ಕೈಕೊಟ್ಟ ಮಳೆ: ಬೆಳೆ ನಾಶ ಭೀತಿ
•ಭರವಸೆಯ ರಾಗಿ ಬೆಳೆ ಮೇಲೆ ಅನ್ನದಾತರ ಆಶಾವಾದ •ಉದ್ದು, ಹೆಸರು, ತೊಗರಿ, ಅಲಸಂದೆ ಬೆಳೆ ನಾಶ
Team Udayavani, Jul 21, 2019, 11:26 AM IST
ಎಸ್.ಕೆ.ಲಕ್ಷ್ಮೀ ಪ್ರಸಾದ್
ಚಿಕ್ಕಮಗಳೂರು: ಜಿಲ್ಲೆಯ ಬಯಲು ಪ್ರದೇಶದಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬೆಳೆ ನಾಶವಾಗುವ ಭೀತಿಯಲ್ಲಿರುವ ರೈತರು, ಭರವಸೆಯ ರಾಗಿ ಬೆಳೆ ಬಗ್ಗೆ ಮಾತ್ರ ಆಶಾವಾದ ಹೊಂದಿದ್ದಾರೆ.
ಬಯಲು ಪ್ರದೇಶದ ಕಡೂರು, ತರೀಕೆರೆ ತಾಲೂಕು ಹಾಗೂ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿಯಲ್ಲಿ ಮಳೆ ಕೊರತೆಯಿಂದ ಈಗಾಗಲೇ ದ್ವಿದಳ ಧಾನ್ಯಗಳಾದ ಉದ್ದು, ಹೆಸರು, ತೊಗರಿ, ಅಲಸಂದೆ ಬೆಳೆ ಬಿತ್ತನೆಯಾಗಿದ್ದರೂ ನಾಶವಾಗಿವೆ.
ಒಟ್ಟು ದ್ವಿದಳ ಧಾನ್ಯವನ್ನು 13,450 ಹೆಕ್ಟೇರ್‌ನಲ್ಲಿ ಬೆಳೆಯುವ ಗುರಿಯನ್ನು ಈ ವರ್ಷ ಹೊಂದಲಾಗಿತ್ತು. ಮುಂಗಾರು ಪೂರ್ವ ಹಾಗೂ ಅನಂತರ ಬಂದ ಮಳೆಯಿಂದ 1,662 ಹೆಕ್ಟೇರ್‌ನಲ್ಲಿ ರೈತರು ಬಿತ್ತನೆ ಮಾಡಿದ್ದರು. ಆದರೆ, ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಿತ್ತಿದ್ದ ಬೆಳೆ ನಾಶವಾಗಿದೆ. ಕಳೆದ ವರ್ಷ ಈ ವೇಳೆಗೆ 6,267 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯ ಬಿತ್ತನೆ ಪೂರ್ಣಗೊಂಡಿತ್ತು.
ಜಿಲ್ಲೆಯಲ್ಲಿ ಈ ವರ್ಷ ಏಕದಳ ಧಾನ್ಯದಲ್ಲಿ ಮುಸುಕಿನ ಜೋಳ ಸೇರಿದಂತೆ ದ್ವಿದಳ ಧಾನ್ಯ ಎಣ್ಣೆಕಾಳು ಮತ್ತು ವಾಣಿಜ್ಯ ಬೆಳೆ ಸೇರಿ 66,750 ಹೆಕ್ಟೇರ್‌ನಲ್ಲಿ ಬೆಳೆಯುವ ಗುರಿಯನ್ನು ಕೃಷಿ ಇಲಾಖೆ ಹೊಂದಿತ್ತು. ಮುಸುಕಿನ ಜೋಳ ಬಿತ್ತನೆ ಗುರಿ 28,100 ಹೆಕ್ಟೇರ್. ಅದರಲ್ಲಿ 12,128 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ರೈತರು ಶೇ.43ರಷ್ಟು ಬಿತ್ತನೆ ಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ಮತ್ತಷ್ಟು ಬಿತ್ತನೆಗೆ ಸಿದ್ಧವಾಗುತ್ತಿದ್ದರು. ಆದರೆ, ಮಳೆ ಕೊರತೆಯಿಂದಾಗಿ ಬಿತ್ತಿರುವ ಬೆಳೆ ನಾಶವಾಗುವ ಆತಂಕಕ್ಕೆ ಒಳಗಾಗಿದ್ದಾರೆ. ಇದರ ಜತೆಗೆ ಬಿತ್ತಿರುವ ದ್ವಿದಳ ಧಾನ್ಯ ಸಹ ಮಳೆ ಇಲ್ಲದೇ ಒಣಗುತ್ತಾ ಬಂದಿದೆ.
