ಸಿದ್ಧಾರ್ಥ್ ವಿತ್ ಕೆಫೆ ಕಾಫಿ ಡೇ…
Team Udayavani, Jul 31, 2019, 5:54 AM IST
ಬೆಂಗಳೂರು: ತಲಾ 50ರಿಂದ 60 ಕೆಜಿ ತೂಕದ ಸುಮಾರು 12 ಕೋಟಿ ಕಾಫಿ ಬೀಜದ ಮೂಟೆಗಳನ್ನು ಮಾರಾಟ ಮಾಡಿದಾಗ ಬರುತ್ತಿದ್ದ ಆದಾಯ 700 ಕೋಟಿ ರೂ. ಅದೇ ಪ್ರಮಾಣದ ಬೀಜಗಳನ್ನು ಒಂದು ಕಪ್ ಕಾಫಿ ರೂಪದಲ್ಲಿ ಗ್ರಾಹಕರಿಗೆ ನೀಡಿದರೆ, ಬರಲಿದ್ದ ಆದಾಯ ಹತ್ತು ಸಾವಿರ ಕೋಟಿ ರೂ.! ಇದನ್ನು ಮನಗಂಡು ಆ ಹತ್ತು ಸಾವಿರ ಕೋಟಿಯ ಬೆನ್ನಟ್ಟಿ ಹೊರಟವರು ಉದ್ಯಮಿ ವಿ.ಜಿ. ಸಿದ್ಧಾರ್ಥ್. ಅದರ ಪರಿಣಾಮವಾಗಿ ಹುಟ್ಟಿದ ಪರಿಕಲ್ಪನೆಯೇ ‘ಕೆಫೆ ಕಾಫಿ ಡೇ’.
ಸಾಮಾನ್ಯ ಸರಕೊಂದು ಜಾಗತಿಕ ಮಟ್ಟದಲ್ಲಿ ‘ಬ್ರ್ಯಾಂಡ್’ ಆಗಿ ಪರಿವರ್ತನೆಯಾಗಿದೆ. ಈ ಮೊದಲು ದೇಶದ ಮಟ್ಟಿಗೆ ಸ್ನೇಹಿತರೊಂದಿಗೆ ಹೋಟೆಲ್ ಅಥವಾ ಕುಟುಂಬದ ಸದಸ್ಯರೊಂದಿಗೆ ಮನೆಗಳಲ್ಲಿ ಹೀರುವ ಪಾನೀಯವಾಗಿತ್ತು ಕಾಫಿ. ಆದರೆ, ಇಂದು ಪ್ರೇಮಿಗಳು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಲು, ಉದ್ಯಮಿಗಳು ತಮ್ಮ ವ್ಯವಹಾರದ ಗುಟ್ಟುಗಳನ್ನು ಚರ್ಚಿಸಲು, ಸ್ನೇಹಿತರು ಮನ ಬಿಚ್ಚಿ ಹರಟಲು ‘ಕೆಫೆ ಕಾಫಿ ಡೇ’ಗೆ ಹೋಗುತ್ತಾರೆ. ಇಂತಹದ್ದೊಂದು ಬದಲಾವಣೆಗೆ ಕಾರಣರಾದ ಚತುರ ಉದ್ಯಮಿ ಸಿದ್ಧಾರ್ಥ್. ಈ ಹೊಸ ಪರಿಕಲ್ಪನೆ ಸಾವಿರಾರು ಯುವಕರಿಗೆ ಉದ್ಯೋಗ ಕಲ್ಪಿಸಿದರೆ, ಮತ್ತೂಂದೆಡೆ ನೂರಾರು ಬೆಳೆಗಾರರ ಆಶಾ ಕಿರಣವೂ ಆಯಿತು.
