ಮಳೆರಾಯ ಮುನಿದರೆ ಕೈಕೊಡುವಳು ಕಾವೇರಿ!

ಸುದ್ದಿ ಸುತ್ತಾಟ

Team Udayavani, Jul 15, 2019, 3:10 AM IST

maleraya

ಚಿತ್ರಗಳು: ಫ‌ಕ್ರುದ್ದೀನ್‌ ಎಚ್‌.

ನಿರಾತಂಕವಾಗಿ ನೀರು ಬಳಸುತ್ತಿರುವ ರಾಜಧಾನಿಯ ನಾಗರಿಕರೇ, ಈಗಿನಿಂದಲೇ ನೀರನ್ನು ಮಿತವಾಗಿ ಬಳಸಲು ಆರಂಭಿಸಿ. ಏಕೆಂದರೆ ಕಾವೇರಿ ಕೈಕೊಡಲಿದ್ದಾಳೆ. ಕಾರಣ ಈ ಬಾರಿ ಕಾವೇರಿ ಕಣಿವೆಯಲ್ಲಿ ಅಗತ್ಯದಷ್ಟು ಮಳೆ ಆಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಿರೀಕ್ಷೆಯಷ್ಟು ಮಳೆ ಆಗದಿದ್ದರೆ ಬೆಂಗಳೂರಿಗರ ಕುಡಿಯುವ ನೀರಿನ ಬಳಕೆಗಾಗಿ ಸರಬರಾಜಾಗುವ ಕಾವೇರಿ ನೀರಿನ ಪ್ರಮಾಣದಲ್ಲಿ ಇಳಿಕೆ ಆಗಲಿದೆ. ಆಗ ವಾರಕ್ಕೊಮ್ಮೆ ಅಥವಾ ಎರಡು ಬಾರಿ, ಕೇವಲ ಒಂದು ತಾಸು ನೀರು ಸರಬರಾಜಾದರೂ ಹೆಚ್ಚು ಎನ್ನುತ್ತಿದೆ ಜಲಮಂಡಳಿ. ಪ್ರಸ್ತುತ ಬೆಂಗಳೂರಿಗೆ ಲಭ್ಯವಿರುವ ನೀರೆಷ್ಟು, ಮಳೆ ಆಗದಿದ್ದರೆ ಏನಾಗಬಹುದು ಎಂಬ ಮಾಹಿತಿ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ.

ಬೇಸಿಗೆ ಆರಂಭವಾದರೆ ನೀರಿಗೆ ಹಾಹಾಕಾರ ಶುರುವಾಗುವುದು ಸಾಮಾನ್ಯ. ಆದರೆ, ಈ ಬಾರಿ ಸರಿಯಾಗಿ ಮಳೆಯಾಗದಿದ್ದರೆ, ಮುಂಗಾರು ಮುಗಿಯುವ ಮೊದಲೇ ರಾಜಧಾನಿ ಜನರಿಗೆ ಬಿಸಿ ಮುಟ್ಟಲಿದೆ. ನಗರದ ಮನೆಗಳಿಗೆ ನಿತ್ಯ ಅಥವಾ ಎರಡು ದಿನಕೊಮ್ಮೆ ಸಿಗುತ್ತಿದ್ದ ಕಾವೇರಿ ನೀರು ಮುಂದಿನ ತಿಂಗಳಿಂದ ವಾರಕ್ಕೆ ಎರಡು ದಿನ ಮಾತ್ರ ಬರಲಿದೆ. ಅಥವಾ ಒಮ್ಮೆಗೆ ನಿರಂತರವಾಗಿ ಮೂರು ಗಂಟೆ ಬರುತ್ತಿದ್ದ ನೀರು ಒಂದು ಗಂಟೆ ಮಾತ್ರ ಬರಲಿದೆ. ಮುಂದಿನ ಬೇಸಿಗೆ ಅವಧಿಯಲ್ಲಿ ಈ ಪ್ರಮಾಣ ಇನ್ನಷ್ಟು ಕುಗ್ಗಬಹುದು!

