ಕಾಗೇರಿ ನಾಮಪತ್ರಕ್ಕೆ ವರಿಷ್ಠರ ತಾಕೀತು
ಸಚಿವರ ಪಟ್ಟಿ ಸಹ ವರಿಷ್ಠರ 'ಕಣ್ಗಾವಲಿ'ನಲ್ಲೇ ಅಂತಿಮವಾಗುವ ಸಾಧ್ಯತೆ
Team Udayavani, Jul 31, 2019, 5:30 AM IST
ಬೆಂಗಳೂರು: ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಕೆ.ಜಿ.ಬೋಪಯ್ಯ ಅವರ ಹೆಸರೇ ಅಂತಿಮಗೊಂಡಿತ್ತಾದರೂ ಕೊನೆಯ ಕ್ಷಣದಲ್ಲಿ ಅಚ್ಚರಿ ಎಂಬಂತೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಈ ಬಾರಿ ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ವರಿಷ್ಠರು ರಾಜ್ಯ ಬಿಜೆಪಿ ನಾಯಕರ ಚಟುವಟಿಕೆ, ಕಾರ್ಯ ವೈಖರಿಯ ಮೇಲೆ ನಿಗಾ ವಹಿಸಿದಂತಿದ್ದು, ವರಿಷ್ಠರ ಸೂಚನೆಯೆಂತೆಯೇ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಭಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಸರ್ಕಾರ ರಚನೆ ಹಾಗೂ ಸ್ಪೀಕರ್ ಸ್ಥಾನದ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ವರಿಷ್ಠರ ನಡೆ ಕುತೂಹಲ ಮೂಡಿಸಿದೆ. ಮುಂದಿನ ವಾರ ಅಂತಿಮವಾಗಲಿದೆ ಎನ್ನಲಾಗಿರುವ 20 ಸಚಿವರ ಪಟ್ಟಿಯೂ ವರಿಷ್ಠರ ‘ಕಣ್ಗಾವಲಿ’ನಲ್ಲೇ ಅಂತಿಮವಾಗುವ ಸಾಧ್ಯತೆ ಇದ್ದು, ಲಾಬಿಯಲ್ಲಿ ನಿರತರಾಗಿರುವ ಸಚಿವಾಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದಂತಿದೆ.
ವಿಧಾನಸಭೆಯಲ್ಲಿ ಯಡಿಯೂರಪ್ಪ ಅವರು ಸೋಮವಾರ ವಿಶ್ವಾಸ ಮತ ಸಾಬೀತುಪಡಿಸುತ್ತಿದ್ದಂತೆ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಕೆ.ಆರ್.ರಮೇಶ್ ಕುಮಾರ್ ರಾಜೀನಾಮೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಸ್ಪೀಕರ್ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಶುರುವಾಯಿತು. ಮಾಜಿ ಸ್ಪೀಕರ್‌ಗಳಾದ ಕೆ.ಜಿ.ಬೋಪಯ್ಯ, ಜಗದೀಶ್ ಶೆಟ್ಟರ್, ಮಾಜಿ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್.ಸುರೇಶ್ ಕುಮಾರ್ ಅವರ ಪೈಕಿ ಒಬ್ಬರನ್ನು ಆಯ್ಕೆ ಮಾಡಲು ಹಿರಿಯ ನಾಯಕರು ಚರ್ಚೆ ನಡೆಸಿದರು.
ವರಿಷ್ಠರ ಸೂಚನೆಯಂತೆ ಬದಲಾವಣೆ: ಅಂತಿಮವಾಗಿ ಕೆ.ಜಿ.ಬೋಪಯ್ಯ ಅವರನ್ನೇ ಸ್ಪೀಕರ್ ಸ್ಥಾನಕ್ಕೆ ಕಣಕ್ಕಿಳಿಸಲು ನಿರ್ಧಾರವಾಗಿತ್ತು. ಅದರಂತೆ ಮಂಗಳವಾರ ಬೆಳಗ್ಗೆ ಕೆ.ಜಿ.ಬೋಪಯ್ಯ ಅವರೇ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹಿರಿಯ ನಾಯಕರೂ ತಿಳಿಸಿದ್ದರು. ಆದರೆ, ರಾತ್ರೋರಾತ್ರಿ ಸ್ಪೀಕರ್ ಅಭ್ಯರ್ಥಿ ಬದಲಾವಣೆಯಾಗಿರುವುದು ಅಚ್ಚರಿ ಮೂಡಿಸಿದೆ.
