ಫ್ರೀ ಟೈಮ್
ಕಾಲೇಜು ಕಾಲಮ್
Team Udayavani, Aug 2, 2019, 5:29 AM IST
ಸಾಂದರ್ಭಿಕ ಚಿತ್ರ
ನೆಡ್ ಪ್ಲ್ಯಾಡರ್ ಎಂಬ ಹೆಸರಲ್ಲಿ ಅನಾಮಿಕ ಇಂಗ್ಲಿಷ್ ಕವಿಯೊಬ್ಬ ತೆಂಗಿನ ಮರದ ಬಗ್ಗೆ ಹೀಗೆ ಹೇಳುತ್ತಾನೆ:
ಅಂಕಿಅಂಶ ಸುಳ್ಳು ಹೇಳುವುದಿಲ್ಲ!
ಗೊಂದಲದ ತೆಂಗು ಜೋತು ಬಿದ್ದಿತ್ತು
ಕಾಯುತ್ತ ಇತ್ತು.
ಬಿಸಿಗಾಳಿ ಬೀಸಲು ಓಲಾಡಿದರೂ
ಇನ್ನೂ ಜೋತು ಬಿದ್ದಿತ್ತು
ಒಬ್ಬ ಡುಮ್ಮ ಪ್ರವಾಸಿ
ಹವಾಯಿ ದೊಗಲೆ ಚಡ್ಡಿ ಧರಿಸಿ
ಅಡ್ಡಾಡುತ್ತಿದ್ದ.
ಗೊಂದಲದ ತೆಂಗು ನಿರ್ಧರಿಸಿತು.
ಕೆಳಗೆ ಬಿತ್ತು
ಗುರಿ ತಪ್ಪಿತು!
ಕಲ್ಲಿನ ನೆಲಕ್ಕೆ ಬಡಿದೆರೆಡಾಯಿತು.
ತೆಂಗಿನ ಮರ ನಿಟ್ಟುಸಿರು ಬಿಟ್ಟು
ಕೆಳಗೆ ನೋಡಿ ಅಂದುಕೊಂಡಿತು,
ಹಾಳಾದ ಹಾಲಿಗೆ ಅತ್ತು ಫಲವೇನು?
ಹೇಗೂ ಇತರ ಪ್ರವಾಸಿಗಳಿದ್ದಾರೆ
ನೂರೈವತ್ತು ದೊಡ್ಡ ಸಂಖ್ಯೆ!
ಅಂಕಿಅಂಶ ಸುಳ್ಳು ಹೇಳುವುದೇ ಇಲ್ಲ!
ಅಂಕಿಅಂಶಗಳ, ಸಂಖ್ಯಾಶಾಸ್ತ್ರದ ನಿಖರತೆಯ ಕುರಿತಾಗಿಯೋ, ಲೆಕ್ಕ ಮೀರಿ ಬರುವ ಪ್ರವಾಸಿಗರ ಸಮಸ್ಯೆ ನಿವಾರಿಸುವ ಕುರಿತಾಗಿಯೋ ಕವಿ ಹೇಳಿರಬಹುದು, ನನಗೆ ಮಾತ್ರ ಭಯ ಹುಟ್ಟಿಸಿದ್ದು ಹಾಳಾದ ಹಾಲಿಗೆ ಅಳದೆ, ಇತರ ನೂರೈವತ್ತು ಜನರ ಮೇಲೆ ಭರವಸೆ ಇಟ್ಟಿರುವ ತೆಂಗಿನ ಮರದ ಅಪಾಯಕಾರಿ ಮನೋಭಾವ!
