ದಕ್ಷ ಪೊಲೀಸರಿಗೆ ರಾಷ್ಟ್ರಪತಿ ಪದಕ
Team Udayavani, Aug 1, 2019, 3:04 AM IST
ಬೆಂಗಳೂರು: ಶಿಸ್ತಿನಿಂದ ಸೆಲ್ಯೂಟ್ ಹೊಡೆದು ಎದೆಯುಬ್ಬಿಸಿ ನಿಂತ ಅಧಿಕಾರಿಗಳ ಸಮವಸ್ತ್ರದ ಮೇಲೆ ರಾಜ್ಯಪಾಲರು ಪದಕ ಹಾಕುತ್ತಿದ್ದಂತೆ ನೆರೆದಿದ್ದ ಪೊಲೀಸ್ ಸಿಬ್ಬಂದಿಯಿಂದ ಕರತಾಡನ, ಪದಕ ಪಡೆದ ಅಧಿಕಾರಿಗಳ ಮುಖದಲ್ಲಿ ಸಾರ್ಥಕ ಭಾವ, ಎಲ್ಲರಿಂದ ಮೆಚ್ಚುಗೆ ಶುಭ ಹಾರೈಕೆ…
ರಾಜಭವನದ ಗಾಜಿನ ಮನೆಯಲ್ಲಿ ಬುಧವಾರ ಇಳಿಸಂಜೆ ಕಂಡು ಬಂದ ಚಿತ್ರಣವಿದು. ಪೊಲೀಸ್ ಇಲಾಖೆಯಲ್ಲಿ ದಕ್ಷತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕ, ಕೇಂದ್ರ ಗೃಹ ಇಲಾಖೆಯಿಂದ ಶ್ರೇಷ್ಠ ತರಬೇತಿ ಪದಕಗಳನ್ನು ನೀಡಿ ಗೌರವಿಸಲಾಯಿತು.
2016 ಹಾಗೂ 2017ರ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಉತ್ತಮ ಸೇವೆ ಸಲ್ಲಿಸಿದ್ದ ನಾಲ್ವರು ಎಡಿಜಿಪಿಗಳು, ಐಜಿಪಿಗಳು, ಎಸ್ಪಿ, ಡಿವೈಎಸ್ಪಿ, ಕಮಾಂಡೆಂಟ್, ಇನ್‌ಸ್ಪೆಕ್ಟರ್, ಪಿಎಸ್‌ಐ, ಎಎಸ್‌ಐ, ಪೊಲೀಸ್ ಪೇದೆಗಳು ಸೇರಿ 65 ಪೊಲೀಸ್ ಸಿಬ್ಬಂದಿಗೆ ಪದಕಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು.
2016ನೇ ಸಾಲಿನ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಕ್ಕೆ ಎಡಿಜಿಪಿಗಳಾದ ಡಾ.ಎ.ಎಸ್.ಎನ್.ಮೂರ್ತಿ, ಡಾ.ಎಂ.ಎ.ಸಲೀಂ ಭಾಜರಾಗಿದ್ದಾರೆ. 2017ನೇ ಸಾಲಿನ ಪದಕವನ್ನು ಎಡಿಜಿಪಿ ಕೆ.ಎಸ್.ಆರ್.ಚರಣ್ ರೆಡ್ಡಿ, ಮಾಲಿನಿ ಕೃಷ್ಣಮೂರ್ತಿ ಪಡೆದರು.
ಪೊಲೀಸ್ ವ್ಯವಸ್ಥೆ ಸರಿಯಿರಬೇಕು: ಪದಕ ಪ್ರದಾನ ಮಾಡಿ ಮಾತನಾಡಿದ ರಾಜ್ಯಪಾಲ ವಿ.ಆರ್.ವಾಲಾ, ಪೊಲೀಸರು ಪ್ರಾಮಾಣಿಕತೆ, ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ ಇಡೀ ವ್ಯವಸ್ಥೆ ಸರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಸೇವೆ ಪಾರದರ್ಶಕವಾಗಿರಬೇಕು. ಸಮಾಜದ ಘಾತುಕ ಶಕ್ತಿಗಳನ್ನು ಮಟ್ಟಹಾಕಲು ಪೊಲೀಸರು ಸದಾ ಜಾಗೃತರಾಗಿ ಕೆಲಸ ಮಾಡಬೇಕು. ಸಾರ್ವಜನಿಕ ಸೇವೆಗಾಗಿ ಸಿಕ್ಕ ಅವಕಾಶ ಎಂದು ಭಾವಿಸಿ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಪೊಲೀಸ್ ಇಲಾಖೆ ಎಂದೂ ತಮ್ಮ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಸಂಘಟಿತ ಅಪರಾಧಿಗಳು, ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಕಾರ್ಯನಿರ್ವಹಿಸಿ. ಪ್ರಾಮಾಣಿಕತೆ, ದಕ್ಷತೆಯಿಂದ ಸೇವೆ ಸಲ್ಲಿಸುವ ಅಧಿಕಾರಿಗಳಿಗೆ ಸರ್ಕಾರದ ಬೆಂಬಲ ಸದಾ ಇರಲಿದೆ ಎಂದು ಭರವಸೆ ನೀಡಿದರು.
ಅವಿಸ್ಮರಣೀಯ ಸೇವೆಗೆ ಪದಕಗಳನ್ನು ಪಡೆದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದ ಮುಖ್ಯಮಂತ್ರಿಗಳು, ಪೊಲೀಸರ ಯಶಸ್ವಿನಲ್ಲಿ ಕುಟುಂಬದ ಬೆಂಬಲವೂ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು, ಎಡಿಜಿಪಿಗಳಾದ ಭಾಸ್ಕರ್ ರಾವ್, ಕಮಲ್ ಪಂಥ್, ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಜತೆಗೆ ಬಿಜೆಪಿ ಶಾಸಕ ಆರ್.ಅಶೋಕ, ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ, ಅನರ್ಹ ಶಾಸಕ ಆರ್.ಶಂಕರ್ ಹಾಜರಿದ್ದರು.
ಜೈಕಾರ ಪಾಕಿಸ್ತಾನಕ್ಕೆ ಕೇಳಬೇಕು: ಅಭಿನಂದನಾ ಭಾಷಣದ ಕೊನೆಯಲ್ಲಿ ಭೋಲೋ ಭಾರತ್ ಮಾತಾಕಿ ಎಂದ ರಾಜ್ಯಪಾಲರು, ಸಭೀಕರ ಜೈ ಕಾರದ ಬಳಿಕ ಇಲ್ಲಿ ಎಲ್ಲರೂ ಪೊಲೀಸರೇ ಇದ್ದೀರಿ. ನಿಮ್ಮ ಜೈ ಕಾರ ಎಷ್ಟು ಜೋರಾಗಿರಬೇಕು ಗೊತ್ತೇ… ನೀವು ಒಮ್ಮೆ ಜೈಕಾರ ಹಾಕಿದರೆ ಅದು ಶತ್ರುವಿನ ಎದೆಯಲ್ಲಿ ನಡುಕ ಹುಟ್ಟಿಸುವಂತಿರಬೇಕು ಎಂದು ಹುರಿದುಂಬಿಸಿದರು. ಅಲ್ಲದೆ, ಭಾರತ ಮಾತೆಗೆ ಹಾಕುವ ಜೈಕಾರ ಪಾಕಿಸ್ತಾನಕ್ಕೆ ಕೇಳಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.