ಕೆಸರಿನಲ್ಲೇ ನಡೆಯುತ್ತೆ ಸೊರಬ ಸಂತೆ!
ಸಾರ್ವಜನಿಕರಿಗೆ ಕೆಸರಿನಲ್ಲೇ ಅಡ್ಡಾಡುತ್ತಾ ಅಗತ್ಯ ವಸ್ತುಗಳ ಖರೀದಿ ಮಾಡುವ ದುಸ್ಥಿತಿ
Team Udayavani, Jul 24, 2019, 11:10 AM IST
ಸೊರಬ: ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆ ಅವ್ಯವಸ್ಥೆಯಿಂದ ಕೂಡಿರುವುದು.
ಸೊರಬ: ಕೆಸರಿನಲ್ಲೇ ತರಕಾರಿ- ದಿನಸಿ ವಸ್ತುಗಳ ವ್ಯಾಪಾರ. ಸವಲತ್ತು ವಂಚಿತ ವಾರದ ಸಂತೆಯಲ್ಲಿ ಸಮಸ್ಯೆಗಳ ಆಗರ. ಇದು ಪಟ್ಟಣದ ಎಪಿಎಂಸಿ ಆವರಣದಲ್ಲಿ ಪ್ರತಿ ಮಂಗಳವಾರ ನಡೆಯುವ ವಾರದ ಸಂತೆಯಲ್ಲಿನ ಚಿತ್ರಣ.
ಹೌದು, ಪಟ್ಟಣದ ಹೃದಯ ಭಾಗವಾದ ಮಾರ್ಕೆಟ್ ರಸ್ತೆಯಲ್ಲಿ ನಡೆಯುತ್ತಿದ್ದ ಸಂತೆಯನ್ನು ಇಲ್ಲಿನ ಸ್ಥಳೀಯರ ವಿರೋಧದ ನಡುವೆಯೂ ಕೆಲ ತಿಂಗಳ ಹಿಂದೆ ಸ್ಥಳಾಂತರ ಮಾಡಲಾಗಿದ್ದು, ಸಾರ್ವಜನಿಕರು ಕೆಸರಿನಲ್ಲಿ ಓಡಾಡುತ್ತಾ ಅಗತ್ಯ ವಸ್ತುಗಳ ಖರೀದಿ ಮಾಡಬೇಕಿದೆ. ಇನ್ನು ವರ್ತಕರ ಸಮಸ್ಯೆಯಂತೂ ಹೇಳ ತೀರದು.
ಬಿಸಿಲಲ್ಲಿ ದೂಳು-ಮಳೆಯಲ್ಲಿ ಕೆಸರು: ಬೇಸಿಗೆಯಲ್ಲಿ ಬಿಸಿಲು ಹಾಗೂ ಧೂಳಿನಲ್ಲಿ ವ್ಯಾಪಾರ ವಹಿವಾಟುಗಳು ನಡೆದರೆ. ಮಳೆ ಬಂತೆಂದರೆ ಕೆಸರು ಮಯವಾಗುವ ರಸ್ತೆ ಪಕ್ಕದಲ್ಲೇ ವರ್ತಕರು ತರಕಾರಿ ಮಾರಾಟ ಮಾಡುತ್ತಿದ್ದಾರೆ. ಮಹಿಳೆಯರು, ವೃದ್ಧರು ಸಂತೆಯಲ್ಲಿ ಸಂಚರಿಸುವುದು ಕಷ್ಟಕರ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಜನತೆ ಸ್ಥಳೀಯ ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಅಂಟು ಮಣ್ಣಿನ ರಸ್ತೆಯಲ್ಲಿ ನಡೆದರೆ ಜಾರಿ ಬೀಳುವುದು ಗ್ಯಾರಂಟಿ ಎನ್ನುವ ಸನ್ನಿವೇಶ ನಿರ್ಮಾಣವಾಗಿದೆ.
