ಆಹಾರ ಸೇವನೆ ಎಂಬ ಅನುಸಂಧಾನ
Team Udayavani, Jul 28, 2019, 5:00 AM IST
ಫೊಟೊ : ಸತೀಶ ಇರಾ
ಈಗ ಮಳೆಗಾಲ. ಈಗ ಏನು ಸೇವಿಸಬೇಕು, ಏನನ್ನು ಸೇವಿಸಿದರೆ ಆರೋಗ್ಯಕ್ಕೆ ಅನುಕೂಲ ಎಂದು ಪಟ್ಟಣದವರಿಗೆ ಗೊತ್ತಿರಲಾರದು. ಆದರೆ, ಕಾಡಿನಲ್ಲಿ ಪ್ರಕೃತಿಗೆ ಹತ್ತಿರವಾಗಿ ಬದುಕುವ ಜನಗಳಿಗೆ ತಿಳಿದೇ ಇದೆ. ಋತುವಿಗನುಗುಣವಾಗಿ ಅಂದರೆ ಕಾಲಕ್ಕನುಗುಣವಾಗಿ ಸೇವಿಸಿದ್ದು ದೇಹಕ್ಕೆ ಹಿತವಾಗಿರುತ್ತದೆ ಎಂಬುದು ಪ್ರಸಿದ್ಧ ಉಕ್ತಿ. ಬುಡಕಟ್ಟು ಜನಾಂಗದವರ ದೇಹಪ್ರಕೃತಿಯನ್ನು ಪರೀಕ್ಷಿಸಿದಾಗ ಅಲ್ಲಿ ಬ್ಯಾಕ್ಟೀರಿಯಾಗಳು, ನಾಗರಿಕನೆಂದು ಕರೆಯುವ ಮನುಷ್ಯನ ದೇಹದಲ್ಲಿರುವುದಕ್ಕಿಂತ ಸುರಕ್ಷಿತವಾಗಿರುತ್ತವೆ. ದೇಹವನ್ನು ಬಾಡಿಗೆ ಮನೆ ಎನ್ನುತ್ತಾರೆ. ನಾವೇ ನಮ್ಮ ದೇಹದಲ್ಲಿ ಅತಿಥಿ. ಅಂದರೆ, ಆತ್ಮಜ್ಞಾನದ ಅರ್ಥದಲ್ಲಿ ಅಲ್ಲ. ಇಲ್ಲಿ ಬ್ಯಾಕ್ಟೀರಿಯಾಗಳು ನೆಲೆಸಿರುತ್ತವೆ. ಬ್ಯಾಕ್ಟೀರಿಯಗಳೇ ದೇಹದಲ್ಲಿರುವ ಮುಖ್ಯ ಜೀವಿಗಳು. ಅವುಗಳದೇ ಅಧಿ ಪತ್ಯ. ಈ ಬ್ಯಾಕ್ಟೀರಿಯಾಗಳಿಗೆ ಸಿಟ್ಟು ಬಂದರೆ ಅವು ಆರೋಗ್ಯವನ್ನು ಕೆಡಿಸುತ್ತವೆ. ಆಹಾರ ಸೇವನೆಯಲ್ಲಿ ವ್ಯತ್ಯಸ್ತವಾದರೆ ಮೆದುಳಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ. ಅಂದರೆ, ಉಂಡ ಆಹಾರಕ್ಕೆ ಸ್ಪಂದಿಸದ ಬ್ಯಾಕ್ಟೀರಿಯಾಗಳು ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರುತ್ತವೆ. ಯಾವಾಗ ಬ್ಯಾಕ್ಟೀರಿಯಾಗಳಿಗೂ ತೊಂದರೆಯಾಗದ ಹಾಗೆ ನಾವು ದೇಹ ಪೋಷಣೆ ಮಾಡುತ್ತೇವೊ ಆಗ ಆರೋಗ್ಯವಂತರಾಗಿರುತ್ತೇವೆ. ಬುಡಕಟ್ಟು ಜನಾಂಗದವರ ಆರೋಗ್ಯದ ಗುಟ್ಟು ಇದೇ ಆಗಿದೆ. ಅವರು ಯಾವ ಕಾಲದಲ್ಲಿ ಏನನ್ನು ತಿನ್ನಬೇಕೆಂಬ ಬಗ್ಗೆ ಸ್ಪಷ್ಟವಾದ ಅರಿವನ್ನು ಹೊಂದಿರುತ್ತಾರೆ.
