ಲಕ್ಷ್ಮೀ ಮತ್ತು ಕರಡಿ ಮಾಮ
Team Udayavani, Aug 1, 2019, 5:13 AM IST
ಲಕ್ಷ್ಮೀಗೆ ಜೇನುತುಪ್ಪ ಎಂದರೆ ಇಷ್ಟ. ಒಂದು ಬೆಳಿಗ್ಗೆ ಅವಳು ಕಳ್ಳಹೆಜ್ಜೆಯಿಟ್ಟು ಅಡುಗೆಮನೆಗೆ ಬಂದರೆ ಜೇನುತುಪ್ಪದ ಬಾಟಲಿ ಖಾಲಿಯಾಗಿತ್ತು. ಅಮ್ಮನೊಂದಿಗೆ ಜಗಳ ಮಾಡಿ ಜೇನುತುಪ್ಪ ತರಲು ಕಾಡಿಗೆ ಒಬ್ಬಳೇ ಹೊರಟಳು. ಅವಳಿಗೆ ಜೇನು ಸಿಕ್ಕಿತಾ?
ಕಾಡಿನ ಹತ್ತಿರ ಒಂದೂರಿತ್ತು. ಅಲ್ಲಿ ವಾಸವಿದ್ದ ಪುಟ್ಟ ಲಕ್ಷ್ಮೀಗೆ ಏಳೇ ವರ್ಷ. ಅವಳಿಗೆ ಜೇನು ತುಪ್ಪ ಎಂದರೆ ತುಂಬಾ ಪ್ರೀತಿ. ಅಮ್ಮ ಇಲ್ಲದಾಗ ಅಡುಗೆಮನೆಗೆ ಹೋಗಿ ಜೇನು ತುಪ್ಪವನ್ನು ಮೂರ್ನಾಲ್ಕು ಚಮಚಗಳಾದರೂ ಎತ್ತಿಕೊಂಡು ನೆಕ್ಕುವುದು, ಯಾರಿಗೂ ಗೊತ್ತಾಗದ ಹಾಗೆ ಓಡಿಬರುವುದು ಅವಳ ಅಭ್ಯಾಸ. ಅಮ್ಮ ಬಿಡುತ್ತಾಳೆಯೇ? ಇದು ಲಕ್ಷ್ಮೀಯದೇ ಕೆಲಸ ಎಂದು ಪತ್ತೆಮಾಡಿದಳು. ಅವಳಿಗೆ ಗೊತ್ತಾಗದಂತೆ ಜೇನುತುಪ್ಪದ ಬಾಟಲಿಯನ್ನು ಬಚ್ಚಿಟ್ಟು ಅದೇ ರೀತಿಯ ಖಾಲಿ ಬಾಟಲಿಯನ್ನು ಇಟ್ಟಳು. ಮರುದಿನ ಅಮ್ಮ ಇಲ್ಲದಾಗ ಕದ್ದುಮುಚ್ಚಿ ಅಡುಗೆ ಮನೆಗೆ ಬಂದ ಲಕ್ಷ್ಮೀಗೆ ಸಿಕ್ಕಿದ್ದು ಜೇನುತುಪ್ಪ ಇಲ್ಲದ ಖಾಲಿ ಬಾಟಲಿ. ಲಕ್ಷ್ಮೀಗೆ ಅಳುವೇ ಬಂದುಬಿಟ್ಟಿತು. “ನನಗೆ ಜೇನುತುಪ್ಪ ಬೇಕೇ ಬೇಕು’ ಎಂದು ಹಠ ಹಿಡಿದು ಕೂತಳು. ಅಮ್ಮ “ನೀನು ಆಗಾಗ ಜೇನುತುಪ್ಪವನ್ನು ಕದ್ದು ತಿನ್ನುತ್ತಿದ್ದರೆ ಖಾಲಿಯಾಗದೆ ಇನ್ನೇನಾಗುತ್ತದೆ?’ ಎಂದರು.