ದಶಕದ ಹಿಂದೆ ಯುವ ಸಮುದಾಯ ಸೈಬರ್ ಕೆಫೆಗಳಲ್ಲಿ ಹೈಸ್ಪೀಡ್ ಇಂಟರ್‌ನೆಟ್‌ನಲ್ಲಿ ಸರ್ಚ್ ಮಾಡುತ್ತಾ ಕುಳಿತಿರುತ್ತಿತ್ತು. ಅಂತಹ ವರ್ಗಕ್ಕೆ ‘ಕೆಫೆ ಕಾಫಿ ಡೇ’ಗಳಲ್ಲಿ ಹೈಟೆಕ್ ಕುರ್ಚಿಗಳನ್ನು ಹಾಕಿ, ಲ್ಯಾಪ್‌ಟಾಪ್ ಇಟ್ಟುಕೊಂಡು ಗಂಟೆಗಟ್ಟಲೆ ಕೆಲಸ ಮಾಡಲು ಮುಕ್ತ ಅವಕಾಶ ಕಲ್ಪಿಸಿ, ಹೀರಲು ಸವಿರುಚಿ ಕಾಫಿ ವ್ಯವಸ್ಥೆ ಕಲ್ಪಿಸಲಾಯಿತು. ಜನ ನಿಧಾನವಾಗಿ ಇದಕ್ಕೆ ಆಕರ್ಷಿತರಾದರು. ಅತ್ಯಂತ ವೇಗವಾಗಿ ಈ ಕಾಫಿ ಸರಪಳಿ ಬೆಳೆಯಿತು.
ಕಾಫಿ, ಸಿದ್ಧಾರ್ಥ್ ಅವರ ರಕ್ತದಲ್ಲಿತ್ತು…: ಅಂದಹಾಗೆ ಸಿದ್ಧಾರ್ಥ್ ಅವರಿಗೆ ಏಕಾಏಕಿ ಕಾಫಿ ಉದ್ಯಮದ ಬಗ್ಗೆ ಆಸಕ್ತಿ ಬಂದುದಲ್ಲ. ಅವರ ರಕ್ತದಲ್ಲೇ ಕಾಫಿ ಇತ್ತು. 140 ವರ್ಷಗಳಿಂದ ಕಾಫಿ ಬೆಳೆಯುತ್ತಾ ಬಂದ ಕುಟುಂಬದಿಂದ ಬಂದವರು ಅವರು. ತಂದೆಯಿಂದ ಐದು ಲಕ್ಷ ರೂ. ಸಾಲ ಪಡೆದು, ಅದರಲ್ಲಿ ಮೂರು ಲಕ್ಷ ರೂ.ಗಳಲ್ಲಿ ಒಂದು ಕಾಫಿ ತೋಟವನ್ನು ಖರೀದಿಸಿದರು. ಅಲ್ಲಿಂದ ಸಿದ್ಧಾರ್ಥ್ ಅವರ ‘ಕಾಫಿಯೊಂದಿಗಿನ ಪಯಣ’ ಶುರುವಾಯಿತು.
ಮುಕ್ತ ಮಾರುಕಟ್ಟೆಗೆ ಅವಕಾಶ: ಈ ಮೊದಲು ಬೆಳೆಗಾರರು ಕಾಫಿಯನ್ನು ಬೆಳೆದು, ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಇರಲಿಲ್ಲ. ಕೇಂದ್ರ ಸರ್ಕಾರಕ್ಕೆ ನೀಡಬೇಕಿತ್ತು. ನಂತರ ಸರ್ಕಾರವು ಅದನ್ನು ರಷ್ಯಾಗೆ ರಫ್ತು ಮಾಡಿ, ಇದರ ಬದಲಿಗೆ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಉತ್ಪನ್ನಗಳು, ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಸುಮಾರು 1997-98ರಲ್ಲಿ ಕಾಫಿ ಬೆಳೆಗಾರರು ಆಗಷ್ಟೇ ಪ್ರಧಾನಿ ಹುದ್ದೆಯಿಂದ ಇಳಿದಿದ್ದ ಎಚ್.ಡಿ.ದೇವೇಗೌಡ ಅವರ ಮೊರೆ ಹೋದರು. ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಅಂದು ಪ್ರಧಾನಿಯಾಗಿದ್ದ ಐ.ಕೆ.ಗುಜ್ರಾಲ್ ಮನವೊಲಿಸುವಲ್ಲಿ ದೇವೇಗೌಡರು ಯಶಸ್ವಿಯಾದರು. ಅಲ್ಲಿಂದ ಕಾಫಿಯನ್ನು ಬೆಳೆಗಾರರು ಯಾರಿಗೆ ಬೇಕಾದರೂ ಮಾರಾಟ ಮಾಡುವಂತಾಯಿತು. ಆ ಸಂದರ್ಭದಲ್ಲಿ ಕಾಫಿ ಉದ್ಯಮಕ್ಕೆ ಕಾಲಿಟ್ಟವರು ಸಿದ್ಧಾರ್ಥ್ ಎಂದು ಬೆಳೆಗಾರರೊಬ್ಬರು ಮೆಲುಕು ಹಾಕಿದರು.