ಆಹಾರ ಸೇವನೆ ಎಂಬುದು ದೇಹ ಮತ್ತು ಪ್ರಕೃತಿಯ ಅನುಸಂಧಾನವನ್ನು ಸಾಧಿಸುವ ಒಂದು ಪ್ರಕ್ರಿಯೆ. ಹೊರಗಿನ ಜಗತ್ತನ್ನು ಒಳಗು ಮಾಡಿಕೊಳ್ಳುವ ಒಂದು ಪ್ರಕ್ರಿಯೆ. ಹೊರಗೆ ಮತ್ತು ಒಳಗು- ಬೆಸೆದುಕೊಳ್ಳದೆ ಆರೋಗ್ಯವಂತಿಕೆ ಎಂಬುದು ಸಾಧ್ಯವಾಗುವುದಿಲ್ಲ. ಹೊರಗೆ ಬಿಸಿಯಾದಾಗ ದೇಹವನ್ನು ತಂಪು ಮಾಡುತ್ತೇವೆ, ಎ.ಸಿ. ಅಳವಡಿಸುತ್ತೇವೆ. ಹೊರಗಿನ ಜಗತ್ತನ್ನು ಒಳಗಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಹೊರಗಿನ ಜಗತ್ತನ್ನು ಬದಲಾಯಿಸಲು ಪ್ರಯತ್ನಿಸುತ್ತೇವೆ. ಅದು ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರಿದಾಗ ಅದನ್ನು ಸರಿಪಡಿಸಲು ಔಷಧಿಯ ಮೊರೆ ಹೋಗುತ್ತೇವೆ. ಅವು ದೇಹದಲ್ಲಿ ವಾಸವಾಗಿರುವ ಬ್ಯಾಕ್ಟೀರಿಯಾಗಳ ಮೇಲೆ ಪರಿಣಾಮ ಬೀರುತ್ತವೆ.
ಮಳೆಗಾಲದಲ್ಲಿ ಸೊಪ್ಪಿನ ಕುಡಿಗಳನ್ನು ಸಂಗ್ರಹಿಸಿ ಅದನ್ನು ಅರೆದು ಚಟ್ನಿಯಾಗಿ ಬಳಸುವ ಕ್ರಮವಿದೆ. ಅವುಗಳನ್ನು ಕಾಡಿನೊಳಗೆ ಹೋಗಿ ಸಂಗ್ರಹಿಸಬೇಕು. ಅವು ಮಳೆ ಬಂದಾಗ ಮಾತ್ರ ಚಿಗುರುತ್ತವೆ. ಅವುಗಳನ್ನು ಅರೆದು ಐದಾರು ತಿಂಗಳು ತೆಗೆದಿಡಬಹುದು. ಊಟದೊಂದಿಗೆ ಸೇವಿಸಿದರೆ ಅದು ಮಳೆಗಾಲದ ಸಹಜ ಆಹಾರವಾಗಿರುತ್ತದೆಯೇ ವಿನಾ ಪ್ರತಿಕೂಲ ಪರಿಣಾಮ ಬೀರುವುದಿಲ್ಲ.
ನಾವು ಮಾಡುವ ನಿತ್ಯದ ಅಡುಗೆ ದೇಹಾನುಕೂಲಿಯಾಗಿಯೇ ಇರುತ್ತದೆ. ಮುಖ್ಯವಾಗಿ ಹಳ್ಳಿಗಳ ಪಾಕಸಂಸ್ಕೃತಿ ಋತುವಿಗೆ ಅನುಗುಣವಾಗಿರುತ್ತದೆ. ಮಳೆಗಾಲದಲ್ಲಿ ಹಳ್ಳಿಗಳ ಬಳಿ ಸಾಗುವಾಗ ಮನೆ ಗಳ ಹಂಚಿನ ಎಡೆಗಳಲ್ಲಿ ಹೊರಬರುವ ಹೊಗೆಯು ಒಳಗೆ ಅಡುಗೆ ಮಾಡುತ್ತಿದ್ದಾರೆ ಎಂಬು ದನ್ನು ಸೂಚಿ ಸು ತ್ತದೆ. ಹಳ್ಳಿಗಳಲ್ಲಿ ಅಡುಗೆ ಮಾಡುವುದೆಂದರೆ ಪ್ರಕೃತಿಯ ಭಾಗವಾಗಿ ನಡೆಯುವ ಕರ್ಮವೇ. ಪಟ್ಟಣಗಳಲ್ಲಿ ಗ್ಯಾಸ್ ಒಲೆಗಳ ಮೇಲಿಟ್ಟ ಪಾತ್ರೆಯಲ್ಲಿ ಅನ್ನ ಬೇಯುವಾಗ ಅಂಥ ಜೀವ-ಪ್ರಕೃತಿಯ ತಾದಾತ್ಮವೇ ಇಲ್ಲ.