ಮಳೆ ಕೊರತೆ ಹಿನ್ನೆಲೆಯಲ್ಲಿ ಜಲಮಂಡಳಿ ಹೀಗೊಂದು ಚಿಂತನೆ ನಡೆಸುತ್ತಿದೆ. ಕಳೆದ ವರ್ಷ ಕಾವೇರಿಯಿಂದ ಲಭ್ಯವಾಗಿರುವ ನೀರಿನಲ್ಲಿ ಆಗಸ್ಟ್‌ ಎರಡನೇ ವಾರದವರೆಗೂ ನಗರಕ್ಕೆ ಸಮರ್ಪಕವಾಗಿ ನೀರು ಸಿಗಲಿದೆ. ಪ್ರಸ್ತಕ ಸಾಲಿನ ಮುಂಗಾರಲ್ಲಿ ಲಭ್ಯವಾಗಲಿರುವ ನೀರಿನ ಪ್ರಮಾಣ ನೋಡಿಕೊಂಡು ಎಷ್ಟು ದಿನಕ್ಕೊಮ್ಮೆ, ಎಷ್ಟು ಹೊತ್ತು ನೀರು ಬಿಡಬೇಕು ಎಂಬುದನ್ನು ಜಲಮಂಡಳಿ ನಿರ್ಧರಿಸಲಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಜುಲೈ ತಿಂಗಳ ಮೂರು ವಾರ ಕಳೆದರೂ ಮುಂಗಾರು ಬಿರುಸಾಗಿಲ್ಲ. ಕೆಆರ್‌ಎಸ್‌ ಜಲಾಶಯ ಕಳೆದ ಬಾರಿ ಈ ವೇಳೆಗಾಗಲೇ ತುಂಬಿತ್ತು. ಆದರೆ, ಈ ಬಾರಿ ಜಲಾಶಯದಲ್ಲಿ ಕಾಲು ಭಾಗದಷ್ಟೂ ನೀರಿಲ್ಲ. ಇನ್ನು ಕಬಿನಿಯಲ್ಲೂ ಇದೇ ಪರಿಸ್ಥಿತಿ ಇದ್ದು, ಅರ್ಧದಷ್ಟು ಜಲಾಶಯ ಖಾಲಿ ಇದೆ.

ಕುಡಿಯುವ ನೀರಿಗಾಗಿ ರಾಜಧಾನಿ ಬೆಂಗಳೂರು, ಮೈಸೂರು, ತುಮಕೂರು ನಗರ ಸೇರಿದಂತೆ 47 ಪಟ್ಟಣಗಳು, ನೀರಾವರಿ ಹಾಗೂ ಕುಡಿಯುವ ನೀರಿಗೆ 625 ಹಳ್ಳಿಗಳು ಈ ಜಲಾಶಯಗಳನ್ನು ನಂಬಿಕೊಂಡಿವೆ. ಜುಲೈ ಮೂರನೇ ವಾರಕ್ಕೆ ಕಾಲಿಟ್ಟರೂ 124.8 ಅಡಿ ಸಾಮರ್ಥ್ಯದ ಕೆಆರ್‌ಎಸ್‌ ಜಲಾಶಯದಲ್ಲಿ 89.2 ಅಡಿ (11 ಟಿಎಂಸಿ) ನೀರು ಶೇಖರಣೆಯಾಗಿದೆ. ಕಳೆದ ವರ್ಷ ಈ ವೇಳೆಗೆ ಜಲಾಶಯದಲ್ಲಿ 121 ಅಡಿ (39 ಟಿಎಂಸಿ) ನೀರು ಸಂಗ್ರಹವಾಗಿತ್ತು. ಇನ್ನು ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂದಿನ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಷ್ಟು ಮಳೆಯಾಗದಿದ್ದರೆ, ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಲಿದೆ.

