ಅಳಿದ ತ್ರಿವಳಿ ತಲಾಖ್
ನರೇಂದ್ರ ಮೋದಿ ಸರಕಾರದ ಐತಿಹಾಸಿಕ ನಿರ್ಧಾರಕ್ಕೆ ಸಂದ ಜಯ
Team Udayavani, Jul 31, 2019, 6:12 AM IST
ಹೊಸದಿಲ್ಲಿ: ಸಾಮಾಜಿಕ ಹಾಗೂ ರಾಜಕೀಯ ಸ್ತರಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ, ಸಾಕಷ್ಟು ಪರ-ವಿರೋಧ ವಾದಗಳಿಗೆ ಗುರಿಯಾಗಿದ್ದ ತ್ರಿವಳಿ ತಲಾಖ್ ಕುರಿತ ಮಸೂದೆಯು (2019ರ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ) ಕೊನೆಗೂ ರಾಜ್ಯಸಭೆಯ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ತ್ರಿವಳಿ ತಲಾಖ್ ರದ್ದುಗೊಳಿಸುವ ಕೇಂದ್ರದ ಐತಿಹಾಸಿಕ ನಿರ್ಧಾರಕ್ಕೆ ಸಂಸತ್ತಿನ ಅಂಗೀಕಾರ ಸಿಕ್ಕಂತಾಗಿದೆ.
ಈ ಹಿಂದೆ ಮೂರು ಬಾರಿ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದರೂ ರಾಜ್ಯಸಭೆಗೆ ಬಂದಾಗಲೆಲ್ಲ ಅದು ಹಿನ್ನಡೆ ಅನುಭವಿಸುತ್ತಿತ್ತು. ಈ ಬಾರಿ ರಾಜ್ಯಸಭೆಯ ಅಗ್ನಿ ಪರೀಕ್ಷೆಯಲ್ಲಿ ಮಸೂದೆ ಗೆದ್ದು ಬಂದಿದೆ. ಮಸೂದೆ ಪರವಾಗಿ 99 ಮತಗಳು ಬಂದರೆ, ವಿರೋಧವಾಗಿ 84 ಮತಗಳು ಬಂದವು.
ಮುಂದಿನ ಹಂತದಲ್ಲಿ ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಲಾಗುತ್ತದೆ. ರಾಷ್ಟ್ರಪತಿಗಳ ಅಂಕಿತ ಬಿದ್ದ ಬಳಿಕ ಫೆ. 21ರಂದು ಇದೇ ವಿಚಾರವಾಗಿ ರಾಷ್ಟ್ರಪತಿ ಯವರು ನೀಡಿದ್ದ ಅಧ್ಯಾದೇಶಕ್ಕೆ ಬದಲು ಕಾನೂನಾಗಿ ಈ ಮಸೂದೆ ಜಾರಿಗೊಳ್ಳಲಿದೆ.
ವರವಾದ ವಿಪಕ್ಷಗಳ ನಡೆ!
ಮತದಾನಕ್ಕೂ ಮೊದಲು ಅಂದಾಜಿಸಿದ್ದ ಪ್ರಕಾರ, 245 ಸದಸ್ಯ ಬಲವಿರುವ ರಾಜ್ಯಸಭೆಯಲ್ಲಿ 4 ಸ್ಥಾನಗಳು ಖಾಲಿ ಇರುವುದರಿಂದ ಸದನದ ಒಟ್ಟು ಬಲ 241 ಆಗಿದ್ದು ಮಸೂದೆಯ ಪರವಾಗಿ 121 ಮತಗಳು ಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಮಂಗಳವಾರದ ಕಲಾಪಕ್ಕೆ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ತೆಲಂಗಾಣ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ವೈಎಸ್‌ಆರ್ ಕಾಂಗ್ರೆಸ್‌ನ ಕೆಲವು ಸಂಸದರು ಗೈರಾಗಿದ್ದರು. ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಮಸೂದೆಯನ್ನು ಮಂಡಿಸಿದ ಅನಂತರ, ಸುಮಾರು ನಾಲ್ಕೂವರೆ ಗಂಟೆಗಳ ಕಾಲ ನಡೆದ ಚರ್ಚೆಯ ವೇಳೆ ಜೆಡಿಯು ಹಾಗೂ ಎಐಎಡಿಎಂಕೆ ಸಭಾತ್ಯಾಗ ಮಾಡಿದವು. ಹೀಗೆ ವಿಪಕ್ಷ ಸದಸ್ಯರ ಗೈರು ಹಾಗೂ ಸಭಾತ್ಯಾಗಗಳು ರಾಜ್ಯಸಭೆಯಲ್ಲಿ ವಿಪಕ್ಷದವರ ಸಂಖ್ಯೆಯನ್ನು ಗಣನೀಯವಾಗಿ ಕುಗ್ಗಿಸಿತು. ಹಾಗಾಗಿ ಸದನದ ಸದಸ್ಯ ಬಲ 183ಕ್ಕೆ ಇಳಿಯಿತು ಹಾಗೂ ಮಸೂದೆಯ ಬಹುಮತಕ್ಕೆ 92 ಮತಗಳು ಬೇಕಾದವು. ಇದರ ನಡುವೆಯೇ ಎನ್‌ಡಿಎ ಹಾಗೂ ಯುಪಿಎನಲ್ಲಿ ಗುರುತಿಸಿಕೊಳ್ಳದ ಬಿಜೆಡಿ ಪಕ್ಷವು ಮತದಾನದಲ್ಲಿ ಮಸೂದೆಯನ್ನು ಬೆಂಬಲಿಸುವುದಾಗಿ ಘೋಷಿಸಿದ್ದು ಸರಕಾರಕ್ಕೆ ಅನುಕೂಲವಾಯಿತು.
