪಡೆದುಕೋ ಎಂಬ ಧ್ವನಿ. ದೊಡ್ಡವರ ಬಳಿಗೆ ನಾವೇ ಹೋಗಬೇಕು. ಹೋಗಿ ಸೇವಿಸಬೇಕು. ಅವರ ನೆರವಿಲ್ಲದೆ ನಾವು ನಡೆಯಲಾರೆವು. ಏಕೆಂದರೆ ಈ ಬದುಕಿನಲ್ಲಿ “ನಿಜ’ದ ಹುಡುಕಾಟವೆಂಬುದು ಕತ್ತಿಯಂಚಿನ ಮೇಲೆ ನಡೆದಂತೆ ಎಂಬ ಉಪನಿಷತ್ತಿನ ಹೊಳಹುಗಳೆಲ್ಲ ನಚಿಕೇತನ ಮಾತಿನಲ್ಲಿ- ಪೂರ್ವಿಕರ ಕಣ್ಣಮುಂದೆ ಇದ್ದ ಗುರಿ ಏನು ಎಂಬುದನ್ನು ನೋಡು, ಅದೇ ಗುರಿಯನ್ನು ಹೊತ್ತ ಈಗಿನವರನ್ನು ನೋಡು- ಎಂಬ ಮಾತಿನಲ್ಲಿ ಅಡಗಿದೆ.
ಈಗ, ವಾಜಶ್ರವಸನಾಡಿದ ಮಾತು- ಯಮನಿಗೆ ಕೊಟ್ಟಿದ್ದೇನೆ ಎಂಬ ಮಾತು- ದೊಡ್ಡವರ ಗುರುಕುಲಕ್ಕೆ ಮಗನನ್ನು ಕಳುಹಿಸಿಕೊಡುವ ಮಾತಿನಂತೆ- ಆಗಿಬಿಟ್ಟಿತು! ಸಾವಿನ ನಿಜವನ್ನು ಬದುಕಿನಲ್ಲಿ ಮನವರಿಕೆ ಮಾಡಿಕೊಳ್ಳಬಯಸುವ ತಾತ್ತಿ$Ìಕರಿಗೆ ವಾಜಶ್ರವಸನಾಡಿದ ಮಾತು ಎಷ್ಟು ಸತ್ಯ , ಈ ಬದುಕೆಂಬುದು ಪ್ರಕೃತಿಯೇ ಯಮನಿಗೆ ನೀಡುತ್ತಿರುವ ಕೈತುತ್ತಲ್ಲವೇ- ಎಂದೂ ಅನ್ನಿಸಿತು!
ಆದರೆ, ಇವು ವಾಜಶ್ರವಸನಿಗೆ ಸಾಂತ್ವನದ ಮಾತುಗಳು! ಈ ಮಾತುಗಳನ್ನು ಕೇಳಿ ಒಂದು ಬದಿಯಲ್ಲಿ ಹೌದೆನಿಸಿದರೂ ಇಂಥ ಮಾತುಗಳನ್ನಾಡಬಲ್ಲ ಇಂಥ ಮನಸ್ಸಿನ ಮಗನಿಗೆ ನಾನೆಂಥದನ್ನು ಕೊಟ್ಟುಬಿಟ್ಟೆ ಎಂದು ದುಃಖದ ದೊಡ್ಡ ಅಲೆಗಳು ತಂದೆಯ ಮನದೊಳಗೆ ಏಳುವವು. ಇದು ಲೌಕಿಕದ ಪಾಡು!
