ಯಡಿಯೂರಪ್ಪ , ಅಧಿಕಾರ ಮತ್ತು ಮೋದಿ ನಿಯಮ
Team Udayavani, Jul 30, 2019, 6:00 AM IST
ಕರ್ನಾಟಕದಲ್ಲಿ ಈಗ ಹಿರಿಯ ನಾಯಕ ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಮೂಲಕ ಬಿಜೆಪಿಯ ಪ್ರಮುಖರಾದ ನರೇಂದ್ರ ಮೋದಿ ಮತ್ತು ಅಮಿತ್ ಶಾ ತಾವೇ ಜಾರಿಗೆ ತಂದಿದ್ದ ನಿಯಮ ಮೀರಿದ್ದಾರೆ. 75 ವರ್ಷ ದಾಟಿದವರಿಗೆ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ನೀಡುವುದನ್ನು ಈ ನಿಯಮದ ಮೂಲಕ ತಡೆದಿದ್ದರು. ಆದರೆ ಕರ್ನಾಟಕದಲ್ಲಿ ಮಾತ್ರ 76 ವರ್ಷದ ಯಡಿಯೂರಪ್ಪರನ್ನು ಅಧಿಕಾರಕ್ಕೇರಿಸುವ ಮೂಲಕ ದೇಶಮಟ್ಟದಲ್ಲಿ ಆಶ್ಚರ್ಯಕ್ಕೆ ಕಾರಣರಾಗಿರುವ ಮೋದಿ – ಶಾ ಜೋಡಿ ಮುಂದಿನ ದಿನಗಳಲ್ಲಿ ಈ ರಿಯಾಯಿತಿಯಿಂದಾಗಿ ಮತ್ತಷ್ಟು ರಾಜ್ಯಗಳಲ್ಲಿ ಒಂದು ಸವಾಲು ಎದುರಿಸಬೇಕಾಗಿ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಕರ್ನಾಟಕದ ಪಾಲಿಗೆ ಸದ್ಯ ಯಡಿಯೂರಪ್ಪನವರ ಅಗತ್ಯ ಆ ಮಟ್ಟಕ್ಕಿತ್ತು. ಇಲ್ಲಿ ಸಮರ್ಥ ಪರ್ಯಾಯ ನಾಯಕರು ಕಂಡು ಬಾರದ ಕಾರಣ ಹಾಗೂ ಇಂಥ ಸಂದಿಗ್ಧ ಸ್ಥಿತಿಯಲ್ಲಿ 75ರ ನಿಯಮಕ್ಕೆ ಅಂಟಿ ನಿಂತರೆ ಅದರಿಂದ ಗಂಭೀರ ಪರಿಣಾಮ ಎದುರಿಸಬೇಕಾಗಿ ಬಂದೀತು ಎಂಬುದನ್ನು ಮೋದಿ – ಶಾ ಅರಿತುಕೊಂಡೇ ಈ ರಿಯಾಯಿತಿಗೆ ಮುಂದಾಗಿದ್ದಾರೆ ಎಂಬುದು ನಿಸ್ಸಂಶಯ ಸಂಗತಿ.
ನಾಲ್ಕು ಬಾರಿ ಸಿಎಂ: ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ದಾಖಲೆ ಬರೆದಿರುವ ಯಡಿಯೂರಪ್ಪ ಕೆಲವು ಕಾರಣಗಳಿಂದಾಗಿ ಸ್ವಪಕ್ಷೀಯರಿಂದಲೇ ಟೀಕೆಗೆ ಒಳಗಾದವರು. ಅಂಥ ಟೀಕೆಯಲ್ಲಿ ಅವರು ಅಧಿಕಾರದಾಹಿ ಎಂಬುದು ಕೂಡ ಪ್ರಮುಖವಾದುದು.
ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದು ನಿಲ್ಲಿಸಿದ ಮಹಾನ್ ನಾಯಕನಾಗಿ ಕಂಡು ಬರುವ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮುಂತಾದ ಹಲವು ಆರೋಪ ಕೇಳಿ ಬಂದಿದ್ದರೂ ಗಾಢವಾಗಿ ವಿಮರ್ಶಿಸಿದರೆ ಅದು ದುರ್ಬಲವಾದವು ಎಂಬುದನ್ನು ನಾವು ತಿಳಿದುಕೊಳ್ಳಬಹುದು. ಅವರು ಪ್ರತ್ಯೇಕ ಪಕ್ಷ ಕಟ್ಟಿದ್ದರೂ ಅದರ ಹಿಂದೆ ಅಧಿಕಾರ ದಾಹ ಇದೆ ಎಂಬುದನ್ನು ಸಮರ್ಥಿಸುವುದು ಸುಲಭದ ಸಂಗತಿಯಲ್ಲ. ಆದರೆ ಆ ಕ್ಷಣದ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಪ್ರತ್ಯೇಕ ಪಕ್ಷ ಕಟ್ಟಿದ್ದು ಅವರ ಜೀವನದ ಒಂದು ದೊಡ್ಡ ತಪ್ಪು ಹೆಜ್ಜೆ. ಇದನ್ನು ಅವರೇ ಒಪ್ಪಿಕೊಂಡಿದ್ದಾರೆ. ಆದರೆ ಬಿಜೆಪಿಯಿಂದ ಹೊರಗಿದ್ದಷ್ಟು ಕಾಲ ಅವರು ಉಸಿರಾಡಿದ್ದು ಬಿಜೆಪಿ ಸಿದ್ಧಾಂತ ಮತ್ತು ಆ ಪಕ್ಷದ ಮೇಲಿನ ಪ್ರೀತಿಯನ್ನು.
ಯಡಿಯೂರಪ್ಪನವರದ್ದು ಸುಮಾರು 5 ದಶಕಗಳ ರಾಜಕೀಯ ಜೀವನ. ಅವರು ಕಾಲೇಜು ಜೀವನದಲ್ಲೇ ಆರೆಸ್ಸೆಸ್ ಸಂಪರ್ಕಕ್ಕೆ ಒಳಗಾಗಿ ಆ ಸಂಘಟನೆಯಲ್ಲಿ ಕೆಲವು ಜವಾಬ್ದಾರಿಗಳನ್ನು ನಿಭಾಯಿಸಿದವರು. ಹೋರಾಟದ ಮೂಲಕ ಜನರ ಪ್ರೀತಿ ಗಳಿಸಿದವರು. ಸರ್ಕಾರಿ ಉದ್ಯೋಗ ಸಿಕ್ಕಿದ್ದರೂ ಅದನ್ನು ತೊರೆದು ಸ್ವಂತ ಉದ್ಯಮದಲ್ಲಿ ತೊಡಗಿಕೊಂಡದ್ದು ಅವರಲ್ಲಿದ್ದ ನಾಯಕನ ಕನಸನ್ನು ಪ್ರತಿಬಿಂಬಿಸುತ್ತಿತ್ತು. ಹುಟ್ಟೂರು ತೊರೆದು ಶಿವಮೊಗ್ಗ ಸೇರಿ ತಳಮಟ್ಟದ ಪುರಸಭೆಯ ಸದಸ್ಯನಾಗುವ ಮೂಲಕ ರಾಜಕೀಯ ಜೀವನಕ್ಕೆ ಕಾಲಿರಿಸಿದವರು. ಒಂದು ಕಾಲದಲ್ಲಿ ಅಸ್ತಿತ್ವಕ್ಕೇ ಪರದಾಡುವಂಥ ಸ್ಥಿತಿಯಲ್ಲಿದ್ದ ಬಿಜೆಪಿಗೆ ಬದ್ಧನಾಗಿದ್ದುಕೊಂಡು ಇಡೀ ರಾಜ್ಯದ ಮೂಲೆ ಮೂಲೆ ಸುತ್ತಾಡಿ ಪಕ್ಷ ಸಂಘಟನೆ ಮಾಡಿದ ಪರಿಶ್ರಮಿ ನಾಯಕ. ರಾಜ್ಯ ಸುತ್ತಾಡಿದ ಕೆಲವೇ ಕೆಲವು ನಾಯಕರ ಸಾಲಿಗೆ ಸೇರಿರುವ ಇವರು, ಬಿಜೆಪಿಯಲ್ಲಿ ಆ ಸಾಲಲ್ಲಿ ನಿಲ್ಲುವ ಏಕೈಕ ನಾಯಕನೆಂದರೂ ತಪ್ಪಾಗದು. ಅವರು ಅಧಿಕಾರವೊಂದನ್ನೇ ಬಯಸಿದ್ದರೆ ಯಾವತ್ತೋ ಬೇರೆ ಪಕ್ಷ ಸೇರಬಹುದಿತ್ತು. ದಶಕಗಳ ಕಾಲ ಒಂದೇ ಪಕ್ಷಕ್ಕೆ ನಿಷ್ಠರಾಗುವ ಅಗತ್ಯ ಮತ್ತು ಅನಿವಾರ್ಯತೆ ಅವರಿಗೆ ಇರಲಿಲ್ಲ. ಅವರು ಅಧಿಕಾರಕ್ಕಿಂತಲೂ ಮುಖ್ಯವಾಗಿ ಪಕ್ಷ ಸಂಘಟನೆ ಮತ್ತು ಸಿದ್ಧಾಂತವನ್ನು ಗೌರವಿಸಿದವರು ಎಂಬುದಕ್ಕೆ ಮೇಲಿನ ವಿವರಣೆ ಪೂರಕವಾಗಿದೆ.
