ಕೈಯಾಡಿಸಿದ ಕ್ಷೇತ್ರಗಳಲ್ಲಿ ಕೃತಿರೂಪದ ಉಡುಪ
Team Udayavani, Jul 29, 2019, 12:03 PM IST
ಉಡುಪಿ: ಕಾರ್ಕಡ ಮಂಜುನಾಥ ಉಡುಪ ಎಂದು ಪೂರ್ಣ ಹೆಸರಿನಿಂದ ಹೇಳಿದರೆ ಫಕ್ಕನೆ ಯಾರಿಗೂ ತಿಳಿಯಲಾರದು. ಶನಿವಾರ ಅಗಲಿದ ಉಡುಪರನ್ನು ಕೆ.ಎಂ. ಉಡುಪ ಎಂದರೆ ಮಾತ್ರ ಜನಸಾಮಾನ್ಯರಿಗೆ ತಿಳಿದೀತು.
ದೇಶವ್ಯಾಪ್ತಿಯ ಚಿಂತನೆ
ಶಾರೀರಿಕವಾಗಿ ಸ್ವಲ್ಪ ಗಿಡ್ಡವೇ ಎನ್ನಬಹುದಾದ ಉಡುಪರ ಚಿಂತನೆ ಆಜಾನುಬಾಹು ಗಾತ್ರದ್ದು, ದೇಶ ವ್ಯಾಪ್ತಿಯದ್ದು. ಅವರು ವಿಶೇಷವಾಗಿ ಕೃಷಿ ಮತ್ತು ಅದಕ್ಕೆ ಪೂರಕವಾಗುವ ಹೈನುಗಾರಿಕೆ, ಗುಡಿ ಕೈಗಾರಿಕೆ, ಸ್ವ ಉದ್ಯೋಗ, ಪರಿಸರಸ್ನೇಹಿ ಸೌರ ವಿದ್ಯುತ್ ಇತ್ಯಾದಿ ಕ್ಷೇತ್ರಗಳಲ್ಲಿ ಸದಾ ಹೊಸ ಹೊಸ ಚಿಂತನೆಗಳನ್ನು ಹೊಂದಿದ್ದರು.
ಬ್ಯಾಂಕರ್ ಆದ ಕೃಷಿ ವಿಜ್ಞಾನಿ
ಮೂಲತಃ ಉಡುಪರು ಕೃಷಿ ವಿಜ್ಞಾನಿ. ಭತ್ತ ತಳಿಗಳ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿ ಅದಕ್ಕೆ ತಕ್ಕುದಾದ ಕೃಷಿ ಇಲಾಖೆ ಯಲ್ಲಿ ಆರು ವರ್ಷ ಸಂಶೋಧನಾಧಿಕಾರಿ ಯಾಗಿ ಕೆಲಸ ಮಾಡಿದವರು. ಬಳಿಕ ಹಣಕಾಸು ಸಂಸ್ಥೆಗೆ ಸೇರಿದರೂ ತನ್ನ ಮೂಲ ಕ್ಷೇತ್ರವಾದ ಕೃಷಿ ವಿಕಾಸವನ್ನು ಮರೆಯಲಿಲ್ಲ.
ತರಕಾರಿ ಬೀಜ ವಿತರಣೆಯ ಹಿಂದೆ
ಉಡುಪರ ಈ ಚಿಂತನೆಗೆ ಇಂತಹ ಕ್ಷೇತ್ರಗಳಲ್ಲಿ ದೇಶ ಮಟ್ಟದಲ್ಲಿ ಕೈಯಾಡಿಸಿದ “ಮಣಿಪಾಲದ ಛಾಪು’ ಟಿ.ಎ. ಪೈಗಳು ಕಾರಣವೆಂದರೆ ಅತಿಶಯವಲ್ಲ. ಮನೆ ಮನೆಗಳಿಗೆ ತರಕಾರಿ ಬೀಜ ವಿತರಿಸಿದರೆ ಅಷ್ಟು ಜನರು ಸ್ವಾವಲಂಬಿಯಾಗುವುದಲ್ಲದೆ ಅವರೂ ಇತರರಿಗೆ ಒಂದಿಷ್ಟು ತರಕಾರಿ ಕೊಡುವಂತಾದರೆ ಎಷ್ಟು ಸಂಪತ್ತು ಸಂಗ್ರಹವಾದಂತಾಗುವುದಿಲ್ಲ ಎಂಬ ಟಿ.ಎ. ಪೈಯವರ ದೂರಗಾಮಿ ಚಿಂತನೆಯನ್ನು ಕೆ.ಎಂ. ಉಡುಪರು ಪ್ರತಿವರ್ಷ ಎಂಜಿಎಂ ಕಾಲೇಜಿನಲ್ಲಿ ಮೇ 29ರಂದು ನಡೆಯುವ ಡಾ| ಟಿ.ಎಂ.ಎ. ಪೈ ಮತ್ತು ಟಿ.ಎ. ಪೈಯವರ ಸ್ಮತಿ ದಿನದಂದು ತಪ್ಪದೆ ಹೇಳುತ್ತಿದ್ದರು. ತರಕಾರಿ ಬೀಜಗಳ ವಿತರಣೆಯ ಪ್ರಾಯೋಜಕತ್ವವನ್ನು ಸಿಂಡಿಕೇಟ್ ಬ್ಯಾಂಕ್ ಮುಂದುವರಿಸಿಕೊಂಡು ಬರುತ್ತಿದೆ. ಇತ್ತೀಚೆಗಷ್ಟೇ ನಡೆದ ಸ್ಮತಿದಿನ ದಂದು ಉಡುಪರು ಅನಾರೋಗ್ಯದ ಕಾರಣದಿಂದ ಹಾಜರಿರಲಿಲ್ಲ.