“ಅದೆಲ್ಲಿ ಸಿಗುತ್ತದೆ?’ ಎಂದು ಲಕ್ಷ್ಮೀ ಕೇಳಿದಾಗ, “ಊರ ಪಕ್ಕದ ಕಾಡಿನಲ್ಲಿ ಸಿಗುತ್ತದೆ’ ಎಂದು ಅಮ್ಮ ಉತ್ತರಿಸಿದಳು. ಲಕ್ಷ್ಮೀಖಾಲಿ ಡಬ್ಬ ಹಿಡಿದು ಒಬ್ಬಂಟಿಯಾಗಿ ಕಾಡಿಗೆ ಹೊರಟಳು! ಮನೆ ಮುಂದೆ ಅಜ್ಜ ಪೇಪರ್ ಓದುತ್ತಾ ಕುಳಿತ್ತಿದ್ದರು. “ಪುಟ್ಟಿ ಲಕ್ಷ್ಮೀ, ಎಲ್ಲಿ ಹೋಗುತ್ತಿದ್ದೀಯಾ ಡಬ್ಬ ಹಿಡಿದುಕೊಂಡು?’ ಎಂದು ಕೇಳಿದರು.
“ಜೇನು ತುಪ್ಪ ತರಲು ಹೋಗುತ್ತಿದ್ದೀನಿ ಅಜ್ಜ’
“ಕಾಡಲ್ಲಿ ಅದೆಲ್ಲಿ ಸಿಗುತ್ತೆ ಅಂತ ಗೊತ್ತಾ ನಿನಗೆ?’
“ಇಲ್ಲ, ಅಲ್ಲಿ ಹೋಗಿ ಹೇಗಾದರೂ ಹುಡುಕುತ್ತೇನೆ’ ಎಂದು ಹೇಳಿದಳು.
ಹಾಗೆಲ್ಲಾ ಜೇನು ಸಿಗುವುದಿಲ್ಲ. ಉದ್ದುದ್ದದ ಮರಗಳಲ್ಲಿ ಜೇನುಗೂಡು ಇರುತ್ತವೆ. ಆ ಗೂಡುಗಳಲ್ಲಿ ಜೇನು ಸಿಗುತ್ತದೆ. ಆದರೆ ಜೇನುಹುಳುಗಳು ಅದನ್ನು ಕಾವಲು ಕಾಯುತ್ತಿರುತ್ತವೆ’ ಎಂದರು ಅಜ್ಜ.
“ಅಯ್ಯೋ ಅದಕ್ಕೇನು ಮಾಡುವುದು?’ ಎಂದು ಹೆದರುತ್ತಾ ಲಕ್ಷ್ಮೀ ಕೇಳಿದಳು.
“ನನ್ನ ಹತ್ತಿರ ಒಂದು ಉಪಾಯ ಇದೆ. ಕಾಡಿಗೆ ಹೋಗಿ ಕರಡಿಮಾಮನೊಂದಿಗೆ ದೋಸ್ತಿ ಮಾಡಿಕೋ ಅವನು ನಿನಗೆ ಖಂಡಿತ ಸಹಾಯ ಮಾಡುತ್ತಾನೆ’
“ಥ್ಯಾಂಕ್ಯೂ ಅಜ್ಜ’ ಎಂದು ಹೇಳಿ ಲಕ್ಷ್ಮೀ ಕಾಡಿಗೆ ಹೊರಟಳು.
ಗೇಟಿನ ಬಳಿ ಅಜ್ಜಿ ಸಿಕ್ಕರು. ಅವರೂ “ಲಕ್ಷ್ಮೀ ಎಲ್ಲಿ ಹೋಗುತ್ತಿದ್ದೀಯಾ?’ ಎಂದು ಕೇಳಿದರು. ಲಕ್ಷ್ಮೀ ಎಲ್ಲವನ್ನೂ ಹೇಳಿದಳು.
“ಅದೆಲ್ಲಾ ಸರಿ ಜೇನು ಕೊಟ್ಟ ಕರಡಿಗೆ ನೀನು ಏನು ಕೊಡುವೆ?’
