ಉಕ್ಕಿ ಹರಿದ ಹೊಳೆ, ಮನೆಗಳು ಜಲಾವೃತ, ಕುಟುಂಬಗಳ ಸ್ಥಳಾಂತರ
ಮಹಾಮಳೆ ಣ ರಾಜ್ಯದಲ್ಲಿ ಇಬ್ಬರ ಸಾವು: 8 ಮಂದಿ ನಾಪತ್ತೆ; ಜಿಲ್ಲೆಯಾದ್ಯಂತ ಅಪಾರ ಹಾನಿ
Team Udayavani, Jul 21, 2019, 5:25 AM IST
ಮಧುವಾಹಿನಿ ಹೊಳೆ ಉಕ್ಕಿ ಹರಿದು ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಜಲಾವೃತಗೊಂಡಿದೆ.
ಕಾಸರಗೋಡು/ ಕುಂಬಳೆ/ವಿದ್ಯಾನಗರ: ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಕಾಸರಗೋಡು ಜಿಲ್ಲೆಯ ಬಹುತೇಕ ಹೊಳೆ, ತೋಡು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಹಲವು ಮನೆಗಳು ಜಲಾವೃತಗೊಂಡಿದ್ದು, ಹಲವು ಕುಟುಂಬಗಳನ್ನು ಸುರಕ್ಷಿತ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮಳೆಯಿಂದ ಭಾರೀ ಪ್ರಮಾಣದಲ್ಲಿ ಕೃಷಿ ನಾಶನಷ್ಟ ಸಂಭವಿಸಿದೆ.
ಕಾಸರಗೋಡು ನೆಲ್ಲಿಕುಂಜೆಯ ಲಲಿತಾ ಕಲಾಸದನದ ಸುತ್ತು ಗೋಡೆ ಕುಸಿದು ಬಿದ್ದಿದೆ. ನೆಲ್ಕಳದಲ್ಲಿ ಗೋಡೆ ಕುಸಿದು ಪಕ್ಕದ ತೋಡಿಗೆ ಬಿದ್ದು ನೀರು ಹರಿಯುವಿಕೆಗೆ ತಡೆಯುಂಟಾಗಿದೆ. ಈ ಕಾರಣದಿಂದ ಈ ಪರಿಸರದ 11 ರಷ್ಟು ಮನೆಗಳು ಜಲಾವೃತಗೊಂಡಿದೆ. ಕಾಸರಗೋಡು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಮನೆಯಲ್ಲಿದ್ದವರನ್ನು ಸುರಕ್ಷಿತ ಕೇಂದ್ರಕ್ಕೆ ಸ್ಥಳಾಂತರಿಸಿತು. ಮಧೂರು ಅರಂತೋಡಿನ ಮೊಹಮ್ಮದ್ ಇಸಾಕ್ ಅವರ ಮನೆ ಆಂಶಿಕವಾಗಿ ಕುಸಿದು ಬಿದ್ದಿದೆ. ಚೆಂಗಳ ಬೇವಿಂಜೆ ಮುಂಡಕೈ ಹೊಳೆ ಉಕ್ಕಿ ಹರಿಯುತ್ತಿದ್ದು, ಜಲೀಲ್ ಅವರ ಮನೆ ಜಲಾವೃತಗೊಂಡಿದೆ. ಕಾಸರಗೋಡು ವಿದ್ಯಾನಗರದ ಲಕ್ಷ್ಮೀ ಅವರ ಮನೆ ಹಿತ್ತಿಲಿನ ಬಾವಿ ಕುಸಿದು ಬಿದ್ದಿದೆ. ಅಣಂಗೂರು ಮೃಗಾಸ್ಪತ್ರೆ ಸುತ್ತು ಗೋಡೆ ಕುಸಿದು