ಕಣಿವೆಯಿಂದ ದೂರವಾಗಲಿ ಆರ್ಟಿಕಲ್ 370

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ವಿದಾಯ ಹೇಳುವುದು ಅವಶ್ಯಕ

Team Udayavani, Aug 2, 2019, 5:55 AM IST

k-54

ಜಮ್ಮು-ಕಾಶ್ಮೀರದಲ್ಲಿನ ಆರ್ಟಿಕಲ್ 370ರ ವಿಶೇಷ ಸ್ಥಾನಮಾನವನ್ನು ತೆರವುಗೊಳಿಸುವುದು ‘ಮೋದಿ ಸರಕಾರ – 2’ರ ಎದುರಿರುವ ಸವಾಲು. ಇದು ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯ ಪ್ರಮುಖ ಅಂಶವೂ ಆಗಿತ್ತು. ಅದೇ ರೀತಿ ಸಮಗ್ರ ಜನಮನದ ಆಶಯವೂ ಕೂಡ ಜಮ್ಮು – ಕಾಶ್ಮೀರದ 370ನೇ ವಿಧಿ ಅಂತ್ಯಗೊಳ್ಳುವುದೇ ಆಗಿದೆ.

ಈ ವಿಧಿಯ ಇಲ್ಲದಿರುವಿಕೆಗೆ ಯತ್ನಿಸದೆ ಅನ್ಯ ವಿಧಿಯೇ ಇಲ್ಲವೇ? ಈ ಪ್ರಶ್ನೆಗೆ ಎರಡು ಉತ್ತರಗಳಿವೆ – ಒಂದನೆಯದು, ಭಾರತದ ಒಕ್ಕೂಟ ವ್ಯವಸ್ಥೆಯ ಉಳಿದ 28 ರಾಜ್ಯಗಳಂತೆ ಜಮ್ಮು-ಕಾಶ್ಮೀರವೂ ಕೂಡ ಸಾಂವಿಧಾನಿಕ ನೆಲೆಯಲ್ಲೇ ಉಳಿಯಬೇಕೆಂದರೆ ಈ ವಿಧಿಯ ಅಸ್ತಿತ್ವ ಅಂತ್ಯಗೊಳ್ಳಬೇಕಿದೆ. ಅದೇ ರೀತಿ ಮುಂಬರುವ ದಿನಗಳಲ್ಲಿ ಕಾಶ್ಮೀರ ಕಣಿವೆಯು ರಾಷ್ಟ್ರೀಯ ಭಾವನಾತ್ಮಕ ಪರಿಕಲ್ಪನೆಗೆ ತೆರೆದುಕೊಳ್ಳಲು ಈ ದೃಢ ಹೆಜ್ಜೆ ತೀರಾ ಅತ್ಯಗತ್ಯ.

ಕಾಶ್ಯಪ ಋಷಿಗಳು ಶಿಷ್ಯರೊಂದಿಗೆ ಪದಾರ್ಪಣೆ ಮಾಡಿದ, ಸುಂದರ ಗಿರಿಕಂದರ, ಸರೋವರಗಳ ನಾಡು ಇದು. ಸಹಸ್ರಾರು ವರ್ಷಗಳ ಪೌರಾಣಿಕ ಹಾಗೂ ಚಾರಿತ್ರಿಕ ಪರಂಪರೆಯ ಬೀಡು ಈ ಕಾಶ್ಮೀರ. ಒಂದೇ ರಾಜ್ಯಕ್ಕೆ ಜಮ್ಮು ಮತ್ತು ಕಾಶ್ಮೀರ ಎಂಬ 2 ಹೆಸರುಗಳನ್ನೂ, ಒಂದೇ ರಾಜ್ಯಕ್ಕೆ ಶ್ರೀನಗರ ಹಾಗೂ ಜಮ್ಮು ಈ ಎರಡು ರಾಜಧಾನಿಗಳನ್ನೂ, 1950 ಜನವರಿ 26ರಂದು ತೆರೆದುಕೊಂಡ ಭಾರತ ಸಂವಿಧಾನ ಹಾಗೂ 1956 ನವಂಬರ್‌ 17ರಂದು ಕಣ್ಣು ತೆರೆದ ಜಮ್ಮು – ಕಾಶ್ಮೀರದ ಪ್ರತ್ಯೇಕ ಸಂವಿಧಾನ…. ಹೀಗೆ ಸರಣಿ ಅವಳಿತನಕ್ಕೆ ಬಾಗಿ ನಿಂತ ಭೂಮಿ ಇದು. ಆದರೆ ‘ಏಕ್‌ದೇಶ್‌ ಮೇ ದೋ ಪ್ರಧಾನ್‌, ದೋ ನಿಶಾನ್‌ ನಹೀ ಚಲೇಗಾ’ ಎಂಬ ಹೋರಾಟದ ಕಿಚ್ಚು ಡಾ| ಶ್ಯಾಮ ಪ್ರಸಾದ ಮುಖರ್ಜಿಯವರ ಬಲಿದಾನದೊಂದಿಗೆ ಥಟ್ಟನೆ ಆರಿಹೋಯಿತು.

