ನೀರಾವರಿ ಯೋಜನೆಗೆ ಮೊದಲ ಆದ್ಯತೆ
Team Udayavani, Jul 30, 2019, 3:09 AM IST
ಬೆಂಗಳೂರು: “ಮಳೆಯ ಅನಿಶ್ಚಿತತೆಯಿಂದ ರೈತರು ನಿರಂತರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀರಾವರಿ ಯೋಜನೆಗೆ ನನ್ನ ಮೊದಲ ಆದ್ಯತೆ ಆಗಿದೆ. ಈ ವರ್ಷದಲ್ಲೇ ಕೆಲವು ಯೋಜನೆಗಳನ್ನು ಜಾರಿಗೊಳಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು. ವಿಧಾನ ಪರಿಷತ್ತಿನಲ್ಲಿ ಸೋಮವಾರ 2019ನೇ ಸಾಲಿನ “ಕರ್ನಾಟಕ ಧನವಿನಿಯೋಗ (ಲೇಖಾನುದಾನ ಸಂಖ್ಯೆ-2) ವಿಧೇಯಕ’ದ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ಸದಸ್ಯ ಎಸ್.ಆರ್. ಪಾಟೀಲ್, ಉತ್ತರ ಕರ್ನಾಟಕ ನೀರಾವರಿಯಿಂದ ವಂಚಿತವಾಗಿರುವ ಬಗ್ಗೆ ಗಮನಸೆಳೆದರು. ಆಗ ಮುಖ್ಯಮಂತ್ರಿ ಈ ಭರವಸೆ ನೀಡಿದರು.
“ನೂತನ ಸರ್ಕಾರದ ಮೇಲೆ ನಿರೀಕ್ಷೆಗಳು ಸಾಕಷ್ಟಿವೆ. ನನ್ನ ಇತಿಮಿತಿಯಲ್ಲಿ ನಿಮ್ಮ (ಪ್ರತಿಪಕ್ಷದ) ಸಲಹೆ-ಸೂಚನೆಗಳನ್ನು ಸ್ವೀಕರಿಸಿ ಮುಂದುವರಿಯುತ್ತೇನೆ. ನನ್ನ ಮೊದಲ ಆದ್ಯತೆ ಸಾಧ್ಯವಾದಷ್ಟು ಮಳೆಯಾಶ್ರಿತ ಭೂಮಿಯನ್ನು ನೀರಾವರಿಗೆ ಪರಿವರ್ತಿಸುವುದು. ಈ ನಿಟ್ಟಿನಲ್ಲಿ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ರಾಜ್ಯಕ್ಕೆ ಆದಷ್ಟು ಹಣ ತರುತ್ತೇನೆ. ಈ ವರ್ಷದಲ್ಲೇ ಕೆಲವು ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಹಾಗೂ ಪೂರ್ಣಗೊಳಿಸುವ ಚಿಂತನೆಯೂ ಇದೆ’ ಎಂದು ಮಾಹಿತಿ ನೀಡಿದರು.
“ಇದಲ್ಲದೆ, ಹಿಂದಿನ ಯೋಜನೆಗಳನ್ನು ಆದ್ಯತೆ ಮೇರೆಗೆ ಜಾರಿಗೆ ತರುವ ಜವಾಬ್ದಾರಿ ನನ್ನದು. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲೂ ಬಿಜೆಪಿ ಅಧಿಕಾರದಲ್ಲಿರುವುದರಿಂದ ಇಲ್ಲಿಂದ ದೆಹಲಿಗೆ ನಿಯೋಗ ತೆಗೆದುಕೊಂಡು ಹೋಗಿ, ಹೆಚ್ಚಿನ ಅನುದಾನ ಹಾಗೂ ಬಾಕಿ ಇರುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಸಂಬಂಧ ಚರ್ಚಿಸಲಾಗುವುದು. ಅಧಿಕಾರ ಯಾವತ್ತೂ ಶಾಶ್ವತವಲ್ಲ. ಸೇಡಿನ ರಾಜಕಾರಣ ನಾನು ಮಾಡುವುದಿಲ್ಲ’ ಎಂದು ಪುನರುಚ್ಚರಿಸಿದರು.