ಒಂದು ಕಾಲದಲ್ಲಿ ಕಾಂಗ್ರೆಸ್ ಎಂದರೆ ಇಂದಿರಾಗಾಂಧಿ ಎಂಬ ಭಾವನೆ ಜನರಲ್ಲಿ ಹೇಗಿತ್ತೋ, ಅದೇ ರೀತಿ ರಾಜ್ಯದಲ್ಲಿ ಬಿಜೆಪಿ ಎಂದರೆ ಯಡಿ ಯೂರಪ್ಪ ಎಂಬ ಭಾವನೆ ಇತ್ತು. ಹುಲುಸಾಗಿ ಬೆಳೆದ ತೋಟದಿಂದ ಫಸಲನ್ನು ಕೊಯ್ದು ಅನುಭವಿಸುವುದು ದೊಡ್ಡ ಸಂಗತಿಯಲ್ಲ. ಆದರೆ ಹಲವು ಸಮಸ್ಯೆ, ಸವಾಲುಗಳ ನಡುವೆಯೂ ಆ ತೋಟವನ್ನು ಬೆಳೆಸುವುದು, ಉತ್ತಮ ಫಸಲು ಬರುವಂತೆ ಮಾಡುವುದು ದೊಡ್ಡ ಸಾಧನೆಯೇ. ಇಂದು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕ ಹೆಬ್ಟಾಗಿಲು ಆಗಿದ್ದರೆ ಅದರಲ್ಲಿ ಯಡಿಯೂರಪ್ಪನವರ ಪಾತ್ರ ಅತ್ಯಂತ ಮಹತ್ವದ್ದು ಎಂಬುದು ನಿರ್ವಿವಾದ ಸಂಗತಿ.
ಪ್ರತ್ಯೇಕ ಪಕ್ಷದ ಬಂಡಾಯ: ತಾನೇ ಬೆಳೆಸಿದ ಪಕ್ಷದಲ್ಲಿ ಮೂಲೆಗುಂಪು ಆಗುವ ಲಕ್ಷಣ ಕಂಡು ಬಂದಾಗ ಅವರಿಗೆ ಅಧಿಕಾರಕ್ಕಿಂತಲೂ ಹೆಚ್ಚಾಗಿ ಕಾಡಿದ್ದು ಸ್ವಾಭಿಮಾನ. ತಾನು ಏನೂ ಅಲ್ಲ ಎಂದು ಹೇಳುವವರಿಗೆ ತಾನೇನು ಎಂಬುದನ್ನು ತೋರಿಸಿಕೊಡುವ ಅನಿವಾರ್ಯತೆ ಇತ್ತು. 2013ರ ಚುನಾವಣೆ ಸಂದರ್ಭದಲ್ಲಿ ಅವರು ಬಿಜೆಪಿಯಲ್ಲೇ ಇರುತ್ತಿದ್ದರೆ ಅಧಿಕಾರಕ್ಕೇರುವ ಸಾಧ್ಯತೆ ಇತ್ತು. ಆದರೆ ಸಾವಿರ ಅವಮಾನವನ್ನು ಸಹಿಸಿಕೊಂಡಿದ್ದ ಅವರಿಗೆ ಪಕ್ಷದೊಳಗಿನ ಕಡೆಗಣನೆಯ ಅವಮಾನವನ್ನು ಸಹಿಸಿಕೊಳ್ಳಲಾಗಲಿಲ್ಲ. ಸ್ವಾಭಿಮಾನಕ್ಕಾಗಿ ಪಕ್ಷ ಕಟ್ಟಿದರು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯ ಇಲ್ಲ ಎಂಬುದಕ್ಕೆ ಪೂರಕವಾಗಿ ಹಲವು ಉದಾಹರಣೆಗಳಿದ್ದರೂ ಅಂಥದ್ದೇ ಒಂದು ಪ್ರಾದೇಶಿಕ ಪಕ್ಷದ ಮೂಲಕ ಅವರು ಅಧಿಕಾರಕ್ಕೇರುವ ಕನಸು ಕಾಣುವಷ್ಟು ಮೂರ್ಖರೇನಲ್ಲ. ತನ್ನ ಅಗತ್ಯವನ್ನು ಬಿಜೆಪಿಗೆ ತೋರಿಸಿಕೊಡಲು ಅವರಿಗೆ ಪ್ರತ್ಯೇಕ ಪಕ್ಷದ ಅನಿವಾರ್ಯತೆ ಆ ಹೊತ್ತಿಗೆ ಮೂಡಿದ್ದಿರಬಹುದು. ಅವರು ಪ್ರತ್ಯೇಕ ಪಕ್ಷದ ಮೂಲಕ ಚುನಾವಣೆ ಎದುರಿಸಿ ಮೊದಲ ಪ್ರಯತ್ನದಲ್ಲೇ ಪಡೆದಿದ್ದ ಯಶಸ್ಸು ಮತ್ತು ಬಿಜೆಪಿಗೆ ಆದಂಥ ಹಾನಿ ಯಡಿಯೂರಪ್ಪರ ಸಾಮರ್ಥ್ಯ ಮತ್ತು ಬಿಜೆಪಿಗೆ ಅವರ ಅನಿವಾರ್ಯತೆಯನ್ನು ಸಾಬೀತುಮಾಡಿತ್ತು. ಮುಂದಿನ ಬೆಳವಣಿಗೆಯಲ್ಲಿ ಅವರು ಬಿಜೆಪಿ ಸೇರಿದರು. ಒಂದೊಮ್ಮೆ ಅವರು ತನ್ನ ಕೆಜೆಪಿ ಪಕ್ಷದಲ್ಲೇ ಮುಂದುವರಿಯುತ್ತಿದ್ದರೆ ಭವಿಷ್ಯದಲ್ಲಿ ಕಿಂಗ್‌ಮೇಕರ್ ಆಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ಅವರ ಉಸಿರೇ ಬಿಜೆಪಿಯಾಗಿದ್ದರಿಂದ ಮತ್ತೆ ಮನೆ ಸೇರುವ ಅವಕಾಶವನ್ನು ತಪ್ಪಿಸಿಕೊಳ್ಳಲಿಲ್ಲ.
ಉತ್ತಮ ಆಡಳಿತ: ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉತ್ತಮ ಆಡಳಿತ ನೀಡಿದ್ದರು. ಅವರು ಜಾರಿಗೆ ತಂದಿದ್ದ ಕೆಲವು ಯೋಜನೆಗಳು ಜನಪರವಾಗಿದ್ದವು. ಆದರೆ ಆಂತರಿಕ ಕಲಹ ಜನರ ಮನಸ್ಸಿನಲ್ಲಿ ಬಿಜೆಪಿ ಬಗ್ಗೆ ಜಿಗುಪ್ಸೆ ಮೂಡುವಂತೆ ಮಾಡಿತ್ತು. ಎಲ್ಲ ಉತ್ತಮ ಯೋಜನೆಗಳನ್ನೂ ಈ ಆಂತರಿಕ ಕಲಹ ನುಂಗಿ ನೀರು ಕುಡಿಯಿತು.
ಕೃಷಿಕರ ಪರವಾದ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಇವರು ಪ್ರತ್ಯೇಕ ಕೃಷಿ ಬಜೆಟ್ ಮೂಲಕ ಗಮನ ಸೆಳೆದಿದ್ದರು. ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸುವಾಗಲೂ ಅವರ ಹೊದ್ದುಕೊಂಡದ್ದು ಕೃಷಿಕರ ಸಂಕೇತವಾದ ಹಸಿರು ಶಾಲನ್ನೇ. ರಾಜ್ಯದ ಜನರಿಗೆ ತನ್ನ ನೇತೃತ್ವದಲ್ಲಿ ಒಂದು ಉತ್ತಮ ಆಡಳಿತ ನೀಡಬೇಕು ಎಂಬ ಕನಸು ಅವರು ಇನ್ನೂ ಜೀವಂತವಾಗಿದೆ. ಆ ಕನಸೇ ಅವರಿಗೆ ಛಲದಂಕನ ಬಿರುದು ತಂದುಕೊಟ್ಟಿದೆ ಎಂದರೆ ತಪ್ಪಾಗದು.