ತೆಂಗನ್ನು ಯಾರ ಮೇಲಾದರೂ ಬೀಳಿಸುವ ತೆಂಗಿನ ಮರದ ದಾಷ್ಟ್ಯ ಮನೋ ಭಾವ ತೆಂಗಿನ ಕುಲಕ್ಕೆ ಶೋಭೆ ತರುವುದಿಲ್ಲ. ಆದರೆ, ಮಂಗಳೂರಿನ ವಲಯದಲ್ಲಿ ಮಾತ್ರ ಸ್ಥಾನ ಕಳೆದು ಕೊಂಡಿಲ್ಲ- ಸಾಲು ತೆಂಗಿನ ಮರಗಳ ಆಕಾಶದ ಹಿನ್ನಲೆಯ ಎಷ್ಟು ಫೋಟೋಗಳು ಗೂಗಲ್ ಸರ್ಚ್ ಮಾಡಿದರೆ ಸಿಗುತ್ತವೆ ! ನಮ್ಮೂರನ್ನ ಹೊಗಳುವ ಯಾವುದೇ ಲೇಖನ, ಕಥೆ, ಕಾದಂಬರಿ, ಕವನ ಓದಿ- ಆಕಾಶದೆತ್ತರಕ್ಕೆ ಬೆಳೆದ ತೆಂಗಿನ ಮರಗಳ ವರ್ಣನೆಯಿದ್ದೇ ಇರುತ್ತವೆ.
ತೆಂಗಿನಮರವೇ ತೆಂಗಿನ ಮರವೇ ಬಾನೆತ್ತರಕೆ ನೀ ಬೆಳೆದಿರುವೆ ಹಾಡು ರಾಷ್ಟ್ರಗೀತೆ, ನಾಡಗೀತೆಯಂತೆ ಊರಗೀತೆ ಎಂಬಷ್ಟರ ಮಟ್ಟಿಗೆ ನನ್ನ ಬಾಲ್ಯವನ್ನು ಆವರಿಸಿಕೊಂಡಿತ್ತು.
ತೆಂಗಿನ ಮರಗಳು ಊರಿನ ಸೌಂದರ್ಯ ಹೆಚ್ಚಿಸಿರುವಷ್ಟೇ ಅವ್ಯಕ್ತ ಭೀತಿ ಹುಟ್ಟಿಸಿರುವುದೂ ನಿಜ! ತೆಂಗಿನ ಮರದ ಕಾಯಿ, ಸೋಗೆ ನೆರೆಮನೆಯ ಹಿತ್ತಲಿಗೆ ಬಿದ್ದು ಆದ ತಂಟೆ-ತಕರಾರುಗಳಿಗೆ ಲೆಕ್ಕವುಂಟೆ? ಅದರಲ್ಲಿಯೂ ನೆರೆಮನೆಯವರು ನಮ ಗಾ ಗದ ಜಾತಿ, ಭಾಷೆ, ಧರ್ಮದ ಜನರಾಗಿದ್ದರಂತೂ ಮುಗಿಯಿತು, “”ಅದು ಅವರ ತೆಂಗಿನಮರ-ಅವರಷ್ಟೇ ಬುದ್ಧಿ ಅದಕ್ಕಿರುವುದು’ ಅಂತ ಬುದ್ಧಿ ಕೊಟ್ಟ ದೇವರಿಗೂ ಅರ್ಥವಾಗದ ಮಾತನಾಡುತ್ತೇವೆ. ಹೀಗೆ ತನಗೆ ಬೇಕಾದಾಗ, ತನಗೆ ಮನಸ್ಸಾದಾಗ, ಯಾರಪ್ಪನ ಅಪ್ಪಣೆಗೂ ಕಾಯದೆ ಕೆಳಗೆ ಬೀಳುವ, ಹಲವು ಸಲ ಗುರಿ ತಪ್ಪಿ, ಕೆಲವು ಸಲ ಗುರಿ ಮುಟ್ಟಿ ಟ್ರ್ಯಾಜಿಡಿ ಸೃಷ್ಟಿಸುವ ತೆಂಗಿನ ಮರದ ಕಾರಣಿಕ ಕಂಡಾಗ “ನೆರೆಯ ಮನೆಯ ತೆಂಗು ನಮ್ಮ ಅಂಗಳಕ್ಕೆ ಬಿದ್ದರೆ ಪದಾರ್ಥಕ್ಕೆ, ನಮ್ಮ ತಲೆಗೆ ಬಿದ್ದರೆ ಕೋರ್ಟಿಗೆ’ ಎಂಬ ಮಾತು ಅತಿಶಯೋಕ್ತಿ ಅನಿಸೋದಿಲ್ಲ. “ಕೆಳಗೆ ಬಿದ್ದ ತೆಂಗಿನ ಕಾಯಿ ಮೊದಲು ಕಂಡವರಿಗೆ’ ಎನ್ನುವುದು ಅಲಿಖಿತ ನಿಯಮ.
