“ಸಹೋದ್ಯೋಗಿಗಳು ನನ್ನ ಬೆನ್ನಿಗೆ ಚೂರಿ ಹಾಕಿದರು’
Team Udayavani, Jul 24, 2019, 3:08 AM IST
ವಿಧಾನಸಭೆ: “ದಶಕಗಳ ಕಾಲ ಜತೆಗೇ ರಾಜಕಾರಣ ಮಾಡಿದ ಸಹೋದ್ಯೋಗಿಗಳು ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ. ಅವರನ್ನು ನಾನು ಅತೃಪ್ತರು ಎನ್ನುವುದಿಲ್ಲ, ತೃಪ್ತರು, ಸಂತೃಪ್ತರು ಎಂದು ಹೇಳುತ್ತೇನೆ. ನನಗೆ ಚೂರಿ ಹಾಕಿದಂತೆ ನಿಮಗೂ ಹಾಕುವ ಕಾಲ ಬರುತ್ತದೆ ನೋಡ್ತಾ ಇರಿ..’ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿರುವ ಅತೃಪ್ತ ಶಾಸಕರನ್ನು ಕುರಿತು ಡಿ.ಕೆ.ಶಿವಕುಮಾರ್ ಆಡಿದ ಮಾತುಗಳಿವು. ಅಷ್ಟೇ ಅಲ್ಲದೆ, “ರಾಜಕಾರಣದಲ್ಲಿ ನಾನೂ ಸಾಕಷ್ಟು ನೋಡಿದ್ದೇನೆ. ಇವರೆಲ್ಲರನ್ನೂ ರಾಜಕೀಯ ರಣರಂಗದಲ್ಲಿ ಮತ್ತೆ ಭೇಟಿಯಾಗುತ್ತೇನೆ. ಏಕೆಂದರೆ, ಇವರು ರಾಜಕಾರಣದಲ್ಲಿ ಬೆಳೆಯಲು ವರ್ಷಗಳ ಕಾಲ ಪಲ್ಲಕ್ಕಿ ಹೊತ್ತಿದ್ದೇನೆ. ಇವರ ಏಳಿಗೆಗೆ ನನ್ನದೂ ಅಲ್ಪ ಪಾತ್ರವಿದೆ’ ಎಂದು ಹೇಳಿದರು.
ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ನಮ್ಮ ಕುಟುಂಬದ ಸದಸ್ಯರೇ ಆಗಿದ್ದ ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ. ಎಲ್ಲೋ ಒಂದು ಕಡೆ ಅವರ ರಾಜಕೀಯ ಭವಿಷ್ಯವೇ ಮುಸುಕಾಗುತ್ತದೆ. ಬಿಜೆಪಿಯವರು ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರೆಂದೂ ಸಚಿವರಾಗಲು ಸಾಧ್ಯವೇ ಇಲ್ಲ. ಅನ್ಯಾಯವಾಗಿ ಹೋಗ್ತಾರಲ್ಲಾ , ಹೂವು ತೆಗೆದುಕೊಂಡು ಹೋಗಬೇಕಲ್ಲಾ ಎಂಬ ನೋವು ನನ್ನನ್ನು ಕಾಡುತ್ತಿದೆ’ ಎಂದು ತಿಳಿಸಿದರು.
ಬುದ್ಧಿವಾದ ಹೇಳಿದ್ದ ಮುನಿರತ್ನ: “ದೆಹಲಿಯಲ್ಲಿ ನಾನು ಸಂಸದರಿಗೆ ಔತಣಕೂಟ ಏರ್ಪಡಿಸಿದ್ದಾಗ, ಮುನಿರತ್ನ ನಿಮ್ಮ ನೇತೃತ್ವದಲ್ಲೇ ಬಿಜೆಪಿಗೆ ಹೋಗೋಣ ಎಂದು ಬುದ್ಧಿವಾದ ಹೇಳ್ತಾನೆ. ಉಪ ಚುನಾವಣೆಯಲ್ಲಿ ಆತನ ಗೆಲುವಿಗೆ ಎಷ್ಟು ಕಷ್ಟ ಪಟ್ಟೆ ಗೊತ್ತಿದೆಯಾ? ಇವರೆಲ್ಲಾ ನನಗೆ ಬುದ್ಧಿವಾದ ಹೇಳ್ತಾರೆ’ ಎಂದರು. “ರಾಜಕಾರಣದಲ್ಲಿ ನಾನೂ ಸಾಕಷ್ಟು ಬೆಳೆದಿದ್ದೇನೆ. ಎಲ್ಲವನ್ನೂ ನೋಡಿದ್ದೇನೆ. ಆದಾಯ ತೆರಿಗೆ, ಇಡಿ ಪ್ರಕರಣಗಳನ್ನೂ ಮೈ ಮೇಲೆ ಎಳೆದುಕೊಂಡು ಹೋರಾಟ ಮಾಡಿದ್ದೇನೆ. ಎಲ್ಲವನ್ನೂ ಫೈಟ್ ಮಾಡಿ ಫೇಸ್ ಮಾಡುವ ತಾಕತ್ತು ನನಗಿದೆ’ ಎಂದು ಹೇಳಿದರು.
