ಪ್ರಾತಿನಿಧ್ಯ ಪಡೆದ ಸದಸ್ಯರಿಗೆ ಪಕ್ಷದ ಜವಾಬ್ದಾರಿಯಿಂದ ಮುಕ್ತಿ
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಅಡ್ಡ ಮತದಾನದ ಪರಿಣಾಮ
Team Udayavani, Jul 15, 2019, 5:52 AM IST
ಸುಳ್ಯ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ವ-ಪಕ್ಷದ ಅಭ್ಯರ್ಥಿ ವಿರುದ್ಧ ಅಡ್ಡ ಮತದಾನ ಮಾಡಿದ ಘಟನೆಗೆ ಸಂಬಂಧಿಸಿ ಪಕ್ಷ ನೀಡಿದ ಸೂಚನೆಯನ್ನು ಸೋಮವಾರ ಸಂಜೆಯೊಳಗೆ ಪಾಲಿಸದಿದ್ದರೆ ಮತದಾನಕ್ಕೆ ಪ್ರಾತಿನಿಧ್ಯ ಪಡೆದಿದ್ದ ಸದಸ್ಯರನ್ನು ಪಕ್ಷದ ಎಲ್ಲ ಜವಾಬ್ದಾರಿಯಿಂದ ಮುಕ್ತಗೊಳಿಸಲು ಬಿಜೆಪಿ ಮಂಡಲ ಸಮಿತಿ ನಿರ್ಧರಿಸಿದೆ.
ಜು. 15ಕ್ಕೆ ಗಡುವು ನೀಡಿದ್ದು, ಅದರೊಳಗೆ ಸೊಸೈಟಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸ ದಿರುವ ಸದಸ್ಯರನ್ನು ಪಕ್ಷದ ಜವಾಬ್ದಾರಿ ಯಿಂದ ಮುಕ್ತಗೊಳಿಸಲು ನಿರ್ಧರಿಸಲಾ ಗಿದೆ. ಸೋಮವಾರ ಸಂಜೆ ತನಕ ಕಾದು ಮಂಗಳವಾರ ಶಿಸ್ತು ಕ್ರಮ ಪ್ರಕಟಿಸಲು ತೀರ್ಮಾನಿಸಲಾಗಿದೆ.
ಅಂಗೀಕಾರ ಆಗದಿದ್ದರೆ ಶಿಸ್ತು ಕ್ರಮ..!
ಮತದಾನಕ್ಕೆ ಅರ್ಹತೆ ಪಡೆದಿದ್ದವರು ಆಯಾ ಸಿ.ಎ. ಬ್ಯಾಂಕ್‌ನಲ್ಲಿ ಹೊಂದಿರುವ ಅಧ್ಯಕ್ಷ ಅಥವಾ ನಿರ್ದೇಶಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗಿಕರಿಸುವ ಜವಾಬ್ದಾರಿ ಕೂಡ ಆ ಸದಸ್ಯನಿಗೆ ಸೇರಿದೆ ಎನ್ನುವ ಷರತ್ತನ್ನು ಪಕ್ಷ ವಿಧಿಸಿದೆ. ಹೀಗಾಗಿ ರಾಜೀನಾಮೆ ಕೊಟ್ಟ ತತ್‌ಕ್ಷಣ ಎಲ್ಲವೂ ಮುಗಿಯದು ಅನ್ನುವುದು ಇಲ್ಲಿ ಖಾತರಿ ಆಗಿದೆ. ರಾಜೀನಾಮೆ ಕೊಟ್ಟು ಅದು ಅಂಗೀಕಾರವಾಗದಿದ್ದರೆ ಆ ಸದಸ್ಯರ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪಕ್ಷ ನೀಡಿದೆ.
ಅಡ್ಡ ಮತದಾನ ಹಿನ್ನೆಲೆ
ಡಿಸಿಸಿ ಆಡಳಿತ ಮಂಡಳಿ ಚುನಾವಣೆಗೆ ಮತ ಚಲಾಯಿಸಲು ತಾಲೂಕಿನ 23 ಸಹಕಾರ ಸಂಘಗಳ ಪೈಕಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 17 ಹಾಗೂ ಕಾಂಗ್ರೆಸ್ ಬೆಂಬಲಿತ 6 ಮತದಾರರು ಇದ್ದರು. ಹೀಗಾಗಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿ ವೆಂಕಟ್ ದಂಬೆಕೋಡಿ ಅವರ ಗೆಲುವು ನಿಶ್ಚಿತ ಎಂದು ಭಾವಿಸಲಾಗಿತ್ತು.
