![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 16, 2019, 11:37 AM IST
ಸಾಗರ: ತನ್ನ ಅರ್ಧ ಶತಮಾನದ ಬಾಳ್ವೆಯಲ್ಲಿ ಸುಮಾರು 15 ಬಾರಿ ತುಂಬಿ ಹರಿದಿರುವ ಸಾಗರದ ಲಿಂಗನಮಕ್ಕಿ ಜಲಾಶಯ.
ಸಾಗರ: ರಾಜ್ಯದ ಬಹುತೇಕ ಜಿಲ್ಲೆಗಳ ನೀರಿನ ಬೇಡಿಕೆ ಈಡೇರಿಸಬಹುದಾದ, ಅಂತರ್‌ರಾಜ್ಯ ವಿವಾದಗಳಿಲ್ಲದ ಲಿಂಗನಮಕ್ಕಿ ಜಲಾಶಯದ ನೀರನ್ನು ಬಳಸಿಕೊಂಡರೆ ರಾಜ್ಯದಲ್ಲಿ ಬೇರಾವುದೇ ಜಲವೃದ್ಧಿ ಯೋಜನೆಯ ಅವಶ್ಯಕತೆಯೇ ಇಲ್ಲ.
ಇದು ಬೆಂಗಳೂರು ಮಹಾನಗರಕ್ಕೆ ದೀರ್ಘಾವಧಿ ನೀರಿನ ಅವಶ್ಯಕತೆ ಪೂರೈಸಲು ಜಲಸಂಪನ್ಮೂಲ ಗುರುತಿಸಲು 2013ರಲ್ಲಿ ನೇಮಕವಾದ ಬಿ.ಎನ್. ತ್ಯಾಗರಾಜ್ ಅವರ ಅಧ್ಯಕ್ಷತೆಯ 10 ಜನರ ಸಮಿತಿ ಸರ್ಕಾರಕ್ಕೆ ನೀಡಿರುವ ಸ್ಪಷ್ಟ ಸಲಹೆ.
ಸರ್ಕಾರದಿಂದ ರಚಿಸಲಾಗಿದ್ದ ತಜ್ಞರ ಸಮಿತಿಯ ಸಂಪೂರ್ಣ ವರದಿ ‘ಉದಯವಾಣಿ’ಗೆ ಲಭ್ಯವಾಗಿದ್ದು, ರಾಜ್ಯದ ರಾಜಧಾನಿ ಸೇರಿದಂತೆ ಹಲವು ಜಿಲ್ಲೆಗಳ ನೀರಿನ ಸಮಸ್ಯೆಗೆ ಶರವಾತಿ ಪರಿಹಾರ ಎಂಬ ಅಂಶ ವರದಿಯಲ್ಲಿರುವುದು ಬಹಿರಂಗವಾಗಿದೆ.
ವಿದ್ಯುತ್ ಉತ್ಪಾದನೆ ಬೇಡ: ಸಮಿತಿ ನೀಡಿರುವ ವರದಿಯಲ್ಲಿ ಶರಾವತಿಯಿಂದ ವಿದ್ಯುತ್ ಉತ್ಪಾದನೆ ಮಾಡಬಾರದು. ಬದಲಿಗೆ ಜನರ ದಾಹ ತೀರಿಸಲು ಬಳಸಿಕೊಳ್ಳಬೇಕು ಎಂಬ ಪ್ರಮುಖ ಅಂಶವಿದೆ. ವಿದ್ಯುತ್‌ನ್ನು ಬೇರೆ ಬೇರೆ ಮೂಲಗಳಿಂದ ಉತ್ಪಾದಿಸಬಹುದು. ಲಿಂಗನಮಕ್ಕಿ ಜಲಾಶಯವನ್ನು ವಿದ್ಯುತ್ ಉತ್ಪಾದನೆಯಿಂದ ಬೇರ್ಪಡಿಸಿದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ ಇತ್ಯಾದಿ ಜಿಲ್ಲೆಗಳ ನೀರಿನ ಅವಶ್ಯಕತೆ ನೀಗಿಸಬಹುದು ಎಂದು ತಿಳಿಸಿದೆ.