ಒಂದು ಭಂಡ ತೆಂಗಿನಮರ ನಮ್ಮ ಮನೆಯ ಎದುರು ಬಟ್ಟೆ ಒಗೆಯುವ ಕಲ್ಲಿನ ಬಳಿ ಇದೆ. ಮರ ಹತ್ತುವವನು ಎಷ್ಟು ಕರೆದರೂ “”ನಾಳೆ ಬರ್ತೇನೆ” ಅಂತ ತಪ್ಪಿಸಿಕೊಳ್ಳುತ್ತಿದ್ದ. ನನ್ನ ತಂಗಿ ಏನೋ, “ಅದು ನಮ್ಮ ಮನೆಯ ತೆಂಗಿನಮರ ತಾನೆ-ಮನೆಯವರಿಗೆ ತೊಂದರೆ ಮಾಡಬಾರದು ಅಂತ ಅದಕ್ಕೆ ಗೊತ್ತಿದೆ” ಎಂದು ಹೇಳು ತ್ತಿ ದ್ದ ಳು. ತೆಂಗಿನ ಮರದ ಬಗ್ಗೆ ನೆಡ್‌ಪ್ಲ್ಯಾಡರ್ ಬರೆದ ಕವಿತೆ ಓದಿಯೂ ಸುಖವಾಗಿರೋದು ಹೇಗೆ?- ಮರ ಹತ್ತುವವ ಬರುವ ತನಕ ಮಂಜುನಾಥನನ್ನು ನೆನೆಯುತ್ತಲೇ ಬಟ್ಟೆ ಒಗೆಯುತ್ತಿದ್ದೆ.
ತೆಂಗಿನ ಮರ ಹತ್ತಿ ಹಾಗೂ ಕಡಿದು ಜೀವನ ಸಾಗಿಸುತ್ತಿದ್ದವನು ತನ್ನ ಇಳಿವಯಸ್ಸಿ ನಲ್ಲಿ ಕಣ್ಣುಗಳನ್ನು ಕಳೆದುಕೊಂಡಾಗ, “”ಅವನು ಕಲ್ಪವೃಕ್ಷವನ್ನು ಕಡಿಯುತ್ತಿದ್ದುದರಿಂದ ಹಾಗಾದ” ಅಂತ ಎಲ್ಲರೂ ಮಾತನಾಡಿದ್ದರು. ಕಡಿದವನ ಕಣ್ಣು ಕಡಿದ ಕಾರಣಕ್ಕೆ ಹೋಯ್ತು-ಕಡಿಸಿದವನಿಗೆ ಪಾಪದಲ್ಲಿ ಪಾಲಿಲ್ಲವೆ? ಕಲ್ಪವೃಕ್ಷ ಕಲ್ಪಿಸಿದ್ದನ್ನು ಕೊಡದಿದ್ದರೂ, ಕಲ್ಪನೆಗೂ ನಿಲುಕದ ರೀತಿಯಲ್ಲಿ ಪೆಟ್ಟು ಕೊಡದಿರಲಿ, ಅದರ ಬುಡಕ್ಕೆ ಪೆಟ್ಟು ಬೀಳದಿರಲಿ!
ಯಶಸ್ವಿನಿ ಕದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.