ನೀರಿಕ್ಷೆಯಂತೆ ನೀರು ಸಂಗ್ರಹ ಕಷ್ಟ: ಹವಾಮಾನ ಇಲಾಖೆ ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ಪ್ರಕಾರ ಈ ಬಾರಿ ರಾಜ್ಯದಲ್ಲಿ ಮುಂಗಾರು ಮಂಕಾಗಿದೆ. ಪೂರ್ವ ಮುಂಗಾರು ಕೂಡ ಕೈಕೊಟ್ಟಿದ್ದು, ಜೂನ್‌ ಮೊದಲ ವಾರ ಆರಂಭವಾಗಬೇಕಿದ್ದ ಮುಂಗಾರು, ಮೂರನೇ ವಾರದಲ್ಲಿ ಆರಂಭವಾಗಿದೆ. ಆದರೂ, ದಕ್ಷಿಣ ಒಳನಾಡು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಯಂತೆ ಮಳೆಯಾಗಿಲ್ಲ. ಇದರಿಂದ ಜೂನ್‌ ತಿಂಗಳ ಅಂತ್ಯಕ್ಕೆ ಕೆಆರ್‌ಎಸ್‌ ಜಲಾಶಯಕ್ಕೆ ವಾಡಿಕೆಯಂತೆ 32 ಟಿಎಂಸಿ ನೀರು ಬರಬೇಕಿತ್ತು. ಆದರೆ, ಆ ತಿಂಗಳು ಕೇವಲ 2.85 ಟಿಎಂಸಿ ನೀರು ಬಂದಿದೆ. ಇನ್ನು ಜುಲೈನಲ್ಲಿ 92 ಹಾಗೂ ಆಗಸ್ಟ್‌ನಲ್ಲಿ 90 ಟಿಎಂಸಿ ನೀರು ಬರಬೇಕಿದೆ. ಆದರೆ, ಸದ್ಯ ಮುಂಗಾರು ದುರ್ಬಲವಾಗಿರುವ ಕಾರಣ ಜಲಾಶಯಲ್ಲಿ ನಿರೀಕ್ಷೆಯಂತೆ ನೀರು ಸಂಗ್ರಹವಾಗುವುದು ಕಷ್ಟ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಡಾ.ಜಿ.ಎಸ್‌.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ನೀರು ಹಂಚಿಕೆಗೆ ನೀರಾವರಿ ಇಲಾಖೆ ಜತೆ ಸಭೆ: ಜಲಮಂಡಳಿ ಹಾಗೂ ನೀರಾವರಿ ಇಲಾಖೆ ಜಂಟಿ ಸಭೆ ಇಷ್ಟರಲ್ಲೇ ನಡೆಯಲಿದ್ದು, ಪ್ರಸಕ್ತ ವರ್ಷ ನೀರಿನ ಹಂಚಿಕೆ ಕುರಿತು ಚರ್ಚೆ ನಡೆಯಲಿದೆ. “ಪ್ರತಿ ವರ್ಷ ಬೆಂಗಳೂರಿನ ಜನರಿಗೆ ಕನಿಷ್ಠ 19 ಟಿಎಂಸಿಯಷ್ಟು ನೀರುಬೇಕು. ಆದರೆ ಈ ಬಾರಿ ಮುಂಗಾರು ಕೈಕೊಟ್ಟು ಜಲಾಶಯ ಭರ್ತಿಯಾಗದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಸಿಗುವ ನೀರಿನ ಪಾಲು ಕಡಿಮೆಯಾಗಬಹುದು. ಕುಡಿಯುವ ನೀರಿಗೆ ಮೊದಲು ಆದ್ಯತೆ ಕೊಡಲು ಮನವಿ ಮಾಡಲಾಗುತ್ತದೆ ಬಳಿಕ ಸಿಗುವ ನೀರನ್ನು ಮಿತವಾಗಿ ಬಳಸುವ ಕುರಿತು ಯೋಜನೆ ರೂಪಿಸಲಿದ್ದೇವೆ’ ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

ಕಡಿಮೆ ನೀರು ಸಿಕ್ಕರೆ ಪರ್ಯಾಯವೇನು?: ಮಳೆ ಕೊರತೆಯಾಗಿ ಜಲಾಶಯಗಳಲ್ಲಿ ಕಡಿಮೆ ನೀರು ಸಂಗ್ರಹಣೆಯಾದರೆ ಜಲಾಶಯದಲ್ಲಿರುವ ಬಹುಪಾಲು ನೀರನ್ನು ಬೆಂಗಳೂರಿನ ಜನರಿಗೆಂದೇ ಕೇಳಲು ಸಾಧ್ಯವಾಗುವುದಿಲ್ಲ. ಸಿಗುವ ನೀರಿನ ಲಭ್ಯತೆ ನೋಡಿಕೊಂಡು ಈ ಕೆಳಗಿನ ಕ್ರಮ ಕೈಗೊಳ್ಳಲು ಜಲಮಂಡಳಿ ಅಧಿಕಾರಿಗಳು ಮುಂದಾಗಿದ್ದಾರೆ. -ಕಾವೇರಿಯಿಂದ ಬೆಂಗಳೂರಿಗೆ ನಿತ್ಯ ಪಂಪ್‌ ಮಾಡುವ ನೀರಿನ ಪ್ರಮಾಣದಲ್ಲಿ ಶೇ.10ರಷ್ಟು ಇಳಿಕೆ ಮಾಡಲಾಗುತ್ತದೆ. ಅಂದರೆ 1,450 ದಶಲಕ್ಷ ಲೀ. ನೀರನ್ನು ಪಂಪ್‌ ಮಾಡಲಾಗುತ್ತಿದ್ದು, ಅದನ್ನು 1,350 ದಶಲಕ್ಷ ಲೀ.ಗೆ ಇಳಿಸುವುದು.

-ನಗರದ ಸಾರ್ವಜನಿಕರಿಗೆ ನೀರಿನ ಮಿತ ಬಳಕೆಗೆ ಸೂಚನೆ ನೀಡುವುದು.