2051ರವರೆಗೆ ಸಾಕು: ಜಲಾಶಯದಲ್ಲಿ ಕುಡಿಯಲು ಯೋಗ್ಯವಾದ ನೀರಿನ ಮೂಲವಿದ್ದು, ಕಲುಷಿತಗೊಳ್ಳುವುದಿಲ್ಲ. ಅಲ್ಲದೆ ಈ ಜಲಾಶಯದಿಂದ ಬೇರ್ಯಾವುದೇ ಕಾರ್ಯಕ್ಕೆ ನೀರಿನ ಬೇಡಿಕೆ ಇಲ್ಲ. ರಾಜ್ಯದ ನೀರಿನ ಅವಶ್ಯಕತೆ ಪೂರೈಸಲು ಈ ಯೋಜನೆಯಲ್ಲಿ ಬೇರೆ ಜಲಾಶಯ ನಿರ್ಮಾಣದ ಅಗತ್ಯವಿಲ್ಲ. 2051ರವರೆಗೆ ನೀರಿನ ಬೇಡಿಕೆ ಪೂರೈಸಲು ಈ ಜಲಾಶಯದ ಶೇ. 30ರಷ್ಟು ನೀರಿನ ಶೇಖರಣೆ ಸಾಕು. 2051ರಲ್ಲಿ ಒಟ್ಟು 30 ಟಿಎಂಸಿ ಬಳಸಿಕೊಂಡರೂ ಇದು ಒಟ್ಟು ಸಾಮರ್ಥ್ಯದ ಶೇ. 18ರಷ್ಟು ಮಾತ್ರ. ಇದರಿಂದ ವಿದ್ಯುತ್ ಉತ್ಪಾದನೆಯ ಮೇಲೆ ಅಷ್ಟಾಗಿ ಧಕ್ಕೆ ಉಂಟಾಗುವುದಿಲ್ಲ. ವಿದ್ಯುತ್ ಉತ್ಪಾದನೆಯಲ್ಲಿನ ಕಡಿತವನ್ನು ಪ್ರಸ್ತುತದ ಹಾಗೂ ಪ್ರಸ್ತಾವನೆಯಲ್ಲಿರುವ ವಿದ್ಯುತ್ ಯೋಜನೆಗಳಿಂದ ಸರಿ ಹೊಂದಿಸಬಹುದು ಎಂದು ವರದಿಯಲ್ಲಿ ಪ್ರತಿಪಾದಿಸಲಾಗಿದೆ.
ನೀಗಲಿದೆ ರಾಜಧಾನಿಯ ದಾಹ: ಬೆಂಗಳೂರಿನ ಕುಡಿಯುವ ನೀರಿನ ಅವಶ್ಯಕತೆಯನ್ನು ಮುಂದಿನ 40 ವರ್ಷಗಳ ಕಾಲ ಲಿಂಗನಮಕ್ಕಿ ಜಲಾಶಯ ಒಂದರಿಂದಲೇ ಪಡೆಯಬಹುದು. 181 ಟಿಎಂಸಿ ಸರಾಸರಿ ಒಳಹರಿವಿರುವ ಜಲಾಶಯದ ಸಂಗ್ರಹಣಾ ಸಾಮರ್ಥ್ಯ 151 ಟಿಎಂಸಿ. 2051ರ ವೇಳೆಗೆ ಬೆಂಗಳೂರಿನ ಕುಡಿಯುವ ನೀರಿನ ಅವಶ್ಯಕತೆಯ ಕೊರತೆ 69.4 ಟಿಎಂಸಿ. ಲಿಂಗನಮಕ್ಕಿ ವಿದ್ಯುದಾಗಾರದ ಉತ್ಪಾದನಾ ಸಾಮರ್ಥ್ಯ 5754 ಮಿಲಿಯನ್ ಯುನಿಟ್. ಮೊದಲ ಹಂತದಲ್ಲಿ ಲಿಂಗನಮಕ್ಕಿಯಿಂದ 10 ಟಿಎಂಸಿ ನೀರನ್ನು ಬೆಂಗಳೂರಿಗೆ ಹರಿಸಿದರೂ ಉಳಿದ ನೀರಿನಿಂದ 354.3 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸಬಹುದು. ಜಲಾಶಯದಿಂದ 70 ಟಿಎಂಸಿ ನೀರನ್ನು ಬೆಂಗಳೂರಿನ ತೃಷೆಗೆ ಬಳಸಿದರೆ 2480 ಎಂಯು ಮಾತ್ರ ತಗ್ಗುತ್ತದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.
