ರವಿ ಹೆಗಲಿಗೆ ರಾಜ್ಯಾಧ್ಯಕ್ಷ ನೊಗ?
ಶಾಸಕ ಸಿ.ಟಿ.ರವಿಯತ್ತ ವರಿಷ್ಠರ ಒಲವು•ಸರ್ಕಾರ ರಚನೆ ನಂತರ ನಿರ್ಧಾರ
Team Udayavani, Jul 26, 2019, 11:39 AM IST
ಎಸ್.ಕೆ.ಲಕ್ಷ್ಮೀ ಪ್ರಸಾದ್
ಚಿಕ್ಕಮಗಳೂರು: ಶಾಸಕ ಸಿ.ಟಿ.ರವಿ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಸಾಧ್ಯತೆಗಳು ಹೆಚ್ಚಾಗಿ ಗೋಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಉಳಿದ ಮೂವರು ಶಾಸಕರು ಹಾಗೂ ಓರ್ವ ವಿಧಾನ ಪರಿಷತ್ ಸದಸ್ಯರಲ್ಲಿ ಯಾರು ಸಂಪುಟ ಸೇರುವರು ಎಂಬುದು ಪ್ರಶ್ನೆಯಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಲು ಸಿ.ಟಿ.ರವಿ ಹೆಸರಿನ ಜೊತೆಗೆ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ, ಅರವಿಂದ ಲಿಂಬಾವಳಿ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಅತೃಪ್ತ ಶಾಸಕರು ತಮ್ಮ ರಾಜೀನಾಮೆ ಸ್ವೀಕಾರವಾದ ಬಳಿಕ ಬಿಜೆಪಿ ತೆಕ್ಕೆಗೆ ಬಂದು, ನಂತರ ಸಚಿವರಾದರೂ ಸಹ ಕೆಳ ಅಥವಾ ಮೇಲ್ಮನೆಗೆ ಸದಸ್ಯರಾಗಲು ಆರು ತಿಂಗಳ ಅವಕಾಶವಿರುತ್ತದೆ. ಇಂತಹ ಸಂದರ್ಭ ನಿರ್ಮಾಣವಾದಲ್ಲಿ ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
2008ರಲ್ಲಿ ಬಿಜೆಪಿ ಸರ್ಕಾರ ರಚನೆ ಆದಾಗ ಕೊನೆಯ ಹಂತದಲ್ಲಿ ಶಾಸಕ ಸಿ.ಟಿ.ರವಿ ಹಾಗೂ ಡಿ.ಎನ್.ಜೀವರಾಜ್ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಲಾಗಿತ್ತು. ಉನ್ನತ ಶಿಕ್ಷಣ ಸಚಿವರಾಗಿದ್ದ ರವಿ, ಆಗ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಒಪ್ಪಿಗೆ ಪಡೆದಿದ್ದರು. ಜೀವರಾಜ್ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾಗಿದ್ದರು.
ಶಾಸಕ ರವಿ ಅವರಿಗೆ ಈಗ ಸಚಿವರಾ ಗುವುದಕ್ಕಿಂತ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಆಕಾಂಕ್ಷೆ ಹೆಚ್ಚಾದಂತೆ ಕಾಣುತ್ತಿದೆ. ಈ ಬಗ್ಗೆ ಪತ್ರಿಕೆ ಅವರನ್ನು ಸಂಪರ್ಕಿಸಿದಾಗ, ಸಚಿವ ಸ್ಥಾನವನ್ನು ನಾನಾಗಿಯೇ ಕೇಳಲು ಹೋಗುವುದಿಲ್ಲ. ನಾನು ಪಕ್ಷದ ಆದೇಶ ಮತ್ತು ನಿರ್ದೇಶನಕ್ಕೆ ಬದ್ಧನಾಗಿರುತ್ತೇನೆ. ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ ಅಧಿಕಾರ ಸ್ವೀಕರಿಸಿ ಸರ್ಕಾರ ನಡೆಸಲು ಮುಂದಾಗುತ್ತಿದ್ದಂತೆಯೇ ಹಲವಾರು ಸವಾಲುಗಳನ್ನು ಎದುರಿಸಬೇಕಾಗಿದೆ. ಮೊದಲು ನಾವು ಅರ್ಥ ಮಾಡಿಕೊಳ್ಳ ಬೇಕಾಗಿರುವುದು ಪಕ್ಷ ಶಾಸನ ಸಭೆಯಲ್ಲಿ ಹೊಂದಿರುವುದು ತೀರಾ ತೆಳುವಾದ ಬಹುಮತ. ಕೇವಲ 105 ಮಂದಿ ಪಕ್ಷದ ಶಾಸಕರಿದ್ದರೆ. ಹಾಗಾಗಿ, ಉಪ ಚುನಾವಣೆಗಳಲ್ಲಿ ರಾಜೀನಾಮೆ ಒಪ್ಪಿಗೆಯಾದ ನಂತರ ಎಲ್ಲ 15 ಸ್ಥಾನಗಳಲ್ಲೂ ಗೆಲುವು ಸಾಧಿಸಬೇಕಾಗಿದೆ ಎಂದು ಹೇಳಿದರು.