ಸದನ ಸಮಿತಿಗೆ ಹಸ್ತಾಂತರವಿಲ್ಲ
ಅಂತಿಮ ಮತದಾನಕ್ಕೂ ಮುನ್ನ, ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ಮಸೂದೆಯನ್ನು ರಾಜ್ಯಸಭೆಯ ಸ್ಥಾಯೀ ಸಮಿತಿಯ ಪರಿಶೀಲನೆಗೆ ಕಳುಹಿಸಬೇಕೆಂದು ವಿಪಕ್ಷಗಳು ಹಿಡಿದಿದ್ದ ಪಟ್ಟು, ಮತದಾನದಲ್ಲಿ ವಿಫಲಗೊಂಡಿತು. ವಿಪಕ್ಷಗಳ ಪರವಾಗಿ 84 ಮತಗಳು ಬಂದರೆ, ಆಡಳಿತ ಪಕ್ಷದ ಪರವಾಗಿ 100 ಮತಗಳು ಬಂದಿದ್ದವು.
ವಿವಾದಕ್ಕೀಡಾಗಿದ್ದು ಏಕೆ?
ಮಸೂದೆಯಲ್ಲಿ ತ್ರಿವಳಿ ತಲಾಖ್ ನೀಡುವ ಪತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ನೀಡಬೇಕೆಂಬ ಅಂಶವು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಅಂಶವು ದುರುಪಯೋಗವಾಗುವ ಸಾಧ್ಯತೆ ಇರುವುದರಿಂದ ಇದು ರಾಜ್ಯಸಭೆಯ ಆಯ್ಕೆ ಸಮಿತಿಯ ಅವಗಾಹನೆಗೆ ಒಳಗಾಗಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿದ್ದವು.
ಇದು ಮುಸ್ಲಿಂ ಕುಟುಂಬಗಳನ್ನು ಒಡೆಯುವಂಥ ಮಸೂದೆ. ಇದರ ಹಿಂದೆ ರಾಜಕೀಯ ಉದ್ದೇಶಗಳಿವೆ. ಇಂಥ ಮಸೂದೆಗಳ ಆಲೋಚನೆ ಬರುವುದು ಕೇವಲ ಬಿಜೆಪಿ ಸರಕಾರದಲ್ಲಿ ಮಾತ್ರ.
– ಗುಲಾಂ ನಬಿ ಆಜಾದ್, ಕಾಂಗ್ರೆಸ್ ಸಂಸದ
ಇದೊಂದು ಐತಿಹಾಸಿಕ ದಿನ. ಮುಸ್ಲಿಂ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಮೋದಿ ಸರಕಾರ ಮಾಡುತ್ತಿರುವ ಪ್ರಯತ್ನಗಳಿಗೆ ಸಂದ ಜಯ.
– ರವಿಶಂಕರ್ ಪ್ರಸಾದ್, ಕೇಂದ್ರ ಕಾನೂನು ಸಚಿವ
ಮಸೂದೆ ಏನು ಹೇಳುತ್ತದೆ?
1 ಎಲೆಕ್ಟ್ರಾನಿಕ್ ರೂಪದಲ್ಲಿ ಅಥವಾ ಬರವಣಿಗೆ ರೂಪದಲ್ಲಿ ಒಮ್ಮೆಲೇ ಮೂರು ಬಾರಿ ತ್ರಿವಳಿ ತಲಾಖ್ ಹೇಳುವುದನ್ನು ಅನೂರ್ಜಿತ ಎಂದು ಪರಿಗಣಿಸುತ್ತದೆ.
2 ಇದು ಶಿಕ್ಷಾರ್ಹ ಅಪರಾಧ. (ಪೊಲೀಸ್ ಅಧಿಕಾರಿ ವಾರಂಟ್ ಇಲ್ಲದೆ ತಲಾಖ್ ಕೊಟ್ಟವನನ್ನು ಬಂಧಿಸಬಹುದು. ಆದರೆ ಆತನ ಪತ್ನಿ, ಪತ್ನಿಯ ರಕ್ತ ಸಂಬಂಧಿಕರು ದೂರು ನೀಡಬೇಕು).