-ಸದ್ಯ ಸಾರ್ವಜನಿಕರಿಗೆ ಲಭ್ಯವಾಗುವ ನೀರಿನ ಪ್ರಮಾಣವನ್ನು ಒಂದಿಷ್ಟು ಕಡಿಮೆ ಮಾಡುವುದು. (ನೀರು ಬಿಡುವ ದಿನಗಳ, ಸಮಯದ ಅಂತರ ಹೆಚ್ಚಿಸುವುದು)
ವಾಣಿಜ್ಯ ಕಟ್ಟಡಗಳಿಗೆ ನೀಡುತ್ತಿರುವ ನೀರಿನ ಆದ್ಯತೆ ಕಡಿಮೆ ಮಾಡುವುದು.

-ಕಾಮಗಾರಿಗೆ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಸಂಸ್ಕರಿಸಿದ ನೀರನ್ನು ಬಳಸುವಂತೆ ಕಡ್ಡಾಯಗೊಳಿಸಬಹುದು.

-ತೃತ್ತೀಯ ಹಂತದಲ್ಲಿ ಸಂಸ್ಕರಿಸಿದ ನೀರಿನ ಬಳಕೆ ಹೆಚ್ಚಿಸಲು ಮುಂದಾಗುವುದು.

-ಮಳೆ ನೀರು ಸಂಗ್ರಹಣೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು: ರಾಜಧಾನಿಯಲ್ಲಿ ನೀರಿನ ತತ್ವಾರ ಉಂಟಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಮಳೆ ಕೊರತೆಯಿಂದ ಸಾಕಷ್ಟು ಬಾರಿ ಬೆಂಗಳೂರಿಗೆ ಸಿಗುವ ನೀರಿನ ಪ್ರಮಾಣ ಕಡಿಮೆ ಮಾಡಲಾಗಿತ್ತು. ಜಲಮಂಡಳಿಯಾಗಲಿ ಅಥವಾ ಸಾರ್ವಜನಿಕರಾಗಲಿ ಆಗಲೇ ಎಚ್ಚೆತ್ತುಕೊಂಡಿದ್ದರೆ ಸದ್ಯ ಕಾವೇರಿಯಿಂದ ಕಡಿಮೆ ನೀರು ಸಿಕ್ಕರೂ ಸುಲಭವಾಗಿ ನಿಭಾಯಿಸಬಹುದಿತ್ತು. ಆದರೆ, ಜಲಮಂಡಳಿ ಹಾಗೂ ಸಾರ್ವಜನಿಕರ ನಿರ್ಲಕ್ಷ್ಯ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.

ನಗರದಲ್ಲಿ 4 ಟಿಎಂಸಿ ನೀರು ಪೋಲು!: ರಾಜಧಾನಿಯಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಜಲಮಂಡಳಿ ಹಾಗೂ ಸಾರ್ವಜನಿಕರು ವಿಫ‌ಲರಾಗಿದ್ದಾರೆ. ಮಳೆ ನೀರುಕೊಯ್ಲು ಕಡ್ಡಾಯಗೊಳಿಸಿ ಸರ್ಕಾರ 2009ರಲ್ಲಿ ಕಾಯ್ದೆ ಜಾರಿಗೊಳಿಸಿದೆ. ಕಾಯ್ದೆ ಜಾರಿಯಾಗಿ 10 ವರ್ಷ ಕಳೆದರೂ ನಗರದಲ್ಲಿ ಪದ್ಧತಿ ಅಳವಡಿಕೆ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ನಗರದಲ್ಲಿ ಮಳೆನೀರು ಕೊಯ್ಲು ವ್ಯಾಪ್ತಿಗೆ ಬರುವ 1.16 ಲಕ್ಷ ಕಟ್ಟಡಗಳಿದ್ದು, ಅವುಗಳ ಪೈಕಿ 50 ಸಾವಿರ ಕಟ್ಟಡಗಳು ಮಳೆನೀರು ಕೊಯ್ಲು ಅಳವಡಿಸಿಕೊಂಡಿಲ್ಲ. ಇದರಿಂದಾಗಿ ನಗರದಲ್ಲಿ ಪ್ರತಿ ವರ್ಷ 4 ಟಿಎಂಸಿ ನೀರು ಪೋಲಾಗುತ್ತಿದೆ.