ಕಾವೇರಿ-ಕೃಷ್ಣ ಎರಡು ಕಣ್ಣು: ಇದಕ್ಕೂ ಮುನ್ನ ಮಾತನಾಡಿದ ಎಸ್.ಆರ್ ಪಾಟೀಲ್, “ನೇಕಾರರು ಮತ್ತು ರೈತರಂತೆಯೇ ಕಾವೇರಿ ಮತ್ತು ಕೃಷ್ಣ ಕೂಡ ನಿಮ್ಮ (ಯಡಿಯೂರಪ್ಪ ಅವರಿಗೆ) ಎರಡು ಕಣ್ಣು ಇದ್ದಂತೆ. ಕೃಷ್ಣೆಗೂ ನ್ಯಾಯ ದೊರೆಯಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ 1.05 ಲಕ್ಷ ಕೋಟಿ ಮೊತ್ತದ್ದಾಗಿದೆ. ಆದರೆ, ವರ್ಷಕ್ಕೆ ಅದಕ್ಕೆ 1,000-1,500 ಕೋಟಿ ರೂ. ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಅನುದಾನ ನೀಡಿದರೆ, ಯೋಜನೆ ಪೂರ್ಣಗೊಳ್ಳಲು ನೂರು ವರ್ಷ ಬೇಕಾಗುತ್ತದೆ. ಆದ್ದರಿಂದ ನೂತನ ಸರ್ಕಾರ ಆದ್ಯತೆ ಮೇರೆಗೆ ಸಾಧ್ಯವಾದರೆ ತಮ್ಮ ಅಧಿಕಾರಾವಧಿಯಲ್ಲೇ ಇದನ್ನು ಪೂರ್ಣಗೊಳಿಸಬೇಕು. ಮಹದಾಯಿ, ಕಳಸಾ-ಬಂಡೂರಿ ಯೋಜನೆಯನ್ನೂ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
ಇದಕ್ಕೆ ದನಿಗೂಡಿಸಿದ ಜೆಡಿಎಸ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, “ಮೇಕೆದಾಟು ಯೋಜನೆಗೆ ಕೇಂದ್ರದಿಂದ ಅನುಮತಿ ಹಾಗೂ ಕಾವೇರಿ ಜಲಾನಯನದ ಆಧುನೀಕರಣ ಮತ್ತು ಮೈಸೂರು ಸಕ್ಕರೆ ಕಾರ್ಖಾನೆ ಪುನರಾರಂಭ ಸರ್ಕಾರದ ಆದ್ಯತೆ ಆಗಬೇಕು’ ಎಂದರು. ಇದೇ ವೇಳೆ ಮುಂದಿನ ಮೂರು ತಿಂಗಳಿಗೆ 54,414 ಕೋಟಿ ಮೊತ್ತದ ಪೂರಕ ಬಜೆಟ್ ಮಂಡನೆ ಮಾಡಿ, ಅನುಮೋದನೆ ಪಡೆಯಲಾಯಿತು. ನಂತರ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಯಾವ ಶಕ್ತಿಯೂ ಬದ್ಧತೆ ಬದಲಿಸಲು ಸಾಧ್ಯವಿಲ್ಲ: ಮುಸ್ಲಿಂ, ಕ್ರೈಸ್ತರು ಸೇರಿ ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೆ ನಾನು ಬದ್ಧ. ಈ ವಿಚಾರದಲ್ಲಿ ಯಾವ ಶಕ್ತಿಯೂ ಆ ಬದ್ಧತೆಯನ್ನು ಬದಲಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ವಿಧಾನ ಪರಿಷತ್ತಿನಲ್ಲಿ ಪೂರಕ ಬಜೆಟ್ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜ, “ಕ್ರೈಸ್ತರ ಅಭಿವೃದ್ಧಿ ನಿಗಮಕ್ಕೆ ಕೇವಲ 200 ಕೋಟಿ ರೂ. ನೀಡಲಾಗಿದೆ. ಪೂರಕ ಬಜೆಟ್‌ನಲ್ಲಿ ಇನ್ನಷ್ಟು ಹಣ ಮೀಸಲಿಡಬೇಕಿತ್ತು’ ಎಂದು ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, “ಹಿಂದಿನ ಸರ್ಕಾರದಲ್ಲಿ ಸಿದ್ಧಪಡಿಸಿದ ಪೂರಕ ಬಜೆಟ್ ಅನ್ನು ಯಥಾವತ್ತಾಗಿ ಮಂಡಿಸಲಾಗಿದೆ. ಅದೇನೇ ಇರಲಿ, ಅಲ್ಪಸಂಖ್ಯಾತರ ಅಭಿವೃದ್ಧಿಯಲ್ಲಿ ಯಾವುದೇ ಬೇಧ-ಭಾವ ಮಾಡುವುದಿಲ್ಲ. ಈ ವಿಚಾರದಲ್ಲಿನ ಬದ್ಧತೆಯನ್ನು ಯಾವ ಶಕ್ತಿಯೂ ಬದಲಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
ಮೇಲ್ಮನೆಯಲ್ಲಿ ಶುಭಾಶಯ: ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮೇಲ್ಮನೆಯಲ್ಲಿ ಶುಭಾಶಯಗಳ ಮಹಾಪೂರ ಹರಿದುಬಂದಿತು. ಕಲಾಪ ಆರಂಭಕ್ಕೂ ಮುನ್ನ ಆಡಳಿತ ಪಕ್ಷದ ಸದಸ್ಯರು ಮತ್ತು ಪ್ರತಿಪಕ್ಷಗಳ ಸದಸ್ಯರು, ಯಡಿಯೂರಪ್ಪ ಅವರಿದ್ದಲ್ಲಿಯೇ ಬಂದು ಹಸ್ತಲಾಘವ ನೀಡಿ ಶುಭಾಶಯ ಕೋರಿದರು. ಯಾವುದೇ ರೂಪದಲ್ಲಿ ಅಧಿಕಾರಕ್ಕೆ ಬಂದಿರಲಿ, ಸರ್ಕಾರದ ಆದ್ಯತೆ ರಾಜ್ಯದ ಕಲ್ಯಾಣ ಆಗಿರಲಿ ಎಂದು ಹಾರೈಸಿದರು. ಇದಕ್ಕೆ ನೂತನ ಮುಖ್ಯಮಂತ್ರಿ ನಗುವಿನಲ್ಲೇ ಸಮ್ಮತಿಸಿ ಸೂಚಿಸಿದರು. ಅಕ್ಕಪಕ್ಕದವರ ಬಗ್ಗೆ ಹುಷಾರು: ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿದ್ದ ಕಾಂಗ್ರೆಸ್ ಸದಸ್ಯ ಎಸ್.ಆರ್. ಪಾಟೀಲ್, “ಅಕ್ಕಪಕ್ಕದವರು ಈ ಹಿಂದೆ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಿದರು. ಈಗ ಅಂತಹವರ ಬಗ್ಗೆ ಹುಷಾರಾಗಿರಿ’ ಎಂದು ಕಿವಿಮಾತು ಕೂಡ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.