ಪ್ಲಾಸ್ಟಿಕ್ ಮುಕ್ತ ಸುಳ್ಯ: ಆ. 7ಕ್ಕೆ ಜಾಗೃತಿ ಜಾಥಾ
ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ
Team Udayavani, Jul 31, 2019, 5:00 AM IST
ಸುಳ್ಯ: ಪ್ಲಾಸ್ಟಿಕ್ ಮುಕ್ತ ಸುಳ್ಯ ನಗರ ನಿರ್ಮಾಣದ ಪ್ರಥಮ ಪ್ರಯತ್ನವೆಂಬಂತೆ ಪ್ಲಾಸ್ಟಿಕ್ ಕೈ ಚೀಲ ಮಾರಾಟ ನಿಷೇಧ ಹಾಗೂ ಬಳಕೆಗೆ ಕಡಿವಾಣ ಹಾಕುವ ಸಲುವಾಗಿ ಆ. 7ರ ಅಪರಾಹ್ನ 3 ಗಂಟೆಗೆ ನಗರದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲು ತಾಲೂಕು ಕಚೇರಿಯಲ್ಲಿ ನಡೆದ ಪ್ಲಾಸ್ಟಿಕ್ ಮುಕ್ತ ಸುಳ್ಯ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ತಹಶೀಲ್ದಾರ್ ಕುಂಞಿ ಅಹ್ಮದ್ ಅಧ್ಯಕ್ಷತೆಯಲ್ಲಿ ಪ್ಲಾಸ್ಟಿಕ್ ಮುಕ್ತ ಸುಳ್ಯ ಪೂರ್ವಭಾವಿ ಸಭೆ ನಡೆಯಿತು. ವಿವಿಧ ಸಂಘ-ಸಂಸ್ಥೆ, ಜನಪ್ರತಿನಿಧಿಗಳು, ವಿದ್ಯಾರ್ಥಿ ಗಳನ್ನು ಜಾಥಾದಲ್ಲಿ ಸೇರಿಸಿಕೊಳ್ಳುವುದು. ಜತೆಗೆ ಪ್ಲಾಸ್ಟಿಕ್ ಚೀಲದ ಬದಲು ಬಟ್ಟೆ ಚೀಲ ಇತ್ಯಾದಿಗಳನ್ನು ಬಳಕೆ ಮಾಡುವ ಬಗ್ಗೆ, ಸ್ವಚ್ಛತೆ ಕಾಪಾಡುವ ಬಗ್ಗೆ ಮನವಿ ಮಾಡಲು ತೀರ್ಮಾನಿಸಲಾಯಿತು.
ಕಾನೂನು ಕ್ರಮದ ಎಚ್ಚರಿಕೆ
ನಗರದಲ್ಲಿ ಪ್ಲಾಸ್ಟಿಕ್ ಕೈ ಚೀಲ ಮಾರಾಟಕ್ಕೆ ಆ. 14 ಗಡುವು ನೀಡಲಾಗಿದೆ. ಅನಂತರ ಮಾರಾಟ ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ದಂಡ ಇನ್ನಿತರ ಕ್ರಮ ಜರಗಿಸಲಾಗುವುದು ಎಂದು ತಹಶೀಲ್ದಾರ್ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿಗೆ ವಿಸ್ತರಣೆ
ನಗರದಲ್ಲಿ ಪ್ರಯತ್ನ ಯಶ ಕಂಡ ಬಳಿಕ ಅದನ್ನು ಇಡೀ ತಾಲೂಕಿಗೆ ವಿಸ್ತರಿಸಲಾಗುವುದು. ಜತೆಗೆ ಶಿಕ್ಷಣ ಇಲಾಖೆ ಶಾಲೆಗಳಿಗೆ ಸುತ್ತೋಲೆ ಕಳುಹಿಸಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಇದು ನಮ್ಮ ಪುಟ್ಟ ಪ್ರಯತ್ನ ಆಗಿದ್ದು, ಭವಿಷ್ಯದ ದೃಷ್ಟಿಯಿಂದ ಉತ್ತಮ ಪ್ರಯೋಜನ ಬೀರಬಹುದು ಎಂದರು.
ವರ್ತಕರಿಂದ ಸಹಕಾರ
ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ ವರ್ತಕರು ಸಹಕರಿಸಲಿದ್ದಾರೆ. ಒಮ್ಮೆಗೆ ಸಂಪೂರ್ಣ ನಿಷೇಧ ಸಾಧ್ಯವಾಗದಿದ್ದರೂ, ಗರಿಷ್ಠ ಪ್ರಮಾಣದಲ್ಲಿ ನಿಯಂತ್ರಣ ಸಾಧ್ಯವಿದೆ. ನ.ಪಂ. ಜನಪ್ರತಿನಿಧಿಗಳು ಆಯಾ ವಾರ್ಡ್ ನಲ್ಲಿ ಜಾಗೃತಿಗೆ ಕೈ ಜೋಡಿಸಬೇಕು ಎಂದ ಅವರು ಪ್ಲಾಸ್ಟಿಕ್ ನಿಯಂತ್ರಣಕ್ಕೆ ಪೂರಕವಾಗಿ ಹಲವು ಸಲಹೆ ನೀಡಿದರು.