ವ್ಯಾಪಾರ ವಹಿವಾಟು ಕುಸಿತ: ಸಂತೆ ಸ್ಥಳಾಂತರದ ಪರಿಣಾಮ ಪಟ್ಟಣದ ಚಿಕ್ಕಪೇಟೆ- ಮಾರ್ಕೆಟ್ ರಸ್ತೆಗಳಲ್ಲಿ ವ್ಯಾಪಾರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಮಾವಲಿ, ಯಲವಳ್ಳಿ ಮತ್ತಿತರ ಗ್ರಾಮಸ್ಥರು ಶಿರಾಳಕೊಪ್ಪಕ್ಕೂ, ಅಂಕರವಳ್ಳಿ ಭಾಗದ ಜನತೆ ಚಂದ್ರಗುತ್ತಿ- ಸಿದ್ದಾಪುರಕ್ಕೆ ತೆರಳಿದರೆ, ಕುಪ್ಪಗಡ್ಡೆ ಭಾಗದ ಜನತೆ ಆನವಟ್ಟಿಯತ್ತ ಮುಖ ಮಾಡತೊಡಗಿದ್ದಾರೆ. ಪರಿಣಾಮ ತಾಲೂಕು ಕೇಂದ್ರವಾದರೂ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣದಲ್ಲಿ ಪ್ರಸ್ತುತ ವ್ಯಾಪಾರ-ವಹಿವಾಟುಗಳು ಕುಸಿಯತೊಡಗಿವೆ.
ಮೂಲ ಸೌಕರ್ಯಗಳ ಕೊರತೆ: ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ಕೆಲವರಿಂದ ದೂರು ಬಂದ ಹಿನ್ನಲೆಯಲ್ಲಿ ಸ್ಥಳೀಯ ಆಡಳಿತ ಸಾಗರ ರಸ್ತೆಯ ಎಪಿಎಂಸಿ ಮಾರುಕಟ್ಟೆಯ ಪ್ರಾಂಗಣಕ್ಕೆ ಕೆಲ ತಿಂಗಳ ಹಿಂದೆ ಸಂತೆಯನ್ನು ಸ್ಥಳಾಂತರ ಮಾಡಿದೆ. ಆದರೆ, ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಗೃಹ ಮತ್ತಿತರರ ಯಾವುದೇ ವ್ಯವಸ್ಥೆಯನ್ನು ಗಮನಿಸದೆ ಸಂತೆ ಮಾರುಕಟ್ಟೆ ಸ್ಥಳಾಂತರ ಮಾಡಿರುವುದು ಹಾಗೂ ಕೇವಲ ಸುಂಕ ವಸೂಲಿಗೆ ಮಾತ್ರ ಮುಂದಾಗಿರುವ ಪಪಂ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಈಗಾಗಲೇ ಸರ್ವೆ ನಂ 163ರಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದರೂ, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದಿರುವುದು ಇಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಗೆ ಹಿಡಿದ ಕೈಗನ್ನಡಿಯಾಗಿದೆ.
ಟ್ರಾಫಿಕ್ ಕಿರಿಕಿರಿ: ಪಟ್ಟಣದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ರಸ್ತೆ ಸಂಚಾರಕ್ಕೆ ಒಂದೆಡೆ ತೊಂದರೆಯಾಗುತ್ತಿದ್ದರೆ. ಮತ್ತೂಂದಡೆ ಉಳವಿ- ಸಾಗರ ರಸ್ತೆಯ ಎಪಿಎಂಸಿ ಆವರಣದಲ್ಲಿ ಸಂತೆ ನಡೆಯುವ ಪರಿಣಾಮ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೂ ಕಿರಿಕಿರಿಯಾಗುತ್ತಿದೆ. ಸಮೀಪದಲ್ಲಿಯೇ ಸರ್ಕಾರಿ ಆಸ್ಪತ್ರೆ ಇದ್ದು, ಆ್ಯಂಬುಲೆನ್ಸ್‌ಗಳು ಸಹ ಸಂಚಾರ ದಟ್ಟಣೆಯಲ್ಲಿ ಸಿಲುಕುವ ಸನ್ನಿವೇಶ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿ ನಡೆಯುವ ವ್ಯಾಪಾರ-ವಹಿವಾಟಿಗೆ ಸೂಕ್ತ ಸ್ಥಳಾವಕಾಶ ನೀಡಬೇಕಾದ ತುರ್ತು ಅಗತ್ಯವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.