ಬಿದ್ದಿದೆ. ಕಳನಾಡು ಹೊಳೆ ಉಕ್ಕಿ ಹರಿದು ಆ ಪರಿಸರದ ಐದು ಮನೆಗಳು ಜಲಾವೃತಗೊಂಡಿದ್ದು ಮನೆಯ ಸದಸ್ಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಚೆಂಗಳ ನಾಲ್ಕನೇ ಮೈಲ್ ಪಾಣಾರ್‌ಕುಳಂನಲ್ಲಿ ಬೃಹತ್ ಗೋಡೆಯೊಂದು ಕುಸಿದು ಪಕ್ಕದ ತೋಡಿಗೆ ಬಿದ್ದು ನೀರಿನ ಹರಿಯುವ ಗತಿ ಬದಲಿಸಿ ಹತ್ತರಷ್ಟು ಮನೆಗಳು ಜಲಾವೃತಗೊಂಡಿದೆ. ಅವರನ್ನು ಅಗ್ನಿಶಾಮಕ ದಳ ರಕ್ಷಿಸಿದೆ. ಚೆಂಗಳ ಸಿಟಿಜನ್ ನಗರದ ಶಾಲೆ ಬಳಿಯ ತಗ್ಗು ಪ್ರದೇಶದ ಕಾಲನಿಯೊಂದರಲ್ಲಿ ಮಳೆ ನೀರು ಕಟ್ಟಿ ನಿಂತು 12 ಮನೆಗಳು ಜಲಾವೃತಗೊಂಡಿದೆ. ಮಧೂರು ಪಟ್ಲದಲ್ಲಿ ಮಧುವಾಹಿನಿ ಹೊಳೆಯನ್ನು ಸಂಪರ್ಕಿಸುವ ತೋಡಿನಲ್ಲಿ ನೀರು ಹರಿದು ಆ ಪ್ರದೇಶ ಜಲಾವೃತಗೊಂಡಿದೆ. ವಿಷಯ ತಿಳಿದು ಜು.19 ರಂದು ರಾತ್ರಿ 10.30 ಕ್ಕೆ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ನೀರಿನಲ್ಲಿ ಸಿಲುಕಿದ್ದ 33 ಮಂದಿಯನ್ನು ರಬ್ಬರ್ ಡಿಂಕಿ ಬಳಸಿ ಬದಿಗೆ ಸಾಗಿಸಿ ರಕ್ಷಿಸಿದರು. ಹಲವರು ಸ್ವತಹ ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಹಲವರನ್ನು ಅಲ್ಲೇ ಪಕ್ಕದ ಶಾಲೆಗೆ ಸ್ಥಳಾಂತರಿಸಲಾಗಿದೆ. ಈ ಪ್ರದೇಶದಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಮಧೂರು ಮಧುವಾಹಿನಿ ಹೊಳೆ ಉಕ್ಕಿ ಹರಿದು ಹತ್ತು ಮನೆಗಳು ಜಲಾವೃತಗೊಂಡಿದೆ. ಈ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಚೆಂಗಳ ಚೇರೂರಿನ ನಬೀಸಾ ಅವರ ಮನೆ ನೀರಿನಲ್ಲಿ ಮುಳುಗಿ ಸಾಮಾಗ್ರಿಗಳೆಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿದೆ. ಬೆದ್ರಡ್ಕ ಮಡತ್ತಿಲ್ನ ವಿಮಲ ಅವರ ಮನೆ ಪಕ್ಕದ ಗುಡ್ಡೆ ಕುಸಿದು ಮನೆ ಹಾನಿಗೀಡಾಗಿದೆ. ಕೂಡ್ಲು ಎರಿಯಾಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ತೋಡಿನಲ್ಲಿ ನೀರು ಉಕ್ಕಿ ಹರಿದು ಆ ಪ್ರದೇಶದ ಹಲವು ಮನೆಗಳು ಜಲಾವೃತಗೊಂಡಿದೆ. ಕುಂಬಳೆ ರೈಲು ಹಳಿಗಳೂ ನೀರಿನಲ್ಲಿ ಮುಳುಗಿ ಮಳೆ ನೀರು ರೈಲು ನಿಲ್ದಾಣದೊಳಗೆ ಪ್ರವೇಶಿಸಿದೆ. ಇದರಿಂದಾಗಿ ರೈಲುಗಾಡಿಗಳು ಅತೀ ನಿಧಾನವಾಗಿ ಹಾದುಹೋಗುವಂತೆ ಮಾಡಲಾಗಿದೆ. ವಿಷಯ ತಿಳಿದು ಜು.19 ರಂದು ರಾತ್ರಿ ಜಿಲ್ಲಾಧಿಕಾರಿ ಸ್ಥಳಕ್ಕೆ ತೆರಳಿ ಸ್ಥಿತಿಗತಿ ಅವಲೋಕಿಸಿದರು. ಕುಂಬಳೆ ಕೊಡ್ಯಮ್ಮೆ ಶಾಲೆ ಬಳಿಯ ಸೇತುವೆ ಕುಸಿದು ಬಿದ್ದಿದ್ದು ಅದರಿಂದಾಗಿ ಸಾರಿಗೆ ಸಂಚಾರ ನಿಲುಗಡೆಗೊಂಡಿದೆ. ಕೊಯಿಪ್ಪಾಡಿ-ಕುಂಬಳೆ ರೈಲ್ವೇ ಸುರಂಗ ರಸ್ತೆಯಲ್ಲಿ ನೀರು ತುಂಬಿಕೊಂಡು ಸಾರಿಗೆ ಸಂಚಾರಕ್ಕೆ ಅಡ್ಡಿಯಾಗಿದೆ. ಕಂಚಿಕಟ್ಟೆಯ ಮೊಹಮ್ಮದ್ ರಿಫಾೖ ಅವರ ಮನೆ ಕುಸಿದು ಬಿದ್ದಿದೆ. ಶಿರಿಯ ಮತ್ತು ಪರಿಸರ ಪ್ರದೇಶಗಳ ತಗ್ಗು ಪ್ರದೇಶಗಳು ನೀರಿನಿಂದ ಆವೃತ್ತವಾಗಿದೆ. ಉಪ್ಪಳ, ಶಿರಿಯ ಹೊಳೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗತೊಡಗಿದೆ. ಶಿರಿಯ ವಾನಂದೆಯಲ್ಲಿ 30 ಎಕರೆ ಬಯಲು ಪ್ರದೇಶದಲ್ಲಿ ನೀರು ತುಂಬಿ ಕೊಂಡಿದೆ. ಮೂಸೋಡಿ ಒಳ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ. ಕುಬಣೂರು ಶ್ರೀರಾಮ ಶಾಲೆಯ ಗೋಡೆ ಕುಸಿದು ರಸ್ತೆಗೆ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ನೀಲೇಶ್ವರ ಕಾರ್ಯಂಗೋಡು ನದಿ ಉಕ್ಕಿ ಹರಿಯತೊಡಗಿದೆ. ತೃಕ್ಕರಿಪುರ ಪಡನ್ನ, ವಲಿಯಪರಂಬ ಹೊಳೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗತೊಡಗಿದೆ. ಮಲೆನಾಡ ಪ್ರದೇಶಗಳಲ್ಲಿ ಹಲವೆಡೆ ಭೂಕುಸಿತು ಭೀತಿ ಆವರಿಸಿದೆ.