ಇದೇ ಎಸ್.ಟಿ.ಸೋಮಶೇಖರ್ ಅವರು ಆರ್.ಅಶೋಕ್ ಬಗ್ಗೆ ಏನೆಲ್ಲಾ ಮಾತನಾಡಿದರು ಗೊತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಂತೆ, ಬಿಜೆಪಿಯ ಸತೀಶ್ ರೆಡ್ಡಿ, “ಇದೇ ಸದನದಲ್ಲಿ ಕುಮಾರಸ್ವಾಮಿ ಮತ್ತು ನಿಮ್ಮ ನಡುವಿನ ಜಗಳ ಹೊಡೆದಾಡುವ ಹಂತ ತಲುಪಿದ್ದನ್ನೂ ನಾವು ನೋಡಿದ್ದೇವೆ’ ಎಂದರು. ಆಗ ಶಿವಕುಮಾರ್, “ಹೌದು, ನಾನು ಕುಮಾರಸ್ವಾಮಿ ವಿರುದ್ಧ, ದೇವೇಗೌಡರ ವಿರುದ್ಧ ಹೋರಾಟ ಮಾಡಿದ್ದೇನೆ. ಆದರೆ ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿಯವರ ಆದೇಶ ಪಾಲಿಸಲು ರಾಜಕೀಯವಾಗಿ ಜೆಡಿಎಸ್ ಜತೆ ಮೈತ್ರಿಗೆ ಒಪ್ಪಿದ್ದೇನೆ’ ಎಂದು ಸಮರ್ಥಿಸಿಕೊಂಡರು.
ಬೈರತಿ ಬಸವರಾಜ್ ಹೇಗಿದ್ದರು, ಎಲ್ಲಿದ್ದರು. ಎಂ.ಟಿ.ಬಿ.ನಾಗರಾಜ್ ಎಲ್ಲಿದ್ದರು, ಮೊದಲ ಬಾರಿ ಟಿಕೆಟ್ ಕೊಟ್ಟಿದ್ದು ಯಾರು? ಎಲ್ಲವೂ ಗೊತ್ತಿದೆ. ಮುಂಬೈಗೆ ಹೋಗಿರುವ ಶಾಸಕರು ಯಾವುದೇ ಕಾರಣಕ್ಕೂ ಸಚಿವರಾಗಲು ಸಾಧ್ಯವಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವರು ಅನರ್ಹರಾಗುತ್ತಾರೆ ಎಂದು ಹೇಳಿದರು. ಆಗ ಮಧ್ಯಪ್ರವೇಶ ಮಾಡಿದ ಬಿ.ಎಸ್.ಯಡಿಯೂರಪ್ಪ, ಅತೃಪ್ತ ಶಾಸಕರು ಕಲಾಪದಲ್ಲಿ ಭಾಗಿಯಾಗಿ ಪಕ್ಷದ ಪರ ಮತ ಹಾಕುವಂತೆ ಸೂಚಿಸುವ ವಿಪ್‌ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರಿಗೆ ಸದನಕ್ಕೆ ಬರಲು ಒತ್ತಡ ಹಾಕುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಸ್ಪಷ್ಟವಾಗಿ ಹೇಳಿದೆ ಎಂದು ತಿಳಿಸಿದರು.
ಇದಕ್ಕೆ ಖಾರವಾಗಿ ಉತ್ತರ ನೀಡಿದ ಶಿವಕುಮಾರ್, ವಿಪ್‌ಗೆ ಬೆಲೆ ಇಲ್ಲ ಎನ್ನುವುದಾದರೆ ನೀವು ಯಾವ ಆಧಾರದ ಮೇಲೆ ನಿಮ್ಮ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಿದ್ದೀರಿ. ಹಿರಿಯ ರಾಜಕಾರಣಿಯಾಗಿ ನೀವು ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸೇರಿದಂತೆ ಎಲ್ಲಾ ಸ್ಥಾನಗಳಲ್ಲಿ ಕೆಲಸ ಮಾಡಿದ್ದೀರಿ. ಈ ರೀತಿ ಮಾತನಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಮಾನನಷ್ಟ ಮೊಕದ್ದಮೆ: ಬಿಜೆಪಿ ಸರ್ಕಾರ ತರಲು ಡಿ.ಕೆ.ಶಿವಕುಮಾರ್ ನೆರವು ಎಂಬ ಅರ್ಥದಲ್ಲಿ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದರು. ನನ್ನ ಪರ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ಹಂತದಲ್ಲಿ ಆ ಹೇಳಿಕೆ ನೀಡಿ ನನ್ನ ಮನಸ್ಸಿಗೆ ನೋವಾಗುವಂತೆ ಮಾಡಿದರು. ಅವರ ವಿರುದ್ಧ 2.04 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ದೂರು ದಾಖಲಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. “ನಾನು ರಾಜಕೀಯವಾಗಿ ಈ ಸ್ಥಾನಕ್ಕೆ ಬರಲು ಎಸ್.ಎಂ.ಕೃಷ್ಣ, ಬಂಗಾರಪ್ಪ ಮತ್ತು ಗಾಂಧಿ ಕುಟುಂಬ ಕಾರಣ. ನನಗೆ ಧರಂಸಿಂಗ್ ಹಾಗೂ ಸಿದ್ದರಾಮಯ್ಯ ಅವರು ಕೆಲವು ದಿನ ಸಂಪುಟದಲ್ಲಿ ಅವಕಾಶ ಕೊಟ್ಟಿರಲಿಲ್ಲ’ ಎಂದು ಹೇಳಿದರು.
