ಪ್ರಕೃತಿ ವಿಕೋಪ ನಿರ್ವಹಣೆಗೆ ಸಿದ್ಧರಾಗಿ
ಬೆಳೆ ಸಮೀಕ್ಷೆ ಬಗ್ಗೆ ರೈತರಿಗೆ ತಿಳಿಯುವಂತೆ ಗ್ರಾಪಂ ಮಟ್ಟದಲ್ಲಿ ಪ್ರಚಾರ ಮಾಡಿ: ಡಿಸಿ ಕೂರ್ಮಾರಾವ್
Team Udayavani, Jul 17, 2019, 10:52 AM IST
ಯಾದಗಿರಿ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಮಾತನಾಡಿದರು.
ಯಾದಗಿರಿ: ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣಾ ಮತ್ತು ಭೀಮಾ ನದಿಗಳಲ್ಲಿ ಪ್ರವಾಹ ಉಂಟಾದರೆ ಯಾವ ಗ್ರಾಮಗಳಿಗೆ ತೊಂದರೆ ಆಗಬಹುದು ಎಂಬುದನ್ನು ಪಟ್ಟಿ ಮಾಡಿ, ಗ್ರಾಮಸ್ಥರಿಗೆ ಮುನ್ಸೂಚನೆ ನೀಡುವ ಜೊತೆಗೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ 2019-20ನೇ ಸಾಲಿನ ಮುಂಗಾರಿನಲ್ಲಿ ಅತಿವೃಷ್ಟಿಯಿಂದ ಉಂಟಾಗಬಹುದಾದ ಪ್ರವಾಹದ ಕುರಿತು ಕೈಗೊಳ್ಳಬೇಕಾದ ಅವಶ್ಯಕ ಕ್ರಮಗಳ ಕುರಿತು ಚರ್ಚಿಸಲು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಟ್ಟಾಗ ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿಗಳಲ್ಲಿ ಪ್ರವಾಹ ಉಂಟಾಗಿ ಸುರಪುರ ತಾಲೂಕಿನ ಬಂಡೊಳ್ಳಿ, ನೀಲಕಂಠರಾಯನಗಡ್ಡಿ, ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ), ಉರುಸುಗುಂಡಗಿ, ವಡಗೇರಾ ತಾಲೂಕಿನ ಶಿವನೂರು ಹಾಗೂ ಯಾದಗಿರಿ ತಾಲೂಕಿನ ಆನೂರು (ಕೆ) ಗ್ರಾಮಗಳು ಪ್ರಮುಖವಾಗಿ ತೊಂದರೆಗೀಡಾಗುತ್ತವೆ ಎಂಬುದಾಗಿ ತಹಶೀಲ್ದಾರರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಪ್ರಕೃತಿ ವಿಕೋಪ ಸಂಭವಿಸಿದಾಗ ಮಾತ್ರ ಎಚ್ಚೆತ್ತುಕೊಳ್ಳುವ ಬದಲು ಪೂರ್ವಭಾವಿಯಾಗಿ ವಿಕೋಪ ನಿರ್ವಹಣೆಗೆ ಸಿದ್ಧರಾಗಿರಬೇಕು ಎಂದು ನಿರ್ದೇಶಿಸಿದರು.
ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ಮಂಗಳವಾರ ಸುಮಾರು 40 ಸಾವಿರ ಕ್ಯೂಸೆಕ್ ಒಳಹರಿವು ಇದೆ. ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಾದಂತೆ ನಾರಾಯಣಪುರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ ನೀರನ್ನು ಹರಿಬಿಡುವ ಸಾಧ್ಯತೆ ಇರುತ್ತದೆ. 1 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ಕೃಷ್ಣಾ ನದಿ ಪಾತ್ರದ ಹತ್ತಿರದಲ್ಲಿರುವ ಗ್ರಾಮಗಳ ಜನರು ಹಾಗೂ ಮೀನುಗಾರರು ನದಿ ಹತ್ತಿರ ಹೋಗುವುದು, ನದಿಗೆ ಇಳಿಯುವುದು ಮಾಡಬಾರದು ಮತ್ತು ಜಾನುವಾರುಗಳನ್ನು ನದಿಗೆ ಬಿಡದಂತೆ ನೋಡಿಕೊಳ್ಳಬೇಕು ಎಂದವರು, 1.50 ಲಕ್ಷ ಕ್ಯೂಸೆಕ್ ವರೆಗೆ ನೀರು ಬಿಟ್ಟರೆ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮ ನಡುಗಡ್ಡೆಯಾಗಬಹುದು. 2 ಲಕ್ಷ ಕ್ಯೂಸೆಕ್ ವರೆಗೆ ನೀರು ಬಿಟ್ಟರೆ ಕೊಳ್ಳುರ (ಎಂ) ಸೇತುವೆ ಮೇಲಿನ ಸಂಚಾರ ಸ್ಥಗಿತವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, 2009ರಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಬಂಡೊಳ್ಳಿ ಗ್ರಾಮದ ಜನರನ್ನು ಸ್ಥಳಾಂತರಿಸಿದರೂ ಕೆಲವು ಜನ ಅಲ್ಲಿಯೇ ವಾಸವಾಗಿದ್ದಾರೆ. ಜಾನುವಾರುಗಳನ್ನು ಕೂಡ ಕಟ್ಟುತ್ತಿದ್ದಾರೆ. ಕಾರಣ, ಕೃಷ್ಣಾ ನದಿಗೆ ನೀರು ಬಿಟ್ಟಾಗ ಇವರಿಗೂ ಕೂಡ ಮುನ್ಸೂಚನೆ ನೀಡಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಮಾತನಾಡಿ, ಭೀಮಾ ನದಿಯಲ್ಲಿ ಪ್ರವಾಹ ಉಂಟಾದರೆ ಶಹಾಪುರ ತಾಲೂಕಿನ ಉರುಸುಗುಂಡಗಿಯಲ್ಲಿ ಭೀಮಾ ನದಿ ಹಿನ್ನೀರಿನಿಂದ ತೊಂದರೆ ಆಗುತ್ತದೆ. ಅಲ್ಲದೇ, ವಡಗೇರಾ ತಾಲೂಕಿನ ಶಿವನೂರು ಹಾಗೂ ಯಾದಗಿರಿ ತಾಲೂಕಿನ ಆನೂರು (ಕೆ) ಗ್ರಾಮಗಳು ತೊಂದರೆಗೀಡಾಗುತ್ತವೆ. ಪ್ರವಾಹ ಉಂಟಾದರೆ ಮುನ್ನೆಚ್ಚರಿಕೆ ಕ್ರಮವಾಗಿ ಗಂಜಿ ಕೇಂದ್ರ ಸ್ಥಾಪನೆಗೆ ಸ್ಥಳ ಗುರುತಿಸಿರಬೇಕು. ಸರ್ಕಾರಿ ಬೋಟ್‌ಗಳ ಜೊತೆಗೆ ಖಾಸಗಿ ಬೋಟ್‌ಗಳು, ಬೋಟ್‌ಗಳ ಚಾಲಕರು ಹಾಗೂ ಈಜು ತಜ್ಞರ ವಿವರಗಳು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದಲ್ಲಿ ಸಂಗ್ರಹ ಇರಬೇಕು. ಇದರಿಂದ ನೆರೆಹಾವಳಿ ಮತ್ತು ಇನ್ನಿತರ ಸಂದರ್ಭಗಳಲ್ಲಿ ಅನುಕೂಲವಾಗುತ್ತದೆ. ಜೊತೆಗೆ ತುರ್ತು ಸೇವೆಗಳು ಲಭ್ಯವಾಗಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ. ರಜಪೂತ, ಜಂಟಿ ಕೃಷಿ ನಿರ್ದೇಶಕಿ ಆರ್. ದೇವಿಕಾ, ಸಹಾಯಕ ಆಯುಕ್ತ ಶಂಕರಗೌಡ ಎಸ್. ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎಸ್.ಪಾಟೀಲ, ಕೃಷಿ ಇಲಾಖೆಯ ಉಪನಿರ್ದೇಶಕ ಸಮದ್ ಪಟೇಲ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪಾಟೀಲ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್. ಗೋಪಾಲ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಕಿಸಾನ್ ಸಮ್ಮಾನ್: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇನ್ನೂ ನೋಂದಣಿಯಾಗದ ರೈತರ ಹೆಸರುಗಳನ್ನು ಗ್ರಾಮ ಪಂಚಾಯಿತಿಗಳಲ್ಲಿ ಪ್ರದರ್ಶಿಸಿ, ನೋಂದಾಯಿಸಲು ಸಲಹೆ ನೀಡಬೇಕು. ಅನರ್ಹರ ಪಟ್ಟಿಯನ್ನು ಅಂತಿಮಗೊಳಿಸಬೇಕು ಎಂದು ಜಿಲ್ಲಾಧಿಕಾರಿಎಂ. ಕೂರ್ಮಾರಾವ್ ನಿರ್ದೇಶಿಸಿದರು.
2019-20ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಕೈಗೊಳ್ಳಬೇಕಾಗಿರುವುದರಿಂದ ಕಳೆದ ಸಾಲಿನ ಬೆಳೆ ಸಮೀಕ್ಷೆಯಲ್ಲಿ ಕಾರ್ಯನಿರ್ವಹಿಸಿದ ಮಾಸ್ಟರ್ ಟ್ರೇನರ್, ಮೇಲ್ವಿಚಾರಕರು ಹಾಗೂ ಖಾಸಗಿ ವ್ಯಕ್ತಿಗಳ ಮಾಹಿತಿಗಳನ್ನು ಆಯಾ ತಾಲೂಕು ತಹಶೀಲ್ದಾರರ ಹಂತದಲ್ಲಿ ಮರುಪರಿಶೀಲಿಸಿ ಮಾಹಿತಿ ನೀಡಬೇಕು. ಮುಖ್ಯವಾಗಿ ಬೆಳೆ ಸಮೀಕ್ಷೆ ಬಗ್ಗೆ ರೈತರಿಗೆ ತಿಳಿಯುವಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.
ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಹೋಬಳಿ ಮಟ್ಟದ ಎಲ್ಲಾ ಬೆಳೆಗಳಿಗೆ ಹೆಸರು ನೋಂದಾಯಿಸಲು ಜುಲೈ 31ರ ವರೆಗೆ ಅವಕಾಶ ಇದೆ. ಆದರೆ, ಜಿಲ್ಲೆಯಲ್ಲಿ ಇದುವರೆಗೆ 413 ರೈತರು ಮಾತ್ರ ವಿಮೆ ಮಾಡಿಸಿದ್ದಾರೆ. ಬರಗಾಲದಂತಹ ಸನ್ನಿವೇಶದಲ್ಲಿ ಫಸಲ್ ಬಿಮಾ ರೈತರಿಗೆ ಆಸರೆಯಾಗುತ್ತದೆ. ಆದ್ದರಿಂದ ರೈತರಿಗೆ ಈ ಬಗ್ಗೆ ತಿಳಿವಳಿಕೆ ನೀಡಿ, ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ
Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಅರ್ಜಿ ತಿರಸ್ಕೃತ
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.