ಮನೆ ಮೇಲೆ ಗುಡ್ಡೆ ಕುಸಿತ
ಧಾರಾಕಾರ ಮಳೆಯಿಂದಾಗಿ ಕುಂಡಂಕುಳಿಯ ಕಂಗಿನ ತೋಟದಲ್ಲಿ ಬೃಹತ್ ಹೊಂಡ ಸೃಷ್ಟಿಯಾಗಿದೆ. ಕುಂಡಂಕುಳಿ ಪಾಂಡಿಕಂಡಂ ನಿವಾಸಿ ರಾಘವನ್ ನಾಯರ್ ಅವರ ತೋಟದಲ್ಲಿ ಹೊಂಡ ಸೃಷ್ಟಿಯಾಗಿದೆ. ಇದರಿಂದ ಹಲವು ಅಡಿಕೆ ಮರಗಳು ನಾಶವಾಗಿದೆ. ಬೋವಿಕ್ಕಾನ ಮುಂಡಕೈಯಲ್ಲಿ ಎಂ.ಜೆ.ಸುಕುಮಾರನ್ ಅವರ ಮನೆ ಮೇಲೆ ಗುಡ್ಡೆ ಕುಸಿದು ಬಿದ್ದು ಅಡುಗೆ ಕೋಣೆಯ ಗೋಡೆ ಬಿರುಕು ಬಿಟ್ಟಿದೆ.
ಮೀಂಜದಲ್ಲಿ ಗುಡ್ಡೆ ಕುಸಿತ : ಮೀಂಜ ಪಂಚಾಯತ್‌ನ 6 ನೇ ವಾರ್ಡ್ ದೇರಂಬಳ ಮಿತ್ತಾಳದಲ್ಲಿ ಗುಡ್ಡೆ ಕುಸಿದು ಕಮಲ ಅವರ ಮನೆ ಹಿಂಭಾಗಕ್ಕೆ ಬಿದ್ದಿದೆ. ಶುಕ್ರವಾರ ರಾತ್ರಿ ಘಟನೆ ಸಂಭವಿಸಿದ್ದು, ಮನೆಯಲ್ಲಿದ್ದ ಕಮಲ ಮತ್ತು ಪುತ್ರ, ಪುತ್ರಿ ಅಪಾಯದಿಂದ ಪಾರಾಗಿದ್ದಾರೆ.
ಮಾಯಿಪ್ಪಾಡಿಯಲ್ಲಿ ಹೊಳೆ ಉಕ್ಕಿಹರಿಯುತ್ತಿದ್ದು, ಬಹುತೇಕ ಪ್ರದೇಶ ನೀರಿನಿಂದ ಆವೃತಗೊಂಡಿದೆ.
ಇಬ್ಬರ ಸಾವು; 8 ಮಂದಿ ನಾಪತ್ತೆ
ಕೇರಳ ರಾಜ್ಯದ ದಕ್ಷಿಣದ ಜಿಲ್ಲೆಗಳಲ್ಲಿ ಮಳೆ ಬಿರುಸುಗೊಂಡಿದ್ದು, ಇಬ್ಬರು ಸಾವಿಗೀಡಾಗಿ, 8 ಮಂದಿ ನಾಪತ್ತೆಯಾಗಿದ್ದಾರೆ.
ಕೊಲ್ಲಂ ಅಂಚಲಂಮೂಡಿಯಲ್ಲಿ ತೆಂಗಿನ ಮರ ಬಿದ್ದು ಚೋನಂಚಿರದ ದಿಲೀಪ್ ಕುಮಾರ್(54) ಸಾವಿಗೀಡಾದರು. ತಿರುವನಂತಪುರ ಮಲಮಾಟ್ಟಿಲ್ನಲ್ಲಿ ಮೀನು ಹಿಡಿಯಲು ಹೋದ ಪುರುತ್ತಿಕಾಟಿಲ್ ಜೋಶಿ ವರ್ಗೀಸ್(54) ಅವರು ತೋಡಿನಲ್ಲಿ ನಾಪತ್ತೆಯಾಗಿದ್ದಾರೆ. ತಲಶೆÏೕರಿ ಮೊರಕುನ್ನು ಬಳಿಯ ನಿವಾಸಿ, ಚಿರಕ್ಕರ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿ ಸ್ನಾನ ಮಾಡುತ್ತಿದ್ದಾಗ ಕೆರೆಯಲ್ಲಿ ಮುಳಗಿ ಸಾವಿಗೀಡಾದರು.