ಜಮ್ಮು – ಕಾಶ್ಮೀರಕ್ಕೆ ಅನ್ವಯಿಸುವ 370ನೇ ವಿಧಿ ಹಾಗೂ ಇದಕ್ಕೆ ಆಸರೆಯಾಗಿ ನಿಂತ 35ನೇ ವಿಧಿ ಅಮೃತತ್ವದ ಸತ್ವ ಶಿಲೆಯ ಮೇಲೇನೂ ಆಧಾರಿತವಲ್ಲ. ಅದು ಶಾಶ್ವತವೂ ಅಲ್ಲ. ಏಕೆಂದರೆ ಈ 370ನೇ ವಿಧಿಯ ‘ಹಣೆಬರಹ’ ಅಥವಾ ಶೀರ್ಷಿಕೆಯೇ ‘ Temporary provisions with respect to the state of Jammu and Kashmir'(ಜಮ್ಮು – ಕಾಶ್ಮೀರಕ್ಕೆ ಅನ್ವಯಿಸುವ ತಾತ್ಕಾಲಿಕ ವ್ಯವಸ್ಥಾ ಸೂತ್ರ) ಎಂಬುದಾಗಿದೆ. ಅಷ್ಟೇಕೆ 369ರಿಂದ 392ನೇ ವಿಧಿಗಳವರೆಗಿನ ಸಮಗ್ರ 21ನೇ ವಿಭಾಗದ ಶಿರೋನಾಮೆಯೇ ‘Temporary Transitional and special Provisions) ತಾತ್ಕಾಲಿಕ, ಸ್ಥಿತ್ಯಂತರದ ಹಾಗೂ ವಿಶೇಷ ಸಾಧನಗಳು ಎಂಬುದಾಗಿದೆ. ಈ ಕಾರಣದಿಂದಲೇ ಸ್ವಾತಂತ್ರ್ಯೋತ್ತರ ಕ್ಷಿಪ್ರ ಮಾರ್ಪಾಡುಗಳಿಗೆ, ಕ್ಲಿಷ್ಟತೆಯ ಬಂಡೆಯಂತೆ ನಮ್ಮ ಸಂವಿಧಾನ ಅಡ್ಡಿ ಒಡ್ಡ ಬಾರದು; ಬದಲಾಗುವ ಪರಿಸ್ಥಿತಿಗನುಗುಣವಾಗಿ ನಮ್ಯತೆಯ (Flexibility) ಸಲಿಲ ಚಿಮ್ಮಿಸುವ ಸೆಲೆಯಾಗಬೇಕು ಎಂದು ಈ ವಿಭಾಗಕ್ಕೆ ನೆಲೆ ಒದಗಿಸಿದವರು ನಮ್ಮ ಸಂವಿಧಾನಕರ್ತರು.

