ಹೂಳು ಎತ್ತಲು ತಾಂತ್ರಿಕ ವರದಿಗೆ ಡೀಸಿ ಆದೇಶ
Team Udayavani, Aug 1, 2019, 3:00 AM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ಎಲ್ಲೆಡೆ ನೀರಿಗೆ ಹಾಹಾಕಾರ ಉಂಟಾಗಿರುವಂತೆ ಈಗ ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ನಗರಗಳಿಗೆ ಕುಡಿಯುವ ನೀರಿನ ಪ್ರಮುಖ ಆಶ್ರಯವಾಗಿರುವ ಜಕ್ಕಲಮಡಗು ಜಲಾಶಯದಲ್ಲಿ ನೀರಿನ ಮಟ್ಟ ತಳಮಟ್ಟಕ್ಕೆ ಕುಸಿದಿದ್ದು, ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚು ಮಾಡಲು ಜಿಲ್ಲಾಡಳಿತ ಹೂಳು ಎತ್ತುವ ಕಾರ್ಯಕ್ಕೆ ಚಿಂತನೆ ನಡೆಸಿದೆ.
ನೀರು ಖಾಲಿ ಇದೇ ಮೊದಲು: ಹಲವು ದಿನಗಳಿಂದ ಜಲಾಶಯದಲ್ಲಿದ್ದ ನೀರು ಸಂಪೂರ್ಣ ಖಾಲಿಯಾಗಿ ತಳಮಟ್ಟ ತಲುಪಿದ್ದು, ಸದ್ಯ ಜಲಾಶಯದಲ್ಲಿ ಕುಡಿಯುವ ನೀರು ಇಲ್ಲದೇ ಇರುವ ಕಾರಣ ಹೂಳು ತೆಗೆಸಲು ಜಿಲ್ಲಾಡಳಿತ ಆಸಕ್ತಿ ವಹಿಸಿದೆ. 4 ತಿಂಗಳಲ್ಲಿ 12 ಅಡಿಯಷ್ಟು ನೀರು ಖಾಲಿಯಾಗಿದ್ದು, ಜಕ್ಕಲಮಡಗು ಜಲಾಶಯದಲ್ಲಿ ಈ ಹತ್ತು ವರ್ಷದಲ್ಲಿ ನೀರು ಖಾಲಿಯಾಗಿರುವುದು ಇದೇ ಮೊದಲಾಗಿದೆ.
4,390 ಎಂ.ಎಲ್.ಸಾಮರ್ಥ್ಯ: ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಜಕ್ಕಲಮಡಗು ಜಲಾಶಯಕ್ಕೆ ಬರೋಬ್ಬರಿ 4,390 ಎಂಎಲ್‌ನಷ್ಟು ನೀರು ಸಂಗ್ರಹದ ಸಾಮರ್ಥ್ಯ ಇದೆ. ಆದರೆ ಜಲಾಶಯದಲ್ಲಿ ತೊಟ್ಟು ನೀರು ಕೂಡ ಇಲ್ಲದೇ ಎಲ್ಲಾ ಬಿರುಕು ಬಿಡುತ್ತಿದೆ. ಜಿಲ್ಲಾದ್ಯಂತ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ಆಗದ ಪರಿಣಾಮ ಎಲ್ಲೆಡೆ ಕುಡಿವ ನೀರಿಗಾಗಿ ಜನ, ಜಾನುವಾರುಗಳಿಗೆ ಹಾಹಾಕಾರ ಸೃಷ್ಟಿಯಾಗಿದೆ. ಮಳೆಗಾಗಿ ಚಾತಕ ಪಕ್ಷಿಗಳಂತೆ ಆಕಾಶದತ್ತ ಎದುರು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ದಾಖಲೆ ಮಟ್ಟದಲ್ಲಿ ಕುಸಿತ: ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಂತೆ ನಗರ ಪ್ರದೇಶಗಳಲ್ಲಿ ಕೂಡ ನೀರಿಗೆ ಬರ ತೀವ್ರಗೊಂಡಿದ್ದು, ಜಕ್ಕಲಮಡಗು ಜಲಾಶಯದ ನೀರಿನ ಮಟ್ಟ ಹಲವು ವರ್ಷಗಳಲ್ಲಿ ದಾಖಲೆ ಪ್ರಮಾಣದಲ್ಲಿ ಈಗ ಕುಸಿದಿರುವುದು ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ನಗರ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಕಳೆದ ಎರಡು ವರ್ಷಗಳ ಹಿಂದೆ ಜಕ್ಕಲಮಡಗು ಜಲಾಶಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭರಪೂರ ಭರ್ತಿಯಾಗಿ ಕೋಡಿ ಹರಿದಿತ್ತು. ಆದರೆ ಒಂದೂವರೆ ವರ್ಷದಿಂದ ಮಳೆಯಾಗದ ಪರಿಣಾಮ ಜಿಲ್ಲೆಯಲ್ಲಿನ ಕೆರೆ, ಕುಂಟೆಗಳು ಬತ್ತಿ ಹೋಗಿದ್ದು ಜಕ್ಕಲಮಡಗು ಕೂಡ ನೀರಿಲ್ಲದೇ ಸದ್ಯ ಭಣಗೊಡುತ್ತಿದೆ.
