ನೀಲಿ ಕೊಡೆ ಗೆಳೆಯ
Team Udayavani, Jul 16, 2019, 5:27 AM IST
ಪ್ರೀತಿ ಎನ್ನುವುದು ಈ ಮಳೆಯಂತೆ ಸುರಿಯುವಾಗ ಹುಚ್ಚೆದ್ದ ತೀವ್ರತೆಯಿರಬೇಕು. ನಿಂತಾಗ ಮರದಿಂದ ಟಪಗುಟ್ಟುವ ಹನಿಯಾಗಬೇಕು. ಬಿಸಿಲು ಬಿದ್ದಾಗ ನೆಲದ ಮೇಲೆ ಹೊಳೆಯುವ ಮುತ್ತಾಗಬೇಕು. ಬಿಟ್ಟು ಹೋದಾಗ ಮತ್ತೆ ಬರುವ ಆಹ್ವಾನ ನೀಡಲು ಸುತ್ತಲೂ ಹಸಿರು ಚಿಗುರಿಸಿ ಹೋಗಬೇಕು.
ಮತ್ತೆ ಮಳೆ ಶುರುವಾಗಿದೆ ನೋಡು ಗೆಳೆಯ…
ಅದೇ ಜುಮುರು ಮಳೆ, ಕಾಲಿಟ್ಟಲ್ಲಿ ಮೆತ್ತಿಕೊಳ್ಳುವ ಕೆಸರು, ಸೂರ್ಯನೇ ಕಾಣದ ಭಾನು, ಮೈತೊಳೆದು ನಿಂತ ಕಾನು, ಮಳೆ ಹನಿಯ ಮುತ್ತಿನ ಕಿರೀಟ ಹೊತ್ತು ನಿಂತ ಚಿಗುರು, ಗಡಿಬಿಡಿಯಲ್ಲಿ ಕಡಲು ಸೇರಲು ಓಡುತ್ತಿರುವ ತೊರೆ, ಮೈಮನಸ್ಸನ್ನಾವರಿಸಿಕೊಂಡ ಹಿತವಾದ ಥಂಡಿ, ಧೋ ಮಳೆಗೆ ತನ್ನನ್ನೊಪ್ಪಿಸಿ ನಿಂತ ಪಾಚಿಕಟ್ಟಿದ ಅಂಗಳ, ಬೆಳಗೋ ಸಂಜೆಯೋ ಗೊತ್ತಾಗ ಗೊಂದಲದಲ್ಲೇ ಕುಹೂ ಹಾಕುವ ಕೋಗಿಲೆ, ಮತ್ತಿನಲ್ಲಿ ಕೂಗುವ ಮಯೂರ.. ಎಲ್ಲವೂ ಹಿಂದಿನಂತೆಯೇ ಇದೆ. ನೀನು ಮಾತ್ರ ನನ್ನ ಜೊತೆಗಿಲ್ಲ ಎನ್ನುವುದನ್ನು ಬಿಟ್ಟು!
ನೀನಿಲ್ಲದಿದ್ದರೂ ಒಳಗಿನಿಂದ ಒರತೆ ಎದ್ದ ನಿನ್ನ ನೆನಪಿನ ಜುಳುಜುಳು, ಮಳೆಯೊಂದಿಗೆ ಕಳೆದ ನಿನ್ನ ಸಾಂಗತ್ಯದ ಅದೊಂದು ದಿನವನ್ನೇ ಮತ್ತೆ ಮತ್ತೆ ಮೀಟಿ ಶೃತಿ ಹಿಡಿದು ನಿಲ್ಲುತ್ತದೆ ಬೇಡವೆಂದರೂ..