ಸಸ್ಯಗಳಂತೆ ನಮ್ಮ ಬದುಕು ಎಂಬ ಮಾತು ಬಂದಿದೆ. ಸಸ್ಯಗಳಂತೆ ಏನು, ಸಸ್ಯಗಳೊಡನೆಯೇ ನಮ್ಮ ಬದುಕು-ಒಳ ಬದುಕು ಕೂಡ ನಡೆದಿದೆ. ನಮ್ಮ ಭಾವಲೋಕದಲ್ಲಿ ಸಸ್ಯ ಪ್ರಪಂಚದ ಪದಗಳೆಷ್ಟು ಸೇರಿವೆ! ಮಣ್ಣಿನಲ್ಲಿ ಬೇರಿಳಿಸುವ ಮಾತು, ಬಾನಿನಲ್ಲಿ ಗೆಲ್ಲುಗಳನ್ನು ಹರಡುವ ಮಾತು, ಬೀಜ, ಮೊಳಕೆ, ಕಾಂಡ, ಚಿಗುರು, ಎಲೆ, ಹೂ, ಕಾಯಿ, ಹಣ್ಣುಗಳೆಂದು ಇಲ್ಲಿನ ವಾಸ್ತವಾನುಭವದಿಂದ ಹೊಮ್ಮಿ ನಮ್ಮ ಮನಸ್ಸಿನಲ್ಲಿ ಬೆಳೆಯುತ್ತಿರುವ ಪದಗಳು- ನಮ್ಮ ಮನಸ್ಸು ಬೆಳೆದಂತೆ ಈ ಪದಗಳ ಅರ್ಥಗಳೂ ಬೆಳೆಯುತ್ತವೆ. “”ಕಿಸಲಯಮಲೂನಂ ಕರರುಹೈಃ” ಎನ್ನುತ್ತಾನೆ ಕಾಳಿದಾಸ, ಶಾಕುಂತಲದಲ್ಲಿ. ಯಾರ ಬೆರಳ ತುದಿಯೂ ಸೋಕದ ಅಚ್ಚ ಹಸಿರು ಚಿಗುರು ಎಂಬರ್ಥದಲ್ಲಿ. ಅಷ್ಟು ಊrಛಿsಜ. ಅಷ್ಟು ಸದ್ಯೋಜಾತ. ಮುಗ್ಧತೆಯನ್ನು ಬಣ್ಣಿಸುವ ಚಿಗುರಿನ ರೂಪಕವಿದು. ಕವಿ ಬೇಂದ್ರೆಯವರ ಮಾತು ನೆನಪಾಗುತ್ತದೆ. ತಾನು ಅತ್ತಿಯ ಹಣ್ಣು ಎಂದು ತಮ್ಮ ಕುರಿತು ತಮ್ಮ ಕಾವ್ಯದ ಕುರಿತು ಸೂಚಕವಾಗಿ ಹೇಳುತ್ತಿದ್ದರು ಬೇಂದ್ರೆ. ಅತ್ತಿಯಲ್ಲಿ ಹೂ ಒಡೆಯುವುದಿಲ್ಲ. ಹಾಗೆ ಹೂವಾಗದೆ ಕಾಯಿಯಾಗಿ, ಹೂವಿನಲ್ಲಿರುವ ರಸ ಕಾಯಿಯಲ್ಲೇ ಸೇರಿ ತಾನು ರಸೋದರ ಉಳ್ಳವನು ಎನ್ನುತ್ತಿದ್ದರು. ತನ್ನದು ಔದುಂಬರ ಕಾವ್ಯ ಎನ್ನುತ್ತಿದ್ದರು. ಔದುಂಬರ ಎಂದರೆ ಅತ್ತಿ. ಔದುಂಬರ ಎನ್ನುವ ಪದವು ವಿಷ್ಣು ಸಹಸ್ರನಾಮದಲ್ಲಿ ಭಗವಂತನ ನಾಮವಾಗಿ ಸೇರಿರುವುದರಿಂದ, ವಿಷ್ಣು ಸಹಸ್ರನಾಮವು ವೈದಿಕವಾದುದರಿಂದ ತಾನು ವೇದಕವಿ-ವೇದವಿತ್ ಕವಿ ಎನ್ನುತ್ತಿದ್ದರು ಬೇಂದ್ರೆ. ಅತ್ತಿಯ ಜಾಲ ಎಲ್ಲಿಂದ ಎಲ್ಲಿಗೆ ಬೆಳೆಯುತ್ತೆ! ಸಸ್ಯಮಿವ ಮರ್ತ್ಯಃ ಪಚ್ಯತೇ…
ಹಿರೋಶಿಮಾದಲ್ಲಿ ಬಾಂಬ್ ಸ್ಫೋಟವಾದ ಮೇಲೆ, ಎಲ್ಲವೂ ವಿಕಿರಣಕ್ಕೆ ತುತ್ತಾಗಿ ನಾಶವಾದ ಮೇಲೆ, ಕೆಲವು ವರ್ಷಗಳ ಅನಂತರ ವಿಜ್ಞಾನಿಗಳ ಒಂದು ತಂಡ ಆ ಜಾಗದಲ್ಲಿ ಜೀವದ ಕುರುಹುಗಳಿವೆಯೇ ಎಂದು ಹುಡುಕಾಡುತ್ತಿದ್ದರು. ಆ ಮಸಣದಲ್ಲಿ ಏನೂ ಸಿಗಲಿಲ್ಲ. ಬಲು ಎಚ್ಚರದಿಂದ ಹುಡುಕಿದಾಗ ಕೊನೆಗೆ ಸಿಕ್ಕಿತು ಒಂದು ಬಿದಿರ ಮೊಳಕೆ! Ah- Here is a Bamboo shoot ಎಂಬ ಸಂಭ್ರಮೋದ್ಗಾರ ಹೊಮ್ಮಿತು! ಬಿದಿರಿಗೆ- ಅದು ಹಿಂಡು ಹಿಂಡಾಗಿ ಬೆಳೆಯುವುದರಿಂದ “ವಂಶ’ ಎಂದು ಕರೆಯುತ್ತಾರೆ. ಕೃಷ್ಣ ಎತ್ತಿಕೊಂಡದ್ದು ಬಿದಿರಿನ ಒಂದು ತುಂಡು. ಅದರೊಳಗಿನ ಟೊಳ್ಳಿನಲ್ಲಿ ಅವನ ಉಸಿರು ಹರಿದಾಡಿ ನಾದ ಹೊಮ್ಮಿ- ದ್ವಾಪರಕ್ಕೆ ಹೊಸ ರೋಮಾಂಚನ ಉಂಟಾಯಿತು! ಮೊದಲ ಬಾರಿಗೆ ಕೃಷ್ಣನ ಕೊಳಲು ಕೇಳಿದ ಗೋಪಿಕೆಯರಿಗೆ ಉತ್ಕಟವಾದ ಪ್ರೇಮಭಾವ ಮೂಡಿತು. ಉತ್ಕಟವಾದುದೆಲ್ಲವೂ ಬದುಕಿನ ಮಾಮೂಲಿತನವನ್ನು ಹರಿದೆಸೆದು ತೀವ್ರವಾಗಿ ಬದುಕುವ ರುಚಿಯನ್ನು ಉಂಟುಮಾಡುತ್ತಿವೆ. ಮತ್ತು ತೀವ್ರವಾದದ್ದು ಸಾವಿನ ಅನುಭವದ ಒಂದು ಝಲಕನ್ನು ಸೃಷ್ಟಿಸುತ್ತದೆ. ಬದುಕು ಮತ್ತು ಸಾವು ಎಷ್ಟು ಹತ್ತಿರ ಇವೆ.