ಹೀಗೆ ನಮ್ಮ ರಾಜ್ಯಾಂಗ ಆಶಯದ ಒಳ ಪ್ರವೇಶಗೈದಾಗ ಈ ವಿಧಿಯ ‘ಶಾಶ್ವತೀಕರಣ ಸಲ್ಲದು’ ಎಂಬ ನಿತ್ಯ ಸತ್ಯ ಕಾಶ್ಮೀರದ ದಾಲ್, ಊಲಾರ್‌ ಸರೋವರದ್ವಯಗಳ ಇರುವಿಕೆಯಷ್ಟೇ ಸತ್ಯ. ಆದರೆ ಅದನ್ನೇ, ಚಳಿಗಾಲದಲ್ಲಿ ಇವೆರಡೂ ಘನೀಕೃತಗೊಳ್ಳುವಂತೆ ಚಿರಸ್ಥಾಯಿಯಾಗಿಸುವ ಹುನ್ನಾರ ಸಲ್ಲದು.

ಇದರ ಹಿಂದೆ ಭಾರತದ ಸಾರ್ವಭೌಮತೆಗೆ ಧಕ್ಕೆ ಒದಗಿಸಬೇಕೆಂಬ ನಮ್ಮ ನೆರೆರಾಷ್ಟ್ರದ ಉದ್ದೇಶ ಕೆಲಸ ಮಾಡುತ್ತಿದೆ. ಈ ಕಣಿವೆ ರಾಜ್ಯದಲ್ಲಿ ಸ್ವತಃ ಪಯಣಿಸಿ, ಅಲ್ಲಿನ ಜನಮನದ ಆಶಯಗಳನ್ನು ಆಲಿಸಿ ಕಂಡುಕೊಂಡ ವಾಸ್ತವಿಕತೆಯನ್ನು ನಿಮ್ಮೆದುರಿಡುತ್ತಿದ್ದೇನೆ: ಅಲ್ಲಿನ ಒಂದು ಗುಂಪು ‘ ಭಾರತದ ಅವಿಭಾಜ್ಯ ಅಂಗವಾಗಿ ಮುಂದುವರಿದರೆ ನೆಮ್ಮದಿಯಾಗಿ ಇರಬಹುದು, ತಮಗಾಗಿ ಹಾಗೂ ತಮ್ಮ ಮಕ್ಕಳಿಗಾಗಿ ಉತ್ತಮ ಬದುಕು ಕಟ್ಟಿಕೊಳ್ಳುವುದು ಸುಲಭ ಸಾಧ್ಯ’ ಎಂಬ ಅಭಿಮತ ವ್ಯಕ್ತಪಡಿಸಿದರೆ, ಇನ್ನೊಂದು ಗುಂಪು ‘ಇಲ್ಲ, ನಾವು ಇಸ್ಲಾಮಾಬಾದಿನ ಧ್ವಜದ ನೆಳಲಿಗೇ ಗಡಿದಾಟುತ್ತೇವೆ. ಕಾಶ್ಮೀರ 1947ರ ಮಹಮದಾಲಿ ಜಿನ್ನಾರ ‘ದ್ವಿರಾಷ್ಟ್ರ ಸಿದ್ಧಾಂತ’ದ ಮುಗಿಯದೆ ಉಳಿದ, ಸೇರ್ಪಡೆಯಾಗದ ಕಾರ್ಯಸೂಚಿ (Unifinished Agenda)’ ಎಂಬ ಮಾನಸಿಕತೆಯ ಮಂದಿಯೂ ಅಲ್ಲಿದ್ದಾರೆ.

