ನಿನ್ನೆಗಳ ನೆರಳಲ್ಲಿ ನಾಳೆಗಳ ಬೆಳಕನ್ನು ಕಾಣುವ ಮುನ್ನ …
Team Udayavani, Jul 26, 2019, 5:30 AM IST
ನಿನ್ನೆಗಳಲ್ಲಿ ನಡೆದ ಹಾದಿ ನಾಳೆಗಳಿಗೆ ಬೆಳಕಾಗುತ್ತದೆ ಎಂದು ಹೆಜ್ಜೆಗೊಬ್ಬರು ತಿಳಿಹೇಳುತ್ತಾರೆ. ಹಿಂದೆ ಮಾಡಿದ ತಪ್ಪುಗಳು ಮರುಕಳಿಸದಂತೆ ಮುಂದುವರಿಯುವುದು ಜಾಣ್ಮೆ. ನಿಜವೇ ಹೌದು, ಮಾಡಿದ ತಪ್ಪುಗಳನ್ನು ಮತ್ತೆ ಮತ್ತೆ ಮಾಡಿದರೆ ನಿಂತಲ್ಲಿಯೇ ಉಳಿಯಬೇಕಾಗಬಹುದು. ಹಾಗೆಂದು ಮುಂದಡಿಯಿಟ್ಟಾಗ ಎಡವಿ ಬೀಳುತ್ತೇನೆಂದು ನಿಂತರೂ ಪರಿಣಾಮ ಒಂದೇ ಅಲ್ಲವೆ ! ಅಪ್ಪ ನೆಟ್ಟ ಆಲದಮರಕ್ಕೆ ಕೊರಳೊಡ್ಡುವುದು ಸಮಾಜದ ಕಣ್ಣಿಗೆ ನಮ್ಮನ್ನು ಶ್ರವಣಕುಮಾರ- ರಾಮನಂತೆ ಆದರ್ಶಪ್ರಾಯರನ್ನಾಗಿಸಿದರೂ ಹೊಸ ಕಾಲದ ವಿಸ್ತರಣೆಯನ್ನು ಹೇಗೆ ಸಾಧ್ಯವಾಗಿಸುವುದು ಎಂಬ ಪ್ರಶ್ನೆ ಹಾಗೆಯೇ ಉಳಿಯದಿರುವುದೆ?
ತಮ್ಮ ತಪ್ಪುಗಳಿಂದ ಪಾಠ ಕಲಿತವರು ಜಾಣರು, ಆದರೆ ಇತರರ ತಪ್ಪುಗಳಿಂದ ಪಾಠ ಕಲಿಯುವವರು ಚತುರರು ಎಂಬ ಮಾತಿದೆ. ಇದು ಒಂದೊಂದು ಸಲ ದಿಟ ಅನ್ನಿಸಿದರೂ ಬಹಳಷ್ಟು ಸಲ ನನ್ನನ್ನು ಗೊಂದಲಕ್ಕೀಡು ಮಾಡಿದೆ. ಪ್ರತಿಯೊಬ್ಬರ ಬಾಳ ಹಾದಿಯೂ ವಿಭಿನ್ನವಾಗಿರುವಾಗ ಒಬ್ಬನ ಜೀವನದ ತಪ್ಪುಗಳು ಇನ್ನೊಬ್ಬನ ಜೀವನದ ಸತ್ಯಗಳಾಗಿರಬಹುದಲ್ಲವೆ? ವಿವೇಕಾನಂದರಂತೆ, ಛತ್ರಪತಿ ಶಿವಾಜಿಯಂತೆ ಪುರಾಣದ, ಶೂರ-ವೀರರ ಕಥೆಗಳನ್ನು ಕೇಳಿ ಬೆಳೆದವರೆಲ್ಲ ಅವರಂತಾಗಲಿಲ್ಲ, ಪ್ರತಿಯೊಬ್ಬರೂ ಬೆಳೆದದ್ದೂ ವಿಭಿನ್ನವಾಗಿಯೇ ಅಲ್ಲವೆ? ನಾವೆಲ್ಲರೂ ವಿಭಿನ್ನರಾಗಿದ್ದರೂ ನಮ್ಮೊಳಗೆ ವೈವಿಧ್ಯದ ರಂಗನ್ನು ತುಂಬಿರುವುದು ಪ್ರಕೃತಿಯೆಂಬ ಅದ್ಭುತ. ಅದು ತುಂಬುವ ರಂಗುಗಳು ಬೆರೆತು ಕೊನೆಗೊಮ್ಮೆ ಬಿಳಿಯಾಗಿ ಅದರಲ್ಲೇ ಬೆರೆತುಹೋಗುತ್ತೇವೆ !