ಲೆಕ್ಕಕ್ಕೆ ಸಿಗದ ನೀರಿಗೆ ಇನ್ನೂ ಬಿದ್ದಿಲ್ಲ ಕಡಿವಾಣ: 40 ಕಿ.ಮೀ ದೂರದ ತೊರೆಕಾಡನಹಳ್ಳಿಯಿಂದ ಬೆಂಗಳೂರಿಗೆ ಜಲಮಂಡಳಿ ನೀರು ತರುತ್ತಿದ್ದು, ಪ್ರತಿದಿನ ಸರಬರಾಜು ಆಗುತ್ತಿರುವ 1,450 ಎಂಎಲ್‌ಡಿ ಕಾವೇರಿ ನೀರಿನಲ್ಲಿ ಶೇ.37ರಷ್ಟು ನೀರು ಇಂದಿಗೂ ಲೆಕ್ಕಕ್ಕೆ ಸಿಗುತ್ತಿಲ್ಲ. ಇದರಿಂದಾಗಿ ದಾಖಲೆ ಪ್ರಕಾರ ನಗರದ ಜನರಿಗೆ ಪ್ರತಿದಿನ ಸುಮಾರು 900 ದಶಲಕ್ಷ ಲೀ. ನೀರು ಮಾತ್ರ ತಲುಪುತ್ತಿದೆ. ಉಳಿದ 500 ದಶಲಕ್ಷ ಲೀಟರ್‌ಗೂ ಹೆಚ್ಚು ನೀರಲ್ಲಿ ಶೇ.20ರಷ್ಟು ಕಳ್ಳತನವಾದರೆ, ಉಳಿದ ನೀರು ಸೋರಿಕೆಯಾಗುತ್ತಿದೆ. ಇನ್ನು ಈ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿಯೇ ಪರಿಣಾಮಕಾರಿ ಕ್ರಮಕ್ಕೆ ಜಲಮಂಡಳಿ ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಸೋರಿಕೆ ತಡೆಗೆ ಕಳೆದ ಮೂರು ವರ್ಷಗಳಿಂದ ಜಪಾನ್‌ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ಆರ್ಥಿಕ ನೆರವನ್ನು ಹಾಗೂ ಸೂಡೊ ಸಂಸ್ಥೆಯಿಂದ ತಾಂತ್ರಿಕ ಸಹಕಾರವನ್ನು ಪಡೆದು ಕ್ರಮಕೈಗೊಳ್ಳುತ್ತಿದ್ದರೂ ಶೇ.3ರಷ್ಟು ಮಾತ್ರ ಸೋರಿಕೆ ಹತೋಟಿಗೆ ಬಂದಿದೆ.

ತ್ಯಾಜ್ಯ ನೀರು ಬಳಕೆಗೆ ಕ್ರಮ ಕೈಗೊಳ್ಳುತ್ತಿಲ್ಲ: ನಗರದ ವಿವಿಧೆಡೆ ಇರುವ 15ಕ್ಕೂ ಹೆಚ್ಚು ಬೃಹತ್‌ ತ್ಯಾಜ್ಯ ನೀರು ಸಂಸ್ಕರಣೆ ಘಟಕ ಹಾಗೂ ಅಪಾರ್ಟ್‌ಮೆಂಟ್‌ಗಳ ತ್ಯಾಜ್ಯ ಸಂಸ್ಕರಣೆ ಘಟಕಗಳಿಂದ ನಿತ್ಯ 721 ದಶಲಕ್ಷ ಲೀ. ನೀರು ಸಂಸ್ಕರಣೆಯಾಗುತ್ತಿದೆ. ಆದರೆ, ಇಂದಿಗೂ ಆ ನೀರಿನ ಸೂಕ್ತ ಬಳಕೆಯಾಗುತ್ತಿಲ್ಲ. ಕಾರಣ ಸಂಸ್ಕರಿಸಿದ ನೀರಿನ ಪೂರೈಕೆಗೆಂದು ಪ್ರತ್ಯೇಕ ಮಾರ್ಗ (ನೀರಿನ ಕೊಳವೆ) ಇಲ್ಲ. ಲಾಲ್‌ಬಾಗ್‌ ಹಾಗೂ ಕಬ್ಬನ್‌ ಉದ್ಯಾನ, ಯಲಹಂಕ ಹಾಗೂ ವೃಷಭಾವತಿ ವ್ಯಾಲಿಯಲ್ಲಿ ತೃತೀಯ ಹಂತದ ನೀರು ಸಂಗ್ರಹಣೆ ಘಟಕಗಳಿದ್ದು, ಇವುಗಳ ನೀರನ್ನು ಮಾರಾಟ ಮಾಡಲು ಜಲಮಂಡಳಿ ಮುಂದಾದರೂ ಜನ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, 90 ದಶಲಕ್ಷ ಲೀ. ನೀರು ಇಲ್ಲಿ ಸಂಸ್ಕರಣೆಯಾದರೂ 10 ದಶಲಕ್ಷದಷ್ಟು ನೀರು ಮಾತ್ರ ಖರ್ಚಾಗಿದೆ. ಉಳಿದ ನೀರನ್ನು ಕೆರೆಗೆ ಹರಿಸಲಾಗುತ್ತಿದೆ. ಅಂತೆಯೇ ಜಲಮಂಡಳಿಯು ನಗರದಲ್ಲಿ 2000 ಚ.ಅ ವಿಸ್ತೀರ್ಣ ಮೇಲ್ಪಟ್ಟ ಕಟ್ಟಡಗಳಿಗೆ ಎಸ್‌ಟಿಪಿ ಕಡ್ಡಾಯಗೊಳಿಸಿದೆ. ಆದರೆ, ಇಂದಿಗೂ 400ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು ಎಸ್‌ಟಿಪಿ ಅಳವಡಿಸಿಕೊಂಡಿಲ್ಲ. ಇನ್ನು ಅಳವಡಿಸುತ್ತಿರುವ ಕಟ್ಟಡಗಳು ನೀರನ್ನು ಸೂಕ್ತ ರೀತಿಯಲ್ಲಿ ಮರುಬಳಕೆ ಮಾಡುತ್ತಿಲ್ಲ.