ಅದಕ್ಕನುಗುಣವಾಗಿ ನುಸುಳುಕೋರರ ಧರ್ಮಾಂಧತೆ, ಪುಡಿ ಕಾಸಿಗಾಗಿ ಕಲ್ಲು ಬೀಸುವ ಕಾಯಕವನ್ನೇ ನಮ್ಮ ದೈನಂದಿನ ‘ಕರ್ಮ’ವಾಗಿಸಿಕೊಂಡ ನಿರುದ್ಯೋಗಿಗಳ ತಂಡವೂ ಅಲ್ಲಿದೆ. ಮತ್ತೂಂದೆಡೆ ‘ಆಜಾದ್‌ ಕಾಶ್ಮೀರದ’ ಶೇಖ್‌ ಅಬ್ದುಲ್ಲಾರ ಕನಸಿನ ಬೆಂಕಿಗೆ ಇನ್ನೂ ಮೈಕಾಯಿಸಿಕೊಂಡು ಇರುವ ಚಿಂತನೆ ಇನ್ನೂ ಕಾಶ್ಮೀರೀ ಛದ್ಧರ್‌ ಹೊದ್ದುಕೊಂಡು ಮೂಲೆಯಲ್ಲಿ ಕೂತಿದೆ! ಆದರೆ ಭಾರತದಂತಹ ಸದೃಢ ಒಕ್ಕೂಟ ವ್ಯವಸ್ಥೆಯ ಬೇಲಿಯಿಂದಾಚೆಗೆ ಜಿಗಿದು, ಪಾಕ್‌ ರಣಹದ್ದಿನ ದೃಷ್ಟಿಯಿಂದ ಪಾರಾಗಿ, ಸ್ವತಂತ್ರ ಬಾವುಟ ಹಾರಿಸುವ ಪರಿಜ್ಞಾನ ಒಂದಿನಿತೂ ಈ ಮಂದಿ ಹೊಂದಿಲ್ಲ.

ಇದೀಗ ಗೃಹ ಸಚಿವ ಅಮಿತ್‌ ಶಾ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ‘ಶ್ರೀನಗರದ’ ಬಗೆಗೆ ಹೊಮ್ಮಿಸಿದ ‘ಧೋರಣಾ ಘೋಷಣೆ’ 370ನೇ ವಿಧಿಗೆ ವಿದಾಯ ಕೋರುವ ಸಾಧ್ಯತೆಯನ್ನು ತೆರೆದಿಟ್ಟಿದೆ. ‘ಈ ವಿಧಿಯನ್ನೇ ಅಳಿಸಿದರೆ ಕಾಶ್ಮೀರ ಉರಿವ ಕೆಂಡವಾಗದೇ?’ ಎಂಬ ಪ್ರಶ್ನೆಯನ್ನು ಪ್ರಜ್ಞಾವಂತ ಮಿತ್ರರೊಬ್ಬರು ತೆರೆದಿಟ್ಟರು. ಆ 370ನೇ ವಿಧಿ ಇದ್ದುಕೊಂಡೇ ಕಾಶ್ಮೀರ ಧಗಧಗಿಸುತ್ತಿಲ್ಲವೇನು? ‘ಉರಿ’ಯಂತಹ ಪ್ರದೇಶದಲ್ಲಿ ಭಯೋತ್ಪಾದಕತೆಯ ಸುಡುವಿಕೆ, ಅದಕ್ಕೆ ಕ್ಷಿಪ್ರ ಪ್ರತಿ ದಾಳಿ, ಕಾರ್ಗಿಲ್ ಕದನದ ವಿಜಯ ಪತಾಕೆ… ಈ ಎಲ್ಲಾ ಸರಣಿ ಕಿಡಿಗಳು ಧಗಧಗಿಸುತ್ತಲೇ ಬಂದಿಲ್ಲವೇ? ಈಗದು ಪ್ರವಾಸಿಗರ ಸ್ವರ್ಗವೆನಿಸಿಕೊಳ್ಳುತ್ತಿದೆಯೇ? ದೋಣಿಮನೆ, ಸುಂದರ ಶಾಲು, ಸಾಲು ಸಾಲು ಕಣಿವೆ ಕಂದರಗಳು, ಕೇಸರಿ ಬೆಳೆಯ ಇಳಿಜಾರು ಮೈದಾನಗಳಿಂದ ಸುದ್ದಿಯಲ್ಲಿದೆಯೇ? ಇಲ್ಲ ತಾನೆ?