ತಿರುವನಂತಪುರ ವಿಳಿಂಞದಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಿ 7 ಮಂದಿ ನಾಪತ್ತೆಯಾಗಿದ್ದಾರೆ. ಬಿರುಸಿನ ಮಳೆ ಹಿನ್ನೆಲೆಯಲ್ಲಿ ಕಾಸರಗೋಡು, ಕಲ್ಲಿಕೋಟೆ, ವಯನಾಡು, ಇಡುಕ್ಕಿಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಜಿಲ್ಲೆಯಲ್ಲಿ ಬಿರುಸಿನ ಮಳೆ
ಮುಂದಿನ 24 ತಾಸುಗಳಲ್ಲಿ 204 ಮಿ.ಮೀ. ಗಿಂತಲೂ ಅಧಿಕ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಘೋಷಿಸಲಾಗಿದೆ. ಸರಕಾರಿ ವ್ಯವಸ್ಥೆ ಮತ್ತು ಸಾರ್ವಜನಿಕರು ಜಾಗರೂಕತೆ ಪಾಲಿಸುವಂತೆ ಮತ್ತು ಪುನರ್ವಸತಿ ಕೇಂದ್ರಗಳನ್ನು ಸಜ್ಜುಗೊಳಿಸುವಂತೆ ತಿಳಿಸಲಾಗಿದೆ.ರೆಡ್ ಅಲೆರ್ಟ್ ಘೋಷಣೆಯೂ ಇದೇ ಉದ್ದೇಶವನ್ನು ಹೊಂದಿದೆ.
ಹೊಳೆಗೆ ಸೇರಬೇಕಾದ ನೀರು ಕುಂಬಳೆ ರೈಲು ನಿಲ್ದಾಣದೊಳಗೆ
ಕುಂಬಳೆ:ಕುಂಬಳೆ ಹೊಳೆಗೆ ಸೇರಬೇಕಾದ ಮಳೆ ನೀರು ಕುಂಬಳೆ ರೈಲು ನಿಲ್ದಾಣದ ಒಳಗೆ ನುಗ್ಗಿ ಅವಾಂತರ ಸೃಷ್ಠಿಸಿದೆ. ಕುಂಬಳೆ ಪೇಟೆಯ ನೀರು ಚರಂಡಿ ಮೂಲಕ ಕುಂಬಳೆ ರೈಲು ನಿಲ್ದಾಣದ ಮುಂಭಾಗದಲ್ಲಿ ಸಾಗಿ ನೀರು ಕುಂಬಳೆ ಹೊಳೆ ಸೇರುವುದು.
ಆದರೆ ಈ ನೀರು ಶುಕ್ರವಾರ ಸಂಜೆ ಸುರಿದ ಭಾರೀ ಮಳೆಗೆ ರೈಲು ನಿಲ್ದಾಣದ ಮುಂಭಾಗದ ಚರಂಡಿಯ ಕಟ್ಟೆ ಒಡೆದು ರೈಲು ನಿಲ್ದಾಣದ ಒಳಗೆ ಕೆಸರು ನೀರು ಸಹಿತ ನುಗ್ಗಿತು. ನಿಲ್ದಾಣದ ಶೌಚಾಲಯದ ಹೊಂಡದಲ್ಲಿ ನೀರು ತುಂಬಿ ಕಛೇರಿಯೊಳಗಿನ ಶೌಚಾಲಯದ ಬೇಸಿನ್ ಮೂಲಕ ಉಕ್ಕಿ ಹರಿದು ಕೊಳಚೆ ನೀರು ನಿಲ್ದಾಣದೊಳಗೆ ನೆರೆ ನೀರಿನೊಂದಿಗೆ ಹರಿಯಿತು.
ರೈಲು ನಿಲ್ದಾಣದೊಳಗೆ ನುಗ್ಗಿ ಕೆಲಕಾಲ ಕಚೇರಿ ರಿ ಕಾರ್ಯಚರಣೆ ಸ್ತಗಿತಗೊಂಡಿತು. ನಿಲ್ದಾಣದೊಳಗೆ ಹರಿದ ನೀರು ರೈಲ್ವೇ ಹಳಿಯಲ್ಲಿ ತುಂಬಿ ರೈಲು ಯಾನಕ್ಕೆ ಕೆಲಕಾಲ ತಡೆಯಯಾತು.