ಸ್ಪೀಕರ್ ಸ್ಥಾನದ ಅಭ್ಯರ್ಥಿ ಬಗ್ಗೆ ರಾಜ್ಯ ನಾಯಕರು ವರಿಷ್ಠರಿಗೆ ಸೋಮವಾರ ಮಾಹಿತಿ ರವಾನಿಸಿದ್ದರು. ಆದರೆ, ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆ.ಜಿ.ಬೋಪಯ್ಯ ಅವರು ಸ್ಪೀಕರ್ ಆಗಿದ್ದಾಗ ಶಾಸಕರನ್ನು ಅನರ್ಹಗೊಳಿಸಿ ಸುಪ್ರೀಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಇದೀಗ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು 17 ಶಾಸಕರನ್ನು ಅನರ್ಹಗೊಳಿಸಿದ್ದು, ಆ ಸಂಬಂಧ ಕಾನೂನು ಹೋರಾಟಕ್ಕೆ ಅನರ್ಹ ಶಾಸಕರು ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ ಬೋಪಯ್ಯ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡುವುದು ಸೂಕ್ತವಲ್ಲ ಎಂಬ ಭಾವನೆ ವರಿಷ್ಠರಲ್ಲಿ ಮೂಡಿದಂತಿದೆ. ಬಳಿಕ ವರಿಷ್ಠರ ಸೂಚನೆಯಂತೆ ರಾಜ್ಯ ನಾಯಕರು ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್.ಸುರೇಶ್ ಕುಮಾರ್ ಅವರ ಹೆಸರನ್ನು ರವಾನಿಸಿದರು. ಅಂತಿಮವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಹೆಸರು ಅಂತಿಮಗೊಂಡಿದೆ ಎಂದು ಮೂಲಗಳು ಹೇಳಿವೆ.
ಸಂಪುಟ ರಚನೆ ವಿಳಂಬ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೂ ವರಿಷ್ಠರ ಒಪ್ಪಿಗೆ ಪಡೆದೇ ಸಂಪುಟ ರಚನೆಯಾಗಬೇಕಿದೆ. ಸಂಸತ್ ಅಧಿವೇಶನವು ಆ.7ರವರೆಗೆ ಮುಂದುವರಿಯಲಿದ್ದು, ಕೇಂದ್ರ ಸಚಿವರೆಲ್ಲಾ ಕಲಾಪದಲ್ಲಿ ನಿರತರಾಗಿರುವ ಹಿನ್ನೆಲೆಯಲ್ಲಿ ಸಂಪುಟ ರಚನೆ ಇನ್ನೂ ಒಂದು ವಾರ ಕಾಲ ವಿಳಂಬವಾಗುವ ಸಾಧ್ಯತೆ ಇದೆ.
ಆ. 5, 6ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಸಚಿವರ ಪಟ್ಟಿಗೆ ಅಂಗೀಕಾರ ಪಡೆಯಬೇಕಿದೆ. ಈಗಾಗಲೇ ಸರ್ಕಾರ ರಚನೆ ಸಂದರ್ಭ ಹಾಗೂ ಸ್ಪೀಕರ್ ಅಭ್ಯರ್ಥಿ ಬದಲಾವಣೆಯಲ್ಲಿ ವರಿಷ್ಠರ ನಡೆ ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿದೆ. 29 ಮಾಜಿ ಸಚಿವರು ಸದ್ಯ ಶಾಸಕರಾಗಿದ್ದು, ಮೂರಕ್ಕಿಂತ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾದವರ ಸಂಖ್ಯೆ 50ಕ್ಕಿಂತಲೂ ಹೆಚ್ಚು ಇದೆ. ಈ ಪೈಕಿ ಬಹುತೇಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಆದರೆ ಬದಲಾದ ರಾಜಕೀಯ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದ್ದು, ಪಕ್ಷದ ವರ್ಚಸ್ಸು ವೃದ್ಧಿಸುವ ನಿಟ್ಟಿನಲ್ಲಿ ದಕ್ಷ ಆಡಳಿತ ನೀಡಬೇಕಿದೆ. ಆ ಹಿನ್ನೆಲೆಯಲ್ಲಿ ವರಿಷ್ಠರು ಸಂಪುಟ ಸಚಿವರ ಆಯ್ಕೆಯತ್ತಲೂ ಗಮನ ಹರಿಸಬಹುದು. ಆಗ ಕಳಂಕದ ಹಿನ್ನೆಲೆ, ಭ್ರಷ್ಟಾಚಾರ ಸೇರಿದಂತೆ ನಾನಾ ಆರೋಪ ಹೊತ್ತವರಿಗೂ ಅವಕಾಶ ಕೈತಪ್ಪಿದರೆ ಅಚ್ಚರಿಯಿಲ್ಲ ಎನ್ನಲಾಗಿದೆ.
– ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.