ಕಳಪೆ ಕಾಮಗಾರಿಯಿಂದ ರಸ್ತೆ ಸಮಸ್ಯೆ, ಕೃತಕ ನೆರೆಯ ಭೀತಿ
Team Udayavani, Jul 17, 2019, 5:00 AM IST
ನಗರ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ನಿಮ್ಮ ದನಿಗೆ ನಮ್ಮ ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವತ್ಛತೆ, ನೈರ್ಮಲ್ಯ, ಮಾಲಿನ್ಯ, ಸಂಚಾರ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಕುರಿತು ತಿಳಿಸಬಹುದು. ಈ ಅಂಕಣ ಪ್ರತಿ ಬುಧವಾರ ಪ್ರಕಟವಾಗಲಿದೆ. ವೈಯಕ್ತಿಕ ಸಮಸ್ಯೆ, ಕಾನೂನು ವ್ಯಾಜ್ಯದ ದೂರು ಅಥವಾ ವಿವಾದದಲ್ಲಿರುವ ವಿಷಯಗಳನ್ನು ಪರಿಗಣಿಸುವುದಿಲ್ಲ. ನಾಗರಿಕರು ತಮ್ಮ ಪ್ರದೇಶದ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಬರೆದು ಪೂರಕವೆನಿಸುವ ಒಂದು ಫೋಟೊ ಜತೆ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಅಂಚೆ, ಇಮೇಲ್ ಅಥವಾ ವಾಟ್ಸಪ್ ಮೂಲಕ ಕಳುಹಿಸಬಹುದು. ಅರ್ಹ ದೂರುಗಳನ್ನು ಪ್ರಕಟಿಸಿ, ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಸುದಿನ ಮಾಡಲಿದೆ.
ಅಪಾಯಕಾರಿ ಮೀಟರ್ ಬೋರ್ಡ್
ಮುಲ್ಲಕಾಡು 4ನೇ ಮುಖ್ಯರಸ್ತೆಯ ಕೋರªಬ್ಬು ದೈವಸ್ಥಾನ ಬಳಿ ಇರುವ ಬೀದಿ ದೀಪ ಕಂಬದಲ್ಲಿ ಕೆಲವು ವರ್ಷಗಳಿಂದ ಮೀಟರ್ ಬೋರ್ಡ್ ತೆರೆದ ರೀತಿಯಲ್ಲಿ ಇದ್ದು, ಸಾರ್ವಜನಿಕರಿಗೆ ಸಂಕಷ್ಟ ಎದುರಾಗಿದೆ. ಈ ಕಂಬದ ಬಳಿಯೇ ಅಂಗನವಾಡಿ ಕೇಂದ್ರ ಕೂಡ ಇದ್ದು, ದಿನಂಪ್ರತಿ ಹತ್ತಾರು ಮಕ್ಕಳು ಅಂಗನವಾಡಿಗೆ ಬರುತ್ತಾರೆ.ಇದು ಮಕ್ಕಳ ಪೋಷಕರಲ್ಲಿ ಚಿಂತೆಗೀಡಾಗುವಂತೆ ಮಾಡಿದೆ. ಇಲ್ಲೇ ಪಕ್ಕದ ರಸ್ತೆ ಇತ್ತೀಚೆಗೆ ಕಾಂಕ್ರೀಟ್ ಹಾಕಲಾಗಿದ್ದು, ಎತ್ತರಗೊಂಡ ರಸ್ತೆಯಿಂದಾಗಿ ಮೀಟರ್ ಬೋರ್ಡ್ ಚಿಕ್ಕ ಮಕ್ಕಳಿಗೂ ಕೈಗೆಟಕುವಂತಿದೆ. ಕೆಲವೊಂದು ಬಾರಿ ಸುತ್ತಮುತ್ತಲಿನ ವಿದ್ಯಾರ್ಥಿಗಳು ಇದೇ ಬೋರ್ಡ್ ಬಳಿ ಬಂದು ಆಟವಾಡುತ್ತಾರೆ. ಸಂಬಂಧಪಟ್ಟ ಇಲಾಖೆ ಕೂಡಲೇ ಈ ಬಗ್ಗೆ ಗಮನಹರಿಸಬೇಕಿದೆ.
