15 ದಿನದಲ್ಲಿ 9 ಲಕ್ಷ ಬಿಜೆಪಿ ಸದಸ್ಯತ್ವ ನೋಂದಣಿ
Team Udayavani, Jul 22, 2019, 3:10 AM IST
ಬೆಂಗಳೂರು: ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನದಡಿ ಕಳೆದ 15 ದಿನದಲ್ಲಿ 9 ಲಕ್ಷಕ್ಕೂ ಹೆಚ್ಚು ಮಂದಿ ಸದಸ್ಯತ್ವ ಪಡೆದಿದ್ದಾರೆ. ರಾಜಕೀಯ ಅಸ್ಥಿರತೆಯಿಂದಾಗಿ ಸದಸ್ಯತ್ವ ನೋಂದಣಿಗೆ ತುಸು ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿ ಅಗತ್ಯಬಿದ್ದರೆ ರಾಜ್ಯದಲ್ಲಿ ಅಭಿಯಾನ ಅವಧಿ ವಿಸ್ತರಣೆಗಾಗಿ ವರಿಷ್ಠರಿಗೆ ಮನವಿ ಮಾಡಲು ಬಿಜೆಪಿ ಚಿಂತಿಸಿದೆ.
ರಾಜ್ಯದಲ್ಲಿ ಈ ಬಾರಿ 50 ಲಕ್ಷಕ್ಕೂ ಹೆಚ್ಚು ಸದಸ್ಯತ್ವ ನೋಂದಣಿ ಗುರಿ ಹೊಂದಿರುವ ಬಿಜೆಪಿಯು, ನೋಂದಣಿ ಕಾರ್ಯ ಚುರುಕುಗೊಳಿಸಲು ಮುಂದಾಗಿದೆ. 12,000 ವಿಸ್ತಾರಕರು ಜು.23ರಿಂದ 30ರವರೆಗೆ ಒಂದು ವಾರ ಕಾಲ ಪ್ರತಿ ಶಕ್ತಿಕೇಂದ್ರದಲ್ಲಿ ಸದಸ್ಯತ್ವ ನೋಂದಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜತೆಗೆ ನಾನಾ ಮೋರ್ಚಾಗಳ ಪರವಾಗಿಯೂ ಸುಮಾರು 2,000 ವಿಸ್ತಾರಕರು ಆ.2ರಿಂದ 7ರವರೆಗೆ ಸದಸ್ಯತ್ವ ನೋಂದಣಿ ಕೈಗೊಳ್ಳಲಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ ಸ್ವಂತ ಬಲದೊಂದಿಗೆ ಕೇಂದ್ರದಲ್ಲಿ ಸತತ ಎರಡನೇ ಬಾರಿ ಸರ್ಕಾರ ರಚನೆಯಾದ ಬೆನ್ನಲ್ಲೇ ಬಿಜೆಪಿಯು ರಾಷ್ಟ್ರಾದ್ಯಂತ ಸದಸ್ಯತ್ವ ನೋಂದಣಿ ಅಭಿಯಾನವನ್ನು ಜು.6ರಿಂದ ಆ.11ರವರೆಗೆ ಕೈಗೊಂಡಿದೆ. ಪಕ್ಷದ ಸಿದ್ಧಾಂತ, ನಿಲುವು, ಕಾರ್ಯ ವೈಖರಿಯನ್ನು ಮೆಚ್ಚುವ ಹಾಗೂ ಒಪ್ಪುವವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳುವ ಮೂಲಕ ದೇಶದೆಲ್ಲೆಡೆ ಸಂಘಟನೆಯನ್ನು ಬಲಪಡಿಸಿಕೊಳ್ಳಲು ಕಮಲ ಪಾಳಯ ಸಜ್ಜಾಗಿದೆ.
15 ದಿನದಲ್ಲಿ 9 ಲಕ್ಷ ಸದಸ್ಯತ್ವ: ಜು.6ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಎಲ್ಲ ಜಿಲ್ಲೆಗಳಲ್ಲೂ ಅಭಿಯಾನ ಶುರುವಾಗಿದೆ. ರಾಜ್ಯದಲ್ಲಿ ಜು.20ರವರೆಗೆ 9.15 ಲಕ್ಷ ಮಂದಿ ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ. 36 ಸಂಘಟನಾ ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ 59,280 ಮಂದಿ ಸದಸ್ಯತ್ವ ಪಡೆದಿದ್ದು, ಪ್ರಥಮ ಸ್ಥಾನದಲ್ಲಿದೆ.
ತುಮಕೂರಿನಲ್ಲಿ 56,429, ವಿಜಯಪುರದಲ್ಲಿ 53,400, ಕಲಬುರಗಿ ಗಾಮಾಂತರ ವ್ಯಾಪ್ತಿಯಲ್ಲಿ 38,550, ಚಿಕ್ಕಮಗಳೂರಿನಲ್ಲಿ 33,950 ಮಂದಿ ಸದಸ್ಯತ್ವ ಪಡೆದಿದ್ದಾರೆ. ಯಾದಗಿರಿಯಲ್ಲಿ 33,000, ಉಡುಪಿಯಲ್ಲಿ 31,900, ದಕ್ಷಿಣ ಕನ್ನಡದಲ್ಲಿ 19,955 ಮಂದಿ ಸದಸ್ಯರಾಗಿದ್ದಾರೆ. ಕೊಡಗಿನಲ್ಲಿ 3,600 ಮಂದಿ ಸದಸ್ಯತ್ವ ಪಡೆದಿದ್ದು, ಸದ್ಯದ ಮಟ್ಟಿಗೆ ಅತಿ ಕಡಿಮೆಯಿರುವ ಸಂಘಟನಾ ಜಿಲ್ಲೆಯಾಗಿದೆ. ಕೊಪ್ಪಳದಲ್ಲೂ 9,850 ಮಂದಿಯಷ್ಟೇ ಸದಸ್ಯತ್ವ ಪಡೆದಿದ್ದಾರೆ.
ಅಭಿಯಾನದಲ್ಲಿ ವಿಸ್ತಾರಕರು ಭಾಗಿ: ಸದಸ್ಯತ್ವ ಅಭಿಯಾನವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ವಿಸ್ತಾರಕರನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಸುಮಾರು 12,000 ವಿಸ್ತಾರಕರು ಜು.23ರಿಂದ 30ರವರೆಗೆ ಏಳು ದಿನ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಲ್ಕೈದು ಮತಗಟ್ಟೆಗೆ ಒಂದು ಶಕ್ತಿಕೇಂದ್ರವಿದ್ದು, ಪ್ರತಿ ಶಕ್ತಿಕೇಂದ್ರಕ್ಕೂ ಒಬ್ಬ ವಿಸ್ತಾರಕರನ್ನು ನಿಯೋಜಿಸಲಿದೆ. ಈ ವಿಸ್ತಾರಕರು ಏಳು ದಿನ ಆ ಶಕ್ತಿಕೇಂದ್ರ ವ್ಯಾಪ್ತಿಯ ಮತಗಟ್ಟೆ ಪ್ರದೇಶದಲ್ಲಿ ಸದಸ್ಯತ್ವ ನೋಂದಣಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಸಂಸದರು, ಶಾಸಕರು, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ನಗರ ಪಾಲಿಕೆ, ಸ್ಥಳೀಯ ಸಂಸ್ಥೆ ಸದಸ್ಯರು ಕೂಡ ವಿಸ್ತಾರಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅಭಿಯಾನದ ಅವಧಿಯಲ್ಲಿ 50 ಲಕ್ಷ ಸದಸ್ಯತ್ವ ನೋಂದಣಿಗೆ ಗುರಿ ಹಾಕಿಕೊಂಡಿದ್ದು, ಬಿಜೆಪಿ ಯುವ ಮೋರ್ಚಾ ವತಿಯಿಂದ 15 ಲಕ್ಷ ಸದಸ್ಯತ್ವ ಗುರಿ ಹೊಂದಲಾಗಿದೆ. ಜತೆಗೆ ನಾನಾ ಮೋರ್ಚಾಗಳು ದೊಡ್ಡ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡುವಂತೆ ರಾಜ್ಯ ಘಟಕ ಸೂಚಿಸಿದೆ. ಇದಕ್ಕೆ ಪೂರಕವಾಗಿ ಸುಮಾರು 2,000 ವಿಸ್ತಾರಕರು ಆ.2ರಿಂದ ಐದು ದಿನ ನಾನಾ ಮೋರ್ಚಾಗಳಡಿ ಸದಸ್ಯತ್ವ ನೋಂದಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜಕೀಯ ಅಸ್ಥಿರತೆಯಿಂದ ಹಿನ್ನಡೆ: ಅಭಿಯಾನ ಆರಂಭವಾದ ಸಂದರ್ಭದಲ್ಲಿನ ಪರಿಸ್ಥಿತಿ, ಹುರುಪಿಗೆ ಪೂರಕವಾಗಿ 15 ದಿನದಲ್ಲಿ ಕನಿಷ್ಠ 20 ಲಕ್ಷ ಸದಸ್ಯತ್ವ ನೋಂದಣಿಯಾಗುವ ನಿರೀಕ್ಷೆಯಿತ್ತು. ಆದರೆ ರಾಜ್ಯ ರಾಜಕೀಯದಲ್ಲಿ ಎರಡು ವಾರಗಳಿಂದ ನಡೆದಿರುವ ವಿದ್ಯಮಾನ, ದಿಢೀರ್ ಬೆಳವಣಿಗೆಯಿಂದ ನಿರೀಕ್ಷಿತ ಮಟ್ಟದಲ್ಲಿ ಸದಸ್ಯತ್ವ ನೋಂದಣಿಯಾಗಿಲ್ಲ. ಬಿಜೆಪಿ ಶಾಸಕರು ವಾರದಿಂದ ರೆಸಾರ್ಟ್ ವಾಸ್ತವ್ಯ ಹೂಡಿರುವ ಹಿನ್ನೆಲೆಯಲ್ಲಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಹ ಸಾಧ್ಯವಾಗಿಲ್ಲ ಎಂದು ಮೂಲಗಳು ಹೇಳಿವೆ.
ಅವಧಿ ವಿಸ್ತರಣೆಗೆ ಕೋರಲು ಚಿಂತನೆ: ರಾಜ್ಯ ರಾಜಕೀಯದಲ್ಲಿ ತೀವ್ರ ಬೆಳವಣಿಗೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಏಕಕಾಲಕ್ಕೆ ಸದಸ್ಯತ್ವ ನೋಂದಣಿ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಾಧ್ಯವಾಗದ ಕಾರಣ ಅವಧಿ ವಿಸ್ತರಣೆಗೆ ಮನವಿ ಮಾಡಲು ಚಿಂತನೆ ನಡೆದಿದೆ. ಅಭಿಯಾನವು ಆ.11ಕ್ಕೆ ಮುಕ್ತಾಯವಾಗಲಿದ್ದು, ಕೆಲದಿನದ ಮಟ್ಟಿಗೆ ಅಭಿಯಾನ ಅವಧಿ ವಿಸ್ತರಣೆಗೆ ವರಿಷ್ಠರನ್ನು ಕೋರಲು ಚಿಂತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಜತೆಗೆ ಸಂಘಟನಾ ಚಟುವಟಿಕೆಯನ್ನೂ ಪರಿಣಾಮಕಾರಿಯಾಗಿ ಕೈಗೊಳ್ಳಲಾಗುತ್ತಿದೆ. ಸದ್ಯ ಸದಸ್ಯತ್ವ ನೋಂದಣಿ 10 ಲಕ್ಷ ಸಮೀಪದಲ್ಲಿದ್ದು, ಉತ್ತಮ ಸ್ಪಂದನೆ ದೊರಕಿದೆ. ಎಲ್ಲ ಮೋರ್ಚಾಗಳಿಗೂ ನಿರ್ದಿಷ್ಟ ಗುರಿ ನೀಡಲಾಗಿದ್ದು, ಆ.11ರೊಳಗೆ 50 ಲಕ್ಷ ತಲುಪುವ ವಿಶ್ವಾಸವಿದೆ.
-ಎನ್.ರವಿಕುಮಾರ್, ರಾಜ್ಯ ಬಿಜೆಪಿ ಸದಸ್ಯತ್ವ ಅಭಿಯಾನ ಉಸ್ತುವಾರಿ
ರಾಜ್ಯದಲ್ಲಿ 50 ಲಕ್ಷ ಸದಸ್ಯತ್ವ ನೋಂದಣಿ ಗುರಿ ಹಾಕಿಕೊಳ್ಳಲಾಗಿದ್ದು, ಅದನ್ನು ತಲುಪುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ವಿಸ್ತಾರಕರು ಒಂದು ವಾರ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದು, ಈ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿಯಾಗುವ ನಿರೀಕ್ಷೆಯಿದೆ.
-ಜಗದೀಶ್ ಹಿರೇಮನಿ, ರಾಜ್ಯ ಬಿಜೆಪಿ ಸದಸ್ಯತ್ವ ಅಭಿಯಾನ ಸಹ ಉಸ್ತುವಾರಿ
* ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.