ಮಳೆಯಾಗದಿದ್ದರೆ ಜಲಭಾದೆ: ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಕ್ಕೆ ಜಕ್ಕಲಮಡಗು ಜಲಾಶಯವೇ ಕುಡಿಯುವ ನೀರಿನ ಆಶ್ರಯವಾಗಿದೆ. ಸದ್ಯ ಜಿಲ್ಲೆಯಲ್ಲಿ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಆಗದಿದ್ದರೆ ತೀವ್ರ ಜಲಭಾದೆ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಚಿಕ್ಕಬಳ್ಳಾಪುರ ನಗರದ ಸುತ್ತಮುತ್ತ ಅಲ್ಪಸ್ವಲ್ಪ ಮಳೆಯಾಗಿದ್ದು, ಕೊಳವೆ ಬಾವಿಗಳು ತಕ್ಕಮಟ್ಟಿಗೆ ನೀರು ಪೂರೈಸುತ್ತಿರುವುದರಿಂದ ಆಗಸ್ಟ್ ತಿಂಗಳು ಸುಧಾರಿಸಬಹುದು. ಆದರೆ ದೊಡ್ಡಬಳ್ಳಾಪುರ ನಗರದ ಸುತ್ತಮುತ್ತಲಿನವರು ಜಕ್ಕಲಮಗಡು ಜಲಾಶಯವನ್ನೇ ಆಶ್ರಯಿಸಿರುವುದರಿಂದ ದೊಡ್ಡಬಳ್ಳಾಪುರದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ.
ತಜ್ಞರೊಂದಿಗೆ ಭೇಟಿ: ಜಲಾಶಯದಲ್ಲಿ ಮಳೆ ನೀರು ಸಂಗ್ರಹ ಹೆಚ್ಚು ಮಾಡಬೇಕೆಂಬ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಿರುವ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜಕ್ಕಲಮಡಗು ಜಲಾಶಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ತುಂಬಿರುವ ಹೂಳು ತೆಗೆಸಲು ಪರಿಶೀಲನೆ ನಡೆಸಿದ್ದಾರೆ. ಇದಕ್ಕಾಗಿ ಅವರು ತಜ್ಞರೊಂದಿಗೆ ಬುಧವಾರ ಜಕ್ಕಲಮಡಗು ಜಲಾಶಯಕ್ಕೆ ಖುದ್ದು ಭೇಟಿ ನೀಡಿ ಹೂಳು ತೆಗೆಯಲು ಇರುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಿ ತಕ್ಷಣ ವರದಿ ನೀಡುವಂತೆ ನಗರ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಗಮನ ಸೆಳೆದಿದ್ದ “ಉದಯವಾಣಿ’ ವರದಿ: ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ನಗರಗಳಿಗೆ ಕುಡಿಯುವ ನೀರಿನ ಆಶ್ರಯವಾಗಿರುವ ಜಕ್ಕಲಮಡಗು ಜಲಾಶಯದಲ್ಲಿ ನೀರು ಖಾಲಿಯಾಗುತ್ತಿರುವ ಕುರಿತು ಕಳೆದ ಏಪ್ರೀಲ್ 21 ರಂದೇ ಉದಯವಾಣಿ ಚಿಕ್ಕಬಳ್ಳಾಪುರ ಆವೃತ್ತಿಯಲ್ಲಿ “45 ಅಡಿಯಿಂದ 12ಕ್ಕೆ ಕುಸಿದ ಜಕ್ಕಲಮಡಗು ಜಲಾಶಯ ನೀರು” ಶೀರ್ಷಿಕೆಯಡಿ ಜಲಾಶಯದಲ್ಲಿ ಮಳೆ ಕೊರತೆಯಿಂದ ನೀರು ಖಾಲಿ ಆಗುತ್ತಿರುವ ಕುರಿತು ವರದಿ ಪ್ರಕಟಿಸಿ ಗಮನ ಸೆಳೆದಿತ್ತು.
* ಜಲಾಶಯಕ್ಕಿದೆ 4,390 ಎಂಎಲ್ ನೀರು ಸಂಗ್ರಹ ಸಾಮರ್ಥ್ಯ
* ಜಲಾಶಯ ಬತ್ತಿದ್ದು ಹತ್ತು ವರ್ಷದಲ್ಲಿ ಇದೇ ಮೊದಲು
* 2 ವರ್ಷಗಳ ಹಿಂದೆ ಕೋಡಿ ಹರಿದಿದ್ದ ಜಕ್ಕಲಮಡಗು
* ಹೂಳು ತೆಗೆಸಲು ಜಿಲ್ಲಾಡಳಿತ ಚಿಂತನೆ
* ತಾಂತ್ರಿಕ ವರದಿ ನೀಡುವಂತೆ ಡೀಸಿ ಆದೇಶ
* ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಕ್ಕೆ ನೀರಿನ ಆಶ್ರಯ
* ಮಳೆಯಾಗದಿದ್ದರೆ ಎರಡು ನಗರಗಳಲ್ಲಿ ಜಲಬಾಧೆ
* 4 ತಿಂಗಳಲ್ಲಿ 12 ಅಡಿಯಷ್ಟು ನೀರು ಖಾಲಿ
ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ನಗರಗಳಿಗೆ ಕುಡಿಯುವ ನೀರು ಪೂರೈಸುವ ಜಕ್ಕಲಮಡಗು ಜಲಾಶಯದಲ್ಲಿ ಸಂಪೂರ್ಣ ನೀರು ಖಾಲಿಯಾಗಿದೆ. ಜಲಾಶಯದಲ್ಲಿ ತುಂಬಿರುವ ಹೂಳು ಹೊರ ತೆಗೆಯಲು ತಾಂತ್ರಿಕ ವರದಿ ನೀಡುವಂತೆ ನಗರ ನೀರು ಸರಬರಾಜು ಇಲಾಖೆಗೆ ಸೂಚಿಸಲಾಗಿದೆ. ಮುಂದೆ ಮಳೆಗಾಲದಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಲು ಹೂಳು ತೆಗೆಯುವುದು ಅಗತ್ಯ.
-ಅನಿರುದ್ಧ್ ಶ್ರವಣ್, ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.