ಅನುಭವಿ ಬೆಳೆಗಾರರ ಪ್ರಕಾರ, ಮಳೆ ಬಂದರೂ ಸಹ ರಾಗಿ ಮಾತ್ರವೇ ರೈತರಿಗೆ ಸ್ವಲ್ಪ ಮಟ್ಟಿಗೆ ಕೈಹಿಡಿಯುವ ಭರವಸೆ ಬೆಳೆಯಾಗಿದೆ. ಬಯಲು ತಾಲೂಕಿನಲ್ಲಿ ಜುಲೈ ಕೊನೆಯ ವಾರದಿಂದ ಬಿತ್ತುವುದು ವಾಡಿಕೆ. ಈ ವರ್ಷ 43ಸಾವಿರ ಹೆಕ್ಟೇರ್‌ನಲ್ಲಿ ಬಿತ್ತುವ ಗುರಿ ಹೊಂದಲಾಗಿತ್ತು. ಈಗ 342 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಅದೂ ಸಹ ಮಳೆಯಿಲ್ಲದೇ ಒಣಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ರಾಗಿ ಬೆಳೆ ಬಿತ್ತನೆ ಸಹ ಕುಂಠಿತಗೊಳ್ಳಬಹುದು. ಆದರೆ, ರಾಗಿ ಬಿತ್ತನೆಗೆ ಆಗಸ್ಟ್ ತಿಂಗಳವರೆಗೂ ಸಮಯ ಇರುವುದರಿಂದ ರೈತರಲ್ಲಿ ಆ ಬೆಳೆ ಕೈಹಿಡಿಯಬಹುದೆಂಬ ಆಶಾಭಾವನೆ ಇದೆ.
ಕಳೆದ ವರ್ಷ ಜೂನ್ ತಿಂಗಳಲ್ಲೇ ಜಿಲ್ಲಾದ್ಯಂತ ಮುಂಗಾರು ಬಿರುಸಿನಿಂದ ಬಂದಿತ್ತು. ಆ ಹಿನ್ನೆಲೆಯಲ್ಲಿ ಬಿತ್ತನೆ ಸಹ ಚುರುಕಾಗಿತ್ತು. ಜುಲೈ ತಿಂಗಳ ಅಂತ್ಯಕ್ಕೆ ರಾಗಿ, ಭತ್ತ ಹೊರತುಪಡಿಸಿ ಶೇ.29ರಷ್ಟು ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿತ್ತು. ಈ ವರ್ಷ ಸಹ ಉತ್ತಮ ಮಳೆ ಬರಬಹುದೆಂಬ ನಿರೀಕ್ಷೆಯಲ್ಲಿ ರೈತರು ಮುಂಗಾರು ಪೂರ್ವದಲ್ಲೇ ತಮ್ಮ ಭೂಮಿ ಸಿದ್ಧಪಡಿಸಿಕೊಂಡು ಬಂದ ಮಳೆಗೆ ಸ್ವಲ್ಪ ಧಾನ್ಯ ಬಿತ್ತಿದ್ದರು. ಆದರೆ, ಮಳೆ ನಂತರ ಕೈಕೊಟ್ಟಿತ್ತು.