ಸ್ಪರ್ಧೆ ಮಾಡಿದ್ದಕ್ಕೆ ಸಾಲಗಾರನಾದೆ: ಡಿ.ಕೆ.ಶಿವಕುಮಾರ್ ಮಾತನಾಡುವಾಗ ಮಧ್ಯೆ ಪ್ರವೇಶಿಸಿದ ಸಚಿವ ಕೃಷ್ಣ ಬೈರೇಗೌಡ, “ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲು ಮಾನಸಿಕವಾಗಿ ತಯಾರಿರಲಿಲ್ಲ. ನನ್ನ ಕುಟುಂಬದವರ ಒಪ್ಪಿಗೆಯೂ ಇರಲಿಲ್ಲ. ಆದರೆ, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ಬೈರತಿ ಬಸವರಾಜ್ ಅವರೇ ಒತ್ತಡ ತಂದು ನಿಲ್ಲಿಸಿದ್ದರು. ಸೋದರ ಸಮಾನರಾದ ಅವರ ಮಾತು ನಂಬಿ ಸ್ಪರ್ಧೆ ಮಾಡಿದೆ. ಆದರೆ, ಅವರ ಕ್ಷೇತ್ರಗಳಲ್ಲಿ ನನಗೆ ಲೀಡ್ ಬರಲಿಲ್ಲ. ಚುನಾವಣೆಯಲ್ಲಿ ಏನೆಲ್ಲಾ ಮಾಡಿದರು ಬೇರೆ ಮಾತು. ಆದರೆ, ಚುನಾವಣೆಗೆ ಸ್ಪರ್ಧೆ ಮಾಡಿದ್ದಕ್ಕೆ ನಾನು ಸಾಲಗಾರನಾದೆ’ ಎಂದು ಹೇಳಿದರು.
“ಜೈಲು ಮಂತ್ರಿಯಾಗಿದ್ದ ನಾನು ಜೈಲಿಗೆ ಹೋಗಲು ಸಿದ್ಧ. ಜೈಲಿಗೆ ಹೋಗಿ ಬಂದವರೆಲ್ಲಾ ಏನೇನು ಆಗಿದ್ದಾರೆ ಎಂಬುದು ಗೊತ್ತಿದೆ. ನಾನು ಅದಕ್ಕೆಲ್ಲಾ ಹೆದರಲ್ಲ. ಬಿಜೆಪಿ ಸರ್ಕಲ್‌ನಲ್ಲಿ ನನ್ನನ್ನು ಜೈಲಿಗೆ ಕಳುಹಿಸುವ ಮಾತು ಕೇಳಿ ಬರುತ್ತಿದೆ. ನಾನು ಶಾಸಕರನ್ನು ಲಾಕ್ ಮಾಡಬಹುದು ಎಂದು ಮನಸ್ಸು ಮಾಡಿದ್ದರೆ ಸ್ಪೀಕರ್‌ಗೆ ರಾಜೀನಾಮೆ ನೀಡಿದ ನಂತರ ನನ್ನ ಮನೆಗೆ ಕರೆದೊಯ್ದ ಐವರು ಶಾಸಕರನ್ನು ಲಾಕ್ ಮಾಡಬಹುದಿತ್ತು. ಎಂ.ಟಿ.ಬಿ.ನಾಗರಾಜ್ ಅವರನ್ನು ಸಹ ಲಾಕ್ ಮಾಡಬಹುದಿತ್ತು. ಆದರೆ, ಅಂತಹ ಕೆಲಸವನ್ನು ನಾನು ಮಾಡಲಿಲ್ಲ.
-ಡಿ.ಕೆ.ಶಿವಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.