“ನನ್ನ ಹತ್ತಿರ ಏನೂ ಇಲ್ಲವಲ್ಲ ಕೊಡಲು!’
“ಕರಡಿಗಳಿಗೆ ಮುತ್ತುಗಳು ಎಂದರೆ ತುಂಬಾ ಇಷ್ಟ. ನನ್ನ ಹತ್ತಿರ ಒಂದು ಮುತ್ತಿನ ಸರ ಇದೆ. ಅದನ್ನು ಕರಡಿ ಮಾಮನಿಗೆ ಕೊಡು’ ಎಂದು ಅಜ್ಜಿ ಮುತ್ತಿನಸರ ಕೊಟ್ಟರು. ಅದನ್ನು ಜೇಬಿನಲ್ಲಿ ಇಟ್ಟುಕೊಂಡು ಲಕ್ಷ್ಮೀ ಕಾಡಿನತ್ತ ಹೊರಟಳು.
ಕಾಡು ತಲುಪುವಷ್ಟರಲ್ಲಿ ಆಗಲೇ ಸಂಜೆಯಾಗಿತ್ತು. ಲಕ್ಷ್ಮೀಗೆ ಭಯವಾಗತೊಡಗಿತು. ಲಕ್ಷ್ಮೀ “ಕರಡಿಮಾಮಾ, ಕರಡಿಮಾಮ’ ಎಂದು ಕೂಗುತ್ತಾ ಕತ್ತಲಲ್ಲಿ ನಡೆದುಹೋದಳು. ಪೊದೆಯೊಂದರಲ್ಲಿ ಅವಿತಿದ್ದ ನರಿಗೆ ಲಕ್ಷ್ಮೀಯ ಕೂಗು ಕೇಳಿಸಿತು. ಮರೆಯಿಂದಲೇ ಲಕ್ಷ್ಮೀಯನ್ನು ನೋಡಿ, “ಅಯ್ಯೋ ಪಾಪ, ಯಾರೋ ಪುಟ್ಟ ಹುಡುಗಿ. ಈ ರಾತ್ರಿಯಲ್ಲಿ ಯಾಕಾದರೂ ಕಾಡಿಗೆ ಬಂದಳ್ಳೋ ಕರಡಿಮಾಮನನ್ನು ಹುಡುಕಿಕೊಂಡು? ಹುಲಿಯೋ ಚಿರತೆಯೋ ಇವಳನ್ನು ತಿಂದು ಹಾಕುವ ಮುನ್ನ ಕರಡಿಮಾಮನಿಗೆ ಸುದ್ದಿ ಮುಟ್ಟಿಸೋಣ’ ಎಂದು ತನ್ನಷ್ಟಕ್ಕೆ ಮಾತಾಡಿಕೊಂಡು ಕರಡಿಮಾಮನ ಗುಹೆಗೆ ಹೋಯಿತು. ಕರಡಿಮಾಮ “ಆಆಆ…’ ಎಂದು ಆಕಳಿಸುತ್ತಾ ತನ್ನ ಮಗುವನ್ನು ಮಲಗಿಸುತ್ತಿದ್ದ. ಕರಡಿಮಾಮನ ಹೆಂಡತಿ ನರಿಯಣ್ಣನನ್ನು ಕಂಡು ಕೇಳಿದಳು, “ಏನು ನರಿಯಣ್ಣಾ, ಈ ರಾತ್ರಿಯಲ್ಲಿ ಬಂದಿರುವೆ?’