-ಉಮಾನಾಥ್, ಮುಲ್ಲಕಾಡು
ಕಳಪೆ ಕಾಮಗಾರಿ
ನಗರದ ದಡ್ಡಲಕಾಡುನಿಂದ ಕೊಟ್ಟಾರ ಇನ್ಫೋಸಿಸ್ ಸಂಪರ್ಕ ರಸ್ತೆಗೆ ಇತ್ತೀಚೆಗೆಯಷ್ಟೇ ಡಾಮರು ಹಾಕಲಾಗಿದ್ದು, ಇದೀಗ ಕೆಲವೇ ತಿಂಗಳಲ್ಲಿ ರಸ್ತೆಯ ಅಲ್ಲಲ್ಲಿ ಗುಂಡಿ ಬಿದ್ದಿದೆ. ಕಳಪೆ ಕಾಮಗಾರಿಯಿಂದಾಗಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದೆ. ಪೈಪ್‌ಲೈನ್ ದುರಸ್ತಿ ಉದ್ದೇಶದಿಂದ ಇದ್ದ ಡಾಮರ್ ಅನ್ನು ತೆಗೆದು, ಹೊಸದಾಗಿ ಡಾಮರು ಹಾಕಿದ್ದರು. ಕೆಲವು ದಿನಗಳ ಕಾಲ ಸರಿಯಿದ್ದ ರಸ್ತೆ ದಿನಕಳೆದಂತೆ ಕುಸಿಯತೊಡಗಿ, ಗುಂಡಿ ಉಂಟಾಗಿದೆ. ಸಾರ್ವಜನಿಕರು ಹೇಳುವ ಪ್ರಕಾರ ಡಾಮರಿನ ಕೆಳಗಡೆ ಪೈಪ್‌ಲೈನ್ ಹಾದುಹೋಗಿದ್ದೇ ಈ ರೀತಿ ರಸ್ತೆ ಹೊಂಡಮಯವಾಗಲು ಕಾರಣವಾಗಿರಬಹುದು. ಇದೇ ರಸ್ತೆ, ಉರ್ವಸ್ಟೋರ್, ಕೊಟ್ಟಾರ, ಇನ್ಫೋಸಿಸ್ ಸೇರಿದಂತೆ ಮತ್ತಿತರ ಪ್ರದೇಶಗಳಿಗೆ ಸಂಪರ್ಕವನ್ನು ಹೊಂದಿದ್ದು, ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕೂಡಲೇ ಗಮನಹರಿಸಬೇಕಿದೆ.
-ಸ್ಥಳೀಯರು, ಬಿಜೈ
ರಸ್ತೆಯಲ್ಲಿ ಕೃತಕ ನೆರೆ
ಕೋಡಿಕಲ್ ಶಾಲೆ ಬಳಿ ಮಳೆ ನೀರು ಹರಿಯುವ ತೋಡು ಕೆಲ ವರ್ಷಗಳಿಂದ ಬ್ಲಾಕ್ ಆಗಿದ್ದು, ಇದ ರಿಂದಾಗಿ ಮಳೆ ನೀರು ರಸ್ತೆಯಲ್ಲಿಯೇ ನಿಂತು ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಈ ಭಾಗದಲ್ಲಿ ಮಳೆ ನೀರು ಹರಿಯುವ ತೋಡಿನಲ್ಲಿ ಕೇವಲ ಕಾಟಾಚಾರಕ್ಕೆ ತೋಡಿನ ಹೂಳು ತೆಗೆಯಲಾಗುತ್ತಿದೆ. ಈ ಕಾರಣದಿಂದ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಸುಮಾರು 8 ವರ್ಷಗಳಿಂದ ಸರಿಯಾಗಿ ಹೂಳು ತೆಗೆಯುತ್ತಿಲ್ಲ. ಇದೇ ಕಾರಣಕ್ಕೆ ಕಳೆದ ವರ್ಷ ಸುರಿದ ಭಾರೀ ಮಳೆಗೆ ಕೆಲವು ಮನೆಗಳಿಗೆ ನೀರು ನುಗ್ಗಿ ತೊಂದರೆ ಉಂಟಾಗಿತ್ತು. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ.