ಕಾಮಗಾರಿಗೆ ಸಂಸ್ಕರಿಸಿದ ನೀರು ಬಳಸಲಿ: ನಗರದಲ್ಲಿ ಸಾವಿರಾರು ಕಟ್ಟಡಗಳ ಹಾಗೂ ರಸ್ತೆ, ಮೆಟ್ರೋ ಕಾಮಗಾರಿ ನಡೆಯುತ್ತಿವೆ. ಆ ಕಾಮಗಾರಿಗಳಿಗೆ ಇಂದಿಗೂ ಶುದ್ಧ ನೀರನ್ನೇ ಬಳಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಲಭ್ಯವಾಗುವ ಕುಡಿಯು ನೀರಿಗೆ ಸಮಸ್ಯೆಯಾಗುತ್ತಿದೆ. ಇಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕಗಳಿಂದ ಸಂಸ್ಕರಿಸಿದ ನೀರನ್ನು ಬಳಸಲು ಯಾವುದೇ ಸಮಸ್ಯೆ ಇಲ್ಲ ಎಂದು ತಜ್ಞರು ಹೇಳುತ್ತಾರೆ. ಈ ಕುರಿತು ಸರ್ಕಾರ, ಹೊಸ ಕಟ್ಟಡಗಳಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡುವಾಗಲೇ ಕಾಮಗಾರಿಗೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನು ಪಡೆಯಬೇಕು ಎಂದು ಕಾನೂನು ಜಾರಿಗೊಳಿಸಬೇಕಿದೆ. ಜತೆಗೆ ನಗರ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ರೈಲ್ವೆ ಘಟಕಗಳಲ್ಲಿ ಸ್ವತ್ಛತಾ ಕಾರ್ಯಕ್ಕೆ, ಬಿಬಿಎಂಪಿ ವ್ಯಾಪ್ತಿಯ 1200ಕ್ಕೂ ಹೆಚ್ಚು ಉದ್ಯಾನಗಳಲ್ಲಿ ಸಂಸ್ಕರಿಸಿದ ನೀರು ಬಳಸಬಹುದಾಗಿದೆ.

ಹೊಸ ನೀರಿನ ಯೋಜನೆಗೆ ತಜ್ಞರ ನಿರಾಕರಣೆ: ರಾಜಧಾನಿ ಬೆಂಗಳೂರಿನ ನೀರಿನ ದಾಹ ತಣಿಸಲು ಸರ್ಕಾರ ಹೊಸ ನೀರಿನ ಮೂಲಗಳನ್ನು ಹುಡುಕಿ ಅಲ್ಲಿಂದ ನೀರನ್ನು ತರುವ ಯೋಜನೆಗಳಿಗೆ ಕೈ ಹಾಕುವ ಬದಲು ಆ ಅನುದಾನದಲ್ಲಿ ನಗರದಲ್ಲಿ ಕೆರೆಗಳ ಪುನರುಜ್ಜೀವನ ಮಾಡಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿಗಳು ಸೇರಿದಂತೆ ನೀರಾವರಿ ತಜ್ಞರು, ಹವಾಮಾನ ತಜ್ಞರು ಹೇಳಿತ್ತಿದ್ದಾರೆ. ನಮ್ಮಲ್ಲೆ ನೀರಿನ ಮೂಲ, ಮರುಬಳಕೆ ಹೆಚ್ಚಿಸಿಕೊಳ್ಳದೇ ಬೇರೆಡೆಯಿಂದ ನೀರು ತರುವುದು ಭವಿಷ್ಯದ ದೃಷ್ಟಿಯಿಂದ ಒಳಿತಲ್ಲ. ಅಭಿವೃದ್ಧಿ ಹೆಸರಲ್ಲಿ ಹಾಗೂ ಒತ್ತುವರಿಯಿಂದ ಬೆಂಗಳೂರಿನಲ್ಲಿ ಸ್ವಾತಂತ್ರ ಪೂರ್ವದಲ್ಲಿದ್ದ 280 ಕೆರೆಗಳು ಸಂಖ್ಯೆ 194ಕ್ಕೆ ಇಳಿದಿದೆ. ಅಲ್ಲದೇ ಕೆರೆಗಳ ಸಂಖ್ಯೆ ಹಾಗೂ ಗಾತ್ರ ದಿನೇ ದಿನೇ ಕುಗ್ಗುತ್ತಿದೆ. ಇದರಿಂದಾಗಿ ಅಂತರ್ಜಲವೂ ಬತ್ತುತ್ತಿದೆ. 1,000 ಅಡಿ ಬೋರ್‌ ಕೊರೆದರು ಹನಿ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇರುವ ಕೆರೆಗಳಲ್ಲಿ ಬಹುಪಾಲು ಕೆರೆಗಳು ನೀರು ಸಂಗ್ರಹಿಸುವಂತಿಲ್ಲ. ಹೀಗಾಗಿ, ಲಿಂಗನಮುಕ್ಕಿ ಯೋಜನೆಗೆ ಉದ್ದೇಶಿಸಿರುವ 12 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ನಗರದ ಕೆರೆಗಳನ್ನು ಅಭಿವೃದ್ಧಿ ಪಡೆಸಬೇಕು ಎಂಬುದು ಜಲತಜ್ಞರು ಅಭಿಪ್ರಾಯಪಡುತ್ತಾರೆ.