ಮೀನಿನ ಎಣ್ಣೆಯಲ್ಲಿ ಒಮೇಗಾ-3 ಎಂಬ ಅಂಶ ಇರುತ್ತದೆ. ಇದು ಸಾಸಿವೆಯಲ್ಲಿಯೂ ಇರುತ್ತದೆ. ಯಾರು ಮೀನಿನೆಣ್ಣೆ ಸೇವಿಸುವುದಿಲ್ಲವೋ ಅವರು ಸಾಸಿವೆಗಳನ್ನು ಎಣ್ಣೆಗೆ ಹಾಕಿ ಒಗ್ಗರಣೆ ಕೊಟ್ಟರೆ ಆಗ ಒಮೇಗಾ-3 ಬಿಡುಗಡೆಯಾಗಿ ಉಣ್ಣುವ ಆಹಾರವನ್ನು ದೇಹಧರ್ಮಕ್ಕೆ ಒಗ್ಗಿಸುತ್ತದೆ. ಅಂದರೆ, ನಮ್ಮಲ್ಲಿ ಒಗ್ಗರಣೆ ಕೊಡುವುದು ಎಂಬ ಮಾತಿದೆ. ಯಾವುದೇ ವ್ಯಂಜನ ರುಚಿಕರವಾಗಲು ಒಗ್ಗರಣೆ ಕೊಡಲಾಗುತ್ತದೆ ಎಂಬ ಭಾವನೆಯಿದೆ. ಆದರೆ, ರುಚಿಕರವಾಗಿಸುವುದಷ್ಟೇ ಉದ್ದೇಶವಲ್ಲ , ಆಹಾರವನ್ನು ದೇಹಕ್ಕೆ ಒಗ್ಗಿಸಿ ಆರೋಗ್ಯವನ್ನು ವರ್ಧಿಸುವುದೂ ಇದರ ಮುಖ್ಯ ಆಶಯ.
ಯಾವುದನ್ನು ಯಾವಾಗ ತಿನ್ನಬೇಕು ಎಂಬುದು ಕಾಲಕ್ಕೆ ಬದ್ಧವಾದ ಸಂಗತಿಯಷ್ಟೇ ಅಲ್ಲ. ದೈನಂದಿನ ಶಿಸ್ತು ಕೂಡ ಹೌದು. ಹಸಿದಾಗ ಹಲಸಿನ ಹಣ್ಣು ತಿನ್ನಬೇಕು, ಉಂಡ ಮೇಲೆ ಮಾವಿನ ಹಣ್ಣು ತಿನ್ನಬೇಕು ಎಂಬುದು ಪ್ರಸಿದ್ಧ ಉಕ್ತಿ. ಇದನ್ನು ಅನುಸರಿಸದಿದ್ದರೆ ಹೊಟ್ಟೆ ಕೆಡುತ್ತದೆ. ಇದು ಸ್ವಭಾವ-ಪ್ರಭಾವಕ್ಕೆ ಸಂಬಂಧಿಸಿದ ವಿಚಾರ. ಜೇನು ಮತ್ತು ಮೊಟ್ಟೆ ಜೊತೆಯಾಗಿ ತಿನ್ನಬಾರದು ಎನ್ನುತ್ತಾರೆ. ಯಾವುದನ್ನು ಯಾವುದರ ಜೊತೆಗೆ ತಿಂದರೆ ಆರೋಗ್ಯಕ್ಕೆ ಪೂರಕ ಎಂಬುದು ಒಂದು ಶಾಸ್ತ್ರವೇ ಆಗಿದೆ. ಕೆಲವು ಸಮಯದ ಹಿಂದೆ ಬರಿಹೊಟ್ಟೆಯಲ್ಲಿ ಲೀಚಿ ಹಣ್ಣು ತಿಂದ ಮಕ್ಕಳು ಅಸುನೀಗಿದ ದುರಂತದ ಸುದ್ದಿಯನ್ನು ನಾವು ಕೇಳಿದ್ದೇವೆ.