ಈ ವರ್ಷ ಕೃಷಿ ಇಲಾಖೆ ಜಿಲ್ಲಾದ್ಯಂತ 1,32,350 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ನಿಗದಿ ಮಾಡಿಕೊಂಡಿತ್ತು. ಆದರೆ, ಮಳೆ ಅಭಾವದಿಂದ ಈವರೆಗೆ 18,830 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲು ಸಾಧ್ಯವಾಗಿದೆ. ಪ್ರಸಕ್ತ ವರ್ಷ ಈವರೆಗೆ ಶೇ.14.2ರಷ್ಟು ಮಾತ್ರ ಬಿತ್ತನೆ ಪೂರ್ಣಗೊಂಡಿದೆ. ಸಾಮಾನ್ಯವಾಗಿ ಜೂನ್, ಜುಲೈ ತಿಂಗಳಲ್ಲಿ ಸತತ ಮುಂಗಾರು ಮಳೆಯಲ್ಲಿ ಜಿಲ್ಲೆ ತೊಯ್ದುಹೋಗುತ್ತದೆ. ಆದರೆ, ಈ ವರ್ಷ ಈ ಎರಡೂ ತಿಂಗಳಲ್ಲಿ ಯಾವ ತಾಲೂಕಿನಲ್ಲೂ ವಾಡಿಕೆ ಮಳೆಯೂ ಬಂದಿಲ್ಲ. ಎಲ್ಲ ತಾಲೂಕುಗಳು ಮಳೆ ಕೊರತೆ ಅನುಭವಿಸುತ್ತಿವೆ.
ಎಣ್ಣೆಕಾಳು ಬೆಳೆಯೂ ನಾಶ
ಎಣ್ಣೆಕಾಳುಗಳಲ್ಲಿ ನೆಲಗಡಲೆ, ಎಳ್ಳು, ಸೂರ್ಯಕಾಂತಿ ಬಿತ್ತನೆ 3,803 ಹೆಕ್ಟೇರ್‌ನಲ್ಲಿ ಆಗಿತ್ತು. ರೈತನ ಜೇಬು ತುಂಬಿಸುವ ಎಣ್ಣೆಕಾಳು ಬೆಳೆ ಸಹ ನಾಶವಾಗಿದೆ. ಜೊತೆಗೆ ಬಿತ್ತನೆ ಮಾಡುವ ಅವಧಿ ಸಹ ಪೂರ್ಣಗೊಳ್ಳುತ್ತಾ ಬಂದಿದೆ. ಜಿಲ್ಲೆಯಲ್ಲಿ ವಾಣಿಜ್ಯ ಬೆಳೆ ಬಿತ್ತನೆ ವಿಸ್ತೀರ್ಣ ಅತೀ ಕಡಿಮೆ. 3,070 ಹೆಕ್ಟೇರ್ ಗುರಿಗೆ ಎದುರಾಗಿ ಮಳೆ ಕೊರತೆಯಿಂದ 751 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿತ್ತು. ಆ ಬೆಳೆ ಸಹ ಉಷ್ಣಾಂಶಕ್ಕೆ ಒಳಗಾಗಿ ಮಂಕಾಗುತ್ತಿದೆ.
ಜಿಲ್ಲೆಯಲ್ಲಿ ಮಳೆ ಬರಲು ಇನ್ನೂ ಅವಕಾಶವಿದೆ. ಈಗಿನ ಪರಿಸ್ಥಿತಿಯಲ್ಲಿ ರಾಗಿ ಹಾಗೂ ಸಿರಿಧಾನ್ಯಗಳನ್ನು ಬೆಳೆಯುವುದು ಉತ್ತಮ. ಈ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವ ಕೆಲಸ ಇಲಾಖೆಯಿಂದ ಮಾಡಲಾಗುತ್ತಿದೆ.
•ಲೋಕೇಶ್,
ಕೃಷಿ ಇಲಾಖೆ ಉಪ ನಿರ್ದೇಶಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.