ಎಷ್ಟು ಅನ್ಯೋನ್ಯ! ಸಸ್ಯಮಿವ ಮರ್ತ್ಯಃ ಪಚ್ಯತೇ ಸಸ್ಯಮಿವ ಜಾಯತೇ ಪುನಃ
ಇಲ್ಲಿನ ಇನ್ನೊಂದು ವಿಶೇಷವೆಂದರೆ- ಚಿಗುರು, ಗುರಿಯಂತಿರುವ ನಚಿಕೇತ, ಹಣ್ಣೆಲೆಯಂತಿರುವ ತನ್ನ ತಂದೆಗೆ ಬದುಕಿನ ಆಳದ ಸತ್ಯಗಳನ್ನು ಕುರಿತು ಹೇಳುತ್ತಿದ್ದಾನೆ. ಚಿಗುರಿನ ವೈರಾಗ್ಯವೇ ನಿಜವಾದ ವೈರಾಗ್ಯ. ಹಣ್ಣೆಲೆಯ ವೈರಾಗ್ಯ ಅನಿವಾರ್ಯವಾದ ವೈರಾಗ್ಯ. ಏಕೆಂದರೆ, ಚಿಗುರಿನಲ್ಲಿ ಮುಗ್ಧತೆ ಇದೆ. ಮುಗ್ಧತೆಗೆ ಹೊಳೆದ ವೈರಾಗ್ಯವಿದು. ಬದುಕಿನ ಅನುಭವಗಳಲ್ಲಿ ಕೂಡು-ಕಳೆ ಲೆಕ್ಕಾಚಾರ ಮಾಡಿ ಕೊನೆಗೆ ವೈರಾಗ್ಯವೇ ಒಳ್ಳೆಯದೆಂದುಕೊಂಡ ಪ್ರಯೋಜನಾಕಾಂಕ್ಷೆಯ ಕಸರತ್ತಲ್ಲ. ಮುಗ್ಧತೆಗೆ ಇದು ಹೊಳೆಯಬೇಕಾದರೆ ಅಲ್ಲಿ “ಕಾಲ’ದ ಸಾನ್ನಿಧ್ಯ ಸಮಗ್ರವಾಗಿ ಇದೆ ಎನ್ನಿಸುತ್ತದೆ. ಹುಟ್ಟು-ಸಾವು-ಮರುಹುಟ್ಟಿನ ಮಾತಾಡಬೇಕಾದರೆ “ಕಾಲ’ವು ತನ್ನ ವಿನ್ಯಾಸವನ್ನು-ಸಮಗ್ರ ವಿನ್ಯಾಸವನ್ನು- ಮಿಂಚಿನಂತೆ ಒಂದು ಕ್ಷಣದಲ್ಲಿ ಕೋರೈಸಿ ತೋರಿಸಬೇಕು. ಸಮಗ್ರವನ್ನು ನೋಡಿದರೆ ಉಂಟಾಗುವುದು ವಿರಕ್ತಿಯ ಭಾವ. ತುಂಡು-ತುಣುಕುಗಳನ್ನಷ್ಟೇ ನೋಡಿದರೆ ಅಲ್ಲಿ ರಕ್ತಿ, ಆಕರ್ಷಣೆ, ಅದರೆಡೆಗೆ ತುಡಿತ.
ಇದು ನಮ್ಮ ಪ್ರಜ್ಞೆಯ ಒಂದು ಆಶ್ಚರ್ಯ!
ಸಮಗ್ರವನ್ನು ಧಾರಣ ಮಾಡಲು ವಿರಕ್ತಿಯ ಭಾವಕ್ಕೆ ಮಾತ್ರ ಸಾಧ್ಯ. ಆಸೆಬುರುಕ ಮನಸ್ಸು ತನ್ನ ಆಸೆಯನ್ನು ತಾನೇ ತಡೆದುಕೊಳ್ಳಲಾರದು ಮತ್ತು ವಿರಕ್ತಿಯ ಅನುಭವವನ್ನು “ಮುಗ್ಧತೆ’ ಮಾತ್ರ ಅನುಭವಿಸಬಲ್ಲುದು! ಹೂವಾಗಿ ಕಾಯಾಗಿ ಬೆಳೆದು ಹಣ್ಣಾಗಬೇಕಾದ ಎಳೆಜೀವ ತನ್ನೊಳಗೆ ವಿರಕ್ತಿಯನ್ನು ಅನುಭವಿಸುವುದು ಈ ಭವದಲ್ಲಿ ಕರುಳು ನುಲಿಯುವ ಪ್ರಸಂಗವಾಗಿದೆ. ಇದೇ ಉಪನಿಷತ್ತಿನ ವಿಷಯವೂ ಆಗಿದೆ.
ಲಕ್ಷ್ಮೀಶ ತೋಳ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.