ಸ್ವಾವಲಂಬೀ ಚಿಂತನೆ
ತರಕಾರಿ ಬೀಜಗಳ ವಿತರಣೆಯ ಪರಿಕಲ್ಪನೆ ಅತ್ಯಂತ ಸರಳವಾದರೂ ಸಮಾಜ ವ್ಯಾಪಿಯಾದಾಗ ಅದರ ಪರಿಣಾಮ ಬಲು ದೊಡ್ಡದು ಎಂಬ ಟಿ.ಎ. ಪೈಯವರ ಚಿಂತನೆ ಯನ್ನು ಉಡುಪರು ಕೇವಲ ಪ್ರಚಾರಕಾರರಾಗದೆ ಸ್ವಂತ ಜೀವನದಲ್ಲಿಯೂ ಅಳವಡಿಸಿ ಕೊಂಡರು. ಟಿ.ಎ. ಪೈಯವರು ಸ್ಥಾಪಿಸಿದ ಭಾರತೀಯ ವಿಕಾಸ ಟ್ರಸ್ಟ್‌ನ ಟ್ರಸ್ಟಿಯಾಗಿ, ಜು. 27ರಂದು ಅಸುನೀಗುವವರೆಗೂ ನಿರ್ವಾಹಕ ವಿಶ್ವಸ್ತರಾಗಿ ಹೈನುಗಾರಿಕೆ, ಟೈಲರಿಂಗ್‌ನಂತಹ ಸಾಮಾನ್ಯ ಜನರು ಅವಲಂಬಿಸುವ ವಿಷಯಗಳ ಕುರಿತು ತರಬೇತಿ ಕೊಟ್ಟು ಅವರನ್ನು ಸ್ವಾವಲಂಬಿಗಳನ್ನಾಗಿಸಲು ಯತ್ನಿಸುವ ಮೂಲಕ ಸಮಾಜ ವಿಕಾಸದ ಪ್ರಾಕ್ಟಿಕಲ್ ವ್ಯಕ್ತಿಯಾದರು, ಮಕ್ಕಳಿಗೂ ನೌಕರಿಯ ದಾರಿ ತೋರಿಸದೆ ಸ್ವ ಉದ್ಯೋಗದ ದಾರಿ ತೋರಿದರು. ನಿವೃತ್ತಿಯಾದ ಬಳಿಕ ತಾನೆಂದಿಗೂ ವೇತನ ಪಡೆಯುವ ಹುದ್ದೆಗೆ ಹೋಗು ವುದಿಲ್ಲ ಎಂದು ಪಣ ತೊಟ್ಟದ್ದಲ್ಲದೆ ಐಶಾರಾಮಿಯಾಗಿರುವುದು ಸಾಧ್ಯ ವಿದ್ದರೂ ಆ ಇಚ್ಛೆಯನ್ನೂ ಪಡಲಿಲ್ಲ.