ಪರ್ಯಾಯ ವ್ಯವಸ್ಥೆ: ಚಿಂತನೆ
ಪ್ಲಾಸ್ಟಿಕ್ ಬಳಕೆ ಮುಕ್ತಕ್ಕೆ ಮೊದಲು ಪರ್ಯಾಯ ವ್ಯವಸ್ಥೆ ಬಗ್ಗೆಯೂ ಚಿಂತನೆ ಮಾಡುವುದು ಒಳಿತು ಎಂದು ನ್ಯಾಯವಾದಿ ಪ್ರದೀಪ್ ಕುಮಾರ್ ಸಲಹೆ ನೀಡಿದರು. ಸಾಮಾಜಿಕ ಜಾಲತಾಣದ ಮೂಲಕ ಜಾಗೃತಿ ಸಂದೇಶ, ನಿಯಮಗಳ ಬಗ್ಗೆ ಮಾಹಿತಿ ನೀಡುವ ಕಾರ್ಯವಾಗಬೇಕು ಎಂದು ಆಶೋಕ ಎಡಮಲೆ ಹೇಳಿದರು. ಸಿಸಿ ಕೆಮರಾ ಅಳವಡಿಕೆ, ಡಸ್ಟ್‌ಬಿನ್ ಅಳವಡಿಕೆ ಮೊದಲಾದ ಕ್ರಮಗಳ ಬಗ್ಗೆಯೂ ಚರ್ಚೆ ನಡೆಯಿತು.
ನ.ಪಂ. ಆವರಣದ ತ್ಯಾಜ್ಯ ವಿಲೇವಾರಿ, ಕಲ್ಚರ್ಪೆ ಡಂಪಿಂಗ್ ಯಾರ್ಡ್ ಮೊದಲಾದ ಸಮಸ್ಯೆಗಳ ಬಗ್ಗೆಯು ಪ್ರಸ್ತಾವವಾಯಿತು. ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಪರಿಣಾಮಕಾರಿ ಫಾಗಿಂಗ್ ಮೊದಲಾದ ಕ್ರಮ ಕೈಗೊಳ್ಳುವ ಬಗ್ಗೆಯೂ ಸೂಚಿಸಲಾಯಿತು.
ಶಿಕ್ಷಣ ಇಲಾಖೆಯ ಚಂದ್ರಶೇಖರ, ನ.ಪಂ. ಆರೋಗ್ಯ ನಿರೀಕ್ಷಕ ರವಿಕೃಷ್ಣ, ಲೋಕೇಶ್ ಕೆರೆಮೂಲೆ, ಸುಂದರ ರಾವ್, ಅಬ್ದುಲ್ ಹಮೀದ್, ಸಿ.ಎ. ಗಣೇಶ್ ಭಟ್, ಡಿ.ಎಸ್. ಗಿರೀಶ್, ಕೆ.ಆರ್. ಮನಮೋಹನ್, ಶರತ್, ಸುಂದರ ಪಾಟಾಜೆ, ನ.ಪಂ. ಸದಸ್ಯರಾದ ಸುಧಾಕರ ಕುರುಂಜಿಭಾಗ್, ಶಿಲ್ಪಾ ಸುದೇವ್ ಉಪಸ್ಥಿತರಿದ್ದರು.
ನಗರದಲ್ಲಿ ದಾರಿದೀಪ ಅಳವಡಿಕೆ ಆಗದಿರುವ ಬಗ್ಗೆ ಸಭೆಯಲ್ಲಿ ಸುಂದರ ರಾವ್ ಪ್ರಸ್ತಾವಿಸಿದರು. ಈ ಬಗ್ಗೆ ತಹಶೀಲ್ದಾರ್ ಅವರು ನ.ಪಂ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎರಡು ತಿಂಗಳ ಹಿಂದೆ ಸೂಚನೆ ನೀಡಿದರೂ ಆಗಿಲ್ಲ ಅಂದ್ರೆ ಏನರ್ಥ? ಇನ್ನೆರಡು ದಿನದೊಳಗೆ ಸಮಸ್ಯೆ ಪರಿಹಾರ ಆಗದಿದ್ದರೆ ಕ್ರಮ ಕೈಗೊಳ್ಳುವೆ ಎಂದು ಎಚ್ಚರಿಕೆ ನೀಡಿದರು.
ಸ್ವಚ್ಛತಾ ರಾಯಬಾರಿ ವಿನೋದ್ ಲಸ್ರೋದಾ ಮಾತನಾಡಿ, ನಗರದ ಅಲ್ಲಲ್ಲಿ ಪ್ಲಾಸ್ಟಿಕ್, ಇತರೆ ತ್ಯಾಜ್ಯ ಎಸೆಯುವ ಬಗ್ಗೆ ಸಾಕಷ್ಟು ದೂರು ಬರುತ್ತಿವೆ. ಇಂತಹ ಪ್ರಕರಣ ಕಂಡುಬಂದ ತತ್‌ಕ್ಷಣ ನ.ಪಂ. ಅಧಿಕಾರಿಗಳು ಕಠಿನ ಕ್ರಮ ಕೈಗೊಳ್ಳಬೇಕು. ಬರೀ ಎಚ್ಚರಿಕೆ ನೀಡಿದ್ದಲ್ಲಿ ಅದರಿಂದ ಪ್ರಯೋಜನ ಆಗದು. ಪ್ಲಾಸ್ಟಿಕ್ ಮುಕ್ತ, ತ್ಯಾಜ್ಯ ಮುಕ್ತ ನಗರ ಅನುಷ್ಠಾನಕ್ಕೆ ನ.ಪಂ. ಆಡಳಿತದ ಪಾತ್ರ ಮಹತ್ವದ್ದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.