ಶರಾವತಿಯೇ ಸೂಕ್ತ: ಸಮಿತಿ ಪಶ್ಚಿಮ ಘಟ್ಟದ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೂಪಾ ಜಲಾಶಯ, ವರಾಹಿ ನದಿಗೆ ನಿರ್ಮಿಸಲಾದ ಮಾಣಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸಲು ಅಧ್ಯಯನ ನಡೆಸಿದೆ. ಆದರೆ ಸೂಪಾ ಜಲಾಶಯ ಬೆಂಗಳೂರು ನಗರದಿಂದ ಸಮಾರು 407 ಕಿಮೀ ದೂರದಲ್ಲಿದ್ದು, ಪಶ್ಚಿಮ ಘಟ್ಟದ ಒಳಭಾಗದಲ್ಲಿರುವುದರಿಂದ ನೀರನ್ನು ತರಲು ಕಷ್ಟ ಮತ್ತು ಈ ನೀರು ಕುಡಿಯಲು ಯೋಗ್ಯವಲ್ಲ . ಹಾಗೂ ಮಾಣಿ ಜಲಾಶಯದ ನೀರನ್ನು ನೀರಾವರಿಗೆ ಬಳಸುತ್ತಿರುವುದರಿಂದ ಬೆಂಗಳೂರಿಗೆ ಹರಿಸೋದು ಸೂಕ್ತವಲ್ಲ. ಹೀಗಾಗಿ ನೀರಿನ ಸಮಸ್ಯೆ ನೀಗಿಸಲು ಶರಾವತಿಯೇ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಒಟ್ಟು 240 ಪುಟಗಳ ವರದಿಯಲ್ಲಿ ಬೆಂಗಳೂರು ನಗರದ ಮುಂದಿನ ಪೀಳಿಗೆಯ ನೀರಿನ ಬೇಡಿಕೆಗೆ ಪಶ್ಚಿಮ ಘಟ್ಟದಲ್ಲಿ ಹರಿಯುವ ನದಿಗಳ ನೀರನ್ನು ಬಳಸುವುದು ಸೂಕ್ತ ಎಂಬ ಹಿನ್ನೆಲೆಯಲ್ಲಿಯೇ ಲಿಂಗನಮಕ್ಕಿ ಜಲಾಶಯದ ನೀರಿನ ಮೇಲೆ ಕಣ್ಣು ಹಾಕಲಾಗಿದ್ದು, ಸರ್ಕಾರ ಈ ಸಾಧ್ಯತೆಯನ್ನು ಸುಲಭದಲ್ಲಿ ಕೈ ಬಿಡುವುದು ಅನುಮಾನವಾಗಿದೆ.
2010ರ ವಿದ್ಯುತ್ ಉತ್ಪಾದನೆಯ ಲೆಕ್ಕ ಪ್ರಸ್ತಾಪಿಸಿರುವ ಸಮಿತಿ, ಕರ್ನಾಟಕದಲ್ಲಿ 11384 ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗುತ್ತಿದೆ. ರಾಜ್ಯದ ಪಾಲು 6530 ಮೆವ್ಯಾ ಆದರೆ ಕೇಂದ್ರ ಗ್ರಿಡ್‌ನಿಂದ 1268 ಮೆವ್ಯಾ ಹಾಗೂ ಖಾಸಗಿ ವಲಯದಿಂದ 3586 ಮೆವ್ಯಾ ದೊರಕುತ್ತಿದೆ. ಸಿಎಜಿಆರ್ ಅಂಕಿ-ಅಂಶಗಳ ಪ್ರಕಾರ ವಾರ್ಷಿಕ ಶೇ. 5ರಷ್ಟು ವಿದ್ಯುತ್ ಬೇಡಿಕೆ ಹೆಚ್ಚುತ್ತದೆ. ಇಂಧನ ಇಲಾಖೆ ಸಮೀಕ್ಷೆ ಅನ್ವಯ ಕೂಡಗಿ ಥರ್ಮಲ್ ಯೋಜನೆಯಿಂದ ನಾಲ್ಕು ಸಾವಿರ, ಹಾಸನದ ಕೌಶಿಕ್‌ನಿಂದ ಸಾವಿರ ಮೆವ್ಯಾ, ಛತ್ತೀಸ್‌ಗಢ್ ಕಲ್ಲಿದ್ದಲು ಸ್ಥಾವರದಿಂದ ನಾಲ್ಕು ಸಾವಿರ ಮೊದಲಾದ ಯೋಜನೆಗಳಿಂದ 14,500 ಮೆವ್ಯಾ ವಿದ್ಯುತ್‌ನ್ನು ಹೆಚ್ಚುವರಿಯಾಗಿ ನಿರೀಕ್ಷಿಸಿದೆ.