ಇತಿಹಾಸ ಎಂದರೇ ಹಾಗೇನೇ. ಹಲವರು ಇತಿಹಾಸ ಓದುವುದರಲ್ಲಿ ಆಸಕ್ತರಾದರೆ, ಕೆಲವರಾದರೂ ಭಾವೀ ಇತಿಹಾಸ ನಿರ್ಮಿಸಲೇ ಬೇಕಾದುದು ಅನಿವಾರ್ಯ. ಈ ನಿಟ್ಟಿನಲ್ಲಿ 370ನೇ ವಿಧಿಗೆ ವಿದಾಯ ಕೂಟ ಏರ್ಪಡಿಸುವ ಪೂರ್ವಭಾವಿಯಾಗಿ, ಜಮ್ಮು – ಕಾಶ್ಮೀರದ ಪ್ರತ್ಯೇಕ ಸಂವಿಧಾನಕ್ಕೆ ಚರಮಗೀತೆ ಹಾಡಬೇಕು. 368ನೇ ವಿಧಿಗೂ ಅರ್ಥಾತ್‌ ತಿದ್ದುಪಡಿಯ ಅಧಿಕಾರದ ಕೀಲಿಕೈ ಹೊತ್ತ ಈ ನಿಧಿಯನ್ನು, ಜಮ್ಮು – ಕಾಶ್ಮೀರ ಅಸೆಂಬ್ಲಿಯ ಪಾರಮ್ಯತೆಯನ್ನೂ ಮೀರಿ ನಿಲ್ಲುವ ತೆರದಲ್ಲಿ ನಾಜೂಕಾಗಿ ಹಿಗ್ಗಿಸಬೇಕು. ಹೀಗೆ ರಾಜ್ಯಾಂಗ ಘಟನೆಯ ಸೂಕ್ತ ಮಾರ್ಪಾಡು ಮಾಡಿ, ಕೇಂದ್ರ ಸಂಸತ್‌, ರಾಷ್ಟ್ರಪತಿ ಅಧಿಕಾರ ಕಕ್ಷೆಯನ್ನು ಶುಭ್ರಗೊಳಿಸಿ, ಸರ್ವೋಚ್ಛ ನ್ಯಾಯಾಲಯದ ತಕ್ಕಡಿಗೆ ಸೂಕ್ತ ಅನುಸಂಧಾನ ಒಂದೆಡೆಗೆ ಸಾಗಬೇಕು.

ಇನ್ನೊಂದೆಡೆ ಯುವಕರ ಕೈಗೆ ಬಂದೂಕು, ಕಲ್ಲು ನೀಡಿ, ಅವರ ಜೇಬಿಗೆ ಒಂದಿನಿತು ಹಣ ತುರುಕಿಸಿ, ಅವರ ಬದುಕನ್ನೇ ಕಸಿಯುವ ಕೈಗಳಿಗೆ ಕೋಳ ಹಾಕಬೇಕು. ಮತ್ತೂಂದೆಡೆ ತಮ್ಮ ವೃತ್ತಿ ಕೌಶಲ್ಯದ ಜೊತೆಗೆ ಆಧುನಿಕ ತಂತ್ರಜ್ಞಾನ, ವಿಜ್ಞಾನ, ಕೃಷಿ, ಸಾರಿಗೆ ಸಂಪರ್ಕ ಇವೆಲ್ಲದರ ಕ್ಷಿಪ್ರಕ್ರಾಂತಿಯೊಂದಿಗೆ ವಿಶಾಲ ಭಾರತದೊಂದಿಗೆ ಕಾಶ್ಮೀರದ ಕಣಿವೆಯನ್ನೂ, ಅಲ್ಲಿನ ಎಳೆಮನಸ್ಸುಗಳನ್ನೂ ಹಸನುಗೊಳಿಸಬೇಕು. ರಾಷ್ಟ್ರದ ಸಂಕಲ್ಪ ಶಕ್ತಿಯ ಮುಂದೆ, ದೃಢ ಹೆಜ್ಜೆಯ ಮುಂದೆ ಗಡಿಯಾಚೆಗಿನ ಭೀತಿ ಪ್ರಸಾರಕರ ಶಕ್ತಿ ಉಡುಗುವುದರಲ್ಲಿ ಸಂಶಯವಿಲ್ಲ. ಬಲಿಷ್ಠ ಭಾರತದ ಕನಸಿಗೆ, ಕಾಶ್ಮೀರ ನವೀನತೆಯ ಪರಿಪೂರ್ಣತೆಗೆ 370ನೇ ವಿಧಿಯ ವಿದಾಯ ಆವಶ್ಯಕ ಮೈಲುಗಲ್ಲು.