ಪ್ರ್ಯಾಕ್ಟಿಕಲ್ ಗ್ರಾಮೀಣ- ಪರಿಸರವಾದಿ
ಬಹುತೇಕ ಜನರಿಗೆ ಇಂದು ಗ್ರಾಮೀಣ ಬದುಕು, ಪರಿಸರ ಕಾಳಜಿ ಕ್ಷೇತ್ರಗಳು ಶೋಕಿ, ಬ್ರಾಂಡ್ ಆಗಿ ಕಾಣುತ್ತಿದ್ದರೆ ಉಡುಪರು ಅದರಲ್ಲೂ ಪ್ರಾಕ್ಟಿಕಲ್ ಆಗಿದ್ದವರು. ಮಣಿಪಾಲ, ಉಡುಪಿಯಲ್ಲಿ ತಾರಾಸದೃಶ ಬದುಕನ್ನು ಸವೆಸಬಹುದಾಗಿದ್ದರೂ ಹುಟ್ಟಿ ಬೆಳೆದ ಮಂದಾರ್ತಿಯನ್ನು ಪ್ರೀತಿಸಿ ಅಲ್ಲೇ ವಾಸಿಸಿದರು. ನಿತ್ಯ ಮಂದಾರ್ತಿಯಿಂದ ಮಣಿಪಾಲ, ಉಡುಪಿಗೆ ಬಂದು ಹೋಗುತ್ತಿದ್ದರು. ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮೊದಲಾದ ದೇಶಗಳಿಗೆ ಪ್ರವಾಸ ನಡೆಸಿದ್ದರೂ ಅವರ ಆತ್ಮ ಕನ್ನಡ, ಗ್ರಾಮೀಣ ಪರ ಇದ್ದವೆಂಬುದಕ್ಕೆ ತನ್ನ ತಂದೆ ಮರಿ ಉಡುಪರಿಂದ ಸ್ಥಾಪನೆಗೊಂಡ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ಹಿ.ಪ್ರಾ. ಶಾಲೆಯ ಸಂಚಾಲಕರಾಗಿ, ವ್ಯವಸ್ಥಾಪಕ ರಾಗಿ ಅದನ್ನು ಮೇಲ್ದರ್ಜೆಗೇರಿಸಲು ಪಡುತ್ತಿದ್ದ ಪ್ರಯತ್ನ, ಆಧುನಿಕ ಬ್ಯಾಂಕ್‌ಗಳನ್ನೂ ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಬಗ್ಗಿಸಿದ ಪ್ರಯತ್ನಗಳೇ ಸಾಕ್ಷಿ.
ಹಳ್ಳಿಗರಿಗೂ ಉದೊಧಕ ಕಿವಿಮಾತು
ಮಂದಾರ್ತಿ ದೇವಸ್ಥಾನದ ಪ್ರೌಢ ಶಾಲೆ ಸ್ಥಾಪನೆಯಲ್ಲೂ ಉಡುಪರ ಕೊಡುಗೆ ಇದೆ. ಅನೇಕ ಸಂಘ ಸಂಸ್ಥೆಗಳು ಅವರನ್ನು ಕರೆದು ಅವರ ವರ್ಚಸ್ಸನ್ನು ಬಳಸಿಕೊಂಡಿದ್ದವು. ಒಂದೆಡೆ ಅಂತಾರಾಷ್ಟ್ರೀಯ ಸ್ತರದ ವಿಚಾರ ಸಂಕಿರಣಗಳಲ್ಲಿ ಉನ್ನತ ದರ್ಜೆಯ ವಿಚಾರ ಮಂಡನೆ ಮಾಡಿ ದರೂ ಇನ್ನೊಂದೆಡೆ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಂತಹ ಸಭೆಗಳಿಗೆ ಬರುವ ಓದುಬರೆಹ ಅಷ್ಟಕ್ಕಷ್ಟೇ ಇರುವ ವರಿಗೂ ಉದೊಧಕ ಸಲಹೆಗಳನ್ನು ನೀಡುತ್ತಿದ್ದವರು ಉಡುಪರು.
ಕಲಾಪ್ರೇಮಿ
ನಶಿಸುತ್ತಿರುವ ಹೂವಿನಕೋಲಿ ನಂತಹ ಕಲಾಪ್ರಕಾರಗಳಿಗೂ ಉತ್ತೇಜನ ನೀಡುತ್ತಿದ್ದ ಉಡುಪರು ಕಲಾಪ್ರೇಮಿಯೂ ಆಗಿದ್ದರು.