ಜೀವನದಲ್ಲಿ ತೆರೆದಿರುವ ನೂರಾರು ಬಾಗಿಲುಗಳಿದ್ದರೂ ಜನಸಂದಣಿ ಹೆಚ್ಚಿರುವ ಕೋಣೆಯ ಕದಗಳನ್ನು ತಟ್ಟುವವರೇ ಎಲ್ಲರೂ. ಒಳಗೆ ಜನರು ಕುರಿಮಂದೆಯಂತೆ ತುಂಬಿದ್ದರಿಂದಲೋ, ಶಬ್ದ ಕೇಳಿ ಕೇಳಿ ಕದ ತೆರೆಯುವವನ ಕಿವಿ ಕಿವುಡಾಗಿಯೋ ಕದ ತೆರೆಯುವುದೇ ಇಲ್ಲ, ನಿರಾಶರಾಗಿ ಕುಳಿತುಬಿಡುತ್ತೇವೆ- ಆಶೋತ್ತರಗಳನ್ನೆಲ್ಲ ಬದಿಗಿಟ್ಟು! ನಿರಾಶಾವಾದಿಗಳಾಗುವುದಕ್ಕೆ ಕಾರಣವೂ ಇಲ್ಲವೆಂದಲ್ಲ; ಹೊಸತು ಎಂಬುದಕ್ಕೆ ತಪ್ಪು ಎಂಬ ಹಣೆಪಟ್ಟಿ ಕಟ್ಟಿರುವ ಸಮಾಜಕ್ಕೆ ಅದು ಗೆಲ್ಲುವವರೆಗೆ ಸೋಲಿನ ಸೂತ್ರವೂ, ಗೆದ್ದಾಗ ಯಶಸ್ಸಿನ ಮೂಲಮಂತ್ರವೂ ಆಗಿ ತೋರುತ್ತದೆ. ಮತ್ತೆ ಅವೆರಡೂ ನಿನ್ನೆಗಳಲ್ಲಿ ಸೇರುತ್ತದೆ; ವ್ಯತ್ಯಾಸವಿಷ್ಟೆ ಒಂದು ಅನುಸರಿಸಬಾರದ ಹಾದಿ ಮತ್ತೂಂದು ಅನುಕರಣಾರ್ಹವಾದುದು! ಅನುಸರಿಸಬಾರದ್ದನ್ನು ಆರಿಸಿ ಒಮ್ಮೆ ಸೋತಾಗ ಹಿಂದಿನಿಂದ ನಗುತ್ತಾರೆ, ಪ್ರವಚನಕಾರರಾಗಿ ಹತ್ತು ಅಭಿಪ್ರಾಯಗಳನ್ನು ಮುಂದಿಡುತ್ತಾರೆ; ಅಲ್ಲಿ ಗೆದ್ದಾಗ ನಿಮ್ಮೆದುರು ಹಲ್ಲುಗಿಂಜುತ್ತ ನಿಲ್ಲುತ್ತಾರೆ, ಆಗ ನಿನ್ನೆಗಳಿಗೊಂದು ಉದಾಹರಣೆಯಾಗಿ ನೀವು ನಿಲ್ಲುತ್ತೀರಿ. ಹೀಗೆ ನಿನ್ನೆಗಳ ಉದಾಹರಣೆಗಳು ನಾಳೆಗಳಿಗೆ ಆದರ್ಶವಾಗುವ ಪ್ರಕ್ರಿಯೆ ಆಹಾರಸರಪಳಿಯಂತೆ ಮುಂದುವರಿಯುತ್ತದೆ, ಈ ಸರಪಳಿ ಹಲವು ಕನಸುಗಳನ್ನು ನುಂಗುತ್ತ ಮುಂದೆ ಸಾಗುತ್ತದೆ.