ನ್ಯೂಟ್ರಿಶನ್ ಸೈನ್ಸ್ ಒಂದಿದೆ. ಅದು ಪ್ರಕೃತಿಗೆ ಅನುಗುಣವಾಗಿ ರೂಪುಗೊಂಡ ದೇಹ ಪ್ರಕ್ರಿಯೆಯ ಅಧ್ಯಯನದ ವಿಭಾಗ. ಮದ್ರಾಸಿನಲ್ಲಿ ಸಾಮಾನ್ಯ ಜನರು ಮೈಮೇಲಿನ ಅಂಗಿ ಎಸೆದು ಓಡಾಡುತ್ತಾರೆ. ಯಾಕೆಂದರೆ, ಅಲ್ಲಿ ಸೆಕೆ ಅಧಿಕ. ಆದರೆ, ಚೆನ್ನೈಯಲ್ಲಿ ಲಾಯರ್‌ಗಳು ದಪ್ಪದ ಕೋಟು ಧರಿಸಿ ಮೆರೆಯುತ್ತಾರೆ. ಇದು ಅಸಂಬದ್ಧ. ಯುರೋಪಿನ ಕಡು ಚಳಿಗೆ ಕೋಟು ಧರಿಸುವ ಸಂಪ್ರದಾಯ ಒಂದಿತ್ತು. ಭಾರತದಲ್ಲಿ ಅದು ಪ್ರತಿಷ್ಠೆಯ ವಿಚಾರವಾಗಿದೆ. ಕೇರಳದ ಕೆಲವೆಡೆ ಮಹಿಳೆಯರು ರವಿಕೆ ಧರಿಸುವುದು ಅವಮರ್ಯಾದೆಯ ಸಂಗತಿಯಾಗಿತ್ತು. ನಾವು ಆಹಾರ್ಯಗಳ, ಸಂಸ್ಕೃತಿಯ ವಿಚಾರದಲ್ಲಿ ಬ್ರಿಟಿಷ್‌ರನ್ನು ಹೇಗೆ ಅನುಸರಿಸುತ್ತೇವೆಯೋ ಹಾಗೆ ಆಹಾರ ಸೇವನೆಯ ವಿಚಾರದಲ್ಲೂ ಅವರೇ ಆದರ್ಶರಾಗುತ್ತಿದ್ದಾರೆ. ಅಮೆರಿಕನ್ ಆ್ಯಪಲ್ ಅಂತ ಇದೆ. ಆರು ತಿಂಗಳವರೆಗೆ ಹಾಳಾಗದೇ ಉಳಿಯುತ್ತದೆ. ಈಗ ನಮ್ಮಲ್ಲಿ ಹಲವು ತಿಂಗಳು ಹಾಳಾಗದೇ ಉಳಿಯುವ ಹಾಲು ಬಂದಿದೆ. ಫ್ರಿಡ್ಜ್ ನಲ್ಲಿ ದಿನಗಟ್ಟಲೆ ಇಡುವ ಆಹಾರ ವಸ್ತುಗಳನ್ನು ಸೇವಿಸುತ್ತೇವೆ. ಪಾಶ್ಚಾತ್ಯರ ಪ್ರಕೃತಿಗೆ ಅನುಗುಣವಾದ ಆಹಾರ ಸಂಸ್ಕೃತಿಯನ್ನು ನಾವು ಅನುಕರಿಸುತ್ತೇವೆ. ಆಮೇಲೆ ಔಷಧಿಗಳ ಮೊರೆಹೋಗುತ್ತೇವೆ. ಇದೊಂದು ವಿಷ ವರ್ತುಲ. ಪ್ರಕೃತಿಗೆ ವಿರುದ್ಧವಾಗಿ ಆಹಾರ ಸೇವಿಸುವುದು, ಆರೋಗ್ಯ ಹಾಳು ಮಾಡಿಕೊಳ್ಳುವುದು. ಮತ್ತೆ ಪ್ರಕೃತಿಯ ಕಡೆಗೆ ಹಿಂತಿರುಗಲು ಪ್ರಯತ್ನಿಸಿ ಪಥ್ಯವನ್ನು ಪಾಲಿಸುವುದು, ಮದ್ದು ತೆಗೆದುಕೊಳ್ಳುವುದು!