ಪರಿಕಲ್ಪನೆ ಹುಟ್ಟಿದ್ದು ಹೀಗೆ..
ಒಮ್ಮೆ ಜರ್ಮನಿಗೆ ತೆರಳಿದ್ದ ಸಿದ್ಧಾರ್ಥ್, ಆಕಸ್ಮಿಕವಾಗಿ ಅಲ್ಲಿದ್ದ ಚಿಬೊ (Tchibo) ಎಂಬ ಮಾಲಿಕರ ಕಾಫಿ ಮಳಿಗೆಯೊಂದಕ್ಕೆ ಭೇಟಿ ನೀಡಿದ್ದರು. ಕಾಫಿ ಸವಿಯುತ್ತಾ ಕುತೂಹಲದಿಂದ ‘ನೀವು ನೂರಾರು ವರ್ಷಗಳಿಂದ ಕಾಫಿ ಬೆಳೆಯುತ್ತಿದ್ದೀರಿ ಅನ್ನಿಸುತ್ತದೆ’ ಎಂದು ಆ ಮಳಿಗೆ ಮಾಲಿಕರನ್ನು ಕೇಳಿದರು. ಆ ಮಾಲಿಕರು, ‘ಇಲ್ಲ, ಹ್ಯಾಂಬರ್ಗ್‌ನಲ್ಲಿ ನನ್ನ ತಾತ ಇದನ್ನು ಆರಂಭಿಸಿದ್ದು’ ಎಂದು ಪ್ರತಿಕ್ರಿಯಿಸುತ್ತಾರೆ. ‘ಅಲ್ಲಿಂದ ಬಂದ ನಾನು ಅಂದು ರಾತ್ರಿಯಿಡೀ ನಿದ್ರೆ ಮಾಡಲಿಲ್ಲ’ ಎಂದು ಸ್ವತ: ಸಿದ್ಧಾರ್ಥ್ ವಿಚಾರ ಸಂಕಿರಣವೊಂದರಲ್ಲಿ ನೆನಪಿಸಿಕೊಂಡಿದ್ದರು. ಆಗ ಹೊಳೆದಿದ್ದೇ ಕೆಫೆ ಕಾಫಿ ಡೇ. ಬೆಂಗಳೂರಿನಲ್ಲಿ ಇದರ ಮೊದಲ ಮಳಿಗೆ ಆರಂಭಗೊಂಡಿತು. ‘ಇಂದು ದೇಶದಲ್ಲಿ ಅತಿ ದೊಡ್ಡ ಕಾಫಿ ಸರಪಳಿ (ಕಾಫಿ ಚೈನ್)ಯನ್ನು ಇದು ಹೊಂದಿದೆ. ಒಟ್ಟಾರೆ 1,742 ಕಾಫಿ ಡೇಗಳಿದ್ದು, ಬೆಂಗಳೂರಿನಲ್ಲೇ ಸುಮಾರು 200 ಮಳಿಗೆಗಳಿವೆ. ವಾರ್ಷಿಕ ಸಾವಿರಾರು ಕೋಟಿ ರೂ.ವಹಿವಾಟು ನಡೆಯುತ್ತದೆ’ ಎಂದು ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ) 2019ರ ವರದಿಯಲ್ಲಿ ಉಲ್ಲೇಖೀಸಿದೆ. ವಿಯೆನ್ನಾ, ದುಬೈ, ಪ್ರಾಗ್ ಸೇರಿದಂತೆ ವಿದೇಶಗಳಲ್ಲೂ ಈ ಮಳಿಗೆಗಳನ್ನು ಕಾಣಬಹುದು. 15 ಬಿಲಿಯನ್ ಡಾಲರ್‌ನಷ್ಟು ವಾರ್ಷಿಕ ವಹಿವಾಟು ಈ ಕಾಫಿ ಡೇಗಳ ಮೂಲಕ ನಡೆಯುತ್ತಿದೆ.
● ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.