ಆದರೆ ಫಲಿತಾಂಶ ಪ್ರಕಟವಾದಾಗ ದೇವರಾಜ್ ಕೆ.ಎಸ್. ಅವರು 13 ಮತ ಪಡೆದು ಗೆಲುವು ಸಾಧಿಸಿದ್ದರು. ವೆಂಕಟ್ 10 ಮತಗಳನ್ನಷ್ಟೇ ಗಳಿಸಿದ್ದರು. ಇದರಿಂದ ಸಹಕಾರ ಭಾರತಿಯ 7 ಮಂದಿ ಅಡ್ಡ ಮತದಾನ ಮಾಡಿರುವುದು ಸ್ಪಷ್ಟವಾಗಿತ್ತು.
ಆಣೆ ಪ್ರಮಾಣವೂ ನಿಷ#ಲ
ಅಡ್ಡ ಮತದಾರರನ್ನು ಒಪ್ಪಿಸುವ ಎಲ್ಲ ತಂತ್ರಗಳು ವಿಫಲವಾದ ಕಾರಣ ಕೇರಳದ ಪ್ರಸಿದ್ಧ ಕಾರಣಿಕ ಸ್ಥಳದಲ್ಲಿ ಪ್ರಮಾಣ ಬರಬೇಕು ಎಂದು ಎಲ್ಲ ಸದಸ್ಯರಿಗೂ ಪಕ್ಷ ಸೂಚನೆ ನೀಡಿತ್ತು. ಆಣೆಗೆ ಭಯಪಟ್ಟು ಅಡ್ಡ ಮತದಾರರು ಸ್ವಯಂಪ್ರೇರಿತರಾಗಿ ತಪ್ಪು ಒಪ್ಪಿಕೊಳ್ಳಬಹುದು ಎನ್ನುವ ಉದ್ದೇಶದಿಂದ ಈ ತಂತ್ರಗಾರಿಕೆ ಹೆಣೆಯಲಾಗಿತ್ತು. ಆದರೆ 15 ಮಂದಿ ಸದಸ್ಯರು ಆಣೆ ಮಾಡಿ ತಪ್ಪೇ ಮಾಡಿಲ್ಲ ಎಂದು ಪ್ರಮಾಣ ಮಾಡಿದ್ದರು.
ರಾಜೀನಾಮೆ ಸಲ್ಲಿಸಲು ಸೂಚನೆ
ಆಣೆ-ಪ್ರಮಾಣದಲ್ಲಿಯೂ ಸತ್ಯ ಬಹಿರಂಗಪಡಿಸದ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಮತದಾನಕ್ಕೆ ಅರ್ಹತೆ ಪಡೆದ 17 ಮಂದಿಯೂ ಸಿ.ಎ. ಬ್ಯಾಂಕ್ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ಪಕ್ಷ ನೋಟಿಸ್ ಕಳುಹಿಸಿತ್ತು. ವೆಂಕಟ್ ದಂಬೆಕೋಡಿ, ಪ್ರಸನ್ನ ಎಣ್ಮೂರು, ವಿಷ್ಣುಭಟ್ ನೆಲ್ಲೂರು ಕೆಮ್ರಾಜೆ, ಹರೀಶ್ ರೈ ಉಬರಡ್ಕ, ರುಕ್ಮಯ್ಯ ಗೌಡ ಮರ್ಕಂಜ, ಶಿವಪ್ರಸಾದ್ ಉಗ್ರಾಣಿಮನೆ, ಅಜಿತ್ ಕೆ ಸಹಿತ ಒಟ್ಟು ಏಳು ಮಂದಿ ರಾಜೀನಾಮೆ ನೀಡಿದ್ದಾರೆ. ಉಳಿದವರು ಸ್ಪಂದಿಸದ ಹಿನ್ನೆಲೆಯಲ್ಲಿ ಜೂ. 30ರಂದು ಬೆಳ್ಳಾರೆ, ಎಡಮಂಗಲ ಸೊಸೈಟಿ ಅಧ್ಯಕ್ಷರನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಮುಕ್ತಿಗೊಳಿಸಿ ಮಂಡಲ ಸಮಿತಿ ಆದೇಶ ನೀಡಿತ್ತು. ಉಳಿದವರು ರಾಜೀನಾಮೆ ಸಲ್ಲಿಸಿರುವ ಬಗ್ಗೆ ಪಕ್ಷಕ್ಕೆ ಈ ತನಕ ಮಾಹಿತಿ ಸಿಕ್ಕಿಲ್ಲ.