ಸೌರ ವಿದ್ಯುತ್ ಪ್ರಚಾರಕ
ಸೌರ ವಿದ್ಯುತ್ ಘಟಕಗಳಿಗೆ ಬ್ಯಾಂಕಿಂಗ್ ಸಾಲ ಒದಗಿಸುವುದರಲ್ಲಿ ಪ್ರವರ್ತಕರೆನಿಸಿದ ಉಡುಪರು ಸೆಲ್ಕೋ ಸಂಸ್ಥೆಯ ನಿರ್ದೇಶಕರಾಗಿ ಸೌರ ವಿದ್ಯುತ್ ತಂತ್ರಜ್ಞಾನದ ಪ್ರಸರಣದಲ್ಲಿ ಬಹು ಮುಖ್ಯ ಪಾತ್ರ ವಹಿಸಿದರು. ಜಾಗತಿಕ ಸ್ತರದ ವಿಚಾರ ಸಂಕಿರಣಗಳಲ್ಲಿ ಸೌರ ವಿದ್ಯುತ್ ಘಟಕಗಳಿಗೆ ಬ್ಯಾಂಕಿಂಗ್ ಸಾಲ ನೀಡುವ ಕುರಿತು ಪ್ರಬಂಧವನ್ನು ಮಂಡಿಸಿ ಭವಿಷ್ಯದಲ್ಲಿ ನವೀಕರಿಸಬಹುದಾದ ಇಂಧನದ ಬಗೆಗೆ ಜಾಗತಿಕ ಕಾಳಜಿ ಮೂಡಿಸುವುದರಲ್ಲಿ ತನ್ನ ಕೊಡುಗೆ ಸಲ್ಲಿಸಿದ್ದರು. ಗೋಬರ್ ಗ್ಯಾಸ್, ಗೋಸಾಕಣೆ, ರೈತರಿಗೆ ಸರಳ ಸಾಲ ಯೋಜನೆಗಳನ್ನು ಸಿಂಡಿಕೇಟ್ ಬ್ಯಾಂಕ್ ಮೂಲಕ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಡುಪರು ತಾನು ಕೈಯಾಡಿಸಿದ ಎಲ್ಲ ಕ್ಷೇತ್ರಗಳಲ್ಲೂ ಕೃತಿರೂಪಿಯಾದರು.
ಕೃತಜ್ಞತಾಭಾವಕ್ಕೆ ಪರ್ಯಾಯ ಹೆಸರು
ಉಡುಪರು ಯಾವುದೇ ಸಭೆ ಸಮಾರಂಭಗಳಲ್ಲಿಯೂ ತನಗೆ ಮಾಡೆಲ್ ಆಗಿದ್ದ ಟಿ.ಎ. ಪೈ ಅವರನ್ನು ನೆನಪಿಸದೆ ಇರುತ್ತಿ ರಲಿಲ್ಲ. ಟಿ.ಎ. ಪೈಯವರ ಕಾಲ ಘಟ್ಟದ ಬಳಿಕ ಕೆ.ಕೆ. ಪೈಯವರ ಒಡನಾಟವನ್ನೂ ಬೆಟ್ಟು ಮಾಡು ತ್ತಿದ್ದರು. ಸರಕಾರಿ ಸೇವೆಯಲ್ಲಿದ್ದ ಉಡುಪರನ್ನು ಸಿಂಡಿಕೇಟ್ ಬ್ಯಾಂಕ್‌ಗೆ ಕರೆ ತಂದವರು ಟಿ.ಎ. ಪೈ. ಹೀಗೆ ಟಿ.ಎ. ಪೈ, ಕೆ.ಕೆ. ಪೈ ಯಂತಹ ಅನೇಕ ದಿಗ್ಗಜರು ಹಲವು ಜನರ ಬದುಕನ್ನು ಮೇಲ್ದರ್ಜೆಗೇರಿ ಸಿದ್ದರೂ ಉಡುಪರಲ್ಲಿದ್ದಂತಹ ಕೃತಜ್ಞತಾಭಾವ ಬೇರೆಯವರಲ್ಲಿ ಕಾಣುವುದು ವಿರಳವೆಂದು ಹೇಳಬ ಹುದು. “ಕೃತಜ್ಞತೆ ಅನ್ನುವುದು ಬಲುಮುಖ್ಯ. ಇದುವೇ ಮನುಷ್ಯನೆನಿಸಿದವನಿಗೆ ಬೇಸ್’ ಎನ್ನುವ ಚಿಂತಕ ಡಾ| ಬಿ.ಎಂ. ಹೆಗ್ಡೆಯವರ ಅಭಿಪ್ರಾಯವಿಲ್ಲಿ ಉಲ್ಲೇಖನೀಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.