ನೀಲಿ ಕೊಡೆಯ ಅಡಿಗೆ ಅವಚಿಕೊಂಡು ಕುಳಿತು ಕಡಲನ್ನು ನೋಡಿ ಅಣುಕಿಸಿದ್ದ ನೆನಪು ಈಗಷ್ಟೇ ಎನ್ನುವಂತೆ ಹಬೆಯಾಡುತ್ತಿದೆ. ನೀನು ಎದ್ದು ಹೋದ ಜಾಗ ಮುಟ್ಟಿ ನೋಡುವಾಗ ನಿನ್ನ ದೇಹದ ಬಿಸಿ ಇನ್ನು ಅಲ್ಲಿಯೇ ಅಂಟಿಕೊಂಡಿರಬಹುದು ಅನ್ನುವ ಗುಮಾನಿ ಬೆರಳಿಗೆ. ಆದರೆ ಇದ್ಯಾವುದೂ ನೀನಿಲ್ಲ ಎನ್ನುವ ವಿಷಾದದ ಮುಂದೆ ಬೊಗಸೆಯಿಂದ ಜಾರಿದ ಅನಾಥ ಹನಿಯಂತೆ ಮರಳಿನಲ್ಲಿ ಬಿದ್ದು ಇಂಗಿ ಹೋಗುತ್ತದೆ.
ಆ ದಿನ ನೆನಪಿದೆಯಾ ನಿನಗೆ?
ಇನ್ನೇನು ಮಳೆ ಬರುತ್ತದೆನ್ನುವ ಸೂಚನೆ ಹೊತ್ತ ತಂಗಾಳಿ ನನ್ನ ಮೈಯನ್ನು ಸಣ್ಣಗೆ ನಡುಗಿಸುತ್ತಿತ್ತು. ಮುಂದೆ ಉ¨ªಾನುದ್ದ ಬಿದ್ದುಕೊಂಡ ಕಡಲು, ತೊರೆಯ ಕುಲುಕುಲು ನಗುವಿನೊಂದಿಗೆ ನಮ್ಮಿಬ್ಬರ ಪಾದ ಮುಟ್ಟಿಯೂ ಮುಟ್ಟೇ ಇಲ್ಲ ಎನ್ನುವಂತೆ ಹಿಂದಕ್ಕೆ ಓಡುತ್ತಾ ಆಟವಾಡುತ್ತಿತ್ತು. ನೀನು ಮಾತ್ರ ಇದ್ಯಾವುದೂ ನಿನ್ನ ಗಮನಕ್ಕೆ ಬಂದೇ ಇಲ್ಲ ಎನ್ನುವಂತೆ ಮೈಮರೆತು ಕುಳಿತಿ¨ªೆ. ನೀನು ಮೈ ಮರೆತದ್ದು ನನ್ನ ಮೇಲಿನ ಗಾಢಾನುರುಕ್ತಿಯಿಂದಲೋ, ಹುಚ್ಚು ಹಿಡಿದಂತೆ ಈಗ ಸುರಿಯುತ್ತಿರುವ ಮಳೆಯಿಂದಲೋ ಎಂದು ನಿನ್ನ ಕಣ್ಣನ್ನು ಎಷ್ಟು ಸಲ ಇಣುಕಿದರೂ ಗೊತ್ತಾಗಲೇ ಇಲ್ಲ.
ಎರಚುವ ಸೋನೆಗೆ ನನ್ನ ಮೈ ಒದ್ದೆಯಾದೀತು ಎಂಬ ದಿಗಿಲಿಗೆ ಆದಷ್ಟೂ ನಿನ್ನಲ್ಲಿ ಉದುಗಿಸಿಕೊಳ್ಳುತ್ತಿರುವಾಗ ಕೇಳುತ್ತಿದ್ದ ನಿನ್ನ ಉಸಿರಿನ ಲಯ ಮತ್ತು ನಿನ್ನೆದೆಯ ಸಾಮಿಪ್ಯ ಮಾತ್ರ ಸಾಕಿತ್ತು ನನಗೂ.
ಈ ಮಳೆಯಲ್ಲಿ ನಿನ್ನ ಭುಜಕ್ಕೊರಗಿ ಕಡಲಂಚಿನ ದಿಗಂತವನ್ನು ದಿಟ್ಟಿಸುತ್ತ ಯುಗ ಯುಗಗಳನ್ನು ಕ್ಷಣವಾಗಿಸಿ, ಅದರಿಂದಲೂ ಕಾಲಾತೀತವಾಗಿ ಹೀಗೇ ಕುಳಿತು ಬಿಡಬಲ್ಲೆನೆಂಬ ಹುಮ್ಮಸ್ಸು ಇವೆಲ್ಲವೂ ಭ್ರಮೆ ಎಂದು ತಿಳಿಯುವ ಮೊದಲು ಅದೆಷ್ಟಿತ್ತು ಗೊತ್ತಾ?