ಜವಾಬ್ದಾರಿ ಮುಕ್ತಿ ಕ್ರಮಕ್ಕೆ ಅಸಮಾಧಾನ
ಏಳು ಮಂದಿ ತಪ್ಪು ಮಾಡಿ 17 ಮಂದಿ ಮೇಲೆ ಕ್ರಮ ಕೈಗೊಳ್ಳುವ ಪಕ್ಷದ ಮಂಡಲ ಸಮಿತಿ ನಡೆ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಡ್ಡ ಮತದಾನ ಮಾಡಿಲ್ಲ ಎಂದು ಕಾರಣಿಕ ಕ್ಷೇತ್ರದಲ್ಲಿ ಪ್ರಮಾಣ ಮಾಡಲಾಗಿದೆ. ಈಗ ರಾಜೀನಾಮೆ ಕೊಟ್ಟರೆ ತಪ್ಪು ಸಂದೇಶ ರವಾನೆಯಾಗುತ್ತದೆ. ತಪ್ಪು ಮಾಡದೆ ಏಕೆ ರಾಜೀನಾಮೆ ಕೊಟ್ಟರು ಎಂಬ ಪ್ರಶ್ನೆ ಜನರನ್ನು ಕಾಡಬಹುದು. ತಪ್ಪು ಮಾಡದಿರುವ ಸದಸ್ಯರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸುವ ಕ್ರಮ ಎಷ್ಟು ಸರಿ ಎಂಬ ಪ್ರಶ್ನೆ ಕೇಳಿ ಬಂದಿದೆ. ಪ್ರಮಾಣದಲ್ಲಿ ನಂಬಿಕೆ ಇಲ್ಲದಿದ್ದರೆ ಮಾತ್ರ ಈ ಶಿಸ್ತು ಕ್ರಮ ಕೈಗೊಳ್ಳಬಹುದಷ್ಟೇ. ಅಲ್ಲಿ ನಾವು ನುಡಿದ ಮಾತಿನಲ್ಲಿ ವಿಶ್ವಾಸವಿಲ್ಲದಿದ್ದರೆ ಪ್ರಮಾಣಕ್ಕೆ ಕರೆಯಿಸಿದ್ದೇಕೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಳೆ ಕ್ರಮ ಖಚಿತ
17 ಮಂದಿಗೂ ರಾಜೀನಾಮೆ ನೀಡಲು ಸೂಚಿಸಲಾಗಿತ್ತು. 7 ಮಂದಿ ನೀಡಿದ್ದಾರೆ. ಇಬ್ಬರನ್ನು ಪಕ್ಷದ ಜವಾಬ್ದಾರಿಯಿಂದ ಮುಕ್ತಗೊಳಿಸ ಲಾಗಿದೆ. ಉಳಿದವರು ರಾಜೀನಾಮೆ ನೀಡದಿದ್ದರೆ ಎಲ್ಲರ ಮೇಲೂ ಇದೇ ಕ್ರಮ ಜರುಗಿಸಲಾಗುವುದು. ಸದಸ್ಯರು ಸೊಸೈಟಿ ನಿರ್ದೇಶಕ, ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆ ಅಂಗೀಕಾರವಾಗದಿದ್ದರೆ ಪಕ್ಷ ಕ್ರಮ ಕೈಗೊಳ್ಳಲಿದೆ.
– ವೆಂಕಟ ವಳಲಂಬೆ ಅಧ್ಯಕ್ಷರು, ಬಿಜೆಪಿ ಮಂಡಲ ಸಮಿತಿ, ಸುಳ್ಯ
-ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.