ಶಾಸನ ಸಭೆಯಲ್ಲಿ ಪ್ರಬಲ ವಿರೋಧ ಪಕ್ಷವನ್ನು ಎದುರಿಸಿ ಸರ್ಕಾರ ನಡೆಸಬೇಕಾಗಿದೆ. ವಿರೋಧ ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್.ಸಿದ್ದರಾಮಯ್ಯ. ಎಚ್.ಡಿ.ಕುಮಾರಸ್ವಾಮಿ ಹಾಗೂ ಅನುಭವಿ ಶಾಸಕ ಡಿ.ಕೆ.ಶಿವಕುಮಾರ್ ಅವರಂತಹ ರಾಜಕೀಯ ತಂತ್ರಗಾರಿಕೆಯಲ್ಲೂ ನಿಪುಣರಾದ ಘಟಾನುಘಟಿಗಳಿದ್ದಾರೆ. ಈ ಹಿನ್ನೆಲೆಯಲ್ಲಿ ಆಡಳಿತದ ಪ್ರತಿ ಹೆಜ್ಜೆಯನ್ನು ಆಲೋಚಿಸಿ ಇಡಬೇಕಾಗಿದೆ ಎಂದು ರವಿ ವಿಶ್ಲೇಷಿಸಿದರು.
ಉಪ ಚುನಾವಣೆಯಲ್ಲಿ ಗೆಲ್ಲುವುದು ಹಾಗೂ ಅನೇಕ ರೀತಿಯ ವ್ಯಕ್ತಿಗತವಾದ ನಿರೀಕ್ಷೆಗಳನ್ನು ಪೂರೈಸಬೇಕಾದ ಒತ್ತಡಗಳಿರುತ್ತವೆ. ಬಿಜೆಪಿ ಮೇಲೆ ಜನ ಅಪಾರ ವಿಶ್ವಾಸವನ್ನು ಲೋಕಸಭಾ ಚುನಾವಣೆಯಲ್ಲಿ ತೋರಿಸಿದ್ದಾರೆ. ಆ ವಿಶ್ವಾಸವನ್ನು ಉಳಿಸಿಕೊಂಡು ಅತ್ಯಂತ ಉತ್ತಮ ಆಡಳಿತ ನೀಡಬೇಕಾಗಿದೆ ಎಂದರು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಗೆ ಪಕ್ಷಕ್ಕೆ ಹಾಗೂ ಆಡಳಿತಕ್ಕೆ ಗೌರವ ತಂದುಕೊಟ್ಟು ಜನಮೆಚ್ಚುಗೆ ಗಳಿಸಿದೆಯೋ, ಅದೇ ರೀತಿ, ಎದುರಾಗುವ ಸವಾಲುಗಳನ್ನು ಎದುರಿಸುತ್ತಾ ಸ್ಪಷ್ಟ, ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನೀಡಲು ಸನ್ನದ್ಧರಾಗಲೇಬೇಕು ಎಂದು ರವಿ ಸ್ಪಷ್ಟವಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru-ಕಾಸರಗೋಡಿಗೆ ‘ಅಶ್ವಮೇಧ’ ಬಸ್
MUDA; ಕಾಂಗ್ರೆಸ್ ಗೊಂದು, ಬಿಜೆಪಿಗೊಂದು ಕಾನೂನು ಇದೆಯೇ?: ಎಚ್.ಕೆ.ಪಾಟೀಲ್
BTS Kannada Movie: ತೆರೆ ಹಿಂದಿನ ಕಥೆಗಳ ಬಿಟಿಎಸ್
Maharashtra Polls; ಹರಿಯಾಣದಂತೆ ಬಂಡಾಯ ಸ್ಪರ್ಧಿಗಳು ಲೆಕ್ಕಾಚಾರ ತಲೆಕೆಳಗಾಗಿಸುತ್ತಾರೆಯೇ?
US Election Result:ಡೊನಾಲ್ಡ್ ಟ್ರಂಪ್ ಕೈಹಿಡಿದ Swing States,2ನೇ ಬಾರಿ ಅಧ್ಯಕ್ಷ ಗಾದಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.