. “ಕರಡಿಮಾಮನನ್ನು ಹುಡುಕಿಕೊಂಡು ಒಬ್ಬಳು ಪುಟ್ಟ ಹುಡುಗಿ ಕಾಡಿಗೆ ಬಂದುಬಿಟ್ಟಿದ್ದಾಳೆ. ಹುಲಿಯೋ ಚಿರತೆಯೋ ಬಂದು ಅವಳನ್ನು ತಿನ್ನುವುದರೊಳಗೆ ಹೋಗಿ ಅವಳನ್ನು ಮಾತನಾಡಿಸಬಾರದೆ?’ ಎಂದು ನರಿ ಹೇಳಿತು. ಕರಡಿಮಾಮ “ನನಗೆ ತುಂಬಾ ನಿದ್ದೆ ಬರುತ್ತಿದೆ. ಅವಳನ್ನು ನಾಳೆ ಭೇಟಿ ಮಾಡುತ್ತೇನೆ.’. ಅಷ್ಟರಲ್ಲಿ ಕರಡಿಮಾಮನ ಪುಟ್ಟ ಮಗು ಹೇಳಿತು, “ಅಪ್ಪ ಅವಳನ್ನು ಕರೆದುಕೊಂಡು ಬಾ. ನನಗೆ ಆಟವಾಡಲು ಯಾರೂ ಸ್ನೇಹಿತರೇ ಇಲ್ಲ.’ ಎಂದು ಅಳತೊಡಗಿತು. “ಸರಿ, ಆಯ್ತು ಆಯ್ತು. ಕರೆದುಕೊಂಡು ಬರುತ್ತೇನೆ’ ಎಂದು ಕರಡಿಮಾಮ ನರಿ ಜೊತೆಗೆ ಹೊರಟ.
ಕರಡಿಮಾಮನಿಗೆ ಲಕ್ಷ್ಮೀಯನ್ನು ನೋಡಿ ಆಶ್ಚರ್ಯವೂ ಸಂತೋಷವೂ ಆಯಿತು.
“ಯಾರು ಪುಟ್ಟಿ ನೀನು? ಇಷ್ಟು ರಾತ್ರಿ ಹೊತ್ತಿನಲ್ಲಿ ಇಲ್ಲಿಗೇಕೆ ಬಂದೆ? ದಾರಿ ತಪ್ಪಿತೇ?’
“ಕರಡಿಮಾಮ, ನಾನು ದಾರಿ ತಪ್ಪಿ ಬಂದಿಲ್ಲ. ನಿನ್ನನ್ನು ಹುಡುಕಿಕೊಂಡೇ ಬಂದಿದ್ದೀನಿ. ನನಗೆ ಜೇನು ತುಪ್ಪ ಎಂದರೆ ತುಂಬಾ ಇಷ್ಟ. ನಮ್ಮ ಮನೆಯಲ್ಲಿ ಅದು ಖಾಲಿಯಾಗಿದೆ. ಜೇನುತುಪ್ಪ ತೆಗೆಯಲು ನೀನು ನನಗೆ ಸಹಾಯ ಮಾಡಬೇಕು.’
“ಆಯ್ತು ನಿನಗೆ ಸಹಾಯ ಮಾಡುತ್ತೇನೆ. ನೀನು ಇಲ್ಲಿಯೇ ಇದ್ದರೆ ನಿನಗೆ ಅಪಾಯ. ಬಾ ಇವತ್ತು ರಾತ್ರಿ ನಮ್ಮ ಮನೆಯಲ್ಲಿ ಉಳಿದುಕೊಳ್ಳುವಿಯಂತೆ.’