– ಸ್ಥಳೀಯರು, ಕೋಡಿಕಲ್
ಮ್ಯಾನ್‌ಹೋಲ್‌ನಿಂದ ತೊಂದರೆ
ನಗರದಲ್ಲಿರುವ ಮ್ಯಾನ್‌ಹೋಲ್ ಸಮಸ್ಯೆ ಇಂದು ನಿನ್ನೆಯದಲ್ಲ. ನಗರದ ಕೊಡಿಯಾಲ್‌ಗುತ್ತು ಸಮೀಪ ಭಗವತಿನಗರದ ರಸ್ತೆಯಲ್ಲಿ ಮ್ಯಾನ್‌ಹೋಲ್ ಒಂದು ರಸ್ತೆಯ ಸಮತಲದಿಂದ ಮೇಲಿದೆ. ಇದರಿಂದಾಗಿ ವಾಹನ ಸವಾರರಿಗೆ ಯಾವುದೇ ತೊಂದರೆ ಉಂಟಾಗಬಾರದು ಎಂಬ ಉದ್ದೇಶಕ್ಕೆ ಮ್ಯಾನ್‌ಹೋಲ್ ಮೇಲೆ ಎಚ್ಚರಿಕೆಗಾಗಿ ಚಟ್ಟಿಯೊಂದನ್ನು ಇಡಲಾಗಿದೆ. ಇನ್ನು, ಸಣ್ಣ ಮಳೆ ಬಂದರೆ ಸಾಕು ಈ ಮ್ಯಾನ್‌ಹೋಲ್‌ನಿಂದ ರಸ್ತೆಗೆ ಕೊಳಚೆ ನೀರು ಬರುತ್ತದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಬೇಕಿದೆ.
-ಮನೋಹರ ಮಲ್ಯ, ಮಂಜೇಶ್ವರ
ಕಸದ ರಾಶಿ ತೆಗೆಯುವವರಿಲ್ಲ
ಪಡೀಲ್-ಬಜಾಲ್ ರಸ್ತೆಯಲ್ಲಿರುವ ಹೇಮಾವತಿ ನಗರ ಬಡಾವಣೆಯಲ್ಲಿ ಕಳೆದ ಎರಡು ತಿಂಗಳಿನಿಂದ ಕಸದ ರಾಶಿ ಬಿದ್ದಿದ್ದು, ಇದರಿಂದಾಗಿ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಸಂಭವವಿದೆ.ಮರದ ರೆಂಬೆಗಳಿಂದ ವಿದ್ಯುತ್ ತಂತಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದಾಗಿ ಕಳೆದ ಕೆಲ ತಿಂಗಳ ಹಿಂದೆ ಮರಗಳ ರೆಂಬೆಗಳನ್ನು ಕಡಿದುಹಾಕಲಾಗಿದೆ. ಆದರೆ ಇನ್ನೂ, ಕೂಡ ಅವುಗಳನ್ನು ರಸ್ತೆ ಬದಿಗಳಿಂದ ವಿಲೇವಾರಿ ಮಾಡಲಾಗಿಲ್ಲ. ದಿನನಿತ್ಯ ಕಸ ತೆಗೆದುಕೊಂಡು ಹೋಗುವ ಪಾಲಿಕೆ ಕಾರ್ಮಿಕರಲ್ಲಿ ಈ ಬಗ್ಗೆ ಹೇಳಿದರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ.ಇನ್ನು, ರಾಶಿ ಹಾಕಿದಂತಹ ಮರದ ರೆಂಬೆಗಳು ಮಳೆಯಿಂದಾಗಿ ಕೊಳೆತು ಹೋಗಲು ಪ್ರಾರಂಭಿಸಿವೆ. ಇದರಿಂದಾಗಿ ಸುತ್ತಮುತ್ತಲು ಇರುವ ಸುಮಾರು 40 ಮನೆಗಳ ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. ಇಲಿ, ಹೆಗ್ಗಣ ಸೇರಿದಂತೆ ಹಾವುಗಳು ಕೂಡ ಈ ಕಸದ ರಾಶಿಯಲ್ಲಿ ಸೇರಿಕೊಳ್ಳುವ ಭಯ ಸ್ಥಳೀಯರಲ್ಲಿದೆ.