ನನ್ನ ಬಣ್ಣದ ಕನಸುಗಳನ್ನು ಮಳೆಯಲ್ಲಿ ಅದ್ದಿ ತೊಳೆದುಬಿಡುವಂತೆ ತೋರುತ್ತಿದ್ದ ನಿನ್ನ ಗಾಢ ಮೌನ ಕಂಗೆಡಿಸುತ್ತಿತ್ತು. ನಿನ್ನೊಂದಿಗೆ ಹೇಳಲಾಗದ ಸಾವಿರ ಮಾತುಗಳನ್ನು ಮಳೆಗೇ ದಾಟಿಸುತ್ತಿದೆ. ಮಳೆಗೂ ಕರಗದ ಮನಸ್ಸಿರುತ್ತದೆಂದು ಅಂದೇ ಗೊತ್ತಾಗಿ ಹೋಯ್ತು. ಅಂತ¨ªೊಂದು ಸಂಕಟ ಎಂದೂ ಅನುಭವಿಸಿದ್ದಿಲ್ಲ. ಆದರೂ ಏಕೆ ನನ್ನ ಜೊತೆಗಿ¨ªೆ?
ನನ್ನೆದೆಯನ್ನು ಸೀಳುತ್ತಿದ್ದ ನಿನ್ನ ನಿಟ್ಟುಸಿರು ಸುರುಳಿ ಸುರುಳಿಯಾಗಿ ಗಾಳಿಯಲ್ಲಿ ಲೀನವಾಗುವಾಗ ನಿನ್ನೊಳಗಾದರೂ ಯಾವ ಭಾವವಿತ್ತು?
ನೀನೂ ಥೇಟ್ ಈ ಮಳೆಯಂತೆಯೇ. ಬೇಕು ಎನಿಸುವ ಮನದ ಬೇಗುದಿಗೆ ಜೊತೆಗಿದ್ದರೂ ದನಿಗೂಡುವುದಿಲ್ಲ. ಹೀಗೇ ನೀನು ನನಗೆಂದಿಗೂ ಅರ್ಥವಾಗಲಿಲ್ಲ. ನಿನ್ನ ಕಡಲಿನಾಳಕ್ಕೆ ನಾನು ಇಳಿಯದೇ ಕೇವಲ ಮೇಲೆ ತೇಲಿದೆನೆನ್ನಿಸುತ್ತದೆ.
ಪ್ರೀತಿ ಎನ್ನುವುದು ಈ ಮಳೆಯಂತೆ ಸುರಿಯುವಾಗ ಹುಚ್ಚೆದ್ದ ತೀವ್ರತೆಯಿರಬೇಕು. ನಿಂತಾಗ ಮರದಿಂದ ಟಪಗುಟ್ಟುವ ಹನಿಯಾಗಬೇಕು. ಬಿಸಿಲು ಬಿ¨ªಾಗ ನೆಲದ ಮೇಲೆ ಹೊಳೆಯುವ ಮುತ್ತಾಗಬೇಕು. ಬಿಟ್ಟು ಹೋದಾಗ ಮತ್ತೆ ಬರುವ ಆಹ್ವಾನ ನೀಡಲು ಸುತ್ತಲೂ ಹಸಿರು ಚಿಗುರಿಸಿ ಹೋಗಬೇಕು.
ನನ್ನೊಳಗೆ ಇದನ್ನೆಲ್ಲಾ ಹುಟ್ಟಿಸಿ ನೀನು ಮಾತ್ರ ಏನೊಂದೂ ಮಾಡದೇ ಮಳೆ ಮೋಡದಂತೆ ಮತ್ತೆಲ್ಲೋ ಸರಿದು ಬಿಟ್ಟೆ. ಇನ್ನೆಲ್ಲೋ ಮಳೆಯಾಗಲು, ಮತ್ತೂಂದೇ ಕಥೆಯಾಗಲು..
ನನಗೆ ಮಾತ್ರ ನಿನ್ನೊಂದಿಗೆ ಕಳೆದ ನೀಲಿ ಕೊಡೆಯ ಮೇಲೆ ಸುರಿದ ಮಳೆಯ ವ್ಯಥೆಯೊಂದೇ ಸಾಕು..
– ಕವಿತಾ ಭಟ… ಕುಮಟಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.