ಶವರ್‌ ಬಾತ್‌ ಬೇಡ; ನಲ್ಲಿಗಳಿಗೆ ಏರೇಟರ್‌ ಬಳಸಿ: ಮನೆಯ ನಲ್ಲಿಗಳಲ್ಲಿ ಒಂದು ನಿಮಿಷಕ್ಕೆ 8ರಿಂದ 10 ಲೀ. ನೀರು ಬರುತ್ತದೆ. ಆ ನಲ್ಲಿಗೆ ಏರೇಟರ್‌ ಅಳವಡಿಸುವುದರಿಂದ ಅದೇ ಒಂದು ನಿಮಿಷಕ್ಕೆ 4 ಲೀ ನೀರು ಹೊರಬರುತ್ತದೆ. ಆದರೆ, ನೀರಿನ ವೇಗ ಹೆಚ್ಚಾಗಿರುತ್ತದೆ. ಆ ನಲ್ಲಿ ನೀರು ಉಪಯೋಗಿಸುವವರಿಗೆ ಯಾವುದೇ ನೀರಿನ ಕೊರತೆ, 8 ಲೀ. ನೀರು ಬಂದಷ್ಟೇ ಅನುಭವ ಉಂಟಾಗುತ್ತದೆ. ಅಷ್ಟೇ ಪ್ರಮಾಣದ ಕೆಲಸವಾಗುತ್ತದೆ. ನಗರದಲ್ಲಿ 5.25 ಲಕ್ಷ ಅಪಾರ್ಟ್‌ಮೆಂಟ್‌ಗಳಿದ್ದು, ವಾಷ್‌ಬೇಸಿನ್‌ ಮತ್ತು ಅಡುಗೆಮನೆ ನಲ್ಲಿಗಳಲ್ಲಿ ಈ ಏರೇಟರ್‌ಗಳನ್ನು ಬಳಸುವುದರಿಂದ ಗೃಹೋದ್ದೇಶಕ್ಕೆ ಬಳಸುವ ನೀರಿನಲ್ಲಿ ಶೇ.50ರಷ್ಟು ಉಳಿತಾಯವಾಗಲಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸುತ್ತಾರೆ.

ನೀರು ಉಳಿಸುವ ಪ್ರತಿಜ್ಞೆ ಮಾಡಿ: ಬೆಂಗಳೂರಿನ ಜನಸಂಖ್ಯೆ ಒಂದು ಕೋಟಿ ಮೀರಿದ್ದು, ಪ್ರತಿಯೊಬ್ಬರೂ ನಿತ್ಯ 10 ಲೀ. ನೀರು ಉಳಿತಾಯ ಮಾಡುವ ಪ್ರತಿಜ್ಞೆ ಮಾಡಬೇಕು. ಆಗ ನಿತ್ಯ 10 ಕೋಟಿ ಲೀಟರ್‌ (100 ದಶಲಕ್ಷ ಲೀ.) ನೀರು ಉಳಿತಾಯವಾಗಲಿದೆ. ನೀರಿನ ಅಭಾವ ಇದ್ದಾಗ ಮಾತ್ರ ನೀರು ಉಳಿತಾಯ ಮಾಡುವ ಕಾಳಜಿ ತೋರದೆ, ಪ್ರತಿಯೊಂದು ಹಂತದಲ್ಲೂ ನೀರಿನ ಮಿತ ಬಳಕೆ ಮಾಡಬೇಕು. ಮಳೆ ನೀರು ಸಂಗ್ರಹಿಸಿ ಬಳಸಬೇಕು. ಅಗತ್ಯವಿರುವ ಕಡೆ ಸಂಸ್ಕರಿಸಿದ ನೀರಿನ ಬಳಕೆಗೆ ಸ್ವಯಂಪ್ರೇರಿತವಾಗಿ ಮುಂದೆ ಬರಬೇಕು ಎನ್ನುತ್ತಾರೆ ಜಲಮಂಡಳಿ ಎಂಜಿನಿಯರ್‌ ಬಿ.ಎಂ.ಮಂಜುನಾಥ್‌.