-ಗೋವಿಂದ ಭಟ್, ಹೇಮಾವತಿ ನಗರ ಬಡಾವಣೆ
ತೋಡಿನಲ್ಲಿ ಗಲೀಜು ನೀರು
ಸುರತ್ಕಲ್‌ನಿಂದ ಬಜಪೆಗೆ ಹೋಗುವ ರಸ್ತೆಯ ಗಣೇಶ್ ಬೀಡಿ ಕಂಪೆನಿ ಎದುರು ಇರುವಂತಹ ಮಳೆ ನೀರು ಹರಿ ಯುವ ತೋಡಿನಲ್ಲಿ ಗಲೀಜು ನೀರು ಹರಿಯುತ್ತಿದ್ದು, ಇದರಿಂದಾಗಿ ಅಕ್ಕಪಕ್ಕದ ಮನೆ ಮಂದಿ ತುಂಬಾ ಸಮಸ್ಯೆಯನ್ನು ಎದುರಿಸುವಂತಾಗಿದೆ.
ಅಕ್ಕಪಕ್ಕದಲ್ಲಿರುವ ಕೆಲವೊಂದು ಕಟ್ಟಡಗಳಿಂದ ಇದೇ ತೋಡಿಗೆ ಗಲೀಜು ನೀರನ್ನು ಬಿಡಲಾಗುತ್ತಿದ್ದು, ಇದರಿಂದಾಗಿ ತೋಡಿನಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತಿದೆ. ಅಕ್ಕಪಕ್ಕದ ಮನೆಗಳಲ್ಲಿ ಸಣ್ಣ ಮಕ್ಕಳಿದ್ದು, ಸೊಳ್ಳೆ ಕಾಟದಿಂದಾಗಿ ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ತೋಡಿನಲ್ಲಿ ಈ ಬಾರಿ ಹೂಳು ತೆಗೆಯಲಿಲ್ಲ. ಇದರಿಂದಾಗಿ ಮಳೆ ನೀರು ಕೂಡ ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಇನ್ನು, ಕಳೆದ ಬಾರಿ ಉಂಟಾದ ಭಾರೀ ಮಳೆಗೆ ಈ ತೋಡಿನ ಒಂದು ಬದಿಯಲ್ಲಿನ ತಡೆಗೋಡೆ ಬಿದ್ದಿದ್ದು, ಇನ್ನೂ, ಕೂಡ ಸ್ಥಳೀಯಾಡಳಿತದಿಂದ ಸರಿಪಡಿಸುವ ಕೆಲಸ ನಡೆದಿಲ್ಲ. ಇದರಿಂದಾಗಿ ಜೋರಾಗಿ ಮಳೆ ಬಂದರೆ ಅಕ್ಕಪಕ್ಕದ ಮನೆಗಳಲ್ಲಿ ಕೃತಕ ನೆರೆ ಉಂಟಾಗುವ ತೊಂದರೆ ಇದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯು ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕಿದೆ.
-ಅಬ್ದುಲ್ ಕಲಾಂ, ಸ್ಥಳೀಯರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.