ಲಕ್ಷ್ಮೀಯನ್ನು ಕರಡಿಮಾಮ ತನ್ನ ಗುಹೆಗೆ ಕರೆದುಕೊಂಡು ಹೋದ. ಆ ದಿನ ರಾತ್ರಿ ಲಕ್ಷ್ಮೀ ಕರಡಿಮಾಮನ ಪುಟ್ಟ ಮಗುವೊಂದಿಗೆ ಆಟವಾಡಿದಳು. ಅದ್ಯಾವಾಗ ಇಬ್ಬರೂ ಮಲಗಿದರೋ ಗೊತ್ತಿಲ್ಲ. ಬೆಳಗಾಗುತ್ತಿದ್ದಂತೆ, ಲಕ್ಷ್ಮೀ ತಾನೇ ಮೊದಲು ಎದ್ದು ಕರಡಿಮಾಮನನ್ನು ಎಬ್ಬಿಸಿದಳು. “ನನಗೆ ಜೇನು ತುಪ್ಪ ಬೇಕು’ ಎಂದು ವರಾತ ಹಚ್ಚಿದಳು. ಕರಡಿಮಾಮ “ಪುಟ್ಟಿ, ಕಾಡಿನಲ್ಲಿರುವ ಎಲ್ಲ ಜೇನುಗೂಡುಗಳನ್ನು ನಾನು ಮತ್ತು ನನ್ನ ಮನೆಯವರು ಹಂಚಿಕೊಂಡು ತಿಂದಿದ್ದೇವೆ. ಈಗ ಕಾಡಿನಲ್ಲಿ ಜೇನುತುಪ್ಪ ಉಳಿದಿಲ್ಲ.’
ಲಕ್ಷ್ಮೀ ಬಲು ಜಾಣೆ, “ಜೇನುಗೂಡುಗಳನ್ನು ನಾನು ತೋರಿಸಿಕೊಡುತ್ತೇನೆ. ನೀನು ಜೇನುತುಪ್ಪ ತೆಗೆಯಲು ಸಹಾಯ ಮಾಡು ಸಾಕು’. ಅವಳ ಬುದ್ಧಿಮತ್ತೆ ಕಂಡು ಕರಡಿಮಾಮನಿಗೆ ಆಶ್ಚರ್ಯವೋ ಆಶರ್ಯ! ಬೇರೆ ದಾರಿಯಿಲ್ಲದೆ “ಸರಿ’ ಎಂದು ಒಪ್ಪಿದ. ನಡೆಯುತ್ತಾ ನಡೆಯುತ್ತಾ, ಕರಡಿಮಾಮ, ಲಕ್ಷ್ಮೀಗೆ ಕಾಡನ್ನು ಪರಿಚಯಿಸುತ್ತಾ ಬಂದನು. ದಾರಿಯಲ್ಲಿ ಉದ್ದದ ಮರಗಳು ಸಿಕ್ಕಾಗ ಪುಟ್ಟಿ ಗಕ್ಕನೆ ನಿಂತಳು. ಅವಳಿಗೆ ಒಂದಲ್ಲ ಎರಡಲ್ಲ ಹತ್ತಾರು ಜೇನುಗೂಡುಗಳು ಕಂಡವು. ಲಕ್ಷ್ಮೀ, ಕರಡಿಮಾಮನಿಗೆ ಜಿನುಗೂಡುಗಳಿರುವ ಕೊಂಬೆಯನ್ನು ತೋರಿಸಿದಳು. ಕರಡಿಮಾಮನಿಗೆ ಆಶ್ಚರ್ಯ! “ಅರೇ! ನಾನು ಇದನ್ನು ನೋಡಿಯೇ ಇಲ್ಲವಲ್ಲ?’ ಎಂದವನೇ ಸರಸರನೆ ಲಗುಬಗೆಯಿಂದ ಆ ದೊಡ್ಡ ಮರ ಹತ್ತಿದನು.