ಜಲಾಶಯಗಳ ನೀರಿನ ಸ್ಥಿತಿ
ಕೃಷ್ಣರಾಜ ಸಾಗರ (ಕೆಆರ್‌ಎಸ್‌)
ಒಟ್ಟು ಸಾಮರ್ಥ್ಯ: 124.8 ಅಡಿ/45.05 ಟಿಎಂಸಿ
ಕಳೆದ ವರ್ಷ: (2018 ಜು.13) 120.2 ಅಡಿ/38.8 ಟಿಎಂಸಿ
ಸದ್ಯ ಸ್ಥಿತಿ: (2019 ಜು.13) 89.2 ಅಡಿ/11 ಟಿಎಂಸಿ

ಕಬಿನಿ ಜಲಾಶಯ
ಒಟ್ಟು ಸಾಮರ್ಥ್ಯ: 2,224 ಅಡಿ/15.67 ಟಿಎಂಸಿ
ಕಳೆದ ವರ್ಷ: (2018 ಜು.13) 2,282 ಅಡಿ/14.3 ಟಿಎಂಸಿ
ಸದ್ಯದ ಸ್ಥಿತಿ: (2019 ಜು.13) 2,268 ಅಡಿ/6.8 ಟಿಎಂಸಿ

ನೀರಾವರಿ ಇಲಾಖೆ ಜತೆಗಿನ ಸಭೆ ಬಳಿಕ ಲಭ್ಯವಾಗುವ ನೀರಿನ ಪ್ರಮಾಣ ತಿಳಿದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಡಿಮೆ ನೀರು ಲಭ್ಯವಾದರೆ ಶೇ.10ರಷ್ಟು ಕಡಿಮೆ ನೀರಿನ್ನು ಕಾವೇರಿಯಿಂದ ಪಂಪ್‌ ಮಾಡಬೇಕಾಗುತ್ತದೆ. ಉಳಿದಂತೆ ಸಂಸ್ಕರಿಸಿದ ನೀರಿನ ಮಾರಾಟಕ್ಕೆ ಪ್ರೋತಾಹಿಸಿ, ನೀರು ಸರಬರಾಜಿಗೆ ವಾಹನ ವ್ಯವಸ್ಥೆ ಮಾಡಲಾಗುತ್ತದೆ. ಕಾಮಗಾರಿಗೆ ಸಂಸ್ಕರಿಸಿದ ನೀರು ಬಳಸಲು ಕ್ರಮ ಕೈಗೊಳ್ಳಲಾಗುವುದು.
-ತುಷಾರ್‌ ಗಿರಿನಾಥ್‌, ಜಲಮಂಡಳಿ ಅಧ್ಯಕ್ಷ

ಪ್ರಸಕ್ತ ವರ್ಷ ಕಾವೇರಿ ಕಣಿವೆಯಲ್ಲಿ ಮಳೆ ಪ್ರಮಾಣ ತೃಪ್ತಿಕರವಾಗಿಲ್ಲ. ಕೆಆರ್‌ಎಸ್‌, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳನ್ನು ಒಟ್ಟಾಗಿ ಸೇರಿಸಿ ಜುಲೈ ಅಂತ್ಯಕ್ಕೆ 123 ಟಿಎಂಸಿ ನೀರು ಬರಬೇಕಿತ್ತು. ಇವರೆಗೆ 22 ಟಿಎಂಸಿ ನೀರು ಮಾತ್ರ ಬಂದಿದೆ. ಮುಂದಿನ ತಿಂಗಳು ಕೂಡ ಮಳೆ ಕೊರತೆಯಾಗಬಹುದು.
-ಡಾ.ಜಿ.ಎಸ್‌.ಶ್ರೀನಿವಾಸ ರೆಡ್ಡಿ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರು

* ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.