ನಿಜಜೀವನಕ್ಕೆ ಕಾಲಿಡುವ ಹೊತ್ತಿಗೆ ನಮ್ಮ ಕನಸು ಮತ್ತು ನಮ್ಮವರ ಕನಸುಗಳ ಮಧ್ಯೆ ಆಯ್ದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿ ನಮ್ಮವರ ಸುಖಕ್ಕಾಗಿ ಅವರ ಆಸೆಗಳ ಬೆನ್ಹತ್ತಿ ಓಡತೊಡಗುತ್ತೇವೆ, ಅದರಿಂದ ಅವರಿಗಾಗುವ ಸಂತಸ ತಾತ್ಕಾಲಿಕ ಎಂಬ ಅರಿವಿಲ್ಲದೆ!
ತಾತ್ಕಾಲಿಕ ಸಂತಸದ ಅವಧಿ ಕೊನೆಯಾಗಿ, ನಾವಾಗಿರದ ಪರಿಸರದಲ್ಲಿ ಬದುಕಲಾಗದೆ ನರಳಾಡುವಷ್ಟರಲ್ಲಿ ಹೊತ್ತು ಮೀರಿರುತ್ತದೆ, ನಮ್ಮ ಚಡಪಡಿಕೆ ಕಂಡು ನಮ್ಮವರೂ ಮರುಗುತ್ತಿರುತ್ತಾರೆ. ಆ ಹೊತ್ತಿಗೆ ಕಾಡುವುದು ಇನ್ನೊಂದನ್ನಾರಿಸಿದ್ದರೆ ಜೀವನಕುಸುಮ ಬಿರಿಯುತ್ತಿತ್ತೇನೋ ಎಂಬ ಕೊರಗು ಮಾತ್ರ, ಅದು ತಾತ್ಕಾಲಿಕವಾಗಿರದೆ ಉಸಿರು ಉಸಿರನ್ನಾವರಿಸಿಬಿಡುತ್ತದೆ. ಆ ಕೊರಗು ಮುಂದೆ ನಿಮ್ಮವರನ್ನು ಕಾಡಬಹುದು ಎಂದು ನಿಮ್ಮ ಕನಸುಗಳ ರಂಗನ್ನು ಅವರ ಕೈಗಿಡಲು ಆಕಾಶ-ಭೂಮಿ ಒಂದಾಗಿಸುತ್ತೀರಿ ಹಿಂದಿನವರಂತೆ, ಆಗ ನಿನ್ನೆಯ ತಪ್ಪೂ ಅದೇ ಎಂಬ ಕನಿಷ್ಟ ಭಾವನೆ ಸುಳಿಯದಿರುವುದೇ ವಿಪರ್ಯಾಸವೆನ್ನಬಹುದು !
ಒಂದು ಅಮೂಲ್ಯವಾದ ಪ್ರಾಚೀನ ಪರಂಪರೆಯೇನೋ ಎಂಬಂತೆ ಈಗಲೂ ನಮಗರಿವಿಲ್ಲದೇ ನಿನ್ನೆ-ನಾಳೆಗಳ ಕದನದಲ್ಲಿ ಇಂದು ಮರೆಯಾಗಿ ಮರುಗುತ್ತಿದೆ.
ಪಲ್ಲವಿ ಕಬ್ಬಿನ ಹಿತ್ಲು
ದ್ವಿತೀಯ ಬಿ. ಕಾಂ.
ಸರಕಾರಿ ಪದವಿ ಕಾಲೇಜು, ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.