ಮಳೆಗಾಲ ಬಂದಾಗಲೆಲ್ಲ ಪ್ರಕೃತಿಯ ಜೊತೆಗೆ ಒಂದು ರೀತಿಯ ಧ್ಯಾನ ಸಾಧ್ಯವಾಗುತ್ತದೆ. ಆಕಾಶ-ಭೂಮಿ ಬೆಸೆಯುವ ಮಳೆಯಲ್ಲಿ ದೇಹ-ಪ್ರಕೃತಿ ಹೊಸೆಯುವ ಭಾವವನ್ನು ಸಾಧ್ಯವಾಗಿಸಬೇಕು. ಅದಕ್ಕೆ ಒಂದೇ ದಾರಿ, ಈ ಋತುವಿಗೆ ಹಿತವಾಗುವ ಆಹಾರವನ್ನು ಸೇವಿಸುವುದು. ಒಳ್ಳೆಯ ಆಹಾರ ಸೇವಿಸಿದರೆ ಮನಸ್ಸು ಪ್ರಫುಲ್ಲವಾಗಿ ರುತ್ತದೆ ಎನ್ನುತ್ತಾರೆ. ಇದು ನೂರಕ್ಕೆ ನೂರು ನಿಜ.
ಹಳೆಯದರಲ್ಲಿಯೇ ಅರ್ಥವಿರುವುದು !
ಸಂಪ್ರದಾಯದಲ್ಲಿರುವ ಅನೇಕ ಆಹಾರ ಪದ್ಧತಿಗಳನ್ನು ಇಂದಿನ ಆಧುನಿಕರು, “ಅವುಗಳೆಲ್ಲ ತಪ್ಪು ತಿಳುವಳಿಕೆ. ಗೊಡ್ಡು ಸಂಪ್ರದಾಯ’ ಎಂದೆಲ್ಲ ಮೂದಲಿಸುವುದುಂಟು. ಆಹಾರ ಪದ್ಧತಿಯಲ್ಲಿ ಹತ್ತು ಮಿಥ್‌ಗಳಿವೆ ಎಂದು ಪಟ್ಟಿ ಮಾಡುತ್ತಾರೆ. ಅಂತರ್ಜಾಲದಲ್ಲಿ ಇಂಥ ಪಟ್ಟಿ ಅನೇಕ ಲಭ್ಯ. ವೈದ್ಯಕೀಯ ಮತ್ತು ಪೋಷಕಾಂಶ ಅಧ್ಯಯನ ಮಾಡಿದವರು ಇದನ್ನು ಒಂದು ಅಸ್ತ್ರವನ್ನಾಗಿ ಬಳಸುತ್ತಾರೆ. ಹಳೆಯದನ್ನು ಧಿಕ್ಕರಿಸಿ ಹೊಸದನ್ನು ಸ್ಥಾಪಿಸುವ ಪ್ರಯತ್ನ ಇದರ ಹಿಂದಿ ದೆ. ಇಂಥ ಪಟ್ಟಿಯಲ್ಲಿ ಪಪ್ಪಾಯ ಹಣ್ಣು ತಿಂದರೆ ಗರ್ಭಪಾತವಾಗುತ್ತದೆ, ಎಳ್ಳು ತಿಂದರೆ ಉಷ್ಣವಾಗು ತ್ತದೆ- ಇವೆಲ್ಲ ಸುಳ್ಳು ಎಂದಿದೆ.