ಸರ್ಕಾರ ಯೋಜಿಸಿದ ವಿದ್ಯುತ್ ಉತ್ಪಾದನಾ ವೃದ್ಧಿ ಕೆಲಸಗಳು ಕೈಗೂಡಿದಲ್ಲಿ ಮುಂದಿನ 2, 3 ದಶಕಗಳಲ್ಲಿ ರಾಜ್ಯ ವಿದ್ಯುತ್ ಬೇಡಿಕೆಯಲ್ಲಿ ಸ್ವಾವಲಂಬಿ ಆಗುತ್ತದೆ. ಈಗ ರಾಜ್ಯದ 11,440 ಮೆ.ವ್ಯಾಟ್‌ನ ಸಾಮರ್ಥ್ಯದಲ್ಲಿ ಲಿಂಗನಮಕ್ಕಿ ಜಲಾಶಯದ್ದು ಕೇವಲ 1330 ಮೆ.ವ್ಯಾ. ಆಗಿರುವಾಗ ಶೇ. 11.62ರ ಪಾಲನ್ನು ಬೇರೆಡೆಯಿಂದ ನಿರ್ವಹಿಸಿ ಇದರ ನೀರನ್ನು ಕುಡಿಯಲು ಮಾತ್ರ ಬಳಸಬಹುದು ಎಂದು ತಜ್ಞ ಸಮಿತಿ ಅಭಿಪ್ರಾಯಪಟ್ಟಿದೆ.
ಒಂದು ಟಿಎಂಸಿಯಿಂದ ಶರಾವತಿ ವಿದ್ಯುತ್ ಕೇಂದ್ರದಲ್ಲಿ 35.4 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಬಹುದು. 10 ಟಿಎಂಸಿ ಬೆಂಗಳೂರಿಗೆ ಎಂದರೆ 354 ಮಿಲಿಯನ್ ಯೂನಿಟ್ ಉತ್ಪಾದನೆ ನಷ್ಟವಾಗುತ್ತದೆ. ಇದು ರಾಜ್ಯದ ವಿದ್ಯುತ್ ಉತ್ಪಾದನೆಯ ಶೇ. 2ರಷ್ಟು ಮಾತ್ರ ಕಡಿತವಾದಂತೆ. 2051ರ ವೇಳೆಗೆ 20 ಟಿಎಂಸಿ ನೀರನ್ನು ರಾಜಧಾನಿಗೆ ಒಯ್ದರೂ ಶೇ. 25ರಷ್ಟು ಮಾತ್ರ ಲಿಂಗನಮಕ್ಕಿಯ ವಿದ್ಯುತ್ ಉತ್ಪಾದನೆಯ ಮೇಲೆ ಕಡಿತದ ಅನುಭವವಾಗುತ್ತದೆ. 60 ಟಿಎಂಸಿ ನೀರು ಬೆಂಗಳೂರಿಗೆ ಹರಿದರೂ 3628 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಬೆಂಗಳೂರಿನ ಕುಡಿಯುವ ನೀರು ಪೂರೈಕೆಗೆ ನೀರನ್ನು ಯಗಚಿ ಜಲಾಶಯಕ್ಕೆ ಪಂಪ್ ಮಾಡಲು ಸ್ವಲ್ಪ ಭಾಗದ ವಿದ್ಯುತ್ ಬಳಸಬೇಕಾಗುತ್ತದೆ ಎಂದು ಸಮಿತಿ ಸಮಜಾಯಿಷಿ ನೀಡಿದೆ.
•ಮಾ.ವೆಂ.ಸ. ಪ್ರಸಾದ್
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!
Shivamogga: ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಯಲ್ಲಿ ಬಾಣಂತಿ ಸಾವು
Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?
Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.