ಟಾಪ್ ನ್ಯೂಸ್

Kasaragod: ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್‌ ಶಾಕ್‌: ಕಾರ್ಮಿಕನ ಸಾವು

Kasaragod: ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್‌ ಶಾಕ್‌: ಕಾರ್ಮಿಕನ ಸಾವು

Thokottu: ಸ್ಕೂಟರ್‌ ಪಲ್ಟಿಯಾಗಿ ಸವಾರ ಸಾವು

Thokottu: ಸ್ಕೂಟರ್‌ ಪಲ್ಟಿಯಾಗಿ ಸವಾರ ಸಾವು

PAK Vs SA: ಸೆಂಚುರಿಯನ್‌ ಟೆಸ್ಟ್‌ ಪಾಕಿಸ್ಥಾನ  211ಕ್ಕೆ ಆಲೌಟ್‌

PAK Vs SA: ಸೆಂಚುರಿಯನ್‌ ಟೆಸ್ಟ್‌ ಪಾಕಿಸ್ಥಾನ 211ಕ್ಕೆ ಆಲೌಟ್‌

Test cricket: ಮ್ಯಾಚ್‌ ರೆಫ‌ರಿಯಾಗಿ ನೂರು ಟೆಸ್ಟ್‌ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್

Test cricket: ಮ್ಯಾಚ್‌ ರೆಫ‌ರಿಯಾಗಿ ನೂರು ಟೆಸ್ಟ್‌ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್

Pro Kabaddi League: ಯುಪಿ ಯೋಧಾಸ್‌,ಪಾಟ್ನಾ ಪೈರೇಟ್ಸ್‌ ಸೆಮಿಫೈನಲಿಗೆ

Pro Kabaddi League: ಯುಪಿ ಯೋಧಾಸ್‌,ಪಾಟ್ನಾ ಪೈರೇಟ್ಸ್‌ ಸೆಮಿಫೈನಲಿಗೆ

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kasaragod: ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್‌ ಶಾಕ್‌: ಕಾರ್ಮಿಕನ ಸಾವು

Kasaragod: ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್‌ ಶಾಕ್‌: ಕಾರ್ಮಿಕನ ಸಾವು

Thokottu: ಸ್ಕೂಟರ್‌ ಪಲ್ಟಿಯಾಗಿ ಸವಾರ ಸಾವು

Thokottu: ಸ್ಕೂಟರ್‌ ಪಲ್ಟಿಯಾಗಿ ಸವಾರ ಸಾವು

PAK Vs SA: ಸೆಂಚುರಿಯನ್‌ ಟೆಸ್ಟ್‌ ಪಾಕಿಸ್ಥಾನ  211ಕ್ಕೆ ಆಲೌಟ್‌

PAK Vs SA: ಸೆಂಚುರಿಯನ್‌ ಟೆಸ್ಟ್‌ ಪಾಕಿಸ್ಥಾನ 211ಕ್ಕೆ ಆಲೌಟ್‌

Test cricket: ಮ್ಯಾಚ್‌ ರೆಫ‌ರಿಯಾಗಿ ನೂರು ಟೆಸ್ಟ್‌ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್

Test cricket: ಮ್ಯಾಚ್‌ ರೆಫ‌ರಿಯಾಗಿ ನೂರು ಟೆಸ್ಟ್‌ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್

Pro Kabaddi League: ಯುಪಿ ಯೋಧಾಸ್‌,ಪಾಟ್ನಾ ಪೈರೇಟ್ಸ್‌ ಸೆಮಿಫೈನಲಿಗೆ

Pro Kabaddi League: ಯುಪಿ ಯೋಧಾಸ್‌,ಪಾಟ್ನಾ ಪೈರೇಟ್ಸ್‌ ಸೆಮಿಫೈನಲಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.