3 ಬಂಧಿತ ಪುರುಷನಿಗೆ ಜಾಮೀನು ಕೊಡುವ ಅಧಿಕಾರ ಮ್ಯಾಜಿಸ್ಟ್ರೇಟ್‌ಗೆ ಇರುತ್ತದೆ. ಆದರೆ ತಲಾಖ್ ಪಡೆದ ಮಹಿಳೆಯ ವಾದ ಆಲಿಸಬೇಕು.
4 ಪತಿ ಮತ್ತು ಪತ್ನಿಗೆ ಮಾತುಕತೆಯ ಮೂಲಕ ಮತ್ತೆ ಒಂದಾಗುವ ಅವಕಾಶವನ್ನೂ ಈ ಮಸೂದೆ ಕಲ್ಪಿಸಿದೆ. ಆದರೆ ಈ ವೇಳೆ ಮ್ಯಾಜಿಸ್ಟ್ರೇಟ್ ಕೆಲವೊಂದು ನಿಬಂಧನೆಗಳನ್ನು ಹಾಕಬಹುದು.
5 ಡೈವೋರ್ಸ್‌ಗೆ ಒಳಗಾದ ಮಹಿಳೆ ಮತ್ತು ಆಕೆಯ ಮಕ್ಕಳ ಜೀವನಾಂಶಕ್ಕಾಗಿ ಗಂಡ ಹಣ ನೀಡಬೇಕು. ಎಷ್ಟು ನೀಡಬೇಕು ಎಂಬುದನ್ನು ಮ್ಯಾಜಿಸ್ಟ್ರೇಟ್ ನಿರ್ಧರಿಸುತ್ತಾರೆ.
6 ಮಹಿಳೆ ಅಪ್ತಾಪ್ತ ವಯಸ್ಸಿನ ಮಕ್ಕಳನ್ನು ತನ್ನಲ್ಲೇ ಇರಿಸಿಕೊಳ್ಳುತ್ತೇನೆ ಎಂದು ಕೇಳಿದಲ್ಲಿ ಮ್ಯಾಜಿಸ್ಟ್ರೇಟ್ ಅವರು ಆಕೆಯ ವಶಕ್ಕೆ ನೀಡಬಹುದು.
ಲಿಂಗ ಸಮಾನತೆಗೆ ಸಂದ ಜಯ: ಮೋದಿ ಬಣ್ಣನೆ
ತ್ರಿವಳಿ ತಲಾಖ್ ಕಾಯ್ದೆಯು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಮುಸ್ಲಿಂ ಸಮುದಾಯದಲ್ಲಿ ಪುರಾತನ ಕಾಲ ದಿಂದಲೂ ಇದ್ದ ಆಚರಣೆಯೊಂದು ಇಂದು ಇತಿಹಾಸದ ಕಸದಬುಟ್ಟಿಗೆ ಸೇರಿದೆ. ಪ್ರಾಚೀನ ಪದ್ಧತಿಯಿಂದ ಆಗುತ್ತಿದ್ದ ಅನ್ಯಾಯಗಳನ್ನು ಸಂಸತ್ತು ಇಂದು ತಿರಸ್ಕರಿಸಿದೆ. ಇದು
ಲಿಂಗ ಸಮಾನತೆಗೆ ಸಂದ ಜಯ ಎಂದಿದ್ದಾರೆ.
245 ರಾಜ್ಯಸಭೆಯ ಒಟ್ಟು ಬಲಾಬಲ
183 ವಿಪಕ್ಷಗಳ ಸದಸ್ಯರ ಗೈರು, ಸಭಾತ್ಯಾಗದಿಂದ ಇಳಿದ ಸದನದ ಬಲ
92 ಮಸೂದೆ ಅಂಗೀಕಾರಕ್ಕೆ ಅಗತ್ಯವಿದ್ದ ಸಂಖ್ಯೆ
99 ಮಸೂದೆ ಪರವಾಗಿ ಬಂದ ಮತಗಳು
84 ಮಸೂದೆ ವಿರೋಧವಾಗಿ ಬಂದ ಮತಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’
Criminal Case: 44 ವರ್ಷದ ಹಿಂದಿನ ಪ್ರಕರಣ ವಿಲೇವಾರಿಗೊಳಿಸಿದ ಹೈಕೋರ್ಟ್
ರಾಷ್ಟ್ರಮಟ್ಟದಲ್ಲೂ ಪ್ರತಿಭಟಿಸಲಿ, ಬಿಜೆಪಿಯವರೇ ಮೂಗು ಕೊಯ್ಯಿಸಿಕೊಳ್ತಾರೆ: ಪ್ರಿಯಾಂಕ್
Officers Promotion: ಹೊಸ ವರ್ಷಕ್ಕೆ 153 ಅಧಿಕಾರಿಗಳಿಗೆ ಭಡ್ತಿ ಭಾಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.