ನತದೃಷ್ಟನಲ್ಲ, ಅದೃಷ್ಟವಂತ: ಯಡಿಯೂರಪ್ಪ ನತದೃಷ್ಟ ನಾಯಕ ಎಂಬ ಮಾತೂ ಚಾಲ್ತಿಯಲ್ಲಿದೆ. ಆದರೆ ಇನ್ನು ಮುಂದಕ್ಕೆ ಆ ಮಾತು ಬದಲಾಗಬೇಕಿದೆ. ಅಮಿತ್ ಶಾ ಮತ್ತು ಮೋದಿ ಜೋಡಿಯು ತಮ್ಮ 75ರ ನಿಯಮಕ್ಕೆ ಒಂದು ಅಲ್ಪವಿರಾಮ ಹಾಕಿದ್ದರೆ ಅದು ಯಡಿಯೂರಪ್ಪನವರ ಅದೃಷ್ಟದ ಸಂಕೇತವಲ್ಲವೇ ? ಈಗ ಮೈತ್ರಿ ಸರ್ಕಾರ ಪತನವಾಗಿದ್ದರೆ ಅದರಲ್ಲೂ ಯಡಿಯೂರಪ್ಪನವರ ಅದೃಷ್ಟವಿಲ್ಲವೇ ? ಒಂದೊಮ್ಮೆ ಈ ಬಾರಿ ಸರ್ಕಾರ ಬೀಳದೆ ಇರುತ್ತಿದ್ದರೆ ಯಡಿಯೂರಪ್ಪನವರು ಮತ್ತೂಂದು ಬಾರಿ ಮುಖ್ಯಮಂತ್ರಿಯಾಗುವ ಯಾವ ಸಾಧ್ಯತೆಯೂ ಇರಲಿಲ್ಲ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರುವ ದಾಖಲೆ ಬರೆದು ಯಡಿಯೂರಪ್ಪ, ನಾಲ್ಕರಲ್ಲಿ ಒಂದು ಬಾರಿ 5 ವರ್ಷದ ಅಡಳಿತ ನಡೆಸುವ ಅವಕಾಶ ಪಡೆದುಕೊಂಡಿಲ್ಲ. ಹಿಂದೆ 7 ದಿನ, 3 ವರ್ಷ 2 ತಿಂಗಳು ಮತ್ತು 3 ದಿನಗಳಿಗಷ್ಟೇ ಅವರ ಅಡಳಿತ ಸೀಮಿತವಾಗಿತ್ತು. ಈ ಬಾರಿ ಉಳಿದಿರುವುದು 3 ವರ್ಷ 10 ತಿಂಗಳು ಮಾತ್ರ. ಏನಿದ್ದರೂ ಇವರಿಗೆ ಕೊನೆಯ ಹಂತದಲ್ಲಿ ಅದೃಷ್ಟ ಒಲಿದಿದೆ. ಇದು ಅವರ ಈ ವರೆಗಿನ ಪರಿಶ್ರಮಕ್ಕೆ ಸಂದಿರುವ ಗೌರವ, ಪ್ರತಿಫಲ ಎನ್ನಬಹುದು.
ಬದಲಾಗಬೇಕಿದೆ: ಯಡಿಯೂರಪ್ಪ ಆಂತರ್ಯದಲ್ಲಿ ಮುಗ್ಧ ಮನಸ್ಸಿನವರಾಗಿದ್ದರೂ ಹೊರಗಡೆ ಸಿಡುಕ, ಒರಟನೆಂದೇ ಖ್ಯಾತಿ. ಸಹೋದ್ಯೋಗಿಗಳೊಂದಿಗಿನ ಇಂಥ ಒರಟು ವರ್ತನೆಯೇ ಅವರಿಗೆ ಮುಳುವಾಗಿದೆ ಎಂಬ ಮಾತೂ ಇದೆ. ಆದ್ದರಿಂದ ಈ ಬಾರಿ ಬದಲಾಗಬೇಕಿದೆ. ಸಿಡುಕುತನ ದೂರ ಮಾಡಿಕೊಂಡು ಎಲ್ಲರನ್ನೂ ಜತೆಯಲ್ಲಿ ಕರೆದುಕೊಂಡು ಹೋಗಿ ಕೇಂದ್ರ ಸರ್ಕಾರ ಮೆಚ್ಚುವಂಥ ಜನಪರ ಆಡಳಿತ ನೀಡಬೇಕಾಗಿದೆ. ಆ ಮೂಲಕ ಅಮಿತ್ ಶಾ ಮತ್ತು ಮೋದಿ ಜೋಡಿಯು ನೀಡಿರುವ 75ರ ರಿಯಾಯಿತಿಗೆ ತಕ್ಕ ಪ್ರತಿಫಲ ಕೊಟ್ಟು ಮುಂದಿನ ದಿನಗಳಲ್ಲಿ ಗೌರವದಿಂದ ಕಿರಿಯರಿಗೆ ಮಾರ್ಗದರ್ಶನ ನೀಡುವಂತಾಗಬೇಕಾಗಿದೆ.
ಪುತ್ತಿಗೆ ಪದ್ಮ ನಾಭ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.