ಆದರೆ, ಇತ್ತೀಚಿನ ಕೆಲವು ಅಧ್ಯಯನಗಳಲ್ಲಿ ಪಪ್ಪಾಯಿ ಗರ್ಭ ಕಟ್ಟಿದ ಮೊದಲ ಹಂತದಲ್ಲಿ ಭ್ರೂಣವನ್ನು ಸೇದಿಕೊಳ್ಳುವಂತೆ ಮಾಡುವುದು ಸತ್ಯ ಎಂದು ಸಾಬೀ ತಾ ಗಿದೆ. ಅದರಲ್ಲೂ ಚೆನ್ನಾಗಿ ಹಣ್ಣಾಗದ ಪಪ್ಪಾಯ ಹೀಗೆ ಮಾಡುವುದು ಹೆಚ್ಚು ಎನ್ನುತ್ತಾರೆ. ಅನೇಕ ಬಾರಿ ನಂಬಿಕೆಗಳು ಅನುಭವಜನ್ಯವಾಗಿರುತ್ತವೆ. ಕೆಲವೊಮ್ಮೆ ಹೇರಲ್ಪಡುವುದು ಉಂಟು. ನಮ್ಮ ಹಿರಿಯರಿಗೆ ಆಹಾರ ಸ್ವಭಾವ, ಪ್ರಭಾವ, ವೈರುಧ್ಯ, ಸಂಸ್ಕರಣೆ, ಸಂಸ್ಕಾರ ಅಧುನಿಕರಿಗಿಂತ ಚೆನ್ನಾಗಿ ಬಲ್ಲವರು ಎನ್ನುವುದರಲ್ಲಿ ಸಂಶಯವಿಲ್ಲ. ಯಾವುದಕ್ಕೆ ಯಾವುದು ಪೂರ ಕ, ಯಾವುದು ಯಾವುದನ್ನು ಉಪಶಮನ ಮಾಡಬಲ್ಲದು ಎಂಬುದನ್ನು ಬಲ್ಲರು. ಅಂಬೊಡೆ ಮಾಡುವಾಗ ಶುಂಠಿ ಹಾಕಿದರೆ ಹೊಟ್ಟೆ ಉಬ್ಬರವಾಗುವುದಿಲ್ಲ. ಕೋಸಂಬರಿ ಶೀತ ಶಮನಕ್ಕೆ ಮೆಣಸಿನ ಪರಿಹಾರ. ಇದನ್ನು ವಿಜ್ಞಾನವೆಂದು ಪರಿಗಣಿಸದಿರುವುದು ದುರಂತ. ಪಠ್ಯಪುಸ್ತಕದಲ್ಲಿದ್ದರೆ ವಿಜ್ಞಾನ ಎನ್ನುವಂತಾಗಿದೆ. ಹಿಂದೆ ಹೆರಿಗೆಗೆ ಕತ್ತಲೆ ಕೋಣೆಗಳಿದ್ದವು. ಇತ್ತೀಚಿನ ಮಾಹಿತಿಯ ಪ್ರಕಾರ ಹುಟ್ಟಿದ ಮಗು ತಕ್ಷಣ ಪ್ರಖರವಾದ ಬೆಳಕಿನಿಂದ ಕಣ್ಣಿನ ದೋಷ ಉಂಟಾಗುತ್ತದೆ ಎನ್ನುತ್ತಾರೆ! ಹೀಗಾಗಿ, ಮುನ್ನೋಟ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಹಿನ್ನೋಟ. ಜೋಕಾಲಿ ಹಿಂದೆ ಜೀಕಿ ಮುಂದೆ ಬಿಡುವುದು. ಆಧುನಿಕ ವಿಜ್ಞಾನ ಸಂಪ್ರದಾಯದಲ್ಲಿರುವ ಸತ್ಯ ಸಂಗತಿಗಳನ್ನು ಗುರುತಿಸುವಲ್ಲಿ ಶ್ರಮ ವಹಿಸಬೇಕಾಗಿದೆ. ಅದಕ್ಕೆ ಬೇರೆಯೇ ರೀತಿಯ ದೃಷ್ಟಿಯೇ ಬೇಕಾಗಿದೆ.