ರೈಲ್ವೇ ಅಧಿಕಾರಿಗಳು ತಕ್ಷಣ ಕೆಲವು ಕೂಲಿಯಾಳುಗಳನ್ನು ಕರೆಸಿ ಚರಂಡಿ ನೀರಿಗೆ ತಡೆಯೊಡ್ಡಿ ನೀರು ಹೊಳೆಗೆ ಸರಿವಂತೆ ಕ್ರಮ ಕೈಗೊಂಡರು. ಈ ಮಧ್ಯೆ ಚರಂಡಿಯಲ್ಲಿದ್ದ ದೂರವಾಣಿ ಕೇಬಲ್ ಕಡಿದು ಕುಂಬಳೆಯ ಹೆಚ್ಚಿನ ದೂರವಾಣಿಗಳು ನಿಶ್ಚಲಗೊಂಡವು. ಶನಿವಾರ ಬೆಳಗ್ಗೆ ಇನ್ನಷ್ಟು ಹೆಚ್ಚಿನ ಕೂಲಿಯಾಳುಗಳನ್ನು ತರಿಸಿ ಚರಂಡಿಯಲ್ಲಿ ನೀರು ಸುಗಮವಾಗಿ ಹರಿಯುವಂತೆ ಮಾಡಲಾಯಿತು.ಮಂಗಳೂರಿನಿಂದ ರೈಲ್ವೇ ಇಂಜಿನಿಯರ್ ಶಶಿಯವರ ನೇತೃತ್ವದ ತಂಡ ಆಗಮಿಸಿ ಪರಿಹಾರ ಕ್ರಮ ಕೈಗೊಂಡರು.
25 ಮನೆಗಳು ಅನಾಥ
ಮೊಗ್ರಾಲ್ ಹೊಳೆ ಉಕ್ಕಿ ಹರಿದು ವಳಚ್ಚಾಲ್,ಮಿಲಾದ್ ನಗರದ ಸುಮಾರು 25 ಮನೆಗಳು ಅನಾಥವಾಗಿದೆ.5 ಮನೆಗಳಿಗೆ ನೀರು ನುಗ್ಗಿ ಅಪಾಯದಂಚಿನಲ್ಲಿದೆ.ಕೊಪ್ಪಳ ನಾಂಗಿ ರಸ್ತೆಯಲ್ಲಿ ನೆರೆ ನೀರು ತುಂಬಿ ಸಂಚಾರಕ್ಕೆ ತಡೆಯಾಗಿದೆ.ಅಶ್ರಫ್,
ಎಂ.ಎಸ್.ಅಬ್ದುಲ್ಲಕುಂಞಿ,ಅಬೂಬಕ್ಕರ್,ಫಾರೂಕ್,ಮಹಮ್ಮ¨ಕುಂಞಿ,ಇಬ್ರಾಹಿಂ,ಖಾದರ್ ಅವರ ಮನೆಗಳು ನೆರೆಯ ಭೀತಿಯಲ್ಲಿದೆ.ಕೊಪ್ಪಳ ಆವದಲ್ಲಿ ನೆರೆ ನೀರು ಸಮುದ್ರಕ್ಕೆ ಹರಿಯಲು ತೊಡಕಾಗಿದೆ.ಉಪ್ಪಳ, ಶಿರಿಯಾ,ಮೊಗ್ರಾಲ್ ಕುಂಬಳೆ, ಮಧುವಾಹಿನಿ ಹೊಳೆಯ ಮಾಯಿಪ್ಪಾಡಿಯಲ್ಲಿ ಹೊಳೆ ಬದಿ ನಿವಾಸಿಗಳು ಆತಂಕಪಡುವಂತಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.