ಎಚ್ಚರಿಕೆಯಿಂದ ಜೇನುಗೂಡಿನ ಒಳಗೆ ಕೈ ಹಾಕಿದ. ತಕ್ಷಣ ಸಿಟ್ಟಾದ ಜೇನುಹುಳಗಳು ಒಟ್ಟಿಗೆ ಸೇರಿ ನೂರಾರು ಸಂಖ್ಯೆಯಲ್ಲಿ ಕರಡಿಮಾಮನನ್ನು ಕಚ್ಚತೊಡಗಿದವು. ಲಕ್ಷ್ಮೀಗೆ ತುಂಬಾ ಗಾಬರಿಯಾಯಿತು. ಆದರೆ ಕರಡಿಮಾಮನಿಗೆ ನೋವೇ ಆಗುತ್ತಿರಲಿಲ್ಲ. ಅವನು ನಿಶ್ಚಿಂತೆಯಿಂದ ಜೇನುಗೂಡನ್ನು ಕಿತ್ತುಕೊಂಡು ಕೆಳಕ್ಕೆ ಬಂದೇ ಬಿಟ್ಟ. ಲಕ್ಷ್ಮೀ, “ಮಾಮಾ ನನಗೆ ಜೇನು ತುಪ್ಪ ಬೇಕು’ ಎಂದು ಕೂಗಿದಳು. ಕರಡಿಮಾಮ “ಕಷ್ಟಪಟ್ಟು ಮರ ಹತ್ತಿದ್ದು ನಾನು. ಜೇನುಹುಳಗಳಿಂದ ಕಚ್ಚಿಸಿಕೊಂಡಿದ್ದು ನಾನು. ನಿನಗೇಕೆ ಕೊಡಲಿ ಜೇನು? ಬೇಕಾದರೆ ಈ ಗೂಡನ್ನು ತೋರಿಸಿದ್ದಕ್ಕಾಗಿ ನಿನಗೆ ಒಂದೆರಡು ಚಮಚ ಕೊಡುವೆ’. ಲಕ್ಷ್ಮೀಗೆ ಅಳು ಬಂದುಬಿಟ್ಟಿತು. ಅಷ್ಟರಲ್ಲಿ ಅಜ್ಜಿ ಕೊಟ್ಟ ಮುತ್ತಿನಸರದ ನೆನಪಾಯಿತು. “ನೀನು ನನಗೆ ಜೇನುತುಪ್ಪ ಕೊಟ್ಟರೆ ನಾನು ನಿನಗೆ ಮುತ್ತಿನ ಸರ ಕೊಡುತ್ತೇನೆ’ ಎಂದಳು. ಮುತ್ತಿನ ಸರ ಎನ್ನುತ್ತಿದ್ದಂತೆ ಕರಡಿಮಾಮನ ಕಣ್ಣು ಅರಳಿತು. ಅವಳು ತನ್ನ ಜೇಬಿನಿಂದ ಮುತ್ತಿನ ಸರವನ್ನು ಕರಡಿಗೆ ಕೊಟ್ಟಳು. ಕರಡಿ ತನ್ನ ಕೈಲಿದ್ದ ಜೇನುಗೂಡನ್ನು ಅವಳಿಗೆ ಕೊಟ್ಟುಬಿಟ್ಟ.
ಜೇನುತುಪ್ಪವನ್ನು ತಾನೂ ತಿಂದು ಮನೆಯವರಿಗೂ ಕೊಟ್ಟು, ಊರಿನವರಿಗೆಲ್ಲ ಹಂಚುವ ಕನಸು ಕಾಣುತ್ತ ಲಕ್ಷ್ಮೀ ಜೇನುಗೂಡನ್ನು ಹಿಡಿದು ಊರಿನತ್ತ ನಡೆದಳು. ಅಷ್ಟರಲ್ಲಿ ಆತಂಕದಿಂದ ಲಕ್ಷ್ಮೀಯನ್ನು ಹುಡುಕುತ್ತ ಅಜ್ಜ, ಅಜ್ಜಿ, ಅಪ್ಪ ಮತ್ತು ಅಮ್ಮ ಊರಿನವರೊಂದಿಗೆ ಬಂದಿದ್ದರು. ಅವರು ಲಕ್ಷ್ಮೀಯ ಕೈಯಲ್ಲಿ ಒಂದಿಡೀ ಜೇನುಗೂಡನ್ನು ನೋಡಿ ಬಾಯಿ ತೆರೆದವರು ಬಾಯಿ ಮುಚ್ಚಿದರೆ ಕೇಳಿ!!!
-ವಿಧಾತ ದತ್ತಾತ್ರಿ
4ನೇ ತರಗತಿ, ಲಿಟಲ್ ಫ್ಲವರ್ ಪಬ್ಲಿಕ್ ಸ್ಕೂಲ್, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.