ಕೆಲವೊಮ್ಮೆ ಹಳತು ಮತ್ತು ಹೊಸತರ ಮಧ್ಯೆ ಪಥ ಸರಿ ಎನ್ನಿಸುವುದುಂಟು. ಉದಾಹರಣೆಗೆ ಹಳೆ ಸಂಪ್ರದಾಯಸ್ಥರ ಮಡಿ. ಹಳಬರು ಸೋಪು ಉಪಯೋಗಿಸುವುದಿಲ್ಲ. ಆಧುನಿಕರು ಸೋಪಿಗೆ, ಹಲ್ಲು ಉಜ್ಜುವ ಪೇಸ್ಟ್‌ಗೆ ಆ್ಯಂಟಿಬಯಾಟಿಕ್ಸ್ ಹಾಕುತ್ತಾರೆ! ಇದು ಅದಕ್ಕಿಂತ ಕಳಪೆ. ಇತ್ತೀಚೆಗೆ ಮೆಶ್‌ವಾಕ್ ಆಯುರ್ವೇದಿಕ್ ಹಲ್ಲುಜ್ಜುವ ಪೇಸ್ಟ್‌ನಲ್ಲಿ ಆ್ಯಂಟಿಬಾಯಾಟಿಕ್ ಟ್ರೆಕ್ಲೋಸಾನ್ ಇದ್ದದ್ದು ಕಂಡು ಅಚ್ಚರಿಪಡುವಂತಾಯಿತು.
ಅನೇಕ ಹಳೆ ಆಹಾರ ಸಂಪ್ರದಾಯ ಪ್ರಕೃತಿಯೆಂಬ ಪ್ರಯೋಗಾಲಯದಿಂದ ಪರೀಕ್ಷೆಗೊಳಗಾಗಿ ಬಂದಿರುವಂಥದ್ದು. ಅದನ್ನು ನೋಡುವ ಗುರುತಿಸುವ ಕಣ್ಣು ಮುಖ್ಯ. ಫ್ರಾನ್ಸಿಸ್ ಬೇಕನ್ ಹೀಗೆನ್ನುತ್ತಾನೆ: blend young and old to defeat the defect of both.
ಪೌಷ್ಟಿಕಾಂಶಗಳನ್ನು ಹುಡುಕುವ ಮುನ್ನ…
ಹಾಲಿನಲ್ಲಿರುವ ಪೌಷ್ಟಿಕಾಂಶಗಳು ಯಾವುದು? ಎಂದು ಕೇಳಿ ದರೆ ಎಲ್ಲರೂ ಈಗ ಗೂಗಲ್ ಮಾಡುತ್ತಾರೆ. ಉತ್ತರ ಸಿಗುತ್ತದೆ. ಆದರೆ, ಪ್ರಶ್ನೆಯೇ ತಪ್ಪು , ಇನ್ನು ಉತ್ತರಿಸುವುದು ಹೇಗೆ? ಇವತ್ತು ನಾವು ಕಾಣುತ್ತಿರುವುದು ಇದನ್ನೇ. ಇದನ್ನು “ಎಪಿಸ್ಟಮಿಕ್ ಎರರ್’ ಎನ್ನುತ್ತೇವೆ. ಹಾಲಿನಲ್ಲಿರುವ ಪೌಷ್ಟಿಕಾಂಶ ಯಾವುದು ಎಂಬ ಪ್ರಶ್ನೆ ಕೇಳುವ ಮುನ್ನ ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು:
ಅದು ಯಾವ ಜಾತಿಯ ಹಸು?
ಅದು ದಿನಕ್ಕೆ ಎಷ್ಟು ಸಂಚರಿಸುತ್ತದೆ?
ಯಾವ ಜಾತಿಯ ಸೊಪ್ಪುಗಳನ್ನು ತಿನ್ನುತ್ತದೆ?
ಅದು ತಿನ್ನುವ ಸೊಪ್ಪಿನ ಗಿಡಗಳು ಯೂರಿಯಾ ಗೊಬ್ಬರ ಹಾಕಿದಲ್ಲಿ ಬೆಳೆದಿರುವುದೆ?
ಹಾಲಿಳಿಸಲು ಆಕ್ಸಿಟೋಸಿಸ್ ಹಾರ್ಮೋನ್ ಕೊಡಲಾಗಿದೆಯೆ?
ಕರುವು ದನದ ಜೊತೆಗಿದೆಯ ಅಥವಾ ಕಸಾಯಿಖಾನೆಗೆ ಹೋಗಿದೆಯೆ?
ಇನ್ನೂ ಹಲವು ಪ್ರಶ್ನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